Tuesday 30 October 2012

ಗ್ರಾಹಕ ಚಳುವಳಿಯೇ ಕನ್ನಡ ಉಳಿಸಿ ಬೆಳೆಸುವ ಚಳುವಳಿಯಾಗಬಲ್ಲದು.!

ನವಂಬರ್ ಮತ್ತೆ ಬಂದಿದೆ. ಕನ್ನಡ ಕನ್ನಡಿಗ ಕರ್ನಾಟಕ ನಡೆದು ಬಂದ ದಾರಿಯನ್ನು ಮೆಲುಕು ಹಾಕುವ ಅವಕಾಶ ಕಲ್ಪಿಸಿದೆ . ಇತಿಹಾಸದಲ್ಲಿ ಜಗತ್ತನ್ನೇ ಗೆದ್ದವರು ನಾವು ಕನ್ನಡಿಗರು ಎಂಬ ಹಿರಿಮೆ ಒಂದು ಕಡೆಯಾದರೆ ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಸಾಗುತಿದೆ ನಾಡು ಎಂಬ ವಾಸ್ತವದ ಆತಂಕ ಮತ್ತೊಂದು ಕಡೆಯಾದರೆ, ಬಹುದಿನಗಳಿಂದ ಮೈಮರೆವೆಯಿಂದ ಕೂಡಿರುವ ಕೊಳೆಯ ಕೊಚ್ಚಲು, ಚೆಲುವ ಕನ್ನಡನಾಡನ್ನು ಉದಯಿಸಲು ಬವಿಶ್ಯದಲ್ಲಿ ಕೈಗೊಳ್ಳಬೇಕಾದ ಕನ್ನಡ ಚಳುವಳಿಯ ಚಿಂತನೆ  ಮಗದೊಂದು ಕಡೆ ಕನ್ನಡ ರಾಜ್ಯೋತ್ಸವದ ಸಂದರ್ಬದಲ್ಲಿ ಆವರಿಸಿದೆ. ಯಾವ ಚಳುವಳಿಯಲ್ಲಿ ಏಳಿಗೆಯ ಆಶಬಾವನೆ ಗೋಚರಿಸುತ್ತದೆ ಎಂಬ ಪ್ರಶ್ನೆ ಎದುರಿಗಿದೆ. 


ಕನ್ನಡ ಗ್ರಾಹಕ ಕೇಂದ್ರಿತ ಚಳುವಳಿ ಯಾಕೆ ಬೇಕಿದೆ.!
ಸಂದರ್ಬದಲ್ಲಿ ಖರೆಗೂ ಆಗಬೇಕಿರುವ ಕನ್ನಡ ಚಳುವಳಿ ಯಾವುದು.? ಯಾವ ಚಳುವಳಿ ಕನ್ನಡವನ್ನು ಸಾಮಾಜಿಕವಾಗಿ ಸದ್ರುಡಗೊಳಿಸಬಹುದು.? ಯಾವ ಚಳುವಳಿ ಮೂಲಕ ಕರ್ನಾಟಕದಲ್ಲಿ ಕನ್ನಡವೇ ಸಾರ್ವಬೌಮ ನುಡಿ ಆಗಬಲ್ಲದು ಎಂಬುದಕ್ಕೆ ನಮಗೆ ಕಾಣುವುದು ಒಂದೇ. ಅದೇ ಗ್ರಾಹಕ ಚಳುವಳಿ. ಅದೊಂದು ಕಾಲವಿತ್ತು. ಸಾರ್ವಜನಿಕರು ಬಳಸುವಂಥ ಬಹುತೇಕ ಸೇವೆಗಳು ಸರಕಾರದ ಅದೀನಕ್ಕೊಳಪಟ್ಟಿದ್ದವು. ಸರಕಾರ ರೂಪಿಸುವಂಥ ನೀತಿ ನಿಯಮಗಳ ಚೌಕಟ್ಟಿನಲ್ಲೇ ಬಳಕೆದಾರರು ತಮ್ಮ ಅನುಕೂಲತೆಗಳನ್ನು ಕಂಡುಕೊಳ್ಳಬೇಕಿತ್ತು. ಗ್ರಾಹಕ ಕೇಂದ್ರಿತ ವ್ಯವಸ್ಥೆಗೆ ಅಶ್ಟೊಂದು ಮನ್ನಣೆ ಇರಲಿಲ್ಲ. ಸರಕಾರ ಕೇಂದ್ರಿತ ವ್ಯವಸ್ಥೆ ಅಲ್ಲಿ ನಿರ್ಮಾಣವಾಗಿತ್ತು. ಕಾಲ ಮುಂದುವರೆದಂತೆ, ಜಗತ್ತು ಕಾಸಗೀಕರಣ, ಉದಾರೀಕರಣಕ್ಕೆ ತೆರೆದುಕೊಳ್ಳಲಾರಂಬಿಸಿತು. ಇದಕ್ಕೆ ಪೂರಕವೆಂಬಂತೆ ಬಾರತ ಕೂಡ ೧೯೯೧ ರಲ್ಲಿ ತನ್ನ ಆರ್ಥಿಕ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಮಾಡಿಕೊಂಡಿತು. ಮಾರುಕಟ್ಟೆ ಕೇಂದ್ರಿತ ಮುಕ್ತ ಆರ್ಥಿಕ ವ್ಯವಸ್ಥೆಯನ್ನು ಅಂದು ಬಾರತ ಅಳವಡಿಸಿಕೊಂಡಿತು. ಉದಾರೀಕರಣ, ಕಾಸಗೀಕರಣ, ಜಾಗತೀಕರಣ ಎಂಬ ಮಂತ್ರವನ್ನು ಪಟಿಸತೊಡಗಿತು. ಮಾರುಕಟ್ಟೆ ಕೇಂದ್ರಿತ ವ್ಯವಸ್ಥೆಯಲ್ಲಿ ಮುಕ್ಯವಾಗಿ ಕಾಣುವುದು ಗ್ರಾಹಕ. ಮಾರುಕಟ್ಟೆ ಕೇಂದ್ರಿತ ವ್ಯವಸ್ಥೆಯನ್ನು ಗ್ರಾಹಕ ಕೇಂದ್ರಿತ ವ್ಯವಸ್ಥೆ ಎಂದರೆ ತಪ್ಪಲ್ಲ. ವ್ಯವಸ್ಥೆಯಲ್ಲಿ ಗ್ರಾಹಕನೇ ಸಾರ್ವಬೌಮ. ಗ್ರಾಹಕನ ಅನುಕೂಲಗಳೇ ಉದ್ಯಮಗಳಿಗೆ ನೀತಿ ನಿಯಮಗಳಾದವು. ಗ್ರಾಹಕನ ಒಕ್ಕೊರಲ ಆಗ್ರಹವೇ ಉದ್ಯಮಕ್ಕೆ ನೀಡುವ ನಿರ್ದೇಶನದಂತಾಯಿತು. ಈಗಿನ ಜಾಗತೀಕರಣ, ಕಾಸಗೀಕರಣ, ಉದಾರೀಕರಣದ ವ್ಯವಸ್ಥೆಯಲ್ಲಿ ಮುಂದೆಯೂ ದಿನಕಳೆದಂತೆ ಅನೇಕ ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿದೆ. ಸಾರ್ವಜನಿಕ ಕ್ಶೇತ್ರದ ಹೆಚ್ಚಿನ ಸೇವೆಗಳು ಗ್ರಾಹಕ ಕೇಂದ್ರಿತ ಮುಕ್ತ ಮಾರುಕಟ್ಟೆಗೆ ತೆರೆದುಕೊಳ್ಳಲಿವೆ. ಪ್ರಕ್ರಿಯೆಗೆ ಈಗಾಗಲೇ ೧೯೯೧ ರಿಂದಲೇ ಚಾಲನೆ ಸಿಕ್ಕಿದೆ. ಗ್ರಾಹಕನ ಆಗ್ರಹಕ್ಕೆ ಬೆಲೆ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ. ಕನ್ನಡ ವಾತಾವರಣದ ಪರಿಕಲ್ಪನೆಗೂ ಗ್ರಾಹಕ ಚಳುವಳಿಯೇ ದಾರಿ ದೀಪವಾಗಿದೆ. ಇಂಥ ಗ್ರಾಹಕ ಚಳುವಳಿಯೇ ಕನ್ನಡವನ್ನು ಶೈಕ್ಶಣಿಕವಾಗಿ, ಸಾಮಾಜಿಕವಾಗಿ ಹಾಗೂ ಕನ್ನಡಿಗರನ್ನು ಆರ್ಥಿಕವಾಗಿ ಸದ್ರುಡಗೊಳಿಸಬಹುದಾಗಿದೆ. ಏಕೀಕರಣದ ಚಳುವಳಿ, ಗೋಕಾಕ ಚಳುವಳಿಗಳನ್ನು ಕಂಡ ನಾಡಿಗೆ ಕನ್ನಡ ಗ್ರಾಹಕ ಚಳುವಳಿಯ ಅಗತ್ಯ ಬಹಳಶ್ಟಿದೆ. ಈಗೀನ ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಗ್ರಾಹಕ ಚಳುವಳಿಯೇ ಕನ್ನಡಕ್ಕೆ ಬೇಕಾದ ಬದಲಾವಣೆಗಳನ್ನು ತರಬಲ್ಲದಾಗಿದೆ.

ಕನ್ನಡ ಗ್ರಾಹಕ ತಂದ ಬದಲಾವಣೆ.
ಬರುವ ದಿನಗಳಲ್ಲಿ ಗ್ರಾಹಕ ಚಳುವಳಿಯೇ ಕರ್ನಾಟಕದಲ್ಲಿ ಕನ್ನಡಕ್ಕೆ ಸಾರ್ವಬೌಮ ಸ್ಥಾನ ಕಲ್ಪಿಸಿಕೊಡಬಲ್ಲದು ಎಂಬುದಕ್ಕೆ ೨೦೦೬ ರಿಂದಿಚಿಗೆ ಆದ ಪ್ರಮುಕ ಬದಲಾವಣೆಗಳೇ ಉದಾಹರಣೆಗಳಾಗಿವೆ. ನಮ್ಮ ಮೆಟ್ರೊ: ೨೦೦೬ ರಲ್ಲಿ ಶುರು ಆಗಿದ್ದ ನಮ್ಮ ಮೆಟ್ರೊ ಅಸಲಿಗೆ ನಮ್ಮದಾಗಿರಲೇ ಇಲ್ಲ. ಕೇಂದ್ರ ಸರಕಾರ ತುಸು ಹಣ ಕೊಟ್ಟಿದೆ ಎಂಬ ಕಾರಣಕ್ಕೆ ಇಡೀ ಯೋಜನೆ ಹಿಂದಿಮಯವಾಗಿತ್ತು. ಕನ್ನಡದಲ್ಲಿ ಮಾಹಿತಿ, ಸೇವೆ ಇಲ್ಲದಂತಾಗಿತ್ತು. ನಮ್ಮ ಮೆಟ್ರೊ ಅನ್ನೋದು ಕಿವಿ ಮೇಲಿನ ಹೂವಿನಂತಿತ್ತು. ಇವತ್ತಿನ ಮೆಟ್ರೊ ವ್ಯವಸ್ಥೆಯಲ್ಲಿ ತಕ್ಕ ಮಟ್ಟಿಗೆ ಸುದಾರಣೆ ಕಂಡು ಬಂದಿದ್ದು, ಕನ್ನಡಕ್ಕೆ ಪ್ರಮುಕ ಸ್ಥಾನ ಸಿಕ್ಕಿದ್ದರೆ ಅದಕ್ಕೆ ಕಾರಣವಾಗಿದ್ದು ಕನ್ನಡ ಗ್ರಾಹಕರ ನಿರಂತರ ಒತ್ತಾಯ. ಇನ್ನು, ಬೆಂಗಳೂರು ಅಂತರಾಶ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡವನ್ನು ಮರೆಮಾಚುವುದೇ ಅಂತರಾಶ್ಟ್ರೀಯತೆ ಎಂಬಂತಿತ್ತು ಅಲ್ಲಿನ ವಾತಾವರಣ. ಇಂತಹ ವಾತಾವರಣದಲ್ಲಿ ಕನ್ನಡ ಬಳಕೆ ಮೌಲ್ಯ ಪಡೆದುಕೊಳ್ಳಲು ಕಾರಣವಾಗಿದ್ದು ಇದೇ ಕನ್ನಡ ಗ್ರಾಹಕರ ಆಗ್ರಹ, ಇನ್ನು, ನಮ್ಮ ಬ್ಯಾಂಕಿಂಗ್ ವ್ಯವಸ್ಥೆ. ಸ್ಥಳೀಯ ಬಾಶೆಯಲ್ಲಿ ಸೇವೆ ನೀಡಲೇಬೇಕು ಎಂದು ಆರ್.ಬಿ. ನಿಯಮವಿದ್ದರೂ ಅದನ್ನು ಗಾಳಿಗೆ ತೂರಿ ಹಿಂದಿ ಇಂಗ್ಲೀಶ್ ಬಾರದವರು ಬ್ಯಾಂಕಿನಲ್ಲಿ ವ್ಯವಹರಿಸಲು ಅನರ್ಹರು ಎಂಬಂತೇ ಅನೇಕ ಬ್ಯಾಂಕುಗಳು ವ್ಯವಸ್ಥೆಯನ್ನು ಕಟ್ಟಿಕೊಂಡಿದ್ದವು, ಈಗಲೂ ಅದನ್ನು ಅನೇಕ ಕಡೆಗಳಲ್ಲಿ ಕಾಣಬಹುದಾಗಿದೆ. ಹೀಗೆ, ಸ್ಥಳೀಯರಿಗೆ ಅನುಕೂಲವಲ್ಲದಂತಿದ್ದ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ ಕಂಡಿದ್ದು, ಹೆಚ್ಚಿನ ಕಡೆಗಳಲ್ಲಿ ಕನ್ನಡದಲ್ಲಿ ಎಲ್ಲ ಬಗೆಯ ಸೇವೆ, ಮಾಹಿತಿಗಳು ಸಿಗುತ್ತಿವೆ. ಕನ್ನಡದಲ್ಲಿ ಸೇವೆ ಪಡೆದುಕೊಳ್ಳಲು ಆರ್.ಬಿ.ಐ ನಿಯಮವೂ ಸಹಾಯಕ್ಕೆ ಬರಲಿಲ್ಲ. ಅಲ್ಲೂ ಕನ್ನಡದ ಕೈ ಹಿಡಿದಿದ್ದು ಗ್ರಾಹಕನ ಆಗ್ರಹವೇ. ಕಳೆದ ನಾಲ್ಕೈದು ವರ್ಶಗಳಲ್ಲಿ ಥರದ ಸುಮಾರು ಬದಲಾವಣೆಗಳನ್ನು ಕಾಣಬಹುದಾಗಿದೆ. ಎಲ್ಲದಕ್ಕೂ ವೇದಿಕೆ ಕಲ್ಪಿಸಿಕೊಟ್ಟಿದ್ದು ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿಯೇ ಹೊರತು ಸರಕಾರದ ನೀತಿ ನಿಯಮಗಳಲ್ಲ


ಗ್ರಾಹಕನಿಂದ ಗ್ರಾಹಕನಿಗಾಗಿ ಗ್ರಾಹಕನಿಗೋಸ್ಕರ ಬದಲಾವಣೆ.!
ಗ್ರಾಹಕನ ಶಕ್ತಿ ಅಪಾರವಾದದ್ದು. ಒಬ್ಬ ಗ್ರಾಹಕನಿಂದಲೂ ಬದಲಾವಣೆ ಕಂಡ ಅನೇಕ ಉದಾಹರಣೆಗಳಿವೆ. ಗ್ರಾಹಕ ವ್ಯವಸ್ಥೆಯಲ್ಲಾದ ಕೆಲವು ಬದಲಾವಣೆಯಿಂದ ಆದ ಲಾಬಗಳನ್ನು ಹೀಗೆ ವಿವರಿಸಬಹುದಾಗಿದೆ. ಸಾರ್ವಜನಿಕರಿಗೆ ಕನ್ನಡದಲ್ಲಿ ಸೇವೆ ಲಬ್ಯವಾಯಿತು, ನಮ್ಮ ಮೇಲಾಗುತ್ತಿದ್ದ ಹಿಂದಿ ಹೇರಿಕೆಗೆ ಕ್ಷೇತ್ರದಲ್ಲಿ ತಕ್ಕ ಮಟ್ಟಿಗೆ ಕಡಿವಾಣ ಹಾಕಿದಂತಾಯಿತು, ಗ್ರಾಹಕ ವ್ಯವಸ್ಥೆಯಲ್ಲಿ ಕನ್ನಡಕ್ಕೆ ಬಳಕೆ ಮೌಲ್ಯ ತಂದುಕೊಟ್ಟಂತಾಯಿತು, ಸಾಮಾಜಿಕವಾಗಿ ಕನ್ನಡಕ್ಕೆ ಸಾರ್ವಬೌಮ ಬಾಶೆ ಸ್ಥಾನ ಕಲ್ಪಿಸಿಕೊಟ್ಟಂತಾಯಿತು. ಜನರ ಬಳಕೆಯಲ್ಲಿ ಯಾವ ನುಡಿ ಇರುವುದಿಲ್ಲವೋ ನುಡಿ ಕ್ರಮೇಣ ಅಳಿವಿನ ಹಾದಿ ಹಿಡಿಯುತ್ತದೆ ಎಂಬುದು ಜಗತ್ತು ಕಂಡುಕೊಂಡ ಸತ್ಯವಾಗಿದೆ. ಕರ್ನಾಟಕದ ವಿಶಯದಲ್ಲಿ ಜನರು ಎಂದರೆ ನಾವು ಕನ್ನಡಿಗರು. ನುಡಿ ಎಂದರೆ ಕನ್ನಡ. ಶಿಕ್ಶಣ, ಸಾಹಿತ್ಯ, ಸಂಗೀತ ಹೀಗೆ ಎಲ್ಲ ರೀತಿಯ ಬಳಕೆಗೂ ಅರ್ಹವಾಗಿರುವ ನುಡಿ ಕನ್ನಡ. ಅರ್ಹತೆಯನ್ನು ನಮ್ಮ ಏಳಿಗೆಗೆ ಅನುಕೂಲವಾಗುವಂತೆ ಬಳಕೆ ಮಾಡಿಕೊಳ್ಳಬೇಕಿದೆ. ಕನ್ನಡವನ್ನು ಉಳಿಸುವ ಯೋಚನೆಗಿಂತ, ಕನ್ನಡದಿಂದ ನಾವು ಕನ್ನಡಿಗರು ಹೇಗೆ ಬೆಳೆಯಬೇಕು, ನಮ್ಮ ಬಳಕೆಗೆ ಯೋಗ್ಯವಾಗುವಂತೆ ಹೇಗೆ ಕನ್ನಡವನ್ನು ಕಟ್ಟಬೇಕು ಎಂಬ ಯೋಚನೆಗಳನ್ನು ಮಾಡಬೇಕಿದೆ. ಮುಕ್ತ ಮಾರುಕಟ್ಟೆಯ ವ್ಯವಸ್ಥೆಯಲ್ಲಿ ಕನ್ನಡ ಗ್ರಾಹಕ ಸೇವೆಯಂತಹ ಚಳುವಳಿಯ ಮೂಲಕ ಎಲ್ಲವೂ ಕನ್ನಡದಲ್ಲಿ ಸಾದಿಸಿಕೊಳ್ಳಬೇಕಿದೆ. ನಾವು ಕನ್ನಡಿಗರು ಶೈಕ್ಶಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಏಳಿಗೆ ಹೊಂದಲು ಗ್ರಾಹಕ ವ್ಯವಸ್ಥೆಯಲ್ಲಿ ಕಂಡುಕೊಳ್ಳುವ ಬದಲಾವಣೆಗಳು ಸಹಕಾರಿಯಾಗಬಲ್ಲದಾಗಿದೆ.