Friday 30 October 2009

ಬಿಜಾಪುರದ ಜನತೆ ಕಳೆದ ಜನ್ಮದಲ್ಲಿ ಮಾಡಿದ ಪಾಪ......!!!

ಕಳೆದ ತಿಂಗಳು ಬಂದ ಭೀಕರ ನೆರೆ ಪ್ರವಾಹ ಉತ್ತರ ಕರ್ನಾಟಕದ ಜನತೆಯನ್ನು ತೀವ್ರ ಸಂಕಷ್ಟದಲ್ಲಿ ಸಿಲುಕಿಸಿದ ವಿಚಾರ ಎಲ್ಲರಿಗೂ ಗೊತ್ತು. ಅದೇ ರೀತಿ ಕಳೆದ ಎರಡು ವರ್ಷಗಳ ಹಿಂದೆ ಬಂದ ಬರ ಕೂಡ ಮಾಡಿದ ನಷ್ಟ ಅಷ್ಟಿಷ್ಟಲ್ಲ. ವ್ರತ್ತ ಪತ್ರಿಕೆಗಳ ಹಿಂದಿನ ಪುರವಣಿಗಳನ್ನು ಗಮನಿಸಿದಾಗ ಈ ತರಹದ, ಸಾಮಾನ್ಯ ಜನರಲ್ಲಿ ಜೀವನದ ಬಗ್ಗೆ ಜಿಗುಪ್ಸೆ ಮೂಡಿಸುವಂಥ ಅನೇಕ ಘಟನೆಗಳು ಉತ್ತರ ಕರ್ನಾಟಕದ ಭಾಗದಲ್ಲಿ ಅದರಲ್ಲೂ ವಿಶೇಷವಾಗಿ ಬಿಜಾಪುರ ಜಿಲ್ಲೆಯಲ್ಲಿ ನಡೆದು ಹೋಗಿವೆ. ಕನ್ನಡ ನಾಡಿನಲ್ಲಿ ಏನೇ ಪ್ರವಾಹದ ಅಥವಾ ಬರದ ಬಗ್ಗೆ ಸುದ್ದಿ ಬರಲಿ ಅದರಲ್ಲಿ ಖಂಡಿತ ಬಿಜಾಪುರ ಅನ್ನುವ ಜಿಲ್ಲೆಯ ಹೆಸರು ಸೇರಿರಲೇಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿರುವುದು ನಿಜಕ್ಕೂ ನಂಬಲಸಾದ್ಯವಾದರೂ ಬೇರೆ ದಾರಿ ಇಲ್ಲ. ಈ ರೀತಿ ಬಿಜಾಪುರದ ಜನತೆ ವರ್ಷದಿಂದ ವರ್ಷಕ್ಕೆ ಹೆಚ್ಚು ಸಂಕಷ್ಟಕ್ಕೆ ಒಳಗಾಗುತ್ತಿರುವುದನ್ನು ಸಮೀಪದಿಂದ ಬಲ್ಲವರೂ ಯಾರೇ ಆದರೂ ಅವರಿಗೆ, ಬಿಜಾಪುರದ ಜನತೆ ಕಳೆದ ಜನ್ಮದಲ್ಲಿ ಏನಾದರು ಪಾಪ ಮಾಡಿದ್ದಾರೆಯೇ......? ಎಂಬ ಸಂದೇಹ ಖಂಡಿತ ಮೂಡುತ್ತದೆ. ಈಗಾಗಲೇ ಬಿಜಾಪುರ ಜಿಲ್ಲೆಗೆ ಬರದ ಜಿಲ್ಲೆ ಎಂಬ ಹಣೆಪಟ್ಟಿ ನೀಡಿ ಗೌರವಿಸಲಾಗಿದೆ. ಈಗ ನೆರೆ ಕೂಡ ಬಂದಿರುವದರಿಂದ ನೆರೆ ಜಿಲ್ಲೆ ಆಗಿ, ಇದೇ ಪರಿಸ್ಥಿತಿ ಮುಂದುವರೆದರೆ ಮುಂದೊಂದು ದಿನ ಶಾಶ್ವತ ಸಂಕಷ್ಟದ ಜಿಲ್ಲೆ ಎಂದು ಕರೆಯಬೇಕಾಗುತ್ತದೆ. ಇವೆಲ್ಲವುಗಳನ್ನು ಗಮನಿಸಿದಾಗ ಇದಕ್ಕೆ ಕೊನೆಯೆ ಇಲ್ಲವೆ? ಇದನ್ನು ಕೊನೆಗಾಣಿಸುವುದು ಹೇಗೆ? ಎಂಬೆಲ್ಲ ಪ್ರಶ್ನೆಗಳು ಎದುರಾಗುತ್ತವೆ. ಹೇಳಿಕೊಳ್ಳಲು ಬಿಜಾಪುರ ಜಿಲ್ಲೆ ಐದು ನದಿಗಳು ಹರಿಯುವ ಕರ್ನಾಟಕದ ಪಂಜಾಬ. ಆದರೆ ಪಂಜಾಬನಲ್ಲಿ ಕಾಣುವ ಅಭಿವ್ರಧ್ಧಿ, ಫಲವತ್ತಾದ ಭೂಮಿ ಇಲ್ಲಿ ಕಾಣುವುದು ಅಷ್ಟಕ್ಕಷ್ಟೆ.

ಇನ್ನು ಇಂಥಹ ಪರಿಸ್ಥಿತಿಗಳಲ್ಲಿ ನಮ್ಮ ಸರಕಾರಗಳು ತೋರುವ ಔದಾರ್ಯ ಕೂಡ ಹೇಳಿಕೊಳ್ಳುವಂಥದ್ದಲ್ಲ. ಇದಕ್ಕೆ ತಾಜಾ ಉದಾಹರಣೆ ಎಂದರೆ, ಕೇಂದ್ರ ಸರಕಾರ ನಮ್ಮ ರಾಜ್ಯದ ಮೇಲೆ ತೋರಿಸುವ ಮಲತಾಯಿ ಧೋರಣೆ. ಪಕ್ಕದ ಆಂದ್ರಪ್ರದೇಶಕ್ಕಿಂತ ನಮ್ಮ ರಾಜ್ಯದಲ್ಲಿ ಹೆಚ್ಚು ಆಸ್ತಿ-ಪಾಸ್ತಿ ಹಾನಿ, ಹೆಚ್ಚು ಪ್ರಾಣ ಹಾನಿ, ಹೆಚ್ಚು ಜಾನುವಾರುಗಳ ಹಾನಿ ಸಂಭವಿಸಿದ್ದರೂ ಮೊದಲಿನ ತುರ್ತು ಪರಿಹಾರದಲ್ಲಿ ತಾರತಮ್ಯ ಮಾಡಿ ಕರ್ನಾಟಕಕ್ಕೆ ೫೨.೨೬ ಕೋಟಿ, ಆಂದ್ರಕ್ಕೆ ಇದರ ಮೂರು ಪಟ್ಟು ಅಂದರೆ ೧೫೬.೮೪ ಕೋಟಿ ಬಿಡುಗಡೆ ಮಾಡಲಾಯಿತು. ನೆರೆ ಪರಿಸ್ಥಿತಿಯ ಅವಲೋಕನಕ್ಕೆಂದು ಬಂದ ಪ್ರದಾನಮಂತ್ರಿಗಳು, ಯು ಪಿ ಯೆ ಅದ್ಯಕ್ಷರು ಮತ್ತು ಸಚಿವರು ಕರ್ನಾಟಕಕ್ಕೆ ಭೇಟಿ ಕೊಟ್ಟದ್ದು ಮಾತ್ರ ಕೇವಲ ಒಂದು ಜಿಲ್ಲೆಗೆ. ಇದು ಕಾಟಾಚಾರದ ಭೇಟಿ ಅಂಥ ಅನ್ನಿಸಿದರೂ ತಪ್ಪಾಗಲಿಕ್ಕಿಲ್ಲ. ಇನ್ನು ನೆರೆ ಪರಿಹಾರ ಕಾಮಗಾರಿ ವೀಕ್ಷಣೆ ಮಾಡಲು ಬಂದ ಅಧಿಕಾರಿಗಳ ಕೇಂದ್ರ ತಂಡ ಮುಖ್ಯವಾಗಿ ಮತ್ತು ಹೆಚ್ಚು ಸಂಕಷ್ಟಕ್ಕೀಡಾದ ಹಾಗೂ ಪ್ರತಿ ವರ್ಷ ತೊಂದರೆ ಅನುಭವಿಸುವ ಬಿಜಾಪುರ ಜಿಲ್ಲೆಯನ್ನೇ ಕಡೆಗಣಿಸಿದ್ದು ವಿಪರ್ಯಾಸ. ಕೇಂದ್ರ ತಂಡವನ್ನು ತಮ್ಮ ಜಿಲ್ಲೆಗೆ ಕರೆತರುವಲ್ಲಿ ವಿಫಲವಾದ ಬಿಜಾಪುರ ಜಿಲ್ಲೆಯ ಜನಪ್ರತಿನಿದಿಗಳ ಬಗ್ಗೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿರುವ ಜಿಲ್ಲೆಯ ಜನತೆಯ ತಾಳ್ಮೆ ಪ್ರಶಂಸಿಸಲು ಅನರ್ಹ ಎಂದರೆ ತಪ್ಪಾಗಲ್ಲ.

ಕರ್ನಾಟಕದ ಕುಲ ಪುರೋಹಿತ ಆಲೂರು ವೆಂಕಟರಾಯರು, ಬಸವಣ್ಣ ನವರಂಥಹ ಮಹನೀಯರು ಹುಟ್ಟಿದ ಈ ನಾಡಿನ ಇಂದಿನ ಪರಿಸ್ಥಿತಿ ನಿಜಕ್ಕೂ ದುರದ್ರಷ್ಟಕರ. ಇಂದಿನ ಯುವ ಪೀಳಿಗೆ ಇದರ ಬಗ್ಗೆ ಚಿಂತನೆ ಮಾಡಿ, ಒಂದು ಒಗ್ಗಟ್ಟಿನ ಬದಲಾವಣೆಯನ್ನು ತರಬೇಕಾಗಿದೆ.........