Friday, 7 May 2010

ಶಂಖದಿಂದ್ ಬಂದ್ರನೇ ತೀರ್ಥ.................!!!







ಸುದ್ದಿ: ಹೊಗೆನಕ್ಕಲ್ ಯೋಜನೆ ಕುರಿತು ರಾಜ್ಯ ಸಂಸದರಿಂದ ಪ್ರದಾನ ಮಂತ್ರಿ ಭೇಟಿ........
ಅದರ ಕುರಿತು ಹಳ್ಳಿಯ ಒಂದು ಕಟ್ಟೆಯ ಮೇಲೆ ನಡೆದ ಒಂದು ಸಂವಾದದ ಕಿರುನೋಟ, (ಹಾಗೇ ಸುಮ್ಮನೆ).................


ಗುಂಡ: ಲೇ ತಿಮ್ಮ ಇವತ್ತಿನ್ ಪೇಪರ್ ನೋಡಿಯೇನ....?
ತಿಮ್ಮ : ಇಲ್ಲ ಯಾಕ..?

ಗುಂಡ: ನಮ್ಮ ಎಂಪಿಗೋಳು ನಿನ್ನೆ, ಹೊಗೆನಕ್ಕಲ್ ಸಮಸ್ಯೆ ಬಗಿ ಹರಸ್ರಿ ಅಂತ್ ಹೇಳಾಕ್ ಪ್ರದಾನಮಂತ್ರಿ ಅವರ್ನ್ ಭೆಟ್ಟಿ ಆಗ್ಯಾರಂತ್.
ತಿಮ್ಮ: ಹೌದಾ..!

ಗುಂಡ: ಹೌದಲೇ, ನಮ್ಮ ಎಂಪಿಗೋಳು ಎಲ್ಲಾರು ಪಕ್ಷಭೇಧ ಮರತು, ಎಲ್ಲಾರು ಸೇರಿ, ಪ್ರದಾನ ಮಂತ್ರಿಯವರ್ನ್ ಭೆಟ್ಟಿ ಅಗ್ಯಾರಂತ್. ಇದು ಅಂದ್ರ್ ನೋಡಪಾ ನಮ್ಮ ಎಂಪಿಗೋಳು ಒಗ್ಗಟ್ಟ್ ಅಂದ್ರ. ತಮಿಳನಾಡಿನವ್ರಿಗಿ ಇನ್ ಮ್ಯಾಗ್ ಚಾಲೊ ಆಯ್ತ್ ನೋಡ್ ಮಾರಿ ಹಬ್ಬ. ನೀ ಎನಂತಿ..?
ತಿಮ್ಮ: ಲೇ ನಿಮ್ಮಾಯಿ, ಯಾವ ಜಗತ್ತಿನ್ಯಾಗ್ ಅದಿಯೋಲೆ ನೀ. ಇವತ್ತ್ ನಮ್ಮ ಎಂಪಿಗೋಳ್ ಎಲ್ಲಾರೂ ಸೇರಿ ದಿಲ್ಲಿಗಿ ಹೋಗಿ ಪ್ರದಾನ ಮಂತ್ರಿಯವರ್ನ್ ಭೆಟ್ಟಿ ಆಗ್ಯಾರಂದ್ರ ಅದರ್ ಹಿಂದ್ ಎನೇನ್ ರಾಮಾಯಣ, ಮಹಾಭಾರತ್ ನಡೆದೈತಿ ಅಂತ್ ಗೊತ್ತೈತೇನ್...? ಇವತ್ತ್ ಇವರು ತಮ್ಮ ಉಟ್ಟ ಅರಿಬಿ ಮ್ಯಾಗ್, ದಿಲ್ಲಿಗಿ ಖಬರ್ ಹಾರಿ ಹೊಗ್ಯಾರ ಅಂದ್ರ ಅದಕ್ಕ ಯಾರ್ ಕಾರಣ ಅನ್ನೂದು ಗೊತ್ತೈತೇನ್..? ಸುಮ್ ಸುಮ್ನ ತಲಿ ಕೆಟ್ಟ್ಂಗ್ ಮಾತಾಡ್ತಿಲಾ. ಇವತ್ತ್ ಅವರ್ ದಿಲ್ಲಿಗಿ ಹೊಗ್ಯಾರ್ ಅಂದ್ರ ಅದಕ್ಕ ನಮ್ಮ ಕರವೇ ಕಾರಣಪಾ.

ಗುಂಡ: ಹೌದಾ..? ಖರೇನಾ...?
ತಿಮ್ಮ: ಹೂನೋ ಮಾರಯ್ಯ. ರಾಜ್ಯದ ಸಮಸ್ಯೆ ಬಂದಾಗ ಇವರ್ ಅಷ್ಟ ಒಗ್ಗಟ್ಟಾಗಿ ಇರ್ತಿದ್ರಪಾ ಅಂದ್ರ, ಹೊಗೆನಕ್ಕಲ್, ಬೆಳಗಾವಿ ಮತ್ ಎನೇನ್ ರಾಜ್ಯದ ಸಮಸ್ಯೆ ಅದಾವ್, ಎಲ್ಲ ನಾವ್ ಹುಟ್ಟುಕಿಂತ್ ಮದ್ಲ ಬಗಿ ಹರಿತಿದ್ವು. “ಇವ್ರು, ತಮ್ಮ್ ಹೈ ಕಮಾಂಡ್ ಪರ್ಮಿಷನ್ ಕೊಟ್ಟ್ ಮ್ಯಾಗೆ ಮುಂಜಾನಿ ಮಾಡು ದಿನನಿತ್ಯದ ಕೆಲಸಗಳನ್ನ್ ಮಾಡೊದು. ಇಲ್ಲ ಅಂದ್ರ್ ಇಲ್ಲ (ಅಷ್ಟೊಂದ್ ಪ್ರಾಮಾಣಿಕರು)”. ಇವ್ರ್ ಹಿಂಗ್ ಅದಾರ್ ಅಂತ್ ಹೇಳೆ ಅವು ಸಮಸ್ಯೆ ಇನ್ನೂ ಉಳ್ಕೊಂಡಾವ್. ಇವ್ ಹಿಂಗ್ ಮುಂದ್ ನಮ್ಮ್ ಮಕ್ಳು ಮೊಮ್ಮಕ್ಕಳ್ ಕಾಲದ ತನಕ ಮುಂದುವರಿಬಾರದು ಅಂತ್ ಹೇಳಿ, ನಮ್ಮ್ ಕರವೇ ಅವರು ಇದನ್ನ್ ಬಗಿಹರಿಸಬೇಕಂತ್ ಬೆನ್ನ್ ಹತ್ಯಾರ್. ನಮ್ ಎಂಪಿಗೋಳು ದಿಲ್ಲಿಗಿ ಹೋಗ್ಲಾಕು ಇವರು ಹಿಂದ್ ನಿಂತ್ ಕೀಲಿ ಕೊಟ್ಟಿದ್ದೆ ಕಾರಣ. ನಮ್ ಕರವೇ ದವ್ರು ಇವರ್ ಮನಿ ಮುಂದ್ ಧರಣೀ, ಪ್ರತಿಭಟನೆ ಮಾಡಿದ್ ಮ್ಯಾಗ್ ಇವ್ರಿಗಿ, ಬುಡಕ್ ಬೆಂಕಿ ಹತ್ತತು. ಅವಾಗ್ ಎಚ್ಚರ್ ಆದ್ರು. ಇವ್ರು ಕರ್ನಾಟಕನ ನಮ್ಮ್ ಮನಿ, ಅಂಥ್ ತಿಳ್ಕೊಂಡಿದ್ರ ಹಿಂಗ್ಯಾಕ್ ಆಗ್ತಿತ್ತು. ಆದ್ರ್ ಇವ್ರು ಹಂಗ್ ತಿಳ್ಕೊಂಡಿಲ್ಲ, ತಮ್ಮ ಮತಕ್ಷೇತ್ರ ಮಾತ್ರ ತಮ್ ಮನಿ(ಸ್ವಲ್ಪ ಮಂದಿ ಅದೂ ಇಲ್ಲ), ಉಳಿಕಿದ್ದು ಏನೂ ಸಂಬಂದ ಇಲ್ಲ, ಅನ್ನು ಹಂಗ್ ವರ್ತಿಸ್ತಾರ್. ತಮ್ಮ್ ಸ್ವಂತ ಮನಿಗಿ ಹಾನಿ ಆದಗ್ಲೇ ಇವ್ರಿಗಿ ಬುಡಕ್ಕ್ ಬೆಂಕಿ ಹತ್ತುದು, ಎಚ್ಚರ್ ಆಗುದು, ಉಟ್ಟ ಅರಿಬಿನ್ಯಾಗ್ ದಿಲ್ಲಿಗಿ ಹೋಗುದು. ಅಲ್ಲಿ ತನಕ ತಮ್ ತಮ್ಮ ಲೋಕದಾಗ್ ಇರ್ತಾರ್ ಇವ್ರು, ಬೆಳಗಾವಿಯರೇ ಹೋಗ್ಲಿ, ಹೊಗೆನಕ್ಕಲಾದ್ರು ಹೋಗ್ಲಿ. ವಿಧಾನಸೌದಕ್ಕ್ ಚಲೋ ರೇಟ್ ಬಂದ್ರ ಅದನ್ನೂ ಮಾರಿಬಿಡ್ತಾರ್, ಅಂತವ್ರು ಇವ್ರ್. ಇಂತವರ್ನ್ ಆರ್ಸಿದ್ದಕ್ಕ್ ನಮ್ಮ್ ಕೆರು ತೊಗೊಂಡ್ ನಾವೇ ಹೊಡ್ಕೊಬೇಕ್ ಅನಸ್ತೈತಿ...

ಗುಂಡ: ಹಂಗದ್ರ ಇವ್ರಿಗಿ ಅವಾಗವಾಗ್ ಕೀಲಿ ಕೊಟ್ಟ್ ಮುಂದ್ ನಡಸ್ಲಿಕ್ ಒಬ್ರು ಬೇಕು ಅಂದಂಗಾಯ್ತು.( ನಮ್ಮ್ ಮಕ್ಳು ಆಡು ಆಟಿಗಿ ಸಾಮಾನ್ ಇದ್ದಂಗ್, ಚಾವಿ ಕೊಟ್ಟ್ರ ಮುಂದ್ ಹೊಗ್ತಾವ್, ಇಲ್ಲ ಅಂದ್ರ್ ಇಲ್ಲ.)
ತಿಮ್ಮ: ಹೌದ್ ಹೌದ್. ನಮ್ಮ್ ಹಿರಿಯಾರ್ ಅದಕ್ಕ್ ಹೇಳ್ಯಾರ್, ಶಂಖದಿಂದ ಬಂದ್ರನೇ ತೀರ್ಥ ಅಂಥ. ಚಂದಂಗೆ ಹೇಳಿದ್ರ ಕೇಳುದಿಲ್ಲ ಇವ್ರು. ಒಟ್ಟಿನ್ಯಾಗ್ ಈಗಾದ್ರೂ ಎಚ್ಚರ ಆಗ್ಯಾರ್ ಅಷ್ಟೇ ಖುಶಿ. ಆದ್ರ್ ನಮ್ಮವ್ರು ಭಾಳ್ ಎಚ್ಚರಿಕೆಯಿಂದ್ ಇರ್ಬೇಕು, ಯಾಕ್ ಅಂದ್ರ್ ನಮ್ಮ್ ರಾಜಕಾರಣಿಗೋಳು "ಜನರ ಕಿವಿ ಮ್ಯಾಗ್ ನಮ್ಮ್ ಬೆಂಗಳೂರಿನ್ ಲಾಲಬಾಗ್ ಇಡ್ಲಾಕ್ ಎತ್ತಿದ್ ಕೈ". ಸುಮ್ ಸುಮ್ನ ಪೇಪರ್ನ್ಯಾಗ್ ಫೋಟೊ ಬರ್ಲಾಕ್ ಫೊಜ್ ಕೊಟ್ಟ, ಆಮೇಲಿ ಚಿನ್ನ ತಂಬಿ, ಬೆಳ್ಳಿ ತಂಬಿ, ತಾಮ್ರ ತಂಬಿ, ಕಬ್ಬಿಣದ ತಂಬಿ ಅಂಥ ಎಲ್ಲಾರೂ ಒಂದೊಂದ್ ತಂಬಿಗಿನ ಕೈಗ್ ಕೊಟ್ಟ್ರು ಅಂದ್ರ ನಾನು ನೀನು ಇಬ್ಬರೂ ಸೇರಿ ಗೋಳಗುಮ್ಮಟಕ್ಕ್ ಹೋಗಿ ಬಾಯಿ ಬಾಯಿ ಬಡ್ಕೊಬೇಕಾತೈತಿ.
ಹ್ಹಾ..............

LAST SIP: IMPORTANT QUOTE FROM ABRAHIM LINKON SUITS TO THE SITUATION.
“DEMOCRACY IS ELECTED BY FOOLS, AND RULING BY FRAUDS”.

Tuesday, 6 April 2010

ಬೆಳಕಿಗೆ ಬಾರದ ಹೋರಾಟದ ತಲೆಗಳು ಮತ್ತು ಮುನ್ನುಡಿ ಬರೆದ ಕೈಗಳು...............






ಗೆಳೆಯರೆ..........

ಕರ್ನಾಟಕದಲ್ಲಿ ಇದೇ ಪ್ರಪಥಮ ಬಾರಿಗೆ ರೇಲ್ವೆ ನೇಮಕಾತಿ ಪರೀಕ್ಷೆಗಳು ನಮ್ಮ ರಾಜ್ಯ ಭಾಷೆ ಕನ್ನಡದಲ್ಲಿ ನಡೆಯುತ್ತಿವೆ. ಇದರಿಂದ ಕನ್ನಡ ಮಾದ್ಯಮ ವಿದ್ಯಾರ್ಥಿಗಳಿಗೆ ಆಗುವ ಲಾಭ ಅಷ್ಟಿಷ್ಟಲ್ಲ. ಅದಕ್ಕಾಗಿಯೇ ಕನ್ನಡದಲ್ಲಿ ಪರೀಕ್ಷಾ ಮಾರ್ಗದರ್ಶಿ ಹೊತ್ತಿಗೆಗಳು ಬರಲಾರಂಭಿಸಿವೆ. ಕನ್ನಡದ ಸಾಮಾನ್ಯ ಜ್ನಾನದ ಹೊತ್ತಿಗೆಗಳು ಹೆಚ್ಚು ಹೆಚ್ಚು ಮಾರಾಟವಾಗುತ್ತಿವೆ. ಅಭ್ಯರ್ಥಿಗಳು ಹಿಂದಿನದಕ್ಕಿಂತ ಹೆಚ್ಚು ಉತ್ಸಾಹದಿಂದ ಪರೀಕ್ಷೆಗಳನ್ನು ಎದುರಿಸುತ್ತಿದ್ದಾರೆ. ಹಳ್ಳಿಯ ವಿದ್ಯಾರ್ಥಿಗಳಲ್ಲಂತೂ ಹೊಸ ಹೊಸ ಆಸೆಗಳು, ಹೊಸ ಹೊಸ ಬಯಕೆಗಳು ಚಿಗುರೊಡೆಯತೊಡಗಿವೆ. (ಇವು ಹೆಸರಿಸಲು ಮಾತ್ರ, ಇನ್ನು ಸಾಕಷ್ಟಿವೆ).
ಕರ್ನಾಟಕದಲ್ಲಿ ಆಗುತ್ತಿರುವ ಈ ಬದಲಾವಣೆಗಳಿಗೆ ಯಾರು ಕಾರಣರು ಎಂದು ಕೇಳಿದರೆ ಹೆಚ್ಚಿನವರು ಬೆರಳು ತೋರಿಸುವುದು ಕೇಂದ್ರ ರೇಲ್ವೆ ಸಚಿವೆ ಮಮತಾ ಬ್ಯಾನರ್ಜಿ, (ಒಂದು ವಿಧದಲ್ಲಿ ಅಭಿನಂದನಾರ್ಹರು) ಕೇಂದ್ರ ರೇಲ್ವೆ ಸಹಾಯಕ ರಾಜ್ಯ ಸಚಿವ ಹೆಚ್. ಮುನಿಯಪ್ಪ, ಮತ್ತೊಬ್ಬ ಸಚಿವ ವೀರಪ್ಪ ಮೊಯ್ಲಿ (ಇಬ್ಬರೂ ಲೋಕಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಲು ನಿರಾಕರಿಸಿದಂಥ ಕನ್ನಡಿಗರು) ಇಟಿಸಿ, ಇಟಿಸಿ.............
ಆದರೆ ಈ ಸಾದನೆಯ ಹಿಂದೆ ಇರುವ ನಿಜವಾದ ತಲೆಗಳೆಂದರೆ, ಈ ಬದಲಾವಣೆಗೆ ಮುನ್ನುಡಿ ಬರೆದ ಶುಧ್ಧ ಕೈಗಳೆಂದರೆ ನಮ್ಮ ಕನ್ನಡ ಪರ ಹೋರಾಟಗಾರರು. ಅವರ ನಿರಂತರ ಹೋರಾಟ, ಸತತ ಒತ್ತಡದ ಪರಿಣಾಮವಾಗಿ ಇಂದು ಕನ್ನಡದಲ್ಲಿ ರೇಲ್ವೆ ನೇಮಕಾತಿ ಪರೀಕ್ಷೆಗಳನ್ನು ಬರೆಯಬಹುದಾಗಿದೆ. ಇದನ್ನು, ನಮ್ಮನ್ನಾಳಿದ ’ಕೈ’ ಯಲ್ಲಿ ’ಕಮಲ’ದ ಹೂವನ್ನು ಹಿಡಿದ ’ಮಣ್ಣಿನ ಮಕ್ಕಳು’ ಇನ್ನೂ ೫೦ ವರ್ಷ ರಾಜ್ಯವನ್ನಾಳಿದ್ದರೂ ಸಾದಿಸಲಾಗುತ್ತಿರಲಿಲ್ಲ. ಯಾವ ರಾಜಕೀಯ ಪಕ್ಷವು (ಇಡೀ ದೇಶದಲ್ಲಿ) ಮಾಡದಂಥ ಇಂಥ ಸಾದನೆಯನ್ನು ನಮ್ಮ ಕನ್ನಡ ಪರ ಹೋರಾಟಗಾರರು ಮಾಡಿದ್ದು ನಿಜಕ್ಕೂ ಎದೆ ತಟ್ಟಿ ಹೆಮ್ಮೆಯಿಂದ ಹೇಳಿಕೊಳ್ಳುವಂತಹ ವಿಷಯ. ಇದರಿಂದ ಕೇವಲ ಕನ್ನಡಕ್ಕಷ್ಟೆ ಅಲ್ಲದೇ ದೇಶದಲ್ಲಿರುವ ಎಲ್ಲ ಪ್ರಾದೇಶಿಕ ಭಾಷೆಗಳಿಗೂ ಲಾಭವಾಗಲಿದೆ. ಎಲ್ಲ ಪ್ರಾದೇಶಿಕ ಭಾಷೆಯ ಅಭ್ಯರ್ಥಿಗಳು ಇದರ ಲಾಭ ಪಡೆಯಲಿದ್ದಾರೆ. ಆದರೆ ವಿಪರ್ಯಾಸವೆಂದರೆ ಹೆಚ್ಚಿನವರಿಗೆ ಇದರ ಹಿಂದಿರುವ ಕೈಗಳ ಬಗ್ಗೆ, ಆ ಹೋರಾಟಗಾರರ ಬಗ್ಗೆ ಅರಿವೇ ಇಲ್ಲ. ಹೋರಾಟದ ಹಾದಿಯಲ್ಲಿ ಹೋರಾಟಗಾರರು ಅನುಭವಿಸಿದ ಕಷ್ಟ, ಯಾತನೆಗಳನ್ನು ಅಷ್ಟು ಸಲೀಸಾಗಿ ಮರೆಯಲು ಸಾದ್ಯವೇ...?
ಏನಿದು ವ್ಯವಸ್ಥೆ..? ಕನ್ನಡವನ್ನು ಕಡೆಗಣಿಸಿದವನಿಗೆ ಕನ್ನಡದ ಸಾದನೆಯ ಕಿರೀಟ,, ಮೂರು ಹೊತ್ತು ಕನ್ನಡ ಕನ್ನಡಿಗ ಕರ್ನಾಟಕ ಎಂದು ಜಪಿಸುತ್ತಿರುವವರಿಗೆ,, ಪೋಲಿಸರ ಲಾಠಿ ಏಟು, ನೂರಾರು ಕೇಸುಗಳು, ಹತ್ತಾರು ದಿನಗಳ ಜೈಲು ವಾಸ, ಕುಟುಂಬದಿಂದ ದೂರವಿದ್ದವರಿಗೆ ಇದರ ಅಭಿನಂದನಾರ್ಹರ ಪಟ್ಟಿಯಲ್ಲಿ ಸ್ಥಾನವೇ ಇಲ್ಲ. ಇಷ್ಟೆಲ್ಲ ಇವರು ಮಾಡುತ್ತಿರುವುದು ಯಾರ ಸಲುವಾಗಿ...? ಕನ್ನಡದ ಮಕ್ಕಳ ಸಲುವಾಗಿ, ಕನ್ನಡ ಮಾದ್ಯಮದಲ್ಲಿ ಕಲಿತು ಒಂದು ರೀತಿಯ ಸಮಾಜದ ನಿರ್ಲಕ್ಷ ಮನೋಭಾವನೆಯಿಂದ ನೊಂದಿರುವ ಕನ್ನಡ ಮಕ್ಕಳ ಹೆತ್ತವರ ಸಲುವಾಗಿ, ಕನ್ನಡವನ್ನು ಕಲಿತರೆ ಕೆಲಸ ಸಿಗುವುದಿಲ್ಲ ಎಂಬ ಸ್ವಯಂ ಘೋಷಿತ ಅಪನಂಬಿಕೆಯಿಂದ ಜನರನ್ನು ದೂರ ಮಾಡುವ ಸಲುವಾಗಿ. ನಿಜವಾಗಿಯೂ ಕನ್ನಡಿಗರು ಅಭಿನಂಧನೆ, ಧನ್ಯವಾದಗಳನ್ನು ಸಲ್ಲಿಸಬೇಕಾಗಿರುವುದು ಹಗಲಿರುಳು ಹೋರಾಡಿದ ಕನ್ನಡ ಪರ ಹೋರಾಟಗಾರರಿಗೆ ಹೊರತು ಬೆಳ್ಳಿ ತಟ್ಟೆಯಲ್ಲಿ ಊಟ ಮಾಡಿ, ಹವಾನಿಯಂತ್ರಿತ ಕೊಠಡಿಯಲ್ಲಿ ೨೪*೭ ರಾಜಕೀಯ ಲೆಕ್ಕಾಚಾರದಲ್ಲಿ ಮುಳುಗುವಂಥ ನಿರಾಭಿಮಾನಿ ರಾಜಕಾರಣಿಗಳಿಗಲ್ಲ.
ಈ ವ್ಯವಸ್ಥೆಗೆ ನಮ್ಮದೊಂದು ಧಿಕ್ಕಾರ.............

ಕೊನೆಯ ರೈಲು (ಅಲ್ಲ, ರೀಯಲ್ಲು) : ‘ವೀರ ಕನ್ನಡಿಗ’ ಚಿತ್ರದ ಈ ಹಾಡು ನಿಜವಾಗಿಯೂ ಕನ್ನಡ ಪರ ಹೋರಾಟಗಾರರಿಗೆ ಹೇಳಿ ಮಾಡಿಸಿದ ಹಾಡು.

ಜೀವ ಕನ್ನಡ, ದೇಹ ಕನ್ನಡ, ಬಾಳು ಕನ್ನಡ ನಮಗಿಂದು, ನಮ್ಮ ನಿದ್ರೆ ಕಳೆಯುತ್ತಿದ್ದರೆ ಸಹಿಸುವವ ನೀನಲ್ಲ...............
ಕೆಂಪು ಹಳದಿ ಭಾವುಟಕ್ಕೆ ನೀನೆ ತಾನೇ ಭಾವುದಂಡ, ನಿನ್ನ ಯುಧ್ಧ ಸತ್ಯ ಶುಧ್ಧ ನಡೆದರೆ ಸೋಲಿಲ್ಲ...............
ನಮಗಾಗಿ ಹುಟ್ಟಿದ ನೀನು ಕಾಪಾಡೊ ಕಾಮಧೇನು ಜ್ವಾಲಾಮುಖಿ ವೈರಿಗೆ............
ಹೇ ಧೀರ, ಹೇ ಧೀರ ಎದುರಾರೊ..? ನಿನಗೆ
ಮನೆ ದೀಪ ಮನೆ ಬೇಲಿ ನಿನಾದೆ ನಮಗೆ..
ಹೇ....................................................
ನಾಡು ಕರುನಾಡು ಎಲ್ಲಾ ನಿನ್ನದು,
ನೀ ತಂದ ವಿಜಯ ಸದಾ ನಮ್ಮದು.
ಜೀವ ಕನ್ನಡ, ದೇಹ ಕನ್ನಡ, ಬಾಳು ಕನ್ನಡ ನಮಗಿಂದು, ನಮ್ಮ ನಿದ್ರೆ ಕಳೆಯುತ್ತಿದ್ದರೆ ಸಹಿಸುವವ ನೀನಲ್ಲ...............

Monday, 15 March 2010

ನಮ್ಮ ಹಣ, ನಮ್ಮ ಹಕ್ಕು.................!!


ಇಂದು (ಮಾರ್ಚ್ ೧೫) ವಿಶ್ವ ಗ್ರಾಹಕರ ಹಕ್ಕುಗಳ ದಿನ. ಇದೊಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಗ್ರಾಹಕರ ಹಕ್ಕುಗಳ ಮತ್ತು ಅವರು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ಬೆಳಕು ಚೆಲ್ಲಲು ಒದಗುವ ಒಂದು ವಾರ್ಷಿಕ ಸಂದರ್ಭ. ಈ ವರ್ಷದ ಈ ದಿನದ ವಿಷಯ " ನಮ್ಮ ಹಣ, ನಮ್ಮ ಹಕ್ಕು" (“Our money, Our rights”). ಈ ವಿಷಯದ ಹಿಂದಿರುವ ಉದ್ದೇಶ ಅಥವಾ ಪ್ರೇರಣೆ ಏನೆಂದರೆ ಗ್ರಾಹಕರಿಗೆ "ವಿಶ್ವಾಸಾರ್ಹ ಆರ್ಥಿಕ ಸೇವೆ" ಕಲ್ಪಿಸಿಕೊಡುವುದು. ಈ ಗುರಿಯ ಬೆನ್ನಟ್ಟಿ ಈಗಾಗಲೇ ಅನೇಕ ಗ್ರಾಹಕರ ಸಂಸ್ಥೆಗಳು ವಿಶ್ವದಾದ್ಯಂತ ದಣಿವಿಲ್ಲದ ಪ್ರಯತ್ನದಲ್ಲಿ ತೊಡಗಿವೆ. ಆದರೆ ಈ ಲೇಖನದ ವ್ಯಾಪ್ತಿಯನ್ನು ಕೇವಲ ನಮ್ಮ ರಾಜ್ಯಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ.

ಕರ್ನಾಟಕ, ಭಾರತವೆಂಬ ಸಂಯುಕ್ತ ರಾಷ್ಟ್ರದ ಒಂದು ಪ್ರಮುಖ ರಾಜ್ಯ. ಇಲ್ಲಿನ ಗ್ರಾಹಕರು "ವಿಶ್ವಾಸಾರ್ಹ ಆರ್ಥಿಕ ಸೇವೆ"ಯಿಂದ ಮಾತ್ರ ತೊಂದರೆ ಅನುಭವಿಸದೇ ಅದಕ್ಕಿಂತಲೂ ಮಹತ್ವವಾದ ಮತ್ತು ಅತ್ಯವಶ್ಯಕವಾಗಿರುವ ಸೇವೆ ಯಿಂದ ವಂಚಿತರಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿದೆ. ಅದೇ ಪ್ರಾದೇಶಿಕ ಭಾಷೆಯಲ್ಲಿ ಗ್ರಾಹಕ ಸೇವೆ. ಒಂದು ರಾಜ್ಯದಲ್ಲಿ ಅದರಲ್ಲೂ ಸಂಯುಕ್ತ ರಾಷ್ಟ್ರದಲ್ಲಿರುವ ಒಂದು ರಾಜ್ಯದಲ್ಲಿ ಪ್ರಾದೇಶಿಕ ಭಾಷೆಯೆ ಸರ್ವಸ್ವ. ಮೊಟ್ಟ ಮೊದಲನೇ ಪ್ರಾಶಸ್ತ್ಯ ಅದಕ್ಕೆ ದಕ್ಕಬೇಕು. ಆದರೆ ಈ ನಿಯಮವನ್ನು ಕರ್ನಾಟಕ ಪ್ರವೇಶಿಸುವ ಬಹುತೇಕ ಮತ್ತು ಕರ್ನಾಟಕದಲ್ಲೇ ಹುಟ್ಟಿರುವ ಅನೇಕ ಸಂಸ್ಥೆಗಳು ಉಲ್ಲಂಘಿಸುತ್ತಿರುವುದು ನಮ್ಮ ಗ್ರಾಹಕರ ನಿರ್ಲಕ್ಷತನಕ್ಕೆ ಹಿಡಿದ ಕೈಗನ್ನಡಿ ಎಂದರೆ ತಪ್ಪಾಗಲಾರದು. ಈ ನಿಟ್ಟಿನಲ್ಲಿ ಜಾಗೃತಿ ಕಾರ್ಯ ಭರದಿಂದ ಸಾಗಬೇಕಿದೆ.

ಗ್ರಾಹಕರ ಹಕ್ಕು: ಅಂತರರಾಷ್ಟ್ರೀಯ ಮಟ್ಟದಲ್ಲಿ ಹೇಳಬೇಕೆಂದರೆ, ನಾವು ಕೊಟ್ಟ ಹಣಕ್ಕೆ ಯೋಗ್ಯವಾದ, ವಿಶ್ವಾಸಾರ್ಹ ಆರ್ಥಿಕ ಸೇವೆ ನಮಗೆ ಸಿಗುವ ಹಾಗೆ ಒತ್ತಾಯಿಸುವುದೇ ಗ್ರಾಹಕರ ಹಕ್ಕು. ಅದು ಸಾಮಾನ್ಯವಾಗಿ ಅನ್ವಯವಾಗುವ ಅರ್ಥ. ಕರ್ನಾಟಕದ ಮಟ್ಟಿಗೆ ಈಗಿನ ಪರಿಸ್ಥಿತಿಗೆ ಅನ್ವಯವಾಗುವಂತೆ ಹೇಳುವುದಾದರೆ ನಾವು ಕೊಟ್ಟ ಹಣಕ್ಕೆ ನಮಗೆ ವಿಶ್ವಾಸಾರ್ಹ ಆರ್ಥಿಕ ಸೇವೆಯ ಜೊತೆಗೆ ನಮ್ಮ ರಾಜ್ಯ ಭಾಷೆಯಲ್ಲಿ, ಪ್ರಾದೇಶಿಕ ಭಾಷೆ ಕನ್ನಡದಲ್ಲಿ ಸೇವೆ ಸಿಗುವಂತೆ ಒತ್ತಾಯಿಸುವುದೇ ಗ್ರಾಹಕರ ಹಕ್ಕು. ಒಬ್ಬ ಗ್ರಾಹಕ ತಮ್ಮ ರಾಜ್ಯದಲ್ಲಿ ಯಾವುದೋ ಒಂದು ಸ್ಥಳಕ್ಕೆ ಹೋದರೆ ಅಲ್ಲಿ ಆ ರಾಜ್ಯದ ಪ್ರಾದೇಶಿಕ ಭಾಷೆಯಲ್ಲೇ ವ್ಯವಹರಿಸುವುದು, ಪ್ರಾದೇಶಿಕ ಭಾಷೆಯಲ್ಲೇ ಸೇವೆ ಪಡೆಯುವುದು ಅವನ ಜನ್ಮ ಸಿದ್ದ ಹಕ್ಕು. ಆ ತರಹದ ಸೇವೆ ಅವನಿಗೆ ಅಲ್ಲಿ ಕಂಡು ಬರದೇ ಇದ್ದಲ್ಲಿ ಅವನು ಪ್ರತಿಭಟಿಸಿ ಹಕ್ಕು ಚಲಾಯಿಸುವುದು ಒಬ್ಬ ಜಾಗೃತ ಗ್ರಾಹಕನ ಕರ್ತವ್ಯ.

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಗ್ರಾಹಕರು ತಮ್ಮ ಹಕ್ಕುಗಳನ್ನು ಸರಿಯಾಗಿ ಚಲಾವಣೆ ಮಾಡದೇ ಇರುವುದರಿಂದ ಪ್ರಾದೇಶಿಕ ಭಾಷೆಯನ್ನೇ ಕಳೆದುಕೊಳ್ಳುವ ಹಂತಕ್ಕೆ ಅದು ತಲುಪಬಹುದಾಗಿದೆ. ಆದ್ದರಿಂದ ಗ್ರಾಹಕ ಇದನ್ನೆಲ್ಲ ಮೆಟ್ಟಿ ನಿಂತು, ತನ್ನ ಭಾಷೆಯಲ್ಲಿ ಸೇವೆ ಸಿಗದೇ ಇದ್ದಾಗ ಪ್ರತಿಭಟಿಸಬೇಕಾದಂಥ ಅನಿವಾರ್ಯತೆ ಒದಗಿದೆ. ಕರ್ನಾಟಕದಲ್ಲಿ ಕನ್ನಡಿಗ ಗ್ರಾಹಕನಿಗೆ ಸರಿಯಾದ ಸವಲತ್ತು ದೊರಕುತ್ತಿಲ್ಲ ಎಂದರೆ ಅದಕ್ಕೆ ಗ್ರಾಹಕ ತನ್ನ ಹಕ್ಕನ್ನು ಸರಿಯಾದ ರೀತಿಯಲ್ಲಿ ಮಂಡಿಸದೇ ಇರುವುದೇ ಮುಖ್ಯ ಕಾರಣ ಅಂಥ ಹೇಳಬಹುದು. ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಸೇವೆಯಿಂದ ಲಾಭವಾಗುವುದಿಲ್ಲ ಎಂಬ ಸ್ವಯಂ ಘೋಷಿತ ಕಲ್ಪನೆ ಅಥವಾ ಭ್ರಮೆಯಿಂದ ಉದ್ಯಮಿಗಳು ಬಳಲುತ್ತಿದ್ದು, ಅವರನ್ನು ಆ ರೋಗದಿಂದ ಗುಣಮುಖರನ್ನಾಗಿ ಮಾಡುವ ಕೆಲಸ ಪ್ರತಿಯೊಬ್ಬ ಗ್ರಾಹಕರ (ಜಾಗೃತ) ಮೇಲಿದೆ. ಒಬ್ಬೊಬ್ಬ ಜಾಗೃತ ಗ್ರಾಹಕ ಉದ್ಯಮಿಗಳನ್ನು ಆ ರೋಗದಿಂದ ಪಾರು ಮಾಡುವ ಒಂದೊಂದು ಮಾತ್ರೆ (ಔಷದಿ) ಇದ್ದಂತೆ.


ಮೊದಲ ಮಾತ್ರೆ: ಆದ್ದರಿಂದ ಒಬ್ಬ ಜಾಗೃತ ಗ್ರಾಹಕ ಏನೆಲ್ಲವನ್ನು ನಿರೀಕ್ಷಿಸಬೇಕೆಂದರೆ,,
ಬ್ಯಾಂಕಿಗೆ ಹೋದರೆ ಕನ್ನಡದಲ್ಲೇ ವ್ಯವಹರಿಸುವುದು. ಕನ್ನಡದಲ್ಲೇ ಅರ್ಜಿಗಳನ್ನು ಬರೆಯಬೇಕು. ಹೋಟೆಲಗೆ ಹೋದರೆ ಅಲ್ಲಿ ಕನ್ನಡದಲ್ಲಿ ಸಂಭಾಷಿಸುವುದು, ಅಲ್ಲಿನ ಹೊತ್ತಿಗೆಯಲ್ಲಿ ಕನ್ನಡವಿರಬೇಕು. ಹೀಗೆ ಕಣ್ಣು ಹಾಯಿಸಿದಲ್ಲೆಲ್ಲ ಕಡೆಗಣನೆಯಾಗುತ್ತಿರುವ ಪ್ರಾದೇಶಿಕ ಭಾಷೆಯ ಮಹತ್ವವನ್ನು ಮತ್ತು ಅವಶ್ಯಕತೆಯನ್ನು ಒತ್ತಾಯಿಸುವದಲ್ಲದೇ, ಸಾರಿ ಸಾರಿ ಯಾರ್ ಯಾರಿಗೆ ಹೇಗ್ ಹೇಗೆ ಹೇಳಬೇಕೊ ಹಾಗೆ ಹೇಳಲೇಬೇಕಾಗಿದೆ. ಉದ್ಯಮಿಗಳನ್ನು ಮತ್ತು ಉದ್ದಿಮೆಗಳನ್ನು ಈ ಕಾಯಿಲೆಗಳ ವ್ಯಾಪ್ತಿಯಿಂದ ಹೊರತರಬೇಕಿದೆ. ನಾವು ಕೊಟ್ಟ ಹಣಕ್ಕೆ ಪ್ರತಿಯಾಗಿ ಕನ್ನಡದಲ್ಲಿ ಗ್ರಾಹಕ ಸೇವೆ ನಮಗೆ ಸಿಗುವ ಹಾಗೆ ಮಾಡಬೇಕಿದೆ. ಕರ್ನಾಟಕದ ಮಟ್ಟಿಗೆ ಆಗ "ನಮ್ಮ ಹಣ, ನಮ್ಮ ಹಕ್ಕು" ಎಂಬುದು ಯಶಸ್ವಿಯಾಗಲು ಸಾದ್ಯವಾಗುತ್ತದೆ.


ಸೃಷ್ಟಿಯ ಮಜಾ: ಹಲವರಿಗೆ ಕೆಲವು ಸವಲತ್ತುಗಳು ಬಯಸದೇ ಸಿಕ್ಕಿಬಿಡುತ್ತವೆ. ಇನ್ನು ಕೆಲವರು ಹಲವು ಸವಲತ್ತುಗಳನ್ನು ಹೋರಾಟ ಮಾಡಿ, ಹಕ್ಕು ಮಂಡಿಸಿ ಪಡೆಯಬೇಕಾಗುತ್ತದೆ. ಮತ್ತು ಇದೇ ಶಾಶ್ವತ..................

Monday, 22 February 2010

ಆತ್ಮಾವಲೋಕನಕ್ಕೆ ಇದು ಸಕಾಲ; ಆಚಾರ್ಯ ಸಾಹೇಬರೇ...........!


"ಕಾಸರಗೋಡಿನಲ್ಲಿ ಕನ್ನಡ ಸಮಾವೇಶ ನಡೆಯುತ್ತಿರುವಾಗ, ಸೊಲ್ಲಾಪೂರಿನಲ್ಲಿ ಕನ್ನಡಿಗರು ಒಗ್ಗೂಡಿ ಸಮಾರಂಭ ಮಾಡುತ್ತಿರುವಾಗ ಬೆಳಗಾವಿಯಲ್ಲಿ ಮರಾಠಿಗರು ನಡೆಸಲುದ್ದೇಶಿಸಿರುವ ಸೀಮಾ ಪರಿಷತ್ ಬೇಡ ಎನ್ನಲು ಹೇಗೆ ಸಾದ್ಯ. ಆದರೆ ಅವರಿಗೆ ನಾವು ಷರತ್ತು ಬಧ್ಧ ಅನುಮತಿ ನೀಡಿದ್ದೇವೆ." ಇದು ಫೇ ೫ ರಂದು ನಡೆದ ಮರಾಠಿಗರ ಸೀಮಾ ಪರಿಷತ್ ಸಮಾವೇಶವನ್ನು ತಡೆ ಹಿಡಿಯಬೇಕು, ಅದಕ್ಕೆ ಅನುಮತಿ ಕೊಡಬಾರದು ಎಂದು ಒತ್ತಾಯಿಸಿದ ಕನ್ನಡಪರ ಸಂಘಟನೆಗಳಿಗೆ ನಮ್ಮ ರಾಜ್ಯದ ಘನತೆವೆತ್ತ ಮನೆ ಮಂತ್ರಿಗಳಾದ (ಗೃಹ ಸಚಿವ) ವಿ.ಎಸ್.ಆಚಾರ್ಯ ಅವರು ನೀಡಿದ ಉತ್ತರ. ಫೆ ೫ ರಂದು ಸೀಮಾ ಪರಿಷತ್ ನಡೆದೇ ಹೋಯಿತು. ಆದರೆ ಗೃಹ ಸಚಿವರ ಅನುಮತಿಯಂತೆ ನಡೆಯಲಿಲ್ಲ. ಅವರ ಷರತ್ತು ಯಾವ ಎಮ್.ಇ.ಎಸ್ ನವರ ಮುಂದೆಯೂ ಹಾಯ್ದು ಹೋಗಲಿಲ್ಲ. ಕರ್ನಾಟಕದ ನೆಲದಲ್ಲೇ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರನ್ನು ಬೈಯ್ದು, ಮನ ಬಂದಂತೆ ಥಳಿಸುವಷ್ಟು ಷರತ್ತು ಬಧ್ಧ ಅನುಮತಿಯನ್ನು ಸರಕಾರ ನೀಡಿತ್ತು ಎಂಬುದನ್ನು ಯಾರೂ ಊಹಿಸಿರಲಿಲ್ಲ. ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಬ್ರಿಟಿಷರು ಭಾರತೀಯರ ಮೇಲೆ ಮಾಡಿದ ಹಲ್ಲೆಯನ್ನು ಮರೆತಿದ್ದ ಕನ್ನಡಿಗರು, ಈ ಸಂದರ್ಭದಲ್ಲಿ ಸ್ವಲ್ಪ ಮಟ್ಟಿಗಾದರೂ ನೆನಪಿಸಿಕೊಂಡಿರಬಹುದು. ಆದರೆ ಅದಕ್ಕೂ ಇದಕ್ಕೂ ಅಜಗಜಾಂತರ ವ್ಯತ್ಯಾಸ. ಅಲ್ಲಿ ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಂಡ ಪರಕೀಯರನ್ನು ದೇಶ ಬಿಟ್ಟು ತೊಲಗಿಸಲು ನಡೆಸಿದ ಹೋರಾಟ. ಇಲ್ಲಿಯ ಘಟನೆಯಲ್ಲಿ ಯಾರೂ ಪರಕೀಯರಲ್ಲ, ಎಲ್ಲರೂ ಭಾರತಿಯರೆ. ಆದರೆ ಕೆಲವರು, ಒಣ ರಾಜಕೀಯದ ದುರುದ್ದೇಶದಿಂದ ವಿವಾದವನ್ನು ಮತ್ತಷ್ಟು ಕೆಣಕಿ, ಮುಗ್ಧ ಜನರಲ್ಲಿ ಅಶಾಂತಿಯನ್ನು ಹುಟ್ಟುಹಾಕಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಭಾರತೀಯರು. ಇನ್ನು ಹಲವರು ವಿವಾದವನ್ನು ಬಗೆಹರಿಸಿ, ಸ್ಥಳೀಯರಲ್ಲಿ ಮತ್ತು ವಲಸಿಗರಲ್ಲಿ ಸಾಮರಸ್ಯವನ್ನು ಬೆಳೆಸಿ, ಜನರಲ್ಲಿ ಶಾಂತಿ ಮೂಡಿಸಲು ಪ್ರಯತ್ನಿಸಿ ತಮ್ಮ ನಿಷ್ಠೆ ಪ್ರದರ್ಶಿಸುತ್ತಿರುವ ಭಾರತೀಯರು.

ಗೃಹ ಸಚಿವರಿಗೆ ಇದು ಆತ್ಮಾವಲೋಕನಕ್ಕೆ ಸಕಾಲ. ಕಾಸರಗೋಡಿನಲ್ಲಿ, ಸೋಲ್ಲಾಪುರಿನಲ್ಲಿ ಕನ್ನಡ ಸಮಾವೇಶ ಮಾಡುವ ಬಗ್ಗೆ ಮಾತನಾಡುವ ಸಚಿವರು, ಆ ಸಮಾವೇಶಗಳಲ್ಲಿ ಕಂಡು ಬರುವ ಶಿಸ್ತಿನ ಬಗ್ಗೆ ಆಲೋಚನೆ ಮಾಡಿದ್ದಾರೆಯೆ...? ಮಹಾರಾಷ್ಟದಲ್ಲಿ ಹಲವಾರು ಕನ್ನಡ ಸಂಘಗಳಿದ್ದಾವೆ. ಅವುಗಳು ಪ್ರತಿ ವರ್ಷ ಹಲವಾರು ಕನ್ನಡ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸುತ್ತವೆ. ಕನ್ನಡ ರಾಜ್ಯೊತ್ಸವವನ್ನು ಅಧ್ಧೂರಿಯಿಂದ ಆಚರಿಸುತ್ತವೆ. ಆದರೆ ಯಾವತ್ತಾದರೂ ಅವುಗಳಿಂದ ಮತ್ತು ಅವುಗಳು ಮಾಡುವ ಕಾರ್ಯಕ್ರಮಗಳಿಂದ ಅಲ್ಲಿನ ಮಹಾರಾಷ್ಟ್ರದ ಜನರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾದ ಉದಾಹರಣೆಗಳಿವೆಯೆ...? ಯಾವುದೇ ಅಹಿತಕರ ಘಟನೆಗಳು ಸಂಭವಿಸಿದ ನಿದರ್ಶನಗಳಿವೆಯೆ....? ಯಾವುದೇ ಹೊರರಾಜ್ಯ ಕನ್ನಡದ ಸಮಾರಂಭದಲ್ಲಿ ಅಲ್ಲಿನ ಗೌರವಕ್ಕೆ ಚ್ಯುತಿ ಬರುವಂತಹ ನಿರ್ಣಯಗಳನ್ನು ಅಂಗೀಕರಿಸಲಾಗಿದೆಯೇ.......? ಎಲ್ಲಿಯಾದರೂ ಮಹಾರಾಷ್ಟ್ರದಲ್ಲಿ ಮಹಾರಾಷ್ಟ್ರದ ಜನರ ಮೇಲೆ ಕನ್ನಡಿಗರು ಹಲ್ಲೆ ಮಾಡಿ, ಅವರ ಭಾವನೆಗಳ ಜೊತೆ ಆಟ ಆಡಿದ ಸುದ್ದಿಗಳಿವೆಯೆ....? ಈ ಪ್ರಶ್ನೆಗಳು ಕೇವಲ ಮಹಾರಾಷ್ಟ್ರಕ್ಕೆ ಸಂಬಂದ ಪಡದೇ ಇಡಿ ಜಗತ್ತಿನಲ್ಲಿ ಎಲ್ಲೆಲ್ಲಿ ಕನ್ನಡ ಸಂಘಗಳಿವೆಯೋ ಅಲ್ಲೆಲ್ಲ ಅನ್ವಯಿಸುತ್ತದೆ. ಜಗತ್ತಿನಲ್ಲಿ ಎಲ್ಲಿಯೂ ವಲಸಿಗ ಕನ್ನಡಿಗರು ಸ್ಥಳಿಯ ಜನರ ವಿರುದ್ಧ ಹೋದ ಉದಾಹರಣೆಗಳಿಲ್ಲ. ತಾವು ಕಾಲಿಟ್ಟ ಪ್ರತಿಯೊಂದು ಸ್ಥಳವನ್ನು ಗೌರವಿಸುತ್ತ ಅಲ್ಲಿನ ಜನರ ವಿಶ್ವಾಸಕ್ಕೆ ಪಾತ್ರರಾಗಿ, ತಾವೂ ಅಲ್ಲಿಯ ನಾಗರಿಕರಾಗಿ ಬೆರೆತು ತಮ್ಮ ತಾಯ್ನಾಡಿನ ಸಂಸ್ಕೃತಿ, ಸಂಪ್ರದಾಯವನ್ನು ಕಾಪಾಡಿಕೊಂಡು ಹಿರಿಮೆ ಮೆರೆಯುತ್ತಿದ್ದಾರೆ. ಹೀಗೆ ವಿದೇಶಗಳಲ್ಲೆಲ್ಲ ಕನ್ನಡದ ಕಂಪು ಹರಡುತ್ತಿರುವಾಗ ನಮ್ಮ ನೆಲದಲ್ಲೇ ದುಷ್ಟ ಶಕ್ತಿಗಳು ಅಶಾಂತಿ ಹುಟ್ಟುಹಾಕಲು ಪ್ರಯತ್ನಿಸುತ್ತಿರುವಾಗ ನೋಡಿಕೊಂಡು ಸುಮ್ಮನಿರಬೇಕೆ ಮಾನ್ಯ ಆಚಾರ್ಯ ಸಾಹೇಬರೇ.....? ಹಿಂದೆ ನಡೆದ ಹಲವಾರು ಸಮಾವೇಶಗಳಿಂದ ಮತ್ತು ಘಟನೆಗಳಿಂದ ಎಮ್.ಇ.ಎಸ್ ನವರ ಪುಂಡಾಟದ ಬಗ್ಗೆ ಸರಕಾರಕ್ಕೆ ಅರಿವಾಗಿಲ್ಲವೇ.......? ಅಥವಾ ಇದನ್ನು ಸರಕಾರದ ಜಾಣ ಕುರುಡುತನವೆಂದು ತಿಳಿದುಕೊಳ್ಳಬಹುದೇ........? ಪ್ರತಿ ಬಾರಿ ಬೇರೆ ಬೇರೆ ಹೆಸರಿನಲ್ಲಿ ಸಮ್ಮೇಳನ ಮಾಡಿ, ಅಲ್ಲಿನ ಮರಾಠಿ ಭಾಷಿಕರಿಗೆ ಬೇಡವಾದ ಭಾವನೆಗಳನ್ನು ಮೂಡಿಸಿ, ನೀವು ಮರಾಠಿಗರು ಇದು ಮಹಾರಾಷ್ಟ್ರಕ್ಕೆ ಸೇರಬೇಕು, ಇಲ್ಲಿನ ಕಛೇರಿಗಳಲ್ಲಿ ಮರಾಠಿಗೂ ಸ್ಥಾನ ಬೇಕು ಎಂದೆಲ್ಲ ಪೊಳ್ಳು ನಿರ್ದಾರಗಳನ್ನು ಕೈಗೊಂಡು ಅಲ್ಲಿನ ಮರಾಠಿ ಮತ್ತು ಕನ್ನಡ ಭಾಷಿಕರ ನಡುವೆ ಇರುವ ಸಾಮರಸ್ಯವನ್ನು ಹಾಳು ಮಾಡುತ್ತಿರುವವರ ಬಗ್ಗೆ ಸರಕಾರ ಮೃದು ಧೋರಣೆ ತಾಳಿದ್ದು ಏಕೆ........? ಈ ಎಲ್ಲ ಮುನ್ಸೂಚನೆಗಳ ಆದಾರವಾಗಿಟ್ಟುಕೊಂಡೆ ಕನ್ನಡ ಪರ ಸಂಘಟನೆಗಳು ಇದಕ್ಕೆ ಅನುಮತಿ ಬೇಡ ಎಂದಿದ್ದು, ಇಷ್ಟಾಗಿಯೂ ಸೀಮಾ ಪರಿಷತಗೆ ಅವಕಾಶ ಮಾಡಿಕೊಟ್ಟಿದ್ದರ ಪರಿಣಾಮವನ್ನು ಒಮ್ಮೆ ನಮ್ಮ ಸಚಿವರು ಆತ್ಮಾವಲೋಖನ ಮಾಡಿಕೊಳ್ಳಲಿ. ಇನ್ನು ಸೀಮಾ ಪರಿಷತ ಸಮಾವೇಶವನ್ನು ಬೆಳಗಾವಿ ಮರಾಠಿಗರು ಯಾವ ರೀತಿ ಸ್ವೀಕರಿಸಿದ್ದಾರೆ ಎಂಬುದಕ್ಕೆ ನಿರೀಕ್ಷಿಸಿದ್ದ ಲಕ್ಷ ಲಕ್ಷ ಜನರ ಬದಲಿಗೆ ಅಲ್ಲಿ ನೆರೆದಿದ್ದ ಸಾವಿರದಷ್ಟು ಜನರೇ ಸಾಕ್ಷಿ.

ಎಲೆಯಡಿಕೆ: ಆದ್ದರಿಂದ ಇಂತಹ ಸಮಾವೇಶಗಳು ಮರಾಠಿಗರ ಸಮ್ಮಿಲನಕ್ಕೆ ಒಂದು ವೇದಿಕೆಯಾಗುವ ಬದಲು ಕೇವಲ ಕನ್ನಡವನ್ನು, ಕನ್ನಡಿಗರನ್ನು, ಕರ್ನಾಟಕವನ್ನು ಮತ್ತು ಸರಕಾರವನ್ನು ಟೀಕಿಸಲು ಬಳಸಿಕೊಳ್ಳುವ ವೇದಿಕೆಗಳಾಗುತ್ತವೆ, ಅಲ್ಲಿನ ಶಾಂತಿಯನ್ನು ಕೆದಕುವ ವೇದಿಕೆಗಳಾಗುತ್ತವೆ, ಕನ್ನಡಿಗರ ತಾಳ್ಮೆ ಪರೀಕ್ಷಿಸುವ ವೇದಿಕೆಗಳಾಗುತ್ತವೆ ಎಂಬುದನ್ನು ಇನ್ನಾದರೂ ನಮ್ಮ ಘನ ಸರಕಾರ ಮತ್ತು ಆಚಾರ್ಯ ಸಾಹೇಬರು ಅರ್ಥ ಮಾಡಿಕೊಳ್ಳಬೇಕು. ಬೆಳಗಾವಿ ಗಡಿ ಎಂಬ ಏಕೀಕರಣ ಸಮಯದಲ್ಲಿ ಉದ್ಭವವಾದ ಸಣ್ಣ ಸಮಸ್ಯೆಯನ್ನು ಬಗೆ ಹರಿಸದೇ ಪ್ರತಿ ಬಾರಿ ನುಣುಚಿಕೊಂಡು ಅದನ್ನು ಕರ್ನಾಟಕದ ಮೂಲಭೂತ ವಿವಾದವನ್ನಾಗಿ ಮಾಡಿದ ಕೀರ್ತಿ ನಮ್ಮ ಹಿಂದಿನ ಸರಕಾರಗಳಿಗೆ ಸಲ್ಲುತ್ತದೆ. ಈಗಿರುವ ಬಿಜೆಪಿ ಸರಕಾರ ಈ ಸಮಸ್ಯೆಯನ್ನು ಬಗೆಹರಿಸುವ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸದಿದ್ದರೂ ಸರಿ, ಆದರೆ ಇಂತಹ ಶಾಂತಿ, ಸುವ್ಯವಸ್ಥೆಯನ್ನು ಕದಡುವ ಮತ್ತು ವಿವಾದವನ್ನು ಇನ್ನಷ್ಟು ಜಟಿಲಗೊಳಿಸುವ ಸಮಾವೇಶಗಳಿಗೆ ಅನುಮತಿ ನೀಡಬಾರದೆಂದು ಕರ್ನಾಟಕ ಶಾಂತಿಪ್ರಿಯರ ಒಕ್ಕೋರಲಿನ ಆಗ್ರಹವಾಗಿದೆ.

ಹೆಬ್ಬಯಕೆ: Every Belagavian should feel like this….
" My native is BELAGAVI, and I am not a MAHARASHTRIAN"

Sunday, 31 January 2010

ನಾನು ಕಂಡ ಒಂದು ದಿನದ ಚೆನ್ನೈ..................


ನಾನು ಕೆಲವು ದಿನಗಳ ಹಿಂದೆ ಒಂದು ದಿನದ ಕೆಲಸದ ಮೇಲೆ ಮೊದಲ ಬಾರಿಗೆ ಚೆನ್ನೈಗೆ ಹೋಗಿದ್ದೆ. ಅಲ್ಲಿ ನನ್ನ ಗಮನಕ್ಕೆ ಬಂದ ಕೆಲವು ಸಂಗತಿಗಳನ್ನು ಹೇಳಲು ಇಚ್ಛಿಸುತ್ತೇನೆ. ಅಲ್ಲಿನ ಕೆಟ್ಟ ಸಂಗತಿಗಳನ್ನು ಬಿಟ್ಟು ಒಳ್ಳೆಯ ಮತ್ತು ನಾವು ಗಮನಿಸಬಹುದಾದ ಸಂಗತಿಗಳನ್ನು ಮಾತ್ರ ಮಾತನಾಡುವುದು ಉಚಿತ. ಬೆಳಿಗ್ಗೆ ನಿಲ್ದಾಣದಲ್ಲಿ ಇಳಿದು ಅಥಿತಿ ಗೃಹದ ಕಡೆಯಲ್ಲಿ ಆಟೊದಲ್ಲಿ ಹೋಗುತ್ತಿದ್ದಾಗ, ಕೆಲವು ದಿನಗಳಿಂದ ಮಹಾರಾಷ್ಟ್ರದಲ್ಲಿ ಎದ್ದಿರುವ ಆಟೊ ಚಾಲಕರ ಬಾಷಾ ವಿಚಾರದ ಆದೇಶದ ನೆನಪಾಯಿತು. ತಮಿಳನಾಡಿನಲ್ಲಿ ಈ ತರಹದ ಆದೇಶ ಜಾರಿಗೊಳಿಸುವುದೇ ಬೇಡ. ಅದು ತನ್ನಿಂದ ತಾನಾಗಿಯೆ ಜಾರಿಯಾಗಿದ್ದು ಕಂಡು ಬಂತು. ಅಲ್ಲಿರುವ ಆಟೊ ಚಾಲಕ ಅಲ್ಲಿನ ಪ್ರಾದೇಶಿಕ ಭಾಷೆಯಲ್ಲಿ ಮಾತನಾಡದಿದ್ದರೆ, ಅದರಿಂದ ತೊಂದರೆ ಅನುಭವಿಸುವುದು ಗ್ರಾಹಕನಲ್ಲ, ಸ್ವತಃ ಆಟೊ ಚಾಲಕನೆ. ಇದು ಅಲ್ಲಿನ ಪರಿಸ್ಥಿತಿ. ನಮ್ಮ ಹಿಂದಿ ಮಾತಿಗೆ ಆಟೊದವನು ತಮಿಳಿನಲ್ಲಿ ಉತ್ತರ ನೀಡಿದ್ದು ನೋಡಿ ಅದು ಗೋಚರವಾಗಿತ್ತು. ಮುಂದೆ ಅಥಿತಿ ಗೃಹಕ್ಕೆ ಹೋಗಿ ನಮ್ಮ ಕೋಣೆಯಲ್ಲಿದ್ದ ಟಿವಿಯ ಒಳಹೊಕ್ಕು ನೋಡಿದರೆ ಅದರಲ್ಲಿ ಕೇವಲ ಒಂದು ಕನ್ನಡ ಚಾನಲ್, ಎರಡು ತೆಲುಗು, ಎರಡು ಹಿಂದಿ ಚಾನಲಗಳನ್ನು ಬಿಟ್ಟರೆ ಉಳಿದೆಲ್ಲವು ತಮಿಳ ಚಾನಲಗಳೆ. ಬೆಂಗಳೂರಿನಲ್ಲಿ ಕನಿಷ್ಟ ಮೂರ್ನಾಲ್ಕು ತಮಿಳು, ಮೂರ್ನಾಲ್ಕು ತೆಲುಗು ಚಾನಲಗಳನ್ನು ನಾವು ನೋಡಬಹುದು. ಮುಂದೆ ನಮ್ಮ ಕೆಲಸಕ್ಕೆ ಹೋಗಲು ಬಸ್ ಹತ್ತಿದಾಗ ಅಲ್ಲಿ ಚಾಲಕನ ಪಕ್ಕದಲ್ಲಿ ಅಂಟಿಸಿದ್ದ ತಿರುವಳ್ಳವರ್ ಫೋಟೊ ಮತ್ತು ಕೆಲವು ಅಕ್ಷರದ ಸಾಲುಗಳು ನಮ್ಮ ಗಮನ ಸೆಳೆದವು. ನಮ್ಮಲ್ಲಿ ರಾಜಕುಮಾರ್, ಶಂಕರನಾಗ್ ಫೋಟೊ ಹಾಕೋ ಥರ ಈ ಬಸ್ಸಿನವರು ಹಾಕಿರಬಹುದು ಎಂದು ನಂಬಿದ್ದ ನನಗೆ ಆಶ್ಚರ್ಯ ಕಾದಿತ್ತು, ಪ್ರತಿಯೊಂದು ನಗರ ಸಾರಿಗೆ ಬಸ್ ನಲ್ಲಿಯೂ ಇದು ಇರುವುದನ್ನು ಕಂಡು, ನಮ್ಮ ಸರಕಾರ ಮತ್ತು ನಾವು, ನಮ್ಮ ಸರ್ವಜ್ನರನ್ನು, ಬಸವಣ್ಣನವರನ್ನು ಎಷ್ಟು ಗೌರವಿಸುತ್ತಿದ್ದೇವೆ ಎಂಬ ಅನುಮಾನವಾಯಿತು.
ಹೀಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ ’ಯುನಿನಾರ್’ ಮಹಾಶಯರ ಜಾಹಿರಾತು ಫಲಕಗಳು ನಮ್ಮ ಕಣ್ಣು ಕುಕ್ಕಿದವು. ಬೆಂಗಳೂರಿನಲ್ಲಿ ಜಾಹಿರಾತು ಫಲಕಗಳ ಮೇಲೆ, ನಮ್ಮ ಬಿ ಎಂ ಟಿ ಸಿ ಬಸ್ ಗಳ ಮೇಲೆ, ಹೀಗೆ ಎಲ್ಲೆಂದರಲ್ಲಿ "ಅಬ್ ಮೇರಾ ನಂಬರ್ ಹೈ" "ಅಬ್ ಮೇರಾ ನಂಬರ್ ಹೈ" ಎಂದು ಹಿಂದಿಯಲ್ಲಿ ಬೊಬ್ಬೆ ಹೊಡೆಯುವ ಇವರು ಚೈನ್ನೈನಲ್ಲಿ ಒಂದೇ ಒಂದು ಹಿಂದಿ ಜಾಹಿರಾತು ಹಾಕಿರುವುದನ್ನು ಹುಡುಕಿ ಹುಡುಕಿ ನನ್ನ ಕಣ್ಣುಗಳು ಸುಸ್ತಾದವು. ಚೆನ್ನೈನಲ್ಲಿಯು ತಮಿಳೇತರ ’ತಾಯಿನುಡಿ’ ಇರುವವರ ಸಂಖ್ಯೆ ಏನು ಕಮ್ಮಿ ಇಲ್ಲ. ಆದರೆ ವಿಪರ್ಯಾಸವೆಂದರೆ ಬಹುತೇಕ ಕಂಪನಿಗಳಿಗೆ ಚೈನ್ನೈನಲ್ಲಿದ್ದಾಗ ನೆನಪಾಗದ ’ವಲಸೆಗಾರರು’ ಬೆಂಗಳೂರಿಗೆ ಬಂದ ಮೇಲೆ ಧಿಡೀರನೆ ನೆನಪಾಗಿ ಅವರ ಮೇಲೆ ಮೋಹ (ಪ್ರೀತಿ ಅಲ್ಲ) ಉಕ್ಕಿ ಹರಿಯುತ್ತದೆ. ಬೆಂಗಳೂರಿನಲ್ಲಿ ನೆನಪಾಗದ ಸ್ಥಳಿಯರು ಚೈನ್ನೈಗೆ ಹೋದ ಮೇಲೆ ತಂತಾನೆ ತನ್ನಂತಾನೆ ನೆನಪಾಗುತ್ತಾರೆ. ಬಸ್ ನಲ್ಲಿ ಇನ್ನೊಂದು ಅಪರೂಪದ ದೃಶ್ಯ ಕಂಡು ಒಂದೆಡೆ ಆಶ್ಚರ್ಯ ಇನ್ನೊಂದೆಡೆ ಅಸುಯೆ ಮೂಡಿತು. ನಮ್ಮ ಹಿಂದಿನ ಸಾಲಿನಲ್ಲಿ ಕುಳಿತಿದ್ದ ಇಬ್ಬರು ಮುಸ್ಲಿಮರು ಅಚ್ಚ ತಮಿಳಿನಲ್ಲಿ ಮಾತನಾಡುತ್ತಿದ್ದರು. ಅಲ್ಲಿರುವ ಎಷ್ಟೊ ಮುಸ್ಲಿಮರಿಗೆ ಹಿಂದಿ ಸ್ಪಷ್ಟವಾಗಿ ಮಾತನಾಡಲು ಬರುವುದಿಲ್ಲ ಎಂದು ಯಾರೋ ಹೇಳಿದಾಗ, ಅಲ್ಲಿನ ಭಾಷೆಯ ಆಳ ಕಾಣಿಸಿದಂತಾಯ್ತು. ಹೀಗೆ ಪ್ರತಿಯೊಂದು ಹೆಜ್ಜೆ ಹೆಜ್ಜೆಯಲ್ಲಿಯೂ, "ಇಲ್ಲಿ ಬಾಳಬೇಕಾದರೆ ತಮಿಳನ್ನು ಕಲಿಯಲೇಬೇಕು" ಎಂಬ ಸಂದೇಶ ನನ್ನ ಮನಸ್ಸಿನಿಂದ ಹೊರಹೊಮ್ಮುತ್ತಿತ್ತು. ಬಹುಶಃ ಇದೇ ಕಾರಣದಿಂದ ಅಲ್ಲಿ ವಲಸೆಗಾರರ ಸಂಖ್ಯೆ ಅಷ್ಟೊಂದಿಲ್ಲ. ವಲಸೆಗಾರರಿದ್ದರೂ ಅದು ದೊಡ್ಡ ಸಮಸ್ಯೆಯಾಗಿಲ್ಲ. ಹೊರಗಿನಿಂದ ಬಂದವರು ಹೊರಗಿನವರಾಗಿ ಬಹಳ ದಿನ ಅಲ್ಲಿ ನೆಲೆಸಲು ಸಾದ್ಯವಿಲ್ಲ. ಅವರು ಅಲ್ಲಿನ ಮುಖ್ಯವಾಹಿನಿಗೆ ಬೆರೆಯಲೇಬೇಕಾಗುತ್ತದೆ. "ತಮಿಳುನಾಡಿಗೆ ಬಂದ ವಲಸಿಗರಿಗೆ ತಮ್ಮ ಭಾಷೆಯನ್ನು ಕಲಿಯುವ ಹಾಗೆ ಮಾಡಿ, ತಮ್ಮ ಸಂಪ್ರದಾಯಕ್ಕೆ ಹೊಂದಿಕೊಳ್ಳುವ ಹಾಗೆ ಮಾಡಿ, ಅವರನ್ನೂ ತಮಿಳುನಾಡಿನವರನ್ನಾಗಿ ಮಾಡುವ ತಮಿಳರು, ತಾವು ಬೇರೆ ಕಡೆಗೆ ವಲಸಿಗರಾಗಿ ಹೋದಾಗ ಆ ನಿಯಮವನ್ನು ಪಾಲಿಸಬೇಕು, ಅಲ್ಲಿನವರಾಗಿ ತಾವೂ ಬಾಳಬೇಕು ಎಂಬ ಮನೋಭಾವನೆಯನ್ನು, ಸೌಜನ್ಯವನ್ನು, ಕರ್ತವ್ಯವನ್ನು ಬೆಳೆಸಿಕೊಳ್ಳದೇ ಇರುವುದು ಮಾತ್ರ ಎಲ್ಲರೂ ಒಕ್ಕೊರಲಿನಿಂದ ಖಂಡಿಸುವಂಥದ್ದು". ಇನ್ನು ನಗರದ ಬಗ್ಗೆ ಹೇಳಬೇಕೆಂದರೆ, ವಾತಾವರಣ, ಸ್ವಚ್ಛತೆ, ನಗರಾಭಿವೃಧ್ಧಿ ಮತ್ತು ಮೂಲಸೌಕರ್ಯಗಳ ವಿಷಯದಲ್ಲಿ ನಮ್ಮ ಬೆಂಗಳೂರಿಗೆ ಚೆನ್ನೈ ಇನ್ನೂ ಸರಿಸಾಟಿಯಾಗಿಲ್ಲ ಎಂದೆನಿಸಿತು. ಬರೋವಾಗ ಚೈನ್ನೈನಲ್ಲಿರೋ ನಮ್ಮ ಕೆ.ಎಸ್.ಆರ್.ಟಿ.ಸಿ ಕಚೇರಿಯ ಫಲಕದಲ್ಲಿ ಕನ್ನಡವಿಲ್ಲದೇ ಇರುವುದನ್ನು ಕಂಡು ಬೇಜಾರಾಯಿತು. (ಬೆಂಗಳೂರಿನಲ್ಲಿರುವ ತಮಿಳನಾಡಿನ ಬಸ್ ಬುಕ್ಕಿಂಗ್ ಆಫೀಸಿನ ಫಲಕದಲ್ಲಿ ತಮಿಳನ್ನು ಮೊದಲನೇ ಸ್ಥಾನದಲ್ಲಿ ಕಾಣಬಹುದು). ಇಷ್ಟು, ಒಂದು ದಿನದ ಅಲ್ಪ ಸ್ವಲ್ಪ ಅನುಭವಗಳನ್ನು ಮತ್ತು ಅನಿಸಿಕೆಗಳನ್ನು ಹೊತ್ತುಕೊಂಡು ನನ್ನ ಒಂದು ದಿನದ ಚೆನ್ನೈ ಪ್ರವಾಸವನ್ನು ಮುಗಿಸಿ ತಾಯ್ನಾಡಿಗೆ ಮರಳಿದೆ.

ನನ್ನ ಅನಿಸಿಕೆಗಳಲ್ಲಿನ ತಪ್ಪುಗಳನ್ನು ದಯವಿಟ್ಟು ಕ್ಷಮಿಸದೇ ಅವುಗಳನ್ನು ತಿದ್ದುವ ಪೂರ್ಣ ಅಧಿಕಾರ ನಿಮಗಿದೆ.......................