Thursday, 7 April 2011

ಕರ್ನಾಟಕವಿಲ್ಲದ ’ಆಲ್ ಇಂಡಿಯಾ’ವನ್ನು ಒಪ್ಪಕ್ಕಾಗುತ್ತಾ..?

ಈ ಚಿತ್ರ ನೋಡಿ. ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟುಡೆಂಟ್ಸ್ ಆರ್ಗನೈಸೇಷನ್ ಎಂಬ ಸಂಘಟನೆಯ ವತಿಯಿಂದ ಬೆಂಗಳೂರಿನಲ್ಲಿ ವಿದ್ಯಾರ್ಥಿ ಸಮ್ಮೇಳನ ನಡಿತಾ ಇದೆ. ಅದರ ಪ್ರಯುಕ್ತ ಮುದ್ರಿಸಿದ ಪತ್ರಿಕಾ ಹಾಳೆಯಲ್ಲಿ ಐದು ಜನ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರವನ್ನು ತೋರಿಸಲಾಗಿದೆ. ಇರಲಿ, ಆದರೆ ಕರ್ನಾಟಕದಲ್ಲಿ ಮುದ್ರಿಸಿದ ಈ ಚಿತ್ರದಲ್ಲಿ ಕರ್ನಾಟಕದ ಯಾರೊಬ್ಬರ ಪರಿಚಯನೂ ಇಲ್ಲ. ಇದು ಸ್ವಾಭಾವಿಕವಾಗಿ ಮೊದಲ ನೋಟದಲ್ಲೇ ಬಿಂಬಿಸುವುದೇನೆಂದರೆ, ಸ್ವಾತಂತ್ರ ಸಂಗ್ರಾಮದಲ್ಲಿ ಕರ್ನಾಟಕದ ಕೊಡುಗೆ ಇಲ್ಲ. ದೇಶಭಕ್ತಿ ಸಂಕೇತವಾಗಿ ಕರ್ನಾಟಕದ ಯಾರನ್ನೂ ಬಿಂಬಿಸಲಾಗುವುದಿಲ್ಲ ಅಂತಾನೇ ಅಲ್ಲವೇ. ಇದು ನಿಜನಾ.?
ಹಾಗಾದರೆ...,
  • ಭಾರತದ ವೀರಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿದ, ಬ್ರಿಟೀಶರ ವಿರುದ್ದ ಹೋರಾಡಿದ ಪ್ರಥಮ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ,
  • ಭಾರತದ ಮೊತ್ತಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ, ಪೋರ್ಚುಗೀಸರ ವಿರುದ್ಧ ಹೋರಾಡಿದ ತುಳು ನಾಡಿನ ಉಲ್ಲಾಳದ ರಾಣಿ ಅಬ್ಬಕ್ಕ,
  • ಭಾರತದಲ್ಲಿನ ಗೆರಿಲ್ಲಾ ಯುದ್ದದ ಹರಿಕಾರ ಎಂದು ಕರೆಯಲ್ಪಡುವ, ಬ್ರಿಟೀಶರ ವಿರುದ್ದ ತೊಡೆ ತಟ್ಟಿ ನಿಂತ ಕಿತ್ತೂರಿನ ಇನ್ನೊಬ್ಬ ಧೀರ ಸಂಗೊಳ್ಳಿ ರಾಯಣ್ಣ,
  • ಇನ್ನೂ ಅನೇಕರು....
ಇವರ ಕೊಡುಗೆಗೆ ಬೆಲೆ ಇಲ್ಲವೇ.?

ಆ ಪತ್ರಿಕಾ ಹಾಳೆಯಲ್ಲಿ ಅವರು ಇರಬಾರದು ಬರೀ ಇವರೇ ಇರಬೇಕು ಎನ್ನುವ ವಾದ ಖರೇಗೂ ಇದಲ್ಲ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರ ಕೊಡುಗೆನೂ ಪ್ರಶಂಸನೀಯ. ಆದರೆ, ವಿಷಯ ಏನಪ್ಪಾ ಅಂದ್ರೆ, ಹೆಸರಲ್ಲೇ "ಆಲ್ ಇಂಡಿಯಾ" ಅಂಥ ಇಟ್ಕೊಂಡು ಭಾರತದ ಎಲ್ಲ ಕಡೆ ಗಮನಹರಿಸದೇ, ಕರ್ನಾಟಕದಲ್ಲೇ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರನ್ನು ನಿರ್ಲಕ್ಷಿಸಿರುವುದು ಯಾಕೆ.? ಕರ್ನಾಟಕದಲ್ಲಿ ಮುದ್ರಿಸಿದ ಹಾಳೆಯಲ್ಲಿ ಇಲ್ಲಿನ ಅರ್ಹರಿಗೆ ಸ್ಥಾನನೇ ಇಲ್ಲ ಅಂದ್ರೆ, ಸಂಘಟನೆಯ "ಆಲ್ ಇಂಡಿಯಾ"ದಲ್ಲಿ ಕರ್ನಾಟಕ ಇಲ್ಲವೇ.? ಅಥವಾ "ಆಲ್ ಇಂಡಿಯಾ" ಮಟ್ಟಕ್ಕೆ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರನ್ನು ತೋರಿಸಲು ನಿರ್ಲಕ್ಷತನವೇ.? ಸ್ವಾತಂತ್ರ್ಯದ ಮೊದಲ ಕಿಚ್ಚು ಹಚ್ಚಿದ ಮೇಲಿನವರ ದೇಶಭಕ್ತಿ ಯುವ ಜನತೆಗೆ ಸ್ಪೂರ್ತಿ ನೀಡುವುದಿಲ್ಲವೇ.? ನಮ್ಮ ಇತಿಹಾಸವನ್ನು ಮರೆಮಾಚುವ, ನಮ್ಮ ನಾಡಿನ ಹೋರಾಟಗಾರರನ್ನು ಎರಡನೇ ಪಂಕ್ತಿಯಲ್ಲಿ ಕಾಣುವ ಈ ನಡೆ ಖಂಡಿತ ಒಪ್ಪುವಂಥದ್ದಲ್ಲ.


Monday, 21 February 2011

ಬೀದರ್ ಉತ್ಸವ ಕನ್ನಡಿಗರಿಗೆ ಅಲ್ಲೇನ್ರಿ..?



ಕರ್ನಾಟಕದ ಪ್ರತಿಯೊಂದು ಪ್ರದೇಶನೂ ತನ್ನದೇ ಆದ ವಿಶಿಷ್ಟತೆಗಳನ್ನು ಹೊಂದಿವೆ. ಆ ವಿಶಿಷ್ಟತೆಗಳನ್ನು, ಇತಿಹಾಸವನ್ನು, ಸಂಸ್ಕೃತಿ ಸಂಪ್ರದಾಯವನ್ನು ಪರಿಚಯಿಸಲು ಹೊರಜಗತ್ತಿಗೆ ತೋರ್ಪಡಿಸಲು ಅಲ್ಲಿ ನಡೆಯುವ ಉತ್ಸವಗಳು ಪ್ರಮುಖ ಪಾತ್ರ ವಹಿಸುತ್ತವೆ. ಹೀಗೆ ಸಂಘಟಿಸುವ ಉತ್ಸವದಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯಾ ಪ್ರದೇಶದ ಜನರ ನುಡಿಗೆ ಹೊಂದಿಕೊಂಡಿರುವ ಮನರಂಜನೆಗೆ ಮೀಸಲಾಗಿರಬೇಕಾಗಿರುವುದು ವಾಡಿಕೆ. ಆದರೆ, ಜಾಗತೀಕರಣದ ಫಲಾನೋ, ಹಿಂದೆ ಇದ್ದ ಹಿಂದಿ ಮುಂದೆ ಬರುತ್ತಿರುವ ಫಲಾನೋ, ಅದೇನ್ ರೋಗ ಬಂತೋ ಈ ಉತ್ಸವಗೋಳಿಗಿ ಕನ್ನಡಿಗರನ್ನ ಕನ್ನಡದಿಂದ ಮತ್ತ ಕರ್ನಾಟಕದಿಂದ ದೂರ ಒಯ್ಯಾಕತ್ತ್ಯಾವು.

ಮೈಸೂರು ಉತ್ಸವ ಆಯ್ತು, ಬೆಂಗಳೂರು ಹಬ್ಬ ಆಯ್ತು, ಈಗ ಈ ಬೀದರ್ ಉತ್ಸವ :--
ಇತ್ತೀಚಿಗೆ (ಫೆ. ೧೮,೧೯,೨೦) ಬೀದರಿನಲ್ಲಿ ಮೂರು ದಿನಗಳ ಕಾಲ ಬೀದರ್ ಉತ್ಸವ ಜರುಗಿತು. ಬೀದರ್ ಕರ್ನಾಟಕದ ಗಡಿ ಪ್ರದೇಶ. ಅಲ್ಲಿರುವವರು ಕನ್ನಡಿಗರು, ಅಲ್ಲಿ ಮಾತನಾಡುವ ಭಾಷೆ ಕನ್ನಡ (ಗಡಿ ಪ್ರದೇಶ ಇದ್ರೂ, ಅಲ್ಲಿ ಕನ್ನಡನೇ ಹೆಚ್ಚು ಮಾತಾಡ್ತಾರೆ), ಹೀಗಿರುವಾಗ ಬೀದರನಲ್ಲಿ ಸಂಘಟಿಸುವ ಉತ್ಸವದಲ್ಲಿ ಕಾಣುವ ಮನರಂಜನೆ, ಯಾವ ಭಾಷೆಯದ್ದಾಗಿರಬೇಕು. ಅಲ್ಲಿರುವ ಕಾರ್ಯಕ್ರಮಗಳ ಕಲಾವಿದರು ಯಾರಾಗಿರ್ಬೇಕು.? ಕಾರ್ಯಕ್ರಮಗಳ ಪಟ್ಟಿ ಕಡೆ ಗಮನಹರಿಸಿದರೆ, ಶಿಫಾಲಿ ಜಾರಿವಾಲಾ, ದಲೆಲ್ ಮೆಹಂದಿ, ಖವಾಲಿ, ಅಲ್ಖಾ ಯಾಗ್ನಿಕ್, ಪಂಕಜ್ ಉದಾಸ್, ಶಾಂತನು ಮುಖರ್ಜಿ ಹೀಗೆ ಸಾಲು ಸಾಲು ಕನ್ನಡೇತರ ಕಲಾವಿದರು ಕಾಣುತ್ತಾರೆ. ಅವರು ಬಂದು "ಚೆಲ್ಲಿದರೂ ಮಲ್ಲಿಗೆಯ" ಅಂಥ ಹಾಡಲು ಸಾದ್ಯನಾ.? ಮತ್ತೆ ಅದೇ "ತೇರಾ ಸುರೂ..ರ್" ಅಂಥ ಹಾಡೌರು. ಈ ಆಹ್ವಾನ ಪತ್ರಿಕೆಯನ್ನು ಹಿಂದಿಯಲ್ಲಿ ಬರೆಸಿ, ಮುಂಬಯಿಯಲ್ಲೋ ಲಕನೌದಲ್ಲೋ ಕಾರ್ಯಕ್ರಮ ನಡೆಸಿದ್ದರೆ ಒಂದಕ್ಕೊಂದು ಹೊಂದಾಣಿಕೆ ಇರುತ್ತಿತ್ತು. ನಾವು ತಲೆ ಕೆಡಿಸಿಕೊಳ್ಳುವ ಅಗತ್ಯ ಇರ್ತಿರ್ಲಿಲ್ಲ. ಆದರೆ ಈಗ ಆಗಿರುವುದೇ ಬೇರೆ. ನಮ್ಮ ಉಪೇಂದ್ರ ಒಬ್ಬರನ್ನು ಬಿಟ್ಟು ಉಳಿದೆಲ್ಲ ಬಹುತೇಕ ಕಲಾವಿದರು ಹೊರರಾಜ್ಯದವರೇ. ಹಾಗಾದರೆ ನಮ್ಮ ಕನ್ನಡದ ಗಾಯಕರು, ಹಾಸ್ಯ ಕಲಾವಿದರು, ಸಂಗೀತ ವಾದ್ಯ ಪರಿಣಿತರು, ಮಿಮಿಕ್ರಿ ಪರಿಣಿತರು, ಏಕ ಪಾತ್ರಾಭಿನಯದವ್ರು ಇವರಿಗೆಲ್ಲರಿಗೂ ಈ ಉತ್ಸವ ಯೋಗ್ಯ ಅಲ್ವಾ.? ಅಥವಾ ಯೋಗ್ಯತೆ ಇಲ್ವಾ.? ಕನ್ನಡದ ಮನರಂಜನೆಯ ಯೋಗ್ಯತೆ ಪ್ರಶ್ನಿಸಿದಂತಾಗುತ್ತದೆ ಇದು. ಇದು ನಮ್ಮ ಕಲಾವಿದರಿಗೆ ಮಾಡಿದ ಅವಮಾನವಲ್ಲವೇ.? ಯಾರಾದ್ರು ಇದನ್ನ ಪ್ರಶ್ನೆ ಮಾಡಿ ನೋಡ್ರಿ ಅವರ ಹತ್ರ ಉತ್ತರ ರೆಡಿಯಾಗಿರುತ್ತೆ, "ಕಲೆಗೆ ಭಾಷೆಯಿಲ್ಲ.!!!" ಆ ಕಲೆಯನ್ನು ನೋಡುವವರಿಗೆ ಭಾಷೆಯಿದೆ, ಆ ಕಲೆ ನಡೆಯುವ ಸ್ಥಳಕ್ಕೆ ಅಲ್ಲಿನ ಭಾಷೆ ಇದೆ ಅನ್ನೋದು ಗೊತ್ತಾಗಬೇಕಲ್ವ. ಕರ್ನಾಟಕದ ಪ್ರದೇಶವಾದ ಬೀದರಿನಲ್ಲಿ ನಡೆದ, ನಮ್ಮ ಸಂಸ್ಕೃತಿ ಸಂಪ್ರದಾಯವನ್ನು ಬಿಂಬಿಸುವ ಒಂದು ಉತ್ಸವದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಬಹುತೇಕ ಹೊರರಾಜ್ಯದವರೇ ಇರ್ತಾರೆ ಅಂದ್ರೆ ಅದು ಜಗತ್ತಿಗೆ ಯಾವ ಸಂದೇಶ ರವಾನಿಸುತ್ತದೆ ಅನ್ನುವ ಅರಿವಿದ್ದವರೂ ಬಹುಶ: ಹೀಗೆ ಮಾಡುತ್ತಿರಲಿಲ್ಲ. ಬೆಂಗಳೂರಿನಲ್ಲಿ ವಲಸಿಗರನ್ನು ಕನ್ನಡದ ಮುಖ್ಯವಾಹಿನಿಗೆ ತರಲು ಪ್ರಯತ್ನಗಳು ಸಾಗಿದ್ದರೆ ಅತ್ತ ನಮ್ಮ ಗಡಿಗಳಲ್ಲಿ ಕನ್ನಡ ಕಡೆಗಣಿಸುವ ಇಂಥ ಉತ್ಸವಗಳು ನಮ್ಮ ರಾಜ್ಯದ ಜನರನ್ನು ಕನ್ನಡದ ಮುಖ್ಯವಾಹಿನಿಯಿಂದ ದೂರ ಒಯ್ಯುತ್ತಿವೆ. ಉತ್ಸವವೆಂಬ ಊಟದಲ್ಲಿ ಕನ್ನಡ ಕಾರ್ಯಕ್ರಮ ಅನ್ನೋದು ಉಪ್ಪಿನಕಾಯಿ ಥರ ಆಗೋಗಿದೆ.

ಕೊನೆ ಮಾತು: ಗಡಿ ಅಭಿವೃದ್ದಿ ಪ್ರಾದಿಕಾರ, ಗಡಿ ಕಾವಲು ಪಡೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಒಂದೇ ಎರಡೇ ಸರಕಾರದ ಸಂಸ್ಥೆಗಳು. ಆದರೂ..?

Monday, 1 November 2010

ಗ್ರಾಹಕನ ಹಕ್ಕು ಚಲಾಯಿಸಿ, ಇಲ್ಲ "ದಿವಾಳಿ" ಆಚರಿಸಲು ಸಜ್ಜಾಗಿ..!


ಗೆಳೆಯರೆ,
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು.

ಇಲ್ಲಿ ಲಗತ್ತಿಸಿರುವ ಚಿತ್ರದಲ್ಲಿ "ಶುಭೋ ಬಿಜೊಯ" ಅಂಥ ಅಚ್ಚ ಬೆಂಗಾಲಿಯನ್ನು ಇಂಗ್ಲೀಷ ಲಿಪಿಯಲ್ಲಿ ಬರೆದು ಶುಭಾಶಯ ಕೋರಲಾಗಿದೆ. "ಶುಭೋ ಬಿಜೊಯ" ಅನ್ನೊದು ಬೆಂಗಾಲಿಯಲ್ಲಿ ’ದಸರಾ ಹಬ್ಬ’ ಇದ್ದ ಹಾಗೆ. ಕೆಲವು ದಿನಗಳ ಹಿಂದೆ ಈ ಚಿತ್ರ ಒಂದು ಮಾಲ್ ನ ಸ್ಕ್ರೀನ್ ಮೇಲೆ ಕಂಡುಬಂತು. ಇದು ಕಂಡು ಬಂದಿದ್ದು, ಪಶ್ಚಿಮ್ ಬಂಗಾಲದ ಯಾವುದೋ ಮಾಲನಲ್ಲಿ ಅಲ್ಲ, ಕರ್ನಾಟಕದ ರಾಜಧಾನಿ ಬೆಂಗಳೂರಿನ ಮಂತ್ರಿ ಮಾಲನ ಸ್ಕ್ರೀನ್ ಮೇಲೆ. ಅದನ್ ನೋಡಿದ ಮೇಲೆ ಒಂದ್ ಕ್ಷಣದಲ್ಲಿ ಕೊಲ್ಕತಾ ಪ್ರಯಾಣ ಮುಗಿಸಿ ಬಂದಂಗಾಯ್ತು. ಈಗ ವಿಷ್ಯ ಏನಪ್ಪ ಅಂದ್ರೆ, ಸುಮಾರು ೧೮೦೦ ಕಿ.ಮೀ ದೂರದಲ್ಲಿ ಆಚರಿಸುವ ಹಬ್ಬವನ್ನು ನಮ್ಮ ಬೆಂಗಳೂರಿನಲ್ಲಿ ಅಚ್ಚ ಅಲ್ಲಿಯ ಭಾಷೆಯಲ್ಲೇ ಶುಭಾಶಯ ಕೋರುವ ಅಗತ್ಯ ಕಾಣುವವರು, ಕಣ್ ಮುಂದೆ ಇರುವ ೬ ಕೋಟಿ ಕನ್ನಡಿಗರಿಗೆ ಯಾವ ಭಾಷೆಯಲ್ಲಿ ಯಾವ ಲಿಪಿಯಲ್ಲಿ, ಶುಭಾಶಯ ಕೋರಬೇಕು ಎಂಬ ಸಾಮಾನ್ಯ ಪರಿಜ್ನಾನ ಇಲ್ಲವೇ.? ಇದು ಯಾವುದೋ ಒಂದು ಮಾಲ್ ನ ಕಥೆ ಅಲ್ಲ, ಬದಲಾಗಿ ಕಣ್ಣು ಹಾಯಿಸಿದಲ್ಲೆಲ್ಲ ಕನ್ನಡಿಗ ನಿತ್ಯ ಕಾಣುವ ವ್ಯಥೆಯಾಗಿದೆ.
ನಮ್ಮದೇ ನಾಡಿನಲ್ಲಿ ನಮ್ಮ ಹಬ್ಬಗಳಾದ ದಸರಾ, ದೀಪಾವಳಿಗಳನ್ನು "Happy Dusshera", "Happy Diwali" ಎಂದು ಕರೆದು ಕನ್ನಡಿಗರನ್ನು ದಿವಾಳಿ ಎಬ್ಬಿಸುವ ಈ ಪ್ರಯತ್ನ ಖಂಡಿಸುವಂಥದ್ದು. ನಮ್ಮ ಊರಲ್ಲೇ ದೀಪಾವಳಿ, ದಸರಾ ಹಬ್ಬಗಳ ಶುಭಾಶಯಗಳನ್ನು ನಮ್ಮ ನುಡಿಯಲ್ಲಿ ಪಡೆದುಕೊಳ್ಳಲಾರದಷ್ಟು ನತದೃಷ್ಟರೇ ನಾವು ಕನ್ನಡಿಗರು.? ಅರ್ಥವಾಗದ ಸಂಗತಿ ಅಂದ್ರೆ, ತಾವು ನಿಂತಿರುವ ಜಾಗವನ್ನೇ ಮರೆತು, ತಾವು ಅವಲಂಬಿತವಾಗಿರುವ ಕನ್ನಡ ಗ್ರಾಹಕನ ಅನುಕೂಲಗಳನ್ನೇ ಮರೆತು, ಕೆಲವೇ ಕೆಲವು ಬೆರಳೆಣಿಕೆಯಷ್ಟು ಗ್ರಾಹಕರ ಸಲುವಾಗಿ ಜಾಹೀರಾತಿಗಾಗಿ ಬೆಂಗಳೂರಿನಲ್ಲಿ ಹಿಂದಿ, ಇಂಗ್ಲೀಷ ಮೊರೆ ಹೋಗುತ್ತಿರುವ ಕಂಪನಿಗಳಿಗೆ, ಕನ್ನಡಿಗ ಗ್ರಾಹಕನ ಮಹತ್ವವನ್ನು, ತಮ್ಮ ಸೇವೆಯಲ್ಲಿ ಕನ್ನಡದ ಬಳಕೆಯಿಂದಾಗುವ ಪ್ರಯೋಜನವನ್ನು ಮನದಟ್ಟು ಮಾಡಿಸುವ ಅಗತ್ಯತೆ ಇದೆ. ಗ್ರಾಹಕನ ಹಕ್ಕನ್ನು ಬರೀ ವಸ್ತುವಿನ ಗುಣ, ಪ್ರಮಾಣದಲ್ಲೇ ಅಳೆಯುವ ನಾವು, ನಮ್ಮ ನುಡಿಯಲ್ಲಿ ಸೇವೆ ಪಡೆಯುವುದು ಕೂಡ ನಮ್ಮ ಹಕ್ಕು ಎಂಬ ಕಟು ಸತ್ಯವನ್ನು ಮನಗಾಣಬೇಕಿದೆ, ಕರ್ನಾಟಕದಲ್ಲೇ ಕನ್ನಡಿಗ ಗ್ರಾಹಕ "ದಿವಾಳಿ" (DIWALI) ಆಗುವುದನ್ನು ತಡೆಯಬೇಕಿದೆ.
ಈ ವಿಷಯದ ಬಗ್ಗೆ ಮಂತ್ರಿ ಮಾಲ್ನ್ ಗಮನ ಸೆಳೆಯಲು ಇಲ್ಲಿ ಸಂಪರ್ಕಿಸಿ.

Tuesday, 14 September 2010

ವಿಶ್ವಕ್ಕೆ ಮಾದರಿ ನಮ್ಮೀ ವಿಶ್ವೇಶ್ವರಯ್ಯ...!

"If Australia and Canada could have universities of their own for less than a million population, cannot Mysore with a population of not less that 60 lakhs have a University of its own?"
ಹೀಗೆ ದೂರ ದೃಷ್ಟಿ ಬೀರಿದವರು ಭಾರತ ಕಂಡ ಗಣ್ಯ ಇಂಜಿನಿಯರುಗಳಲ್ಲಿ ಅತ್ಯುನ್ನತ ಸ್ಥಾನದಲ್ಲಿ ನಿಲ್ಲುವ ನಮ್ಮ ಭಾರತರತ್ನ ಸರ್ ಎಮ್. ವಿಶ್ವೇಶ್ವರಯ್ಯನವರು. ಇಂದು (೧೫-೦೯-೨೦೧೦) ಅವರ ೧೫೦ ನೇ ಜನ್ಮ ದಿನಾಚರಣೆ. ಅವರು ತಾಂತ್ರಿಕತೆಯಲ್ಲಿ ದೇಶಕ್ಕೆ ನೀಡಿದ ಕೊಡುಗೆ ಅಪಾರ,ಈ ನಿಟ್ಟಿನಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ ೧೫ ರಂದು ಅವರ ಸ್ಮರಣಾರ್ಥವಾಗಿ ದೇಶದಲ್ಲೆಡೆ ENGINEER’S DAY ಯನ್ನಾಗಿ ಆಚರಿಸಲಾಗುತ್ತದೆ.

ಮೈಸೂರು ವಿವಿ, ಹಿಂದೂಸ್ಥಾನ್ ಏರಕ್ರಾಫ್ಟ್ ಫ್ಯಾಕ್ಟರಿ (ಈಗಿನ ಎಚ್.ಎ.ಎಲ್), ಕನ್ನಂಬಾಡಿ ಕಟ್ಟೆ, ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕನ್ನಡ ಸಾಹಿತ್ಯ ಪರಿಷತ್ತು, ಸರಕಾರಿ ಸಾಬೂನು ಕಾರ್ಖಾನೆ, ಶಿವನಸಮುದ್ರ, ಜೋಗ ಜಲವಿದ್ಯುತ್ ಯೋಜನೆ, ಬ್ಲಾಕ್ ಸಿಸ್ಟಮ್ (ನೀರಾವರಿ ಯೋಜನೆ), ಮೈಸೂರು ಸ್ಯಾಂಡಲ್ ಸೋಪ್, ಪ್ರಿಂಟಿಂಗ್ ಪ್ರೆಸ್, ಭಟ್ಕಳ ಬಂದರು, ಶ್ರೀಗಂಧ ಎಣ್ಣೆ ತಯಾರಿಕೆ, ಮೈಸೂರು ಸಕ್ಕರೆ ಕಾರ್ಖಾನೆ, ಬೆಂಗಳೂರು ವಿವಿ ಇಂಜಿನಿಯರ್ ಕಾಲೇಜು, ಜಯಚಾಮರಾಜೇಂದ್ರ ವೃತ್ತಿ ತರಬೇತಿ ಸಂಸ್ಥೆ, ಕಬ್ಬನ್ ಪಾರ್ಕನ ಸೆಂಚೂರಿ ಕ್ಲಬ್, ಹೆಬ್ಬಾಳದ ಕೃಷಿ ಸಂಶೋಧನಾ ಕೇಂದ್ರ, ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯಗಳು, ದೇಶದಲ್ಲಿಯೇ ಮೊಟ್ಟಮೊದಲಿಗೆ ಕಡ್ಡಾಯ ಪ್ರಾಥಮಿಕ ಶಿಕ್ಷಣ ಜಾರಿ, ಕನ್ನಂಬಾಡಿ ಕಟ್ಟೆಗೆ ವಿಶ್ವದಲ್ಲಿಯೇ ಮೊದಲ ಸ್ವಯಂ ಚಾಲಿತ ಗೇಟಗಳ ಅಳವಡಿಕೆ.

ಅಬ್ಬಾ, ಒಂದಾ ಎರಡಾ. ಬಹುಶ: ಜಗತ್ತಿನ ಯಾವುದೇ ದೇಶದಲ್ಲೂ ಯಾವುದೇ ಒಬ್ಬ ವ್ಯಕ್ತಿಯಿಂದಲೂ ಒಂದು ನಿರ್ಧಿಷ್ಟ ಪ್ರದೇಶಕ್ಕೆ ಇಷ್ಟೊಂದು ಅನುಕೂಲವಾದ ಮತ್ತೊಂದು ಉದಾಹರಣೆ ನಮಗೆ ಸಿಗಲಾರದು.

ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದ ಸರ್ ಎಮ್.ವಿ ಅವರು ನಮ್ಮ ಸರಕಾರದ ನಾಯಕರು ಅರವತ್ತು ವರ್ಷ ಮಾಡಲಾಗದ್ದನ್ನು ದಿವಾನರಾಗಿ ಆರೇ ವರ್ಷಗಳಲ್ಲಿ ಮಾಡಿದ್ದಾರೆ. ಇವತ್ತು ಕರ್ನಾಟಕದ ಮುಖ್ಯವಾಗಿ ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಯ ಜನರು ನೆಮ್ಮದಿಯಿಂದಿದ್ದರೆ, ಬೆಂಗಳೂರಿನ ನಿವಾಸಿಗಳಾದ ನಾವು ನೀರು ಕುಡಿಯುತ್ತಿದ್ದರೆ ಅದು ಆ ಮಹಾನುಭಾವನ ದೂರದೃಷ್ಟಿ ಮತ್ತು ಪರಿಶ್ರಮದ ಫಲ. ಅಷ್ಟೇ ಅಲ್ಲದೇ, ಇವತ್ತು ನಮ್ಮ ಬೆಂಗಳೂರು ಐಟಿ, ಬಾಹ್ಯಾಕಾಶ ಸಂಭಂದಿತ ಕ್ಷೇತ್ರಗಳಲ್ಲಿ ಮಿಂಚುತ್ತಿರುವುದಕ್ಕೂ ಸರ್ ಎಮ್.ವಿ ಅವರೇ ಕಾರಣ. ಈ ಭಾಗದ ಜನರ ದೇವರ ಮನೆಯಲ್ಲಿ ಸ್ಥಾನ ಗಿಟ್ಟಿಸಲು ಇವರು ಖಂಡಿತ ಅರ್ಹರು.

ಇದು ಬರೀ ರಾಜ್ಯದ ಕಥೆಯಾದರೆ, ಹೊರರಾಜ್ಯಗಳಲ್ಲೂ ಬಹಳ ಕಡೆ ಇವರ ದೂರದೃಷ್ಟಿಯ ಲಾಭ ಗೋಚರಿಸುತ್ತದೆ. ಇಂಥ ಮಹಾ ಮೇಧಾವಿಯನ್ನು ಪಡೆದ ಭರತಖಂಡ ಅದರಲ್ಲೂ ಕನ್ನಡನಾಡೇ ಧನ್ಯ.

ವಿಶ್ವೇಶ್ವರಯ್ಯನವರ ಕುರಿತ ಇನ್ನಷ್ಟು ಮಾಹಿತಿಗಳನ್ನು ಕೆಳಗಿನ ಕೊಂಡಿಗಳಲ್ಲಿ ನೋಡಿ....
> ಮೋಕ್ಷಗುಂಡಂ ವಿಶ್ವೇಶ್ವರಯ್ಯ
> Sir M Visvesvaraya
> One of the makers of modern India

Tuesday, 3 August 2010

ನಮ್ಮ ಬೇಲಿಗಳಿಗೆ ಹೊಲದ ಬಗ್ಗೆ ಕಾಳಜಿನೇ ಇಲ್ಲ...!














ಎಲ್ಲರಿಗೂ (ತಡವಾಗಿಯಾದರೂ) ಸ್ನೇಹಿತರ ದಿನಾಚರಣೆಯ ಶುಭಾಶಯಗಳು.

ನಮ್ಮ ಹೊಲವನ್ನು ಕಾಯಬೇಕಾದ ಬೇಲಿಯೇ ಹೊಲವನ್ನು ಮೈಯ್ಯಲು ನಿಂತಂತಿದೆ, ಮದ್ಯದಲ್ಲಿರುವ ಈ ಚಿತ್ರ. ಇದು ಕನ್ನಡಪ್ರಭದಲ್ಲಿ ಬಂದ ಲೇಖನ. ಕನ್ನಡಪ್ರಭ ಎಂದರೆ ಅಲ್ಲಿ ನಾವು ತಿಳಿದೋ ತಿಳಿಯದೇನೊ ಆ ಹೆಸರಿನ ಮೂಲಕ ಅಲ್ಲಿ ಕನ್ನಡದ ಸಾರ್ವಭೌಮತ್ವವನ್ನು ಕಾಣುತ್ತೇವೆ. ಆದರೆ ಮೊನ್ನೆ ಮುಗಿದ ಸ್ನೇಹಿತರ ದಿನಾಚರಣೆಯ ಬಗ್ಗೆ ಮರುದಿನ ಅಂದರೆ ನಿನ್ನೆ (೦೨-೦೮-೧೦) ಪ್ರಕಟವಾದ ಲೇಖನ ಜನರ ತಲೆಕೆಡಿಸಿ, ಕನ್ನಡಿಗರ ತಲೆಯಲ್ಲಿ ವಿವಿಧ ತಳಿಯ "ಹಿಂದಿ ಹುಳ" ಬಿಡುವ ಪ್ರಯತ್ನದ ಭಾಗವಾಗಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಸ್ನೇಹಿತರ ದಿನದ ಬಗ್ಗೆ ವರ್ಣಿಸಲು ಕನ್ನಡಪ್ರಭ ಎಂಬ ಹೆಸರಿಟ್ಟುಕೊಂಡಿರುವ ಇವರಿಗೆ ಕನ್ನಡದಲ್ಲಿ ವಾಕ್ಯಗಳೇ ಸಿಗಲಿಲ್ಲವೇ. ಹಿಂದಿಯನ್ನು ಕಷ್ಟ ಪಟ್ಟು, ಕನ್ನಡದಲ್ಲಿ ಬರೆದರೇ ಅದನ್ನು ಕನ್ನಡಿಗರು ಬಿಟ್ಟು ಬಿಹಾರಿ ಬಾಬು ಓದಲು ಸಾದ್ಯವೇ.? ಕನ್ನಡಿಗರೇ ಓದುವಾಗ ಅಲ್ಲಿ ಹಿಂದಿಗೇಕೆ ಮಣೇ. ಹಿಂದಿಯನ್ನು ಕಲಿಸುವ ಕಾಂಟ್ರ್ಯಾಕ್ಟ ಯಾಕೆ ಬೇಕು ಇವರಿಗೆ.
ಅದನ್ನು ಓದಿದ ಮೇಲೆ ಖಂಡಿತ ಅದರ ಅರ್ಥ ಗೊತ್ತಿರದವನು ತಿಳಿಯುವ ಪ್ರಯತ್ನ ಮಾಡುತ್ತಾನೆ. ಇಲ್ಲಿಂದ ಶುರು ಆಗುತ್ತೆ ನೋಡಿ, ಹಿಂದಿ ಬೀಜಕ್ಕೆ ನಿರುಣಿಸುವ ಪ್ರಯತ್ನ. ಇದರ ಮುಂದುವರಿದ ಭಾಗವಾಗಿ "ಹಿಂದಿ ಮಾತಾಡಿದವನು ಕೂಲ್ ಮತ್ತು ಕನ್ನಡ ಮಾತಾಡುವವನು ಫೂಲ್" ಎಂಬ ಉದ್ದಟತನದ, ನಿರಾಭಿಮಾನದ ಕೀಳರಿಮೆ ಅವನಲ್ಲಿ ಮೊಳಕೆಯೊಡೆಯುತ್ತದೆ.
ಹಿಂದಿ ಪ್ರಚಾರಕರಿಗೆ ಹಿಂದಿ ಜ್ವರ ವಿಪರಿತವಾಗುವುದು ಸೆ. ೧೫ ರ ಆಸು ಪಾಸಿನ ದಿನಗಳಲ್ಲಿ ಮತ್ತು ಅವಾಗವಾಗ. ಆದರೆ ಈ ಟಿವಿವಾಹಿನಿಗಳು ಮತ್ತು ಅವರ ಕಾರ್ಯಕ್ರಮಗಳು, ಪತ್ರಿಕೆಗಳು, ಕೇಂದ್ರ ಸರಕಾರದ ಸಂಸ್ಥೆಗಳಿಗೆ ೨೪*೭ ಮೈ ಬೆಚ್ಚಗೆ ಇರುತ್ತದೆ, ಯಾವಾಗ ಹಿಂದಿ ಜ್ವರ ಬರುತ್ತದೋ ಗೊತ್ತೆ ಆಗೋದಿಲ್ಲ. ಕನ್ನಡದ ಹೊಲವನ್ನು ಕಾಯಬೇಕಾದ ಬೇಲಿಗಳೂ ಇದರಿಂದ ಹೊರತಾಗಿಲ್ಲ ಎಂಬುದು ವಿಪರ್ಯಾಸವೇ ಸರಿ.

ಈ ನಿಟ್ಟಿನಲ್ಲಿ ಇದರ ಬಗ್ಗೆ ಅವರ ಗಮನ ಸೆಳೆಯುವ ಒಂದು ಪ್ರಯತ್ನ ನಾವ್ಯಾಕೆ ಮಾಡ್ಬಾರದು..?
ಅವರಿಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಲು ಇಲ್ಲಿ ಮಿಂಚಿಸಿ.
kpnetdivision@gmail.com