Wednesday, 14 September 2011

ಹಳಿ ತಪ್ಪುತ್ತಿರುವ ರೈಲ್ವೇ ಇಲಾಖೆಯ ಬಾಶಾ ನೀತಿ.!


ಕೇಂದ್ರ ಸರಕಾರ ೧೯೪೯ ರಿಂದ ಇಂದಿನವರೆಗೆ ತನ್ನ ಇಲಾಖೆಗಳನ್ನು ಹಿಂದಿ ಹೇರಿಕೆಗೆ ಬಳಸಿಕೊಳ್ಳುತ್ತಿದೆ. ಯಾವುದೋ ಒಂದು ಪ್ರದೇಶದಲ್ಲಿ ಮಾತನಾಡುವ ಬಾಶೆಯನ್ನು ಇಡೀ ಬಾರತೀಯರ ಮೇಲೆ ಹೇರಲು ಹೊರಟಿದೆ. ಬಾರತದ ಪ್ರತಿಯೊಂದು ಮೂಲೆಗೂ ಮತ್ತು ಪ್ರತಿಯೊಬ್ಬ ನಾಗರೀಕನಿಗೂ ತಲುಪುವಂತ ಸೇವೆಯನ್ನು ರೈಲ್ವೇ ಇಲಾಖೆ ಒದಗಿಸುತ್ತಿರುವುದರಿಂದ ಈ ಇಲಾಖೆಯನ್ನು ಹಿಂದಿ ಹೇರಿಕೆಗೆ ವ್ಯವಸ್ಥಿತವಾಗಿ ಎಲ್ಲ ಹಂತಗಳಲ್ಲೂ ಎಲ್ಲ ತರಹ ಸೇವೆಗಳಲ್ಲೂ ಬಳಸಿಕೊಳ್ಳಲಾಗುತ್ತಿದೆ. ರೈಲ್ವೇ ಇಲಾಖೆಯಲ್ಲಿ ಹಿಂದಿ ಬಲ್ಲವರಿಗೆ ತೊಂದರೆ ಆಗಬಾರದು ಅಥವಾ ತೊಂದರೆ ಆಗಬಾರದು ಎಂದರೆ ಹಿಂದಿ ಬಲ್ಲವರಿರಬೇಕು ಎಂಬ ವಾತಾವರಣವನ್ನು ನಿರ್ಮಿಸುತ್ತಿರುವುದು ಎಲ್ಲರೂ ಸಮಾನರು ಎಲ್ಲ ಬಾಶೆಗಳು ಸಮಾನ ಎಂಬ ಸಂವಿದಾನದ ಆಶಯಕ್ಕೆ ಕಳಂಕ ತರುವಂತವುಗಳಾಗಿವೆ.

ಸ್ಥಳೀಯರಿಗೆ ನೆರವಾಗದ ನೈರುತ್ಯ ರೈಲ್ವೇ ವಲಯ:  
ದಕ್ಷಿಣ-ಪಶ್ಚಿಮ ರೈಲ್ವೇ ವಲಯ ಎಂದೇ ಕರೆಯಲ್ಪಡುವ ನೈರುತ್ಯ ರೈಲ್ವೇ ವಲಯ ಹುಬ್ಬಳ್ಳಿಯಲ್ಲಿ ಕೇಂದ್ರ ಸ್ಥಾನ ಹೊಂದಿದ್ದು, ಬೆಂಗಳೂರು, ಮೈಸೂರು ಮುಂತಾದ ಕರ್ನಾಟಕದ ಮುಖ್ಯ ರೈಲ್ವೇ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಸ್ಥಾಪಿತಗೊಂಡಿರುವುದಾಗಿದೆ. ಕರ್ನಾಟಕದಲ್ಲಿನ ರೈಲ್ವೇ ಸಂಪರ್ಕಗಳು, ವ್ಯವಸ್ಥೆಗಳು, ಅವುಗಳ ನಿರ್ವಹಣೆ ಮತ್ತು ವಿಸ್ತರಣೆ ಈ ವಲಯದ ಕಾರ್ಯವ್ಯಾಪ್ತಿಗೆ ಬರುವಂತವುಗಳಾಗಿವೆ. ಹೀಗಾಗಿ ಇಲ್ಲಿ ದೊರಕುವ ಸೇವೆಗಳು, ಹುಟ್ಟುವ ಉದ್ಯೋಗಗಳು ಎಲ್ಲವೂ ಕನ್ನಡ ಕೇಂದ್ರಿತವಾಗಿಯೇ ಮತ್ತು ಕನ್ನಡಿಗನಿಗೆ ಲಾಬದಾಯಕವಾಗಿಯೇ ಇರಬೇಕಾಗಿರುವುದು ಒಕ್ಕೂಟ ವ್ಯವಸ್ಥೆಯ ದ್ರುಶ್ಟಿಯಿಂದ ಸರಿಯಾದ ನಡೆಯಾಗಿದೆ. ಆದರೆ 
ಈ ವಲಯದ ವ್ಯವಸ್ಥೆ ಮಾತ್ರ ಇದಕ್ಕೆ ತದ್ವಿರುದ್ದವಾಗಿದೆ. ಕರ್ನಾಟಕದಲ್ಲೇ ಸಂಚರಿಸುವ ರೈಲುಗಳಲ್ಲಿ ಹಿಂದಿ ನಾಮಫಲಕಗಳು ರಾರಾಜಿಸುತ್ತವೆ. ಕರ್ನಾಟಕಕ್ಕೆ ಬರುವ ರೈಲಿನಲ್ಲೂ ಸ್ಥಳೀಯ ಬಾಶೆಯನ್ನು ಸಂಪೂರ್ಣವಾಗಿ ಕಡೆಗಣಿಸಿ ಹಿಂದಿಯನ್ನು ಮೊದಲ ಸ್ಥಾನದಲ್ಲಿ ಹಾಕಲಾಗಿದೆ. ಇಂಗ್ಲೀಶ ಜೊತೆಗೆ ಕನ್ನಡದಲ್ಲೇ ಇರಬೇಕಾಗಿದ್ದ ದಕ್ಷಿಣ-ಪಶ್ಚಿಮ ರೈಲ್ವೇ ವಲಯದ ಮಿಂಬಲೆಯಲ್ಲಿ ಕಾಣುತ್ತಿರುವ ಆಯ್ಕೆ ಮಾತ್ರ ಹಿಂದಿ ಒಂದೇ.! ಇಂತ ಘನ ಕಾರ್ಯಗಳಿಗೆ ನಮಗೆ ಒಂದು ರೈಲ್ವೇ ವಲಯ ಬೇಕಾಗಿತ್ತೇ.? ಈಚೆಗೆ ೨ ವರುಶಗಳ ಹಿಂದೆ, ಈ ವಲಯದ ಮೂಲಕ  ನಡೆಯುತ್ತಿದ್ದ ರೈಲ್ವೇ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯ ಜಾಹೀರಾತು, ಪರೀಕ್ಷೆ ಬರೆಯುವ ಮಾದ್ಯಮ ಎಲ್ಲ ಹಿಂದಿಮಯವಾಗಿತ್ತು. ಹೀಗಾಗಿ ಸಹಜವಾಗಿ ಹಿಂದಿ ಬಲ್ಲವರಿಗೆ ಅನುಕೂಲ ವಾತಾವರಣ ನಿರ್ಮಾಣವಾಗುತ್ತಿತ್ತು. ಕರ್ನಾಟಕ ರಕ್ಷಣಾ ವೇದಿಕೆಯ ಕನ್ನಡ ಇಚ್ಚಾಶಕ್ತಿಯ ಫಲವಾಗಿ ನೇಮಕಾತಿ ಪ್ರಕ್ರಿಯೆಯಲ್ಲಿ ಕನ್ನಡವನ್ನು ಅನುಷ್ಟಾನಗೊಳಿಸಿ, ಕನ್ನಡಿಗರಿಗೆ ರೈಲ್ವೇಯಲ್ಲಿ ಉದ್ಯೋಗದ ಅವಕಾಶಗಳು ಸಿಗುವಂತಾಗಿದೆ. ಇದು ಕೇಂದ್ರ ಸರಕಾರದ ಇಲಾಖೆ ಎಂಬ ವಾದವನ್ನು ಮುಂದಿಟ್ಟುಕೊಂಡು, ಬಾರತದ ಏಕೈಕ ಆಡಳಿತ ಬಾಶೆಯೆಂಬ ಅಸ್ತ್ರವನ್ನು ಬಳಸಿಕೊಂಡು, ಈ ವಲಯದ ಸೇವೆಯನ್ನು ಬಳಸುವವರು ಕನ್ನಡಿಗರೇ ಆಗಿದ್ದರೂ, ಸೇವೆಯಲ್ಲಿ ವ್ಯವಸ್ಥಿತವಾಗಿ ಹಿಂದಿ ಹೇರಿಕೆಯ ಪ್ರಕ್ರಿಯೆಯನ್ನು ಮುಂದುವರೆಸಿದ್ದಾರೆ. ಒಕ್ಕೂಟ ವ್ಯವಸ್ಥೆಯನ್ನು ಅವಮಾನಿಸುವಂತ ಇಂತಹ ವ್ಯವಸ್ಥೆಯನ್ನು ಕೇಂದ್ರ ಸರಕಾರ ಪೋಷಿಸುತ್ತಿರುವುದು ನಾಚಿಕೆಗೇಡಿನ ಸಂಗತಿ.! 

ವೈವಿದ್ಯತೆಯನ್ನು ಅಪ್ಪಿಕೊಂಡ ಯುರೋಪ್ ಒಕ್ಕೂಟ.!
ವೈವಿದ್ಯತೆಯಲ್ಲಿ ಏಕತೆಯನ್ನು ಸಾರುವ ದೇಶವಾದ ಬಾರತದ ರೈಲು ವ್ಯವಸ್ಥೆಯ ಮಿಂಬಲೆ (ವೆಬ್ ತಾಣ) ಯಲ್ಲಿ ವೈವಿದ್ಯತೆಯನ್ನು ಗಾಳಿಗೆ ತೂರಲಾಗಿದೆ. ಕೇವಲ ಒಂದೇ ಬಾಶೆಗೆ ತನ್ನ ನುಡಿಯಲ್ಲಿ ಸೇವೆ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಅದರ ಜೊತೆಗೆ, ಒಕ್ಕೂಟ ವ್ಯವಸ್ಥೆಗೆ ಒಳ್ಳೆಯ ಉದಾಹರಣೆ ಎಂದು ಬಿಂಬಿತಲ್ಪಡುವ ಯುರೋಪ್ ಒಕ್ಕೂಟದಲ್ಲಿ ವ್ಯವಸ್ಥೆ ಹೇಗಿದೆ ಅಂತ ತುಸು ನೋಡಿ ಬರೋಣ. ಯುರೋಪ ಮತ್ತು ಇತರ ಮುಂದುವರೆದ ದೇಶಗಳನ್ನು ಉದಾಹರಣೆಯಾಗಿ ತೆಗೆದುಕೊಂಡು ಅಲ್ಲಿನ ರೈಲಿನ ವ್ಯವಸ್ಥೆಯನ್ನು ಒಮ್ಮೆ ನೋಡಿದರೆ,, ಮಿಂಬಲೆಯಲ್ಲಿ ರೇಲ್ ಯುರೋಪ  ಎಂದು ಒಂದು ತಾಣವಿದೆ. ಆ ತಾಣದಲ್ಲಿ  ಇಂಗ್ಲೀಶನಲ್ಲಿ ಮಾತ್ರವಲ್ಲದೇ ಅನೇಕ ಬಾಶೆಗಳಲ್ಲಿ ಮಾಹಿತಿ ಸಿಗುತ್ತದೆ. ಇನ್ನು ಇತರ ಮುಂದುವರೆದ ದೇಶಗಳಾದ ಜಪಾನ್, ಚೀನಾ, ಕೋರಿಯಾ, ಫ್ರಾನ್ಸ್, ಸ್ವೀಡನ್, ಡೆನ್ಮಾರ್ಕ್ ಹೀಗೆ ಅನೇಕ ದೇಶಗಳ ಮಿಂಬಲೆಗಳಿಗೆ ಬೇಟಿ ಕೊಟ್ಟಾಗ ಕಂಡು ಬಂದಿದ್ದು, ಎಲ್ಲರಿಗೂ ಅವರದೇ ಬಾಶೆಯಲ್ಲಿ ಮಾಹಿತಿ, ಸೇವೆ ಸಿಗುತ್ತಿದೆ. ಅನೇಕ ಬಾಶೆಗಳಿರುವ ಯುರೋಪಿನ ರೈಲು ವ್ಯವಸ್ಥೆಯಲ್ಲಿ ಇಂಗ್ಲೀಶ್ ಜೊತೆಗೆ ಬರೀ ಸ್ಪ್ಯಾನಿಶನಲ್ಲಿ ಮಾಹಿತಿ ಕೊಟ್ಟರೆ, ಅದು ಹೇಗೆ ಇತರ ಸಮುದಾಯದ ಜನರಿಗೆ ಅನುಕೂಲವಾಗದೇ ಹೇರಿಕೆಯಾಗಿ ಕಾಣಿಸುತ್ತದೋ ಅದೇ ಥರ ಬಾರತೀಯ ರೇಲ್ವೇ ಇಲಾಖೆಯಲ್ಲಿ ಕೇವಲ ಹಿಂದಿಯಲ್ಲಿ ಮಾಹಿತಿ ಕೊಡುವುದು ಇತರ ಸಮುದಾಯದ ಜನರಿಗೆ ಅದು ಹೇರಿಕೆ ಅಲ್ಲದೇ ಮತ್ತೇನೂ ಅಲ್ಲ.! ಯುರೋಪದಲ್ಲೂ ಒಕ್ಕೂಟ ವ್ಯವಸ್ಥೆ ಇದೆ, ಆದರೆ ಅಲ್ಲಿ ಜರ್ಮನ್ ಬಾಶೆಯನ್ನು ಫ್ರೇಂಚನವರ ಮೇಲೆ ಹೇರೊದು ಆಗ್ಲಿ, ಅಥವಾ ಸ್ಪೇನ್ ಬಾಶೆಯನ್ನು ಇಟಲಿಯವರ ಮೇಲೆ ಹೇರೊದು ಆಗ್ಲಿ,, ಆಗಿಲ್ಲ. ನಮ್ಮಲ್ಲಿ ಮಾತ್ರ ಯಾಕೆ.? ಅಲ್ಲಿಯವರಿಗೆ ಯುರೋಪ್ ಸುತ್ತಾಡೊಕೆ ಇಂಗ್ಲೀಶ ಬಿಟ್ಟು ಬೇರೆ ಒಂದು ಸಂವಹನ ಬಾಶೆ ಬೇಕು ಅಂತ ಯಾವತ್ತೂ ಅನ್ನಿಸಿಲ್ಲ, ನಮ್ಮಲ್ಲಿ ಎಲ್ಲರಿಗೂ ಹೀಗೆಯೇ ಅನ್ನಿಸುತ್ತದೆ. ಯಾಕೆ.? ಕೆಲವರು ವಾದಿಸಬಹುದು ಯುರೋಪಿನಲ್ಲಿ ಇರುವವು ದೇಶಗಳು, ಬಾರತದಲ್ಲಿ ಇರುವವು ರಾಜ್ಯಗಳು, ಹೀಗಾಗಿ ದೇಶಕ್ಕೊಂದು ಬಾಶೆ ಬೇಕು ಎಂದು. ಈ ಸಂದೇಹಕ್ಕೆ ಸ್ಪಶ್ಟನೆ ಸರಳವಾಗಿದೆ. ಇಲ್ಲಿ ದೇಶ, ರಾಜ್ಯ ಎಂದು ನೋಡುವುದಕ್ಕಿಂತ ಅವುಗಳನ್ನು ಒಂದು ಬಾಶೆ ಮಾತನಾಡುವ ಸಮುದಾಯ (ಜನಾಂಗ) ವಾಸಿಸುವ ಪ್ರದೇಶವಾಗಿ ನೋಡುವುದು ಹೆಚ್ಚು ಸೂಕ್ತ. ಹೀಗಾಗಿ ದೇಶ, ರಾಜ್ಯ ಎನ್ನುವುದಕ್ಕಿಂತ, ಆಯಾ ಪ್ರದೇಶದ ಜನರಿಗೆ ಎಲ್ಲ ಮಾಹಿತಿ, ಸೇವೆ, ಮನರಂಜನೆ ತಮ್ಮ ನುಡಿಯಲ್ಲಿ ಸಿಗುತ್ತಿದೆಯೋ ಇಲ್ಲವೋ ಎಂಬುದು ಮುಖ್ಯ. ಆಯಾ ಬಾಶೆಯ ಅಸ್ಮಿತೆಗೆ ದಕ್ಕೆ ಆಗುವಂತ ಪರಬಾಶಾ ಹೇರಿಕೆಯನ್ನು ಖಂಡಿಸಬೇಕಾದುದು ಸದ್ಯದ ನಡೆ.

ವೈವಿದ್ಯತೆ ಮತ್ತು ಒಕ್ಕೂಟ ವ್ಯವಸ್ಥೆಗೆ ಸಿಗಬೇಕು ಗೌರವ.!
ಭಾರತ ಒಂದು ಒಕ್ಕೂಟ ವ್ಯವಸ್ಥೆಯಿರುವಂತ ದೇಶ. ನಮ್ಮಲ್ಲಿ ಅನೇಕ ಬಾಶೆ, ಸಂಸ್ಕ್ರುತಿ, ಸಂಪ್ರದಾಯಗಳಿವೆ. ಎಲ್ಲವಕ್ಕೂ ಅವುಗಳದೇ ಆದ ಮಹತ್ವ ಇದೆ, ಇತಿಹಾಸ ಇದೆ. ಹಿಂದಿ ಹೇಗೊ ಹಾಗೆ ಕನ್ನಡ, ತಮಿಳು, ತೆಲುಗು, ಗುಜರಾತಿ, ಓರಿಯಾ, ಪಂಜಾಬಿ ಎಲ್ಲವೂ ಬಾರತೀಯ ಬಾಶೆಗಳೇ. ಭಾರತದಲ್ಲಿ ಹಿಂದಿಯೊಂದೇ ಎಲ್ಲ ಕಡೆ ನಡೆಯುವ ಹಾಗಾದ್ರೆ, ಹೊರರಾಜ್ಯಗಳಿಗೆ ಹೊಗುವವರು ಅಲ್ಲಿಯ ಬಾಶೆ ಯಾಕೆ ಕಲೀಬೇಕು, ಅಲ್ಲಿ ಬಾಶೆನೇ ಬೇಡ ಅಂದಮೇಲೆ ಅಲ್ಲಿನ ಸಂಸ್ಕ್ರುತಿ, ಸಂಪ್ರದಾಯಗಳು ಯಾಕೆ ಬೇಕು. ಇಂಥ ಪರಿಸ್ಥಿತಿ ನಿರ್ಮಾಣ ಆದರೆ ಭವ್ಯ ಭಾರತದಲ್ಲಿ ವಿವಿಧತೆ ಅನ್ನೋದು ಇತಿಹಾಸ ಪುಟ ಸೇರುತ್ತೆ. ವಿವಿಧತೆ ಇಲ್ಲದ ಮೇಲೆ ಏಕತೆ ಎಲ್ಲಿಂದ.? ಆದ್ದರಿಂದ ನಮ್ಮ ಮೇಲಾಗುತ್ತಿರುವ ಹಿಂದಿ ಹೇರಿಕೆಯನ್ನು ವಿರೋದಿಸೋಣ. ಸಮಾನತೆಯ ಬೀಜವನ್ನು ಬಿತ್ತುವಂತ ಹಿಂದಿ ಸಪ್ತಾಹ, ಸೆಪ್ಟೆಂಬರ್ ೧೪ ರ ಹಿಂದಿ ದಿವಸ ತರಹದ ಆಚರಣೆಗಳನ್ನು ಪುರಸ್ಕರಿಸುವಂತ ಈಗಿನ ಬಾಶಾ ನೀತಿಯನ್ನು ಮುಲಾಜಿಲ್ಲದೇ ವಿರೋದಿಸಬೇಕು. ಎಲ್ಲ ಬಾಶೆಗಳನ್ನು ಗೌರವಿಸುವಂತ, ಸ್ಥಳೀಯ ಜನರಿಗೆ ಅನೂಕೂಲಕರವಾಗುವಂತ, ಅನಿಯಂತ್ರಿತ ವಲಸೆಯನ್ನು ತಡೆಯುವಂತ, ಪರಬಾಶಿಕರನ್ನು ಸ್ಥಳೀಯ ಬಾಶೆಯ ಮುಖ್ಯವಾಹಿನಿಗೆ ಬೆರೆಸುವಂತ ಬಾಶಾ ನೀತಿಯನ್ನು ರೂಪಿಸಬೇಕಿರುವುದು ಬಾರತದಂತ ಒಕ್ಕೂಟಕ್ಕೆ ತುರ್ತಾಗಿ ಆಗಬೇಕಿರುವುದು.

Thursday, 8 September 2011

ರೇಲ್ವೇ ಇಲಾಖೆ ಮತ್ತು ಹಿಂದಿ ಹೇರಿಕೆ.!

ವಿ.ಸೂ: ಬೇರೆ ಒಂದು ಬಾಶೆಯನ್ನು ಗೌರವಿಸುವುದಕ್ಕೂ ಅದನ್ನು ನಮ್ಮ ಮೇಲೆ ಹೇರಿಸಿಕೊಳ್ಳುವುದಕ್ಕೂ ಇರುವ ವ್ಯತ್ಯಾಸವನ್ನು ತಿಳಿದಿರುವವರು ಮಾತ್ರ ಮುಂದುವರಿಯಲು ಕೋರಿಕೆ.! 

ಸ್ವಾತಂತ್ರ್ಯ ನಂತರ, ಬಾರತೀಯತೆಗೂ ಹಿಂದಿಗೂ ತಳುಕು ಹಾಕಿ ಅದನ್ನು ರಾಶ್ಟ್ರ ಬಾಶೆ ಮಾಡಲು ಹೊರಟ ಕೇಂದ್ರ ಸರಕಾರದ ಮತ್ತು ಕೆಲವರ ಪ್ರಯತ್ನ ಅನೇಕ ಹಿಂದಿಯೇತರರ ವಿರೋದಿ ಹೋರಾಟದ ಫಲವಾಗಿ ವಿಫಲವಾಯಿತು. ಇದರ ತರುವಾಯ ಮುಂದೆ ಕೇಂದ್ರ ಸರಕಾರ ನೋಡಿಕೊಂಡ ದಾರಿಯೇ ಆಡಳಿತ ಬಾಶೆಯೆಂಬ ಹಿಂದಿನ ಬಾಗಿಲು. ಹಿಂದಿಯನ್ನು ಆಡಳಿತ ಬಾಶೆಯನ್ನಾಗಿ ಮಾಡಿ ತನ್ನ ಸಂಸ್ಥೆ, ಇಲಾಖೆ, ಬ್ಯಾಂಕುಗಳನ್ನು ಉಪಯೋಗಿಸಿ ಹಿಂದಿನ ಬಾಗಿಲ ಮೂಲಕ

Monday, 15 August 2011

ಕಲಾವಿದರು ಕಸಿದುಕೊಳ್ಳುತ್ತಿರುವ ಕನ್ನಡ ಗ್ರಾಹಕನ ಸ್ವಾತಂತ್ರ್ಯ.!

ಇವತ್ತು ಮದ್ಯಾನ್ಹ ಜೀ ಟಿವಿಯಲ್ಲಿ ಜಾನ್ಸಿ ರಾಣಿ ಅನ್ನೊ ಹಿಂದಿ ದಾರಾವಾಹಿಯನ್ನು ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡಿದ್ರು ಅಂತ ನಮ್ಮ ಕಿರುತೆರೆ ಕಲಾವಿದರು ಆ ವಾಹಿನಿಯ ಕಚೇರಿಗೆ ನುಗ್ಗಿ ಪ್ರತಿಭಟನೆ ನಡೆಸಿದರು. ಕಲಾವಿದರ ಪ್ರಕಾರ ಇದರಿಂದ ಕಿರುತೆರೆಯನ್ನೇ ನಂಬಿ ಜೀವನ ನಡೆಸುತ್ತಿರುವ ಅನೇಕ ಕುಟುಂಬಗಳು ಬೀದಿಗೆ ಬರುತ್ತವಂತೆ. ಇದರ ಜೊತೆಗೆ ಜೀ ಟಿವಿಯ ಈ ನಡೆ ಕನ್ನಡ ವಿರೋದಿಯಂತೆ. ಇವರ ವಾದವನ್ನು ಮತ್ತು ಕನ್ನಡತನವನ್ನು ಸ್ವಲ್ಪ ಆಳವಾಗಿ ನೋಡಿ ಬರೋಣ ಬನ್ನಿ.

ಹುರುಳಿಲ್ಲದ ವಾದ: ದಾರಾವಾಹಿ ಈಗಾಗಾಲೇ ತೆಲುಗು, ತಮಿಳು ಬಾಶೆಗೆ ಡಬ್ ಆಗಿ ಅಲ್ಲಿ ಪ್ರಸಾರವಾಗುತ್ತಿದೆ. ಹಾಗಾದರೆ ಆಂದ್ರ ತಮಿಳುನಾಡಿನಲ್ಲಿ ಕಲಾವಿದರೇ ಇಲ್ಲವೇ.? ಅಲ್ಲಿಯೂ ಕಲಾವಿದರಿದ್ದಾರೆ, ಅವರಲ್ಲಿಯೂ ಅನೇಕರಿಗೆ ಕಿರುತೆರೆಯಿಂದಲೇ ಹೊಟ್ಟೆ ತುಂಬುತ್ತದೆ. ಅಲ್ಲಿ ಅವರಿಗೆ ಇಲ್ಲದ ಸಮಸ್ಯೆ ದಿಡೀರನೇ ಕರ್ನಾಟಕಕ್ಕೆ ಬಂದ ಕೂಡಲೇ ಹೇಗೆ ಹುಟ್ಟುತ್ತದೆ. ಇದಕ್ಕೆ ಯಾರು ಕಾರಣ. ಯಾಕೆ ಈ ಮನಸ್ಥಿತಿ.! ಇದೇ ಸಂದರ್ಬದಲ್ಲಿ ಒಬ್ಬ ಕಲಾವಿದರು ಹೇಳಿದ್ರು, ಒಂದು ದಾರಾವಾಹಿ ಕನ್ನಡಕ್ಕೆ ಡಬ್ ಮಾಡಲು ಬಿಟ್ಟರೆ, ಅದರ ಜೊತೆಗೆ ನೂರಾರು ದಾರಾವಾಹಿಗಳು ಬಂದು ನಿಲ್ಲುತ್ತವೆ ಅಂತ.! ಇದು ಯಾವ ಮನಸ್ಥಿತಿಯನ್ನು ತೋರಿಸುತ್ತದೆ. ಸ್ಪರ್ದೆ ಎದುರಿಸುವ ಹಿಂಜರಿಕೆಯನ್ನು ತೋರಿಸುತ್ತದೆ ಅಲ್ಲವೇ.! ಸ್ಪರ್ದೆ ಎಂದ ತಕ್ಷಣ ಬೀದಿಗೆ ಬರುವ ಮಾತು ಇತರ ಬಾಶೆಯ ಕಲಾವಿದರ ಬಾಯಲ್ಲಿ ಬರದೇ ಬರೀ ನಮ್ಮ ಕಲಾವಿದರ ಬಾಯಲ್ಲಿ ಮಾತ್ರ ಏಕೆ ಬರುತ್ತದೆ.? ಒಂದು ಹಿಂದಿ ಬಾಶೆಯಲ್ಲಿರುವ ದಾರಾವಾಹಿಯನ್ನು ಕನ್ನಡ ಚಾನಲ್ಲಿನಲ್ಲಿ ಕನ್ನಡದಲ್ಲಿ ತೋರಿಸಿದರೇ ಅದು ಕನ್ನಡ ವಿರೋದಿ ಎನ್ನುವ ಇವರ ಕನ್ನಡತನಕ್ಕೆ ಏನನ್ನಬೇಕು. ಡಬ್ ಮಾಡದೇನೇ ಹಿಂದಿಯಲ್ಲೇ ತೋರಿಸಿದರೆ ಅದು ಕನ್ನಡಪರವಾಗುವುದೋ.!

ಅರ್ಥವಾಗದ ಕನ್ನಡತನ: ಇಷ್ಟಕ್ಕೂ ಡಬ್ಬಿಂಗ್ ವಿಶಯ ಬಂದಾಗ ಕನ್ನಡವನ್ನು ಮುಂದೆ ಮಾಡಿ ವಾದ ಮಾಡುವವರು, ಅನೇಕ ಕನ್ನಡ ವಾಹಿನಿಯಲ್ಲಿ ಹಿಂದಿ ಹಾಡುಗಳನ್ನು ಪ್ರಸಾರ ಮಾಡುವುದು, ಆ ಹಾಡಿಗೆ ಕುಣಿಯುವುದು ನಡೆದಾಗ ಯಾವ ಲೋಕದಲ್ಲಿದ್ದರು,? ಅದು ಅವರಿಗೆ ಕನ್ನಡ ವಿರೋದಿಯಾಗಿ ಕಾಣಲಿಲ್ಲವೇ.? ಆ ಕಾರ್ಯಕ್ರಮಗಳಿಗೆ ತೀರ್ಪುಗಾರರಾಗಿ ಹೋಗಿದ್ದು ಇದೇ ಕಲಾವಿದರಲ್ಲವೇ.? ನೀರಾವರಿ, ಶಾಸ್ತ್ರೀಯ ಬಾಶೆ ಸ್ಥಾನಮಾನ ಹೀಗೆ ಅನೇಕ ವಿಶಯಗಳಲ್ಲಿ ಕನ್ನಡಿಗರಿಗೆ ಅನ್ಯಾಯವಾದಾಗ ದ್ವನಿಗೂಡಿಸದ ಇವರ ಕನ್ನಡತನ ಆಗ ಎಲ್ಲಿತ್ತು.? ಮೊನ್ನೆ ನಡೆದ ಕನ್ನಡ ಚಲನಚಿತ್ರ ಪ್ರಶಸ್ತಿ ಸಮಾರಂಬದಲ್ಲಿ ಮೂರು ಬಿಟ್ಟವರಂತೆ ಹಿಂದಿ ಹಾಡುಗಳಿಗೆ ಕುಣಿದು ಕುಪ್ಪಳಿಸಿದಾಗ ಎಲ್ಲಿ ಅಡಗಿತ್ತು ಇವರ ಕನ್ನಡ ಸ್ವಾಭಿಮಾನ.? ಡಬ್ಬಿಂಗ್ ವಿರೋದಿಯಂತಹ ನಿಲುವಿನಿಂದಾಗಿಯೇ ಇವತ್ತು ವಿಜ್ಞಾನ (ಡಿಸ್ಕವರಿ, ನ್ಯಾಟ್ ಜಿಯೊ,ಅನಿಮಲ್ ಪ್ಲಾನೇಟ್), ಕಾರ್ಟೂನ್ (ಪೊಗೊ, ಡಿಸ್ನಿ, ಕಾರ್ಟೂನ್ ನೆಟವರ್ಕ್) ತರಹದ ವಿಶಯಗಳು ಕನ್ನಡದ ಮಕ್ಕಳಿಗೆ ಆಡುವ ನುಡಿಯಲ್ಲಿ ದೊರಕದೇ ಅವರು ಅವಕಾಶ ವಂಚಿತರಾಗುತ್ತಿರುವುದು. ಹೋಗಲಿ, ಡಬ್ಬಿಂಗ್ ಬಗ್ಗೆ ಇಶ್ಟೊಂದು ಕಿಡಿ ಕಾರುವ ಇವರು ಇಂಗ್ಲೀಶ್ ಚಿತ್ರ ತೆಲುಗಿಗೆ, ಹಿಂದಿಗೆ ಡಬ್ ಆಗಿ ರಾಜ್ಯದಾದ್ಯಂತ ಓಡುತ್ತ ಇದೆ, ಇದು ಹೇಗೆ ಅವರ ಕಣ್ಣಿಗೆ ಕಾಣಲಿಲ್ಲ.! ಹಿಂದಿ ಸಿಂಗಂ ಚಿತ್ರದಲ್ಲಿ ಕನ್ನಡಿಗರ ಮೇಲೆ ಜನಾಂಗೀಯ ನಿಂದನೆ ನಡೆದಾಗ ಈಗ ಪ್ರತಿಭಟನೆ ಮಾಡಿದವರಲ್ಲಿ ಎಶ್ಟು ಜನ ಬೀದಿಗಿಳಿದಿದ್ದರು.? ಓಟ್ಟಾರೆ ಏನಾದ್ರು ಆಗಲಿ, ಯಾವುದೇ ಮನರಂಜನೆ ಕನ್ನಡಕ್ಕೆ ಡಬ್ ಆಗಬಾರದು ಎನ್ನುವ ವಾದದಲ್ಲಿ ಅಡಗಿರೋದು ಕನ್ನಡದ ಹಿತಾಸಕ್ತಿಯೋ, ಸ್ವಹಿತಾಸಕ್ತಿಯೋ ಎಂಬುದು ಅರ್ಥವಾಗದ ಸಂಗತಿಯೇನಲ್ಲ.!

ಒಟ್ಟಿನಲ್ಲಿ, ಗ್ರಾಹಕನ ಬೇಡಿಕೆಗೆ ಅನುಗುಣವಾಗಿ ಜೀ ಟಿವಿಯವರು ದಾರಾವಾಹಿಯನ್ನು ಕನ್ನಡದಲ್ಲಿ ಪ್ರಸಾರ ಮಾಡಿದ್ದಾರೆ. ಜಾನ್ಸಿ ರಾಣಿ ದಾರಾವಾಹಿ ಹಿಂದಿಯಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾದರೆ ದ್ವನಿ ಎತ್ತಬೇಕು. ಕನ್ನಡದಲ್ಲೇ ಪ್ರಸಾರ ಆಗುತ್ತಿರುವಾಗ ಅದರಲ್ಲಿ ತಪ್ಪೇನಿದೆ..? ಅದು ತಪ್ಪು ಅಂತ ಸಮರ್ಥಿಸಲು ಅವಕಾಶಗಳೇ ಇಲ್ಲ. ಅದನ್ನು ತಪ್ಪು ಅನ್ನುವವರ ವಾದವೇ ತಪ್ಪು. ತಮ್ಮ ಹೊಟ್ಟೆಪಾಡು ಎಂದು ಹೇಳುವ ಕಲಾವಿದರು ಆ ಹೊಟ್ಟೆಪಾಡಿಗೆ ಕಾರಣನಾದ ಅನ್ನದಾತನಿಗೆ ತನ್ನ ನುಡಿಯಲ್ಲೇ ಮನರಂಜನೆ ಪಡೆದುಕೊಳ್ಳಲು ಬಿಡದೇ ವಂಚಿಸುತ್ತಿದ್ದಾರೆ. ಈ ಜಗತ್ತಿನಲ್ಲಿ ಪ್ರತಿಯೊಂದು ಉದ್ದಿಮೆ ಅವಲಂಬಿತವಾಗಿರುವುದು ಗ್ರಾಹಕನ ಮೇಲೆನೇ. ಮನರಂಜನೆ ಉದ್ದಿಮೆ ಅಂತ ನೋಡಿದರೆ ನಮಗೆ ಕಾಣುವುದು ಗ್ರಾಹಕ, ಟಿವಿ ಮಾಲೀಕ, ಜಾಹೀರಾತುದಾರ ಮತ್ತು ಸರಕು ಪೂರೈಕೆದಾರ. ಇಲ್ಲಿ ಇತರ ಮೂವರೂ ಅವಲಂಬಿತವಾಗಿರುವುದು ಗ್ರಾಹಕನ ಮೇಲೆ. ಹೀಗಾಗಿ ಗ್ರಾಹಕನನ್ನು ಯಾರೋ ಸರಕು ಪೂರೈಕೆದಾರರು ನಿಯಂತ್ರಿಸುವುದು ಬಾಲವೇ ನಾಯಿನ ಅಲ್ಲಾಡಿಸಿದಂತೆ ಆಗುತ್ತದೆ. ಒಂದು ಕಡೆ ಸ್ವಾತಂತ್ರ್ಯ ಬಂದಿದೆ ಅಂತ ಆಚರಣೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ಆ ಸ್ವಾತಂತ್ರ್ಯವನ್ನೇ ಕಿತ್ತುಕೊಂಡು ಗ್ರಾಹಕನನ್ನು ನಿಯಂತ್ರಿಸಲು ಕೆಲವರು ಹೊರಟಿರುವುದು ಸಂವಿದಾನ ವಿರೋದಿ ನಡೆಯಾಗಿದೆ.

Sunday, 17 July 2011

ಅಸಂವಿದಾನಿಕ ಡಬ್ಬಿಂಗ್ ನಿಶೇದದಿಂದ ಕನ್ನಡಕ್ಕಿಲ್ಲದ ಹ್ಯಾರಿ ಪಾಟರ್..!


ಇತ್ತೀಚಿಗೆ ಬಂದ ಸುದ್ದಿಯಂತೆ, ಹ್ಯಾರಿ ಪಾಟರಿನ ಹೊಸ ಚಿತ್ರ ತೆರೆಗೆ ಬಂದಿದೆ. ಅಶ್ಟೆ ಅಲ್ಲ ಇದು ಬಾರತದ ಪ್ರಾದೇಶಿಕ ಬಾಶೆಗಳತ್ತ ತನ್ನ ಗಮನವನ್ನು ಹರಿಸುತ್ತ, ಚಿತ್ರವನ್ನು ಇಂಗ್ಲೀಶಿನ ಜೊತೆಗೆ ತೆಲುಗು, ತಮಿಳು, ಹಿಂದಿಯಲ್ಲೂ ಬಿಡುಗಡೆ ಮಾಡುತ್ತಿದೆ. ಇದರರ್ಥ ಆಂದ್ರಪ್ರದೇಶ, ತಮಿಳುನಾಡಿನ ಮತ್ತು ಉತ್ತರ ಬಾರತದ ಅನೇಕ ರಾಜ್ಯಗಳ ಜನರು ಹ್ಯಾರಿ ಪಾಟರನ್ನು ತಮ್ಮ ತಾಯ್ನುಡಿಯಲ್ಲೇ ನೋಡಿ ಸವಿಯಬಹುದಾಗಿದೆ. ಆದರೆ ಈ ಸೌಬಾಗ್ಯ ಕನ್ನಡ ಬಾಶೆಯನ್ನಾಡುವ, ಕನ್ನಡದಲ್ಲೇ ಮನರಂಜನೆಯನ್ನು ಬಯಸುವ ನಮಗೆ ಇಲ್ಲ.

ಕರ್ನಾಟಕದಲ್ಲಿನ ಪರಿಸ್ಥಿತಿ:
ಕರ್ನಾಟಕದಲ್ಲಿ ಇಂಗ್ಲೀಶ ಚಿತ್ರಗಳು ಇಂಗ್ಲೀಶಿನಲ್ಲೇ ಬಿಡುಗಡೆಯಾಗಬೇಕು ಎಂಬ ನಿಯಮವೇನು ಇಲ್ಲ. ಅದರರ್ಥ ಈ ಚಿತ್ರ ಕರ್ನಾಟಕದಲ್ಲಿ ಇಂಗ್ಲೀಶ ಜೊತೆಗೆ ತೆಲುಗು, ತಮಿಳು, ಹಿಂದಿಯಲ್ಲೂ ಬಿಡುಗಡೆ ಆಗಬಹುದು. ಹೀಗೆ ಕರ್ನಾಟಕದಲ್ಲಿ ಇಂಗ್ಲೀಶ ಚಿತ್ರ ಇಂಗ್ಲೀಶೇತರ ಇತರ ಬಾಶೆಗಳಲ್ಲಿ ಬಿಡುಗಡೆಯಾದರೆ ಅಲ್ಲಿಗೆ ಡಬ್ಬಿಂಗ್ ನಿಶೇದವಿದೆ ಎಂಬ ಮಾತು ಶುದ್ದ ಸುಳ್ಳಾಗುತ್ತದೆ. ಅದರರ್ಥ ಕರ್ನಾಟಕದಲ್ಲಿ ಡಬ್ಬಿಂಗ್ ಚಿತ್ರಗಳಿಗೆ ಅನುಮತಿಯಿದೆ, ಆದರೆ ಕನ್ನಡಕ್ಕೆ ಡಬ್ ಆದ ಚಿತ್ರಗಳಿಗೆ ಅನುಮತಿಯಿಲ್ಲ. ಹ್ಯಾರಿ ಪಾಟರ್ ತೆಲುಗು, ತಮಿಳು, ಹಿಂದಿಗಳಿಗೆ ಡಬ್ ಆಗಿ ಕರ್ನಾಟಕದಲ್ಲಿ ಬಿಡುಗಡೆಯಾದರೆ ಓಕೆ,, ಆದರೆ ಅದೇ ಚಿತ್ರ ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗಲಿ ಅಂದ್ರೆ ಯಾಕೆ.? ಅಂತ ಕೇಳ್ತಾರೆ ನಮ್ಮ ಚಲನಚಿತ್ರ ಮಂಡಳಿ. ಈ ಪ್ರಶ್ನೆಯಲ್ಲಿ ಸ್ವಲ್ಪನಾದ್ರೂ ನ್ಯಾಯ ಇದೆಯಾ.!

ಅಸಂವಿದಾನಿಕ ನಿಯಮ:
ಆಂಗ್ಲ ಬಾಶೆಯ ಬಹುಕೋಟಿ ವೆಚ್ಚದ, ಉನ್ನತ ತಂತ್ರಜ್ನಾನ, ಗ್ರಾಫಿಕ್ಸ್ ಇರುವ ಚಿತ್ರಗಳನ್ನು ಬರೀ ಇಂಗ್ಲೀಶ ಬಲ್ಲವರಶ್ಟೇ ನೋಡಬೇಕು ಎಂಬಂತಿದೆ ನಮ್ಮ ಚಿತ್ರರಂಗದ ಈಗಿನ ನಿಯಮ. ಕರ್ನಾಟಕದಲ್ಲಿ ಇಂಗ್ಲೀಶ್ ಬಾರದವರು ಈ ಚಿತ್ರ ನೋಡಬೇಕೆಂದರೆ ಅವರು ತಮಿಳು, ತೆಲುಗು, ಹಿಂದಿಗೆ ಮೊರೆ ಹೋಗಬೇಕಾದ ಪರಿಸ್ಥಿತಿಯನ್ನು ಈ ಡಬ್ಬಿಂಗ್ ನಿಶೇದದ ನಿಯಮ ತಂದೊಡ್ಡಿದೆ. ಚಿತ್ರರಂಗದ ಈ ಅಸಂವಿದಾನಿಕ ಡಬ್ಬಿಂಗ್ ನಿಶೇದದ ನಿಯಮದಿಂದ ಕೆಲವು ಒಳ್ಳೆಯ ಮನರಂಜನೆಯಿಂದ ಕರ್ನಾಟಕದ ಜನರು ವಂಚಿತರಾಗುತ್ತಿದ್ದಾರೆ. ಈ ಹ್ಯಾರಿ ಪಾಟರ್ ಚಿತ್ರ ಹೆಚ್ಚು ಮಕ್ಕಳ ಮನರಂಜನೆ ಉದ್ದೇಶಿಸಿ ಮಾಡಿರೋದ್ರಿಂದ ಡಬ್ಬಿಂಗ್ ನಿಶೇದದಿಂದಾಗಿ ಕನ್ನಡದ ಮಕ್ಕಳಿಗೆ ಮೋಸವಾಗ್ತಿದೆ ಎಂಬುದನ್ನು ಕೂಡ ಇಲ್ಲಿ ಗಮನಿಸಬೇಕು. ಪ್ರೇಕ್ಷಕನಿಗೆ ನೀನು ಇದನ್ನೇ ನೋಡು ಅಥವಾ ಇದೇ ಬಾಶೆಯಲ್ಲಿ ನೋಡು ಎಂದು ಡಬ್ಬಿಂಗ್ ನಿಶೇದ ಎಂಬ ಅಸ್ತ್ರದ ಮೂಲಕ ಒತ್ತಾಯಿಸುವುದು ಸಂವಿದಾನ ವಿರೋದಿಯಾದ ನಡೆ. ಜಗತ್ತಿನ ಎಲ್ಲ ಒಳ್ಳೆಯ ಮನರಂಜನೆಯನ್ನು ತನ್ನ ನುಡಿಯಲ್ಲಿ ನೋಡುವ ಹಕ್ಕು ಅವನಿಗಿದೆ. ಡಬ್ಬಿಂಗ್ ನಿಶೇದದಿಂದ ಈ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಡಬ್ಬಿಂಗ್ ಬರಲಿ. ಒಳ್ಳೆಯ ಮನರಂಜನೆ ಅನ್ನೋದು ನಗರ ಪ್ರದೇಶಗಳ ಅಥವಾ ಇಂಗ್ಲೀಶ್ ಬಲ್ಲ ಕೆಲವ್ರಿಗೆ ಮಾತ್ರ ಸೀಮಿತ ಆಗದೇ ರಾಜ್ಯದ ಎಲ್ಲರಿಗೂ ಅವರು ಆಡುವ ನುಡಿಯಲ್ಲೇ ಅದು ಸಿಗುವಂತಾಗಲಿ. ಕರ್ನಾಟಕದಲ್ಲಿ ಎಲ್ಲರಿಗೂ ಕನ್ನಡದಲ್ಲಿ ಮನರಂಜನೆ ಸಿಗುತ್ತದೆ ಎಂಬ ಉದ್ದೇಶವನ್ನು ಡಬ್ಬಿಂಗ್ ಹೊಂದಿದೆ ಎಂಬ ಸಾಮಾನ್ಯ ತಿಳುವಳಿಕೆಯನ್ನು ಡಬ್ಬಿಂಗ್ ವಿರೋದಿಗಳು ಅರಿಯಬೇಕಿದೆ.!

Saturday, 25 June 2011

ಹಿಂದಿ ಹೇರಿಕೆಯಲ್ಲೂ ಸುಣ್ಣ ಬೆಣ್ಣೆ..!

ಇವತ್ತಿನ (೨೬-೦೬-೧೧) ಪ್ರಜಾವಾಣಿ ದಿನಪತ್ರಿಕೆಯಲ್ಲಿ ಮಿನಿಸ್ಟ್ರಿ ಆಫ್ ಮೈಕ್ರೊ, ಸ್ಮಾಲ್ ಆಂಡ್ ಮಿಡಿಯಮ್ ಎಂಟರಪ್ರೈಜಸ್ ಅವರು ತಮ್ಮ ಕಾಯರ್ ಬೋರ್ಡ್ ಎಂಬ ಸಂಸ್ಥೆಯ ಮೂಲಕ ಒಂದು ಜಾಹೀರಾತನ್ನು ಕೊಟ್ಟಿದ್ದಾರೆ. ಅದು ಸಂಪೂರ್ಣ ಹಿಂದಿಯಲ್ಲಿರೋದು ಕಾಣುತ್ತೆ. ಅವರ ಮಾಹಿತಿ ಪ್ರಜಾವಾಣಿ ಓದುವ ಅಥವಾ ಜಾಹೀರಾತನ್ನು ನೋಡುವ ಬಹುತೇಕ ಜನರಿಗೆ, ಕಣ್ಣಿಗೆ ಬಿದ್ದರೂ ಮಾಹಿತಿ ತಿಳಿಸುವ ಹಂತಕ್ಕೆ ಅದು ಹೋಗುವುದಿಲ್ಲ ಎಂಬುದು ಸತ್ಯ. ಹೀಗಾಗಿ ಮಾಹಿತಿ ಕೊಡುವ ಉದ್ದೇಶಕ್ಕಿಂತ ಅದರಲ್ಲಿ ಹಿಂದಿ ಹೇರಿಕೆಯ ಉದ್ದೇಶನೇ ಎದ್ದು ಕಾಣುತ್ತೆ.
ಇನ್ನು ಜಾಹೀರಾತು ಕೊಟ್ಟ ಕಾಯರ್ ಬೋರ್ಡ ಅನ್ನೋ ಸಂಸ್ಥೆಯ ಕೇಂದ್ರ ಕಚೇರಿ ಕೇರಳದ ಕೊಚ್ಚಿಯಲ್ಲಿದೆ. ಕೇರಳದ ಬಾಶೆ ಮಲಯಾಳಂ, ಹೀಗಾಗಿ ಅಲ್ಲಿನೂ ಇದೇ ರೀತಿ ಹಿಂದಿಯಲ್ಲಿ ಕೊಟ್ಟಿದ್ದಾರಾ ಅಂತ ನೋಡಿದ್ರೆ,, ಅಲ್ಲಿನ ಮಲಯಾಳ ಮನೋರಮಾ ದಿನಪತ್ರಿಕೆಯಲ್ಲಿ ಇದೇ ಜಾಹೀರಾತು ಸಂಪೂರ್ಣ ಆಂಗ್ಲ್ ಬಾಶೆಯಲ್ಲಿತ್ತು. ವಿಚಿತ್ರ ಅಂದ್ರೆ, ಕಾಯರ್ ಬೋರ್ಡ ತಮ್ಮೂರಿನಲ್ಲಿ ಆಂಗ್ಲ ಬಾಶೆಯಲ್ಲಿ ಜಾಹೀರಾತು ಹಾಕಿಸಿ, ನಮ್ಮೂರಿನಲ್ಲಿ ಹಿಂದಿಯಲ್ಲಿ ಜಾಹೀರಾತು ಹಾಕಿಸಿದ್ದು.! ಎರಡು ಹಿಂದಿಯೇತರ ದಿನಪತ್ರಿಕೆಗಳೇ. ಒಂದು ಪ್ರಾದೇಶಿಕ ದಿನಪತ್ರಿಕೆಯಲ್ಲಿ ಆಂಗ್ಲ ಮತ್ತೊಂದರಲ್ಲಿ ಹಿಂದಿ ಹಾಕಿದ್ದು ಯಾಕೆ ಅನ್ನೋದಶ್ಟೆ ಪ್ರಶ್ನೆ. ಎರಡೂ ಕಡೆ ಪ್ರಾದೇಶಿಕ ಬಾಶೆನೇ ಇರಬೇಕಿತ್ತು ಅನ್ನೋದು ಮಾತ್ರ ವಿವಾದಕ್ಕೆ ಎಡೆ ಇಲ್ಲದ ವಾದ.! ಅಂದಹಾಗೆ ಬೆಂಗಳೂರಿನಲ್ಲೂ ಅದರ ಪ್ರಾದೇಶಿಕ ಕಚೇರಿ ಇದೆ.




ಮಲಯಾಳಂ ಆಡಳಿತ ಬಾಶೆಯಾಗಿರುವ ಕೇರಳದಲ್ಲಿ ಹಿಂದಿಯಲ್ಲಿ ಜಾಹೀರಾತು ಕೊಡಬಾರದು ಎಂಬುದು ಗೊತ್ತಿರುವ ಕೇಂದ್ರ ಸರಕಾರಕ್ಕೆ, ಕನ್ನಡ ಆಡಳಿತ ಬಾಶೆಯಾಗಿರುವ ಕರ್ನಾಟಕದಲ್ಲಿ ಹಿಂದಿಯಲ್ಲಿ ಕೊಡಬೇಕು ಅಂತ ಹೇಗೆ ಅನ್ನಿಸಿತು.! ಇದು ನಿಸ್ಸಂದೇಹವಾಗಿ, ಹಿಂದಿ ಹೇರಿಸಿಕೊಳ್ಳುವುದರಲ್ಲಿ ಕೇರಳಕ್ಕಿಂತ ನಾವು ಮುಂದೆ ಇದ್ದೇವೆ ಎಂಬುದನ್ನು ತೋರಿಸುತ್ತದೆ.
ಕೆಲವೊಮ್ಮೆ ಕೇಂದ್ರ ಸರಕಾರದ ಜಾಹೀರಾತುಗಳು ಪ್ರಾದೇಶಿಕ ಬಾಶೆಯಲ್ಲೇ ಬರುತ್ತವೆ. ಆದರೆ ನಿಯಮವನ್ನು ಕೆಲವೊಮ್ಮೆ ಇಲಾಖೆಗಳು ಪಾಲಿಸಲ್ಲ ಅಥವಾ ಪಾಲಿಸಲು ಬಯಸಲ್ಲ.! ಕನ್ನಡ ಪತ್ರಿಕೆ ಓದುವವರು ಕನ್ನಡ ಬಲ್ಲವರೇ ಆಗಿರುತ್ತಾರೆ. ಹಿಂದಿಯಲ್ಲಿ ಜಾಹೀರಾತು ಕೊಡುವುದರಿಂದ ಅದು ಬಹಳಶ್ಟು ಜನರಿಗೆ ತಲುಪುವುದಿಲ್ಲ ಎಂಬ ಸತ್ಯ ಕೇಂದ್ರ ಸರಕಾರಕ್ಕೆ ಗೊತ್ತಿರದೇ ಇರದು. ಆದ್ರೂ ಕೊಡುತ್ತಾರೆ ಅಂದ್ರೆ, ಅದು ವರ್ಶಕ್ಕೆ ಕಾಯ್ದಿರಿಸಿದ ೩೬ ಕೋಟಿ ರೂಪಾಯಿ ಹಿಂದಿ ಹೇರಿಕೆಯ ಬಜೆಟ್ ಹಣದ ಲೆಕ್ಕ ತೋರಿಸಲು ಅಂತನೇ ಇರಬೇಕು.! ಅಲ್ಲಿಗೆ ಹಿಂದಿ ಹೇರಿಕೆಯೇ ಜಾಹೀರಾತಿನ ಮೂಲಮಂತ್ರ ಎಂಬುದು ಸ್ಪಶ್ಟವಾಗುತ್ತದೆ. ಸ್ಥಳೀಯ ಬಾಶೆಯನ್ನು ಮತ್ತು ಸ್ಥಳೀಯ ಜನರನ್ನು ಕಡೆಗಣಿಸುವ ಕೇಂದ್ರ ಸರಕಾರದ ಇಂತಹ ನಿಲುವಿಗೆ ವಿರೋದ ವ್ಯಕ್ತಪಡಿಸಲೇಬೇಕಲ್ಲವೇ.!