Thursday 3 November 2011

ಕರ್ನಾಟಕದಲ್ಲಿ ಬೇಲಿಯೇ ಎದ್ದು ಹೊಲ ಮೈಯುತ್ತಿದೆ ನೋಡ್ರಣ್ಣಾ.!


ನಿಯಮಗಳು ಮಾಡುವುದೇ ಮುರಿಯೋದಕ್ಕೆ ಎಂಬ ಮಾತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಒಪ್ಪುತ್ತದೆಅನೇಕ ಬಾರಿ ಕರ್ನಾಟಕ ಚಲನಚಿತ್ರ ಮಂಡಳಿ ವಿದಿಸಿದ ನಿಯಮಗಳನ್ನು ಪರಬಾಶೆ ಚಿತ್ರಗಳ ವಿತರಕರು ಗಾಳಿಗೆ ತೂರಿರುವುದನ್ನು ನಾವು ಕಾಣಬಹುದು. ಈ ಹಿಂದೆ ಹಿಂದಿಯ ರಾವಣ, ಕೈಟ್ಸ್, ತೆಲುಗಿನ ದೂಕುಡು, ಊಸರವಳ್ಳಿ ಚಿತ್ರ ಬಿಡುಗಡೆ ಸಮಯದಲ್ಲಿ ಈ ನಿಯಮಗಳನ್ನು ಪಾಲಿಸಲಾಗಿಲ್ಲ. ಅದೇ ಪರಿಪಾಠ ಈ ಸಲದ ದೀಪಾವಳಿ ಸಮಯದಲ್ಲೂ ಮುಂದುವರೆದಿದೆ. ಆದರೆ ಈ ಬಾರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೇ ಮುಂದೆ ನಿಂತು, ತಾನು ಸ್ವತ: ಮಾಡಿದ ನಿಯಮಗಳನ್ನು ಹಿಂದಿಯ ರಾ ವನ್, ತಮಿಳಿನ ವೆಲಾಯುದಂ, ೭ ಅಮ್ ಅರಿವು ಚಿತ್ರಗಳ ಮೂಲಕ ಕಸದ ಬುಟ್ಟಿಗೆ ಎಸೆದಿದೆ. ಮಂಡಳಿಯ ಸಲಹಾ ಸಮಿತಿ ಸದಸ್ಯರು ಈ ಮೂರು ಚಿತ್ರಗಳನ್ನು ಕರ್ನಾಟಕದಲ್ಲಿ ನಿಯಮ ಮೀರಿ ಬಿಡುಗಡೆಗೊಳಿಸಲು ಅನುಮತಿ ನೀಡಿದ್ದಾರೆ ಎಂಬ ಸುದ್ದಿ ಇತ್ತೀಚಿಗೆ ಡೆಕ್ಕನ್ ಹೆರಾಲ್ಡಿನಲ್ಲಿ ಪ್ರಕಟವಾಗಿತ್ತು. (The members of the advisory board of the Karnataka Film Chamber of Commerce (KFCC) have consented to the release of Ra. One, Velayudham, and 7 Aum Arivu during Deepavali this week. And because of this no Kannada films are releasing this week.) ಇದು ಆಶ್ಚರ್ಯವಾದರೂ ಸತ್ಯ. ಕನ್ನಡ ಚಿತ್ರರಂಗದ ಏಳಿಗೆಗೆ ಸಲಹೆಗಳನ್ನು ನೀಡಬೇಕಾದ ಮಂಡಳಿಯ ಸಲಹಾ ಸಮಿತಿ ಸದಸ್ಯರು ಪರಬಾಶೆ ಚಿತ್ರಗಳನ್ನು ನಿಯಮ ಮೀರಿ ಬಿಡುಗಡೆ ಮಾಡುವಂತೆ ಸಲಹೆ ಮಾಡಿದ್ದಾರೆ.! ಕನ್ನಡ ಚಿತ್ರಗಳ ಮಾರುಕಟ್ಟೆ ಬೆಳೆಸುವ ಬಗ್ಗೆ ಸಲಹೆ ನೀಡಬೇಕಾದವರಲ್ಲಿ ಕೆಲವರು ಪರಬಾಶೆ ಚಿತ್ರ ವಿತರಣೆ ಹಕ್ಕನ್ನು ಪಡೆದುಕೊಂಡು, ಕನ್ನಡ ಚಿತ್ರಗಳು ಬಿಡುಗಡೆ ಆಗದ ಹಾಗೆ, ಈಗಾಗಲೇ ಬಿಡುಗಡೆ ಆದ ಚಿತ್ರಗಳಿಗೆ ಚಿತ್ರಮಂದಿರ ಸಿಗದ ಹಾಗೆ ಪರಿಸ್ಥಿತಿ ನಿರ್ಮಿಸಿ ಕನ್ನಡ ಚಿತ್ರರಂಗದ ಬಗೆಗಿನ ತಮ್ಮ ಇಚ್ಚಾಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಇದು ಚಲನಚಿತ್ರ ಮಂಡಳಿಯ ಕರ್ಮಕಾಂಡ

ಕಲಾವಿದರ ನಿರ್ಲಕ್ಷತನ:
ದೀಪಾವಳಿ ಸಮಯದಲ್ಲಿ ಬಿಡುಗಡೆಯಾಗುತ್ತಿದ್ದ ಹಿಂದಿಯ ರಾ ವನ್, ತಮಿಳಿನ ವೆಲಾಯುದಂ, ೭ ಅಮ್ ಅರಿವು ಚಿತ್ರಗಳಿಗೆ ಅನುವು ಮಾಡಿಕೊಡಲು ಎಂಬಂತೆ ಆ ಸಮಯದಲ್ಲಿ ಯಾವುದೇ ಕನ್ನಡ ಚಿತ್ರವನ್ನು ಬಿಡುಗಡೆಗೊಳಿಸಲಾಗಿಲ್ಲ. ತನ್ಮೂಲಕ ಪರಬಾಶೆ ಚಿತ್ರಗಳು ನಿಯಮ ಮೀರಿ ಬಿಡುಗಡೆಯಾಗಲು ಪರೋಕ್ಷವಾಗಿ ಬೆಂಬಲ ಸೂಚಿಸಿ, ಅವುಗಳ ಮಾರುಕಟ್ಟೆ ಕರ್ನಾಟಕದಲ್ಲಿ ಇನ್ನಷ್ಟು ವಿಸ್ತರಿಸಲು ಅವಕಾಶ ಕೊಟ್ಟು, ಕನ್ನಡ ಚಿತ್ರಗಳ ಮಾರುಕಟ್ಟೆಯನ್ನು ಇನ್ನಷ್ಟು ಹಾಳುಗೆಡವಲು ಬಿಟ್ಟು ಹಾಯಾಗಿ ಹುಬ್ಬಳ್ಳಿಯಲ್ಲಿ ಕ್ರಿಕೆಟ್ ಆಟದಲ್ಲಿ ನಿರತರಾಗಿದ್ದರು ನಮ್ಮ ಕಲಾವಿದರು. ತಮ್ಮ ತಲೆ ಮೇಲೆ ಚಪ್ಪಡಿ ಕಲ್ಲು ಹಾಕಿಕೊಂಡು, ಸ್ಪರ್ದೆ ನೀಡುತ್ತಿರುವವರ ತಲೆ ಮೇಲೆ ಕಿರೀಟ ತೊಡಿಸುವ ಇವರ ನಡೆ ನಿಜಕ್ಕೂ ಚಿತ್ರರಂಗದ ಏಳಿಗೆಗೆ ಸಂಬಂದಪಟ್ಟಂತೆ ಆತಂಕ ಸೃಷ್ಟಿಸುತ್ತದೆ. ಡಬ್ಬಿಂಗ್ ವಿಚಾರ ಬಂದರೆ ಇದೇ ಚಲನಚಿತ್ರ ಮಂಡಳಿ ಮಾಡಿರುವ ಅಸಂವಿದಾನಿಕ ನಿಯಮವನ್ನು ಮುಂದಿಟ್ಟುಕೊಂಡು ಪ್ರತಿಭಟಿಸಿ, ಅನ್ನದ ಪ್ರಶ್ನೆ ಬಗ್ಗೆ ಮಾತನಾಡುವ ನಮ್ಮ ಕಲಾವಿದರು ಅದೇ ಅನ್ನವನ್ನು ಪರಬಾಶೆ ಚಿತ್ರಗಳು ದಿನದಿಂದ ದಿನಕ್ಕೆ ಕಸಿದುಕೊಳ್ಳುತ್ತಿರುವಾಗ ಅದರ ಬಗ್ಗೆ ಗಮನ ಹರಿಸದೇ ಜಾಣಮೌನ ಪ್ರದರ್ಶಿಸುತ್ತಿದ್ದಾರೆ. ಇದರಿಂದ ಒಂದು ಕಡೆ, ಕನ್ನಡ ಕಲಾವಿದರ ಅನ್ನಕ್ಕೂ ಕುತ್ತು, ಇನ್ನೊಂದು ಕಡೆ ಕನ್ನಡ ಪ್ರೇಕ್ಷಕರಿಗೆ ಇಲ್ಲದ ಕನ್ನಡ ಮನರಂಜನೆ. ಪರಿಣಾಮವಾಗಿ, ಕನ್ನಡ ಚಿತ್ರಗಳ ಗ್ರಾಹಕರು ಪರಬಾಶೆ ಚಿತ್ರಗಳ ಗ್ರಾಹಕರಾಗಿ ಪರಿವರ್ತಿತವಾಗಿ ತರುವಾಯ ಕನ್ನಡ ಮಾರುಕಟ್ಟೆ ಕುಸಿಯುವುದಕ್ಕೆ ಕಾರಣವಾಗುತ್ತಿದೆ. ಕನ್ನಡ ಚಿತ್ರಗಳ ಮಾರುಕಟ್ಟೆ ಬೆಳವಣಿಗೆಗೆ ಕನ್ನಡ ಕಲಾವಿದರಿಂದಲೇ ಹಿನ್ನೆಡೆಯಾಗುತ್ತಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೇ.? 

ಕಾಗಕ್ಕ ಗುಬ್ಬಕ್ಕನ ಕಥೆ:
"ಕನ್ನಡದ ಮಾರುಕಟ್ಟೆ ಸಣ್ಣದು. ಹೀಗಾಗಿ ಬಹುಕೋಟಿ ವೆಚ್ಚದ ಪರಬಾಶೆ ಚಿತ್ರಗಳು ಬಿಡುಗಡೆಯಾಗುತ್ತಿರುವಾಗ ಕನ್ನಡ ಚಿತ್ರಗಳನ್ನು ಬಿಡುಗಡೆಗೊಳಿಸುವುದರಿಂದ ಕನ್ನಡ ಚಿತ್ರಗಳಿಗೆ ಹಿನ್ನಡೆಯಾಗುತ್ತದೆ. ಪರಬಾಶೆಯ ತಾರಾಗಣ ಮತ್ತು ದೊಡ್ಡ ಚಿತ್ರಗಳು ಜನರನ್ನು ಆಕರ್ಷಿಸುತ್ತವೆ. ಹೀಗಾಗಿ ಪ್ರೇಕ್ಷಕ ಅವುಗಳಿಗೆ ಹೆಚ್ಚು ಮಹತ್ವ ಕೊಡುತ್ತಾನೆ." ಹೀಗಂತ ಕಾಗಕ್ಕ ಗುಬ್ಬಕ್ಕನ ಕಥೆ ಹೇಳಿದವರು ಬೇರೆ ಯಾರೂ ಅಲ್ಲ, ಸ್ವತ: ಒಬ್ಬ ಕನ್ನಡ ಚಿತ್ರಗಳ ನಿರ್ಮಾಪಕರು/ವಿತರಕರು. ಕರ್ನಾಟಕದಲ್ಲಿ ಪರಬಾಶೆ ಚಿತ್ರಗಳ ಬಿಡುಗಡೆ ಸಮಯ ನೋಡಿಕೊಂಡು ಕನ್ನಡ ಚಿತ್ರಗಳ ಬಿಡುಗಡೆ ಮಾಡಬೇಕು ಎಂಬಂತಿದೆ ಇವರ ಮಾತುಗಳು. ಪರಬಾಶೆ ಚಿತ್ರಗಳನ್ನು ನಿಯಮ ಮೀರಿ ಬಿಡುಗಡೆ ಮಾಡುತ್ತಿರುವುದರಿಂದ ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗುತ್ತಿಲ್ಲ, ಇದರಿಂದ ಕನ್ನಡ ಚಿತ್ರಗಳಿಗೆ ಮಾರುಕಟ್ಟೆಯಲ್ಲಿ ಹಿನ್ನೆಡೆಯಾಗುತ್ತಿದೆ. ಇದರಿಂದ ಕನ್ನಡ ಚಿತ್ರಗಳ ವಿತರಣೆ ಹಕ್ಕನ್ನು ಪಡೆದುಕೊಂಡವರಿಗೆ, ನಿರ್ಮಾಪಕರಿಗೆ, ಆ ಮೂಲಕ ಕಲಾವಿದರಿಗೆ ನಷ್ಟವಾಗುತ್ತಿದೆ. ಆದ್ದರಿಂದ ಪರಬಾಶೆ ಚಿತ್ರಗಳಿಗಿರುವ ಬಿಡುಗಡೆ ನಿಯಮವನ್ನು ಆಯಾ ಚಿತ್ರಗಳ ವಿತರಕರು ಕಟ್ಟುನಿಟ್ಟಾಗಿ ಲಿಸಬೇಕು. ಪಾಲಿಸದವರ ವಿರುದ್ದ ಕ್ರಮ ಕೈಗೊಳ್ಳಬೇಕು ಅಂತೆಲ್ಲ ಹೇಳಬೇಕಾದವರು, ಆ ಸಮಯದಲ್ಲಿ ಕನ್ನಡ ಚಿತ್ರಗಳನ್ನು ಬಿಡುಗಡೆ ಮಾಡುವುದು ಸರಿಯಲ್ಲ, ನಮ್ಮ ಮಾರುಕಟ್ಟೆ ಸಣ್ಣದು ಹಾಗೆ ಹೀಗೆ ಅಂತ ಸ್ಪರ್ಧೆಯಿಂದ ಹಿಂದೆ ಸರಿಯೊ ಮಾತುಗಳನ್ನು ಕೇಳಿದಾಗ ನಗಬೇಕೋ ಅಳಬೇಕೊ ಎಂಬುದೇ ಗೊತ್ತಾಗುತ್ತಿಲ್ಲ. ಇದು ಪರೋಕ್ಷವಾಗಿ ಆ ಪರಬಾಶೆ ಚಿತ್ರಗಳ ನಿಯಮ ಮೀರಿದ ಬಿಡುಗಡೆಗೆ ಬೆಂಬಲ ಕೊಡುವುದಲ್ಲದೇ ತಮಗೆ ಸ್ಪರ್ಧೆ ಎದುರಿಸುವ ಯೋಗ್ಯತೆ ಇಲ್ಲ, ಅಥವಾ ತಾಕತ್ತಿಲ್ಲ ಎಂದು ಆಡಿದಂತಾಗುತ್ತದೆ.

ಕೊನೆ ಮಾತು: ಪರಬಾಶೆ ಚಿತ್ರಗಳಿಗೆ ಸೆಡ್ಡು ಹೊಡೆದು ಕನ್ನಡ ಚಿತ್ರಗಳು ನಿಲ್ಲಬೇಕೇ ಹೊರತು ಹಚ್ಚ ಹಸಿರಾದ ಬೂಮಿಯನ್ನು ಮೊದಲು ಅವುಗಳಿಗೆ ಮೆಯ್ಯಲು ಬಿಟ್ಟು ಆಮೇಲೆ ನಮ್ಮ ವ್ಯಾಪ್ತಿ ಸಣ್ಣದು ಎಂದು ಅಳುವುದು ಮಾರುಕಟ್ಟೆ ಜಗತ್ತಿನಲ್ಲಿ ಖಂಡಿತ ಒಪ್ಪಲು ಸಾದ್ಯವಿಲ್ಲ. ಇನ್ನು ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಹೆಚ್ಚಿಸುವ ಜವಾಬ್ದಾರಿ ಹೊತ್ತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೇ ಎದ್ದು ಕನ್ನಡ ಚಿತ್ರರಂಗ ಮೈಯುವುದನ್ನು ನೋಡುವಂಥ ದುಸ್ಥಿತಿ ಕನ್ನಡ ಪ್ರೇಕ್ಷಕರಿಗೆ ಮುಂದಿನ ದಿನಗಳಲ್ಲಿ ಬಾರದಿರಲಿ.!