Tuesday 14 September 2010

ವಿಶ್ವಕ್ಕೆ ಮಾದರಿ ನಮ್ಮೀ ವಿಶ್ವೇಶ್ವರಯ್ಯ...!

"If Australia and Canada could have universities of their own for less than a million population, cannot Mysore with a population of not less that 60 lakhs have a University of its own?"
ಹೀಗೆ ದೂರ ದೃಷ್ಟಿ ಬೀರಿದವರು ಭಾರತ ಕಂಡ ಗಣ್ಯ ಇಂಜಿನಿಯರುಗಳಲ್ಲಿ ಅತ್ಯುನ್ನತ ಸ್ಥಾನದಲ್ಲಿ ನಿಲ್ಲುವ ನಮ್ಮ ಭಾರತರತ್ನ ಸರ್ ಎಮ್. ವಿಶ್ವೇಶ್ವರಯ್ಯನವರು. ಇಂದು (೧೫-೦೯-೨೦೧೦) ಅವರ ೧೫೦ ನೇ ಜನ್ಮ ದಿನಾಚರಣೆ. ಅವರು ತಾಂತ್ರಿಕತೆಯಲ್ಲಿ ದೇಶಕ್ಕೆ ನೀಡಿದ ಕೊಡುಗೆ ಅಪಾರ,ಈ ನಿಟ್ಟಿನಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ ೧೫ ರಂದು ಅವರ ಸ್ಮರಣಾರ್ಥವಾಗಿ ದೇಶದಲ್ಲೆಡೆ ENGINEER’S DAY ಯನ್ನಾಗಿ ಆಚರಿಸಲಾಗುತ್ತದೆ.

ಮೈಸೂರು ವಿವಿ, ಹಿಂದೂಸ್ಥಾನ್ ಏರಕ್ರಾಫ್ಟ್ ಫ್ಯಾಕ್ಟರಿ (ಈಗಿನ ಎಚ್.ಎ.ಎಲ್), ಕನ್ನಂಬಾಡಿ ಕಟ್ಟೆ, ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕನ್ನಡ ಸಾಹಿತ್ಯ ಪರಿಷತ್ತು, ಸರಕಾರಿ ಸಾಬೂನು ಕಾರ್ಖಾನೆ, ಶಿವನಸಮುದ್ರ, ಜೋಗ ಜಲವಿದ್ಯುತ್ ಯೋಜನೆ, ಬ್ಲಾಕ್ ಸಿಸ್ಟಮ್ (ನೀರಾವರಿ ಯೋಜನೆ), ಮೈಸೂರು ಸ್ಯಾಂಡಲ್ ಸೋಪ್, ಪ್ರಿಂಟಿಂಗ್ ಪ್ರೆಸ್, ಭಟ್ಕಳ ಬಂದರು, ಶ್ರೀಗಂಧ ಎಣ್ಣೆ ತಯಾರಿಕೆ, ಮೈಸೂರು ಸಕ್ಕರೆ ಕಾರ್ಖಾನೆ, ಬೆಂಗಳೂರು ವಿವಿ ಇಂಜಿನಿಯರ್ ಕಾಲೇಜು, ಜಯಚಾಮರಾಜೇಂದ್ರ ವೃತ್ತಿ ತರಬೇತಿ ಸಂಸ್ಥೆ, ಕಬ್ಬನ್ ಪಾರ್ಕನ ಸೆಂಚೂರಿ ಕ್ಲಬ್, ಹೆಬ್ಬಾಳದ ಕೃಷಿ ಸಂಶೋಧನಾ ಕೇಂದ್ರ, ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯಗಳು, ದೇಶದಲ್ಲಿಯೇ ಮೊಟ್ಟಮೊದಲಿಗೆ ಕಡ್ಡಾಯ ಪ್ರಾಥಮಿಕ ಶಿಕ್ಷಣ ಜಾರಿ, ಕನ್ನಂಬಾಡಿ ಕಟ್ಟೆಗೆ ವಿಶ್ವದಲ್ಲಿಯೇ ಮೊದಲ ಸ್ವಯಂ ಚಾಲಿತ ಗೇಟಗಳ ಅಳವಡಿಕೆ.

ಅಬ್ಬಾ, ಒಂದಾ ಎರಡಾ. ಬಹುಶ: ಜಗತ್ತಿನ ಯಾವುದೇ ದೇಶದಲ್ಲೂ ಯಾವುದೇ ಒಬ್ಬ ವ್ಯಕ್ತಿಯಿಂದಲೂ ಒಂದು ನಿರ್ಧಿಷ್ಟ ಪ್ರದೇಶಕ್ಕೆ ಇಷ್ಟೊಂದು ಅನುಕೂಲವಾದ ಮತ್ತೊಂದು ಉದಾಹರಣೆ ನಮಗೆ ಸಿಗಲಾರದು.

ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದ ಸರ್ ಎಮ್.ವಿ ಅವರು ನಮ್ಮ ಸರಕಾರದ ನಾಯಕರು ಅರವತ್ತು ವರ್ಷ ಮಾಡಲಾಗದ್ದನ್ನು ದಿವಾನರಾಗಿ ಆರೇ ವರ್ಷಗಳಲ್ಲಿ ಮಾಡಿದ್ದಾರೆ. ಇವತ್ತು ಕರ್ನಾಟಕದ ಮುಖ್ಯವಾಗಿ ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಯ ಜನರು ನೆಮ್ಮದಿಯಿಂದಿದ್ದರೆ, ಬೆಂಗಳೂರಿನ ನಿವಾಸಿಗಳಾದ ನಾವು ನೀರು ಕುಡಿಯುತ್ತಿದ್ದರೆ ಅದು ಆ ಮಹಾನುಭಾವನ ದೂರದೃಷ್ಟಿ ಮತ್ತು ಪರಿಶ್ರಮದ ಫಲ. ಅಷ್ಟೇ ಅಲ್ಲದೇ, ಇವತ್ತು ನಮ್ಮ ಬೆಂಗಳೂರು ಐಟಿ, ಬಾಹ್ಯಾಕಾಶ ಸಂಭಂದಿತ ಕ್ಷೇತ್ರಗಳಲ್ಲಿ ಮಿಂಚುತ್ತಿರುವುದಕ್ಕೂ ಸರ್ ಎಮ್.ವಿ ಅವರೇ ಕಾರಣ. ಈ ಭಾಗದ ಜನರ ದೇವರ ಮನೆಯಲ್ಲಿ ಸ್ಥಾನ ಗಿಟ್ಟಿಸಲು ಇವರು ಖಂಡಿತ ಅರ್ಹರು.

ಇದು ಬರೀ ರಾಜ್ಯದ ಕಥೆಯಾದರೆ, ಹೊರರಾಜ್ಯಗಳಲ್ಲೂ ಬಹಳ ಕಡೆ ಇವರ ದೂರದೃಷ್ಟಿಯ ಲಾಭ ಗೋಚರಿಸುತ್ತದೆ. ಇಂಥ ಮಹಾ ಮೇಧಾವಿಯನ್ನು ಪಡೆದ ಭರತಖಂಡ ಅದರಲ್ಲೂ ಕನ್ನಡನಾಡೇ ಧನ್ಯ.

ವಿಶ್ವೇಶ್ವರಯ್ಯನವರ ಕುರಿತ ಇನ್ನಷ್ಟು ಮಾಹಿತಿಗಳನ್ನು ಕೆಳಗಿನ ಕೊಂಡಿಗಳಲ್ಲಿ ನೋಡಿ....
> ಮೋಕ್ಷಗುಂಡಂ ವಿಶ್ವೇಶ್ವರಯ್ಯ
> Sir M Visvesvaraya
> One of the makers of modern India