Sunday 31 January 2010

ನಾನು ಕಂಡ ಒಂದು ದಿನದ ಚೆನ್ನೈ..................


ನಾನು ಕೆಲವು ದಿನಗಳ ಹಿಂದೆ ಒಂದು ದಿನದ ಕೆಲಸದ ಮೇಲೆ ಮೊದಲ ಬಾರಿಗೆ ಚೆನ್ನೈಗೆ ಹೋಗಿದ್ದೆ. ಅಲ್ಲಿ ನನ್ನ ಗಮನಕ್ಕೆ ಬಂದ ಕೆಲವು ಸಂಗತಿಗಳನ್ನು ಹೇಳಲು ಇಚ್ಛಿಸುತ್ತೇನೆ. ಅಲ್ಲಿನ ಕೆಟ್ಟ ಸಂಗತಿಗಳನ್ನು ಬಿಟ್ಟು ಒಳ್ಳೆಯ ಮತ್ತು ನಾವು ಗಮನಿಸಬಹುದಾದ ಸಂಗತಿಗಳನ್ನು ಮಾತ್ರ ಮಾತನಾಡುವುದು ಉಚಿತ. ಬೆಳಿಗ್ಗೆ ನಿಲ್ದಾಣದಲ್ಲಿ ಇಳಿದು ಅಥಿತಿ ಗೃಹದ ಕಡೆಯಲ್ಲಿ ಆಟೊದಲ್ಲಿ ಹೋಗುತ್ತಿದ್ದಾಗ, ಕೆಲವು ದಿನಗಳಿಂದ ಮಹಾರಾಷ್ಟ್ರದಲ್ಲಿ ಎದ್ದಿರುವ ಆಟೊ ಚಾಲಕರ ಬಾಷಾ ವಿಚಾರದ ಆದೇಶದ ನೆನಪಾಯಿತು. ತಮಿಳನಾಡಿನಲ್ಲಿ ಈ ತರಹದ ಆದೇಶ ಜಾರಿಗೊಳಿಸುವುದೇ ಬೇಡ. ಅದು ತನ್ನಿಂದ ತಾನಾಗಿಯೆ ಜಾರಿಯಾಗಿದ್ದು ಕಂಡು ಬಂತು. ಅಲ್ಲಿರುವ ಆಟೊ ಚಾಲಕ ಅಲ್ಲಿನ ಪ್ರಾದೇಶಿಕ ಭಾಷೆಯಲ್ಲಿ ಮಾತನಾಡದಿದ್ದರೆ, ಅದರಿಂದ ತೊಂದರೆ ಅನುಭವಿಸುವುದು ಗ್ರಾಹಕನಲ್ಲ, ಸ್ವತಃ ಆಟೊ ಚಾಲಕನೆ. ಇದು ಅಲ್ಲಿನ ಪರಿಸ್ಥಿತಿ. ನಮ್ಮ ಹಿಂದಿ ಮಾತಿಗೆ ಆಟೊದವನು ತಮಿಳಿನಲ್ಲಿ ಉತ್ತರ ನೀಡಿದ್ದು ನೋಡಿ ಅದು ಗೋಚರವಾಗಿತ್ತು. ಮುಂದೆ ಅಥಿತಿ ಗೃಹಕ್ಕೆ ಹೋಗಿ ನಮ್ಮ ಕೋಣೆಯಲ್ಲಿದ್ದ ಟಿವಿಯ ಒಳಹೊಕ್ಕು ನೋಡಿದರೆ ಅದರಲ್ಲಿ ಕೇವಲ ಒಂದು ಕನ್ನಡ ಚಾನಲ್, ಎರಡು ತೆಲುಗು, ಎರಡು ಹಿಂದಿ ಚಾನಲಗಳನ್ನು ಬಿಟ್ಟರೆ ಉಳಿದೆಲ್ಲವು ತಮಿಳ ಚಾನಲಗಳೆ. ಬೆಂಗಳೂರಿನಲ್ಲಿ ಕನಿಷ್ಟ ಮೂರ್ನಾಲ್ಕು ತಮಿಳು, ಮೂರ್ನಾಲ್ಕು ತೆಲುಗು ಚಾನಲಗಳನ್ನು ನಾವು ನೋಡಬಹುದು. ಮುಂದೆ ನಮ್ಮ ಕೆಲಸಕ್ಕೆ ಹೋಗಲು ಬಸ್ ಹತ್ತಿದಾಗ ಅಲ್ಲಿ ಚಾಲಕನ ಪಕ್ಕದಲ್ಲಿ ಅಂಟಿಸಿದ್ದ ತಿರುವಳ್ಳವರ್ ಫೋಟೊ ಮತ್ತು ಕೆಲವು ಅಕ್ಷರದ ಸಾಲುಗಳು ನಮ್ಮ ಗಮನ ಸೆಳೆದವು. ನಮ್ಮಲ್ಲಿ ರಾಜಕುಮಾರ್, ಶಂಕರನಾಗ್ ಫೋಟೊ ಹಾಕೋ ಥರ ಈ ಬಸ್ಸಿನವರು ಹಾಕಿರಬಹುದು ಎಂದು ನಂಬಿದ್ದ ನನಗೆ ಆಶ್ಚರ್ಯ ಕಾದಿತ್ತು, ಪ್ರತಿಯೊಂದು ನಗರ ಸಾರಿಗೆ ಬಸ್ ನಲ್ಲಿಯೂ ಇದು ಇರುವುದನ್ನು ಕಂಡು, ನಮ್ಮ ಸರಕಾರ ಮತ್ತು ನಾವು, ನಮ್ಮ ಸರ್ವಜ್ನರನ್ನು, ಬಸವಣ್ಣನವರನ್ನು ಎಷ್ಟು ಗೌರವಿಸುತ್ತಿದ್ದೇವೆ ಎಂಬ ಅನುಮಾನವಾಯಿತು.
ಹೀಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ ’ಯುನಿನಾರ್’ ಮಹಾಶಯರ ಜಾಹಿರಾತು ಫಲಕಗಳು ನಮ್ಮ ಕಣ್ಣು ಕುಕ್ಕಿದವು. ಬೆಂಗಳೂರಿನಲ್ಲಿ ಜಾಹಿರಾತು ಫಲಕಗಳ ಮೇಲೆ, ನಮ್ಮ ಬಿ ಎಂ ಟಿ ಸಿ ಬಸ್ ಗಳ ಮೇಲೆ, ಹೀಗೆ ಎಲ್ಲೆಂದರಲ್ಲಿ "ಅಬ್ ಮೇರಾ ನಂಬರ್ ಹೈ" "ಅಬ್ ಮೇರಾ ನಂಬರ್ ಹೈ" ಎಂದು ಹಿಂದಿಯಲ್ಲಿ ಬೊಬ್ಬೆ ಹೊಡೆಯುವ ಇವರು ಚೈನ್ನೈನಲ್ಲಿ ಒಂದೇ ಒಂದು ಹಿಂದಿ ಜಾಹಿರಾತು ಹಾಕಿರುವುದನ್ನು ಹುಡುಕಿ ಹುಡುಕಿ ನನ್ನ ಕಣ್ಣುಗಳು ಸುಸ್ತಾದವು. ಚೆನ್ನೈನಲ್ಲಿಯು ತಮಿಳೇತರ ’ತಾಯಿನುಡಿ’ ಇರುವವರ ಸಂಖ್ಯೆ ಏನು ಕಮ್ಮಿ ಇಲ್ಲ. ಆದರೆ ವಿಪರ್ಯಾಸವೆಂದರೆ ಬಹುತೇಕ ಕಂಪನಿಗಳಿಗೆ ಚೈನ್ನೈನಲ್ಲಿದ್ದಾಗ ನೆನಪಾಗದ ’ವಲಸೆಗಾರರು’ ಬೆಂಗಳೂರಿಗೆ ಬಂದ ಮೇಲೆ ಧಿಡೀರನೆ ನೆನಪಾಗಿ ಅವರ ಮೇಲೆ ಮೋಹ (ಪ್ರೀತಿ ಅಲ್ಲ) ಉಕ್ಕಿ ಹರಿಯುತ್ತದೆ. ಬೆಂಗಳೂರಿನಲ್ಲಿ ನೆನಪಾಗದ ಸ್ಥಳಿಯರು ಚೈನ್ನೈಗೆ ಹೋದ ಮೇಲೆ ತಂತಾನೆ ತನ್ನಂತಾನೆ ನೆನಪಾಗುತ್ತಾರೆ. ಬಸ್ ನಲ್ಲಿ ಇನ್ನೊಂದು ಅಪರೂಪದ ದೃಶ್ಯ ಕಂಡು ಒಂದೆಡೆ ಆಶ್ಚರ್ಯ ಇನ್ನೊಂದೆಡೆ ಅಸುಯೆ ಮೂಡಿತು. ನಮ್ಮ ಹಿಂದಿನ ಸಾಲಿನಲ್ಲಿ ಕುಳಿತಿದ್ದ ಇಬ್ಬರು ಮುಸ್ಲಿಮರು ಅಚ್ಚ ತಮಿಳಿನಲ್ಲಿ ಮಾತನಾಡುತ್ತಿದ್ದರು. ಅಲ್ಲಿರುವ ಎಷ್ಟೊ ಮುಸ್ಲಿಮರಿಗೆ ಹಿಂದಿ ಸ್ಪಷ್ಟವಾಗಿ ಮಾತನಾಡಲು ಬರುವುದಿಲ್ಲ ಎಂದು ಯಾರೋ ಹೇಳಿದಾಗ, ಅಲ್ಲಿನ ಭಾಷೆಯ ಆಳ ಕಾಣಿಸಿದಂತಾಯ್ತು. ಹೀಗೆ ಪ್ರತಿಯೊಂದು ಹೆಜ್ಜೆ ಹೆಜ್ಜೆಯಲ್ಲಿಯೂ, "ಇಲ್ಲಿ ಬಾಳಬೇಕಾದರೆ ತಮಿಳನ್ನು ಕಲಿಯಲೇಬೇಕು" ಎಂಬ ಸಂದೇಶ ನನ್ನ ಮನಸ್ಸಿನಿಂದ ಹೊರಹೊಮ್ಮುತ್ತಿತ್ತು. ಬಹುಶಃ ಇದೇ ಕಾರಣದಿಂದ ಅಲ್ಲಿ ವಲಸೆಗಾರರ ಸಂಖ್ಯೆ ಅಷ್ಟೊಂದಿಲ್ಲ. ವಲಸೆಗಾರರಿದ್ದರೂ ಅದು ದೊಡ್ಡ ಸಮಸ್ಯೆಯಾಗಿಲ್ಲ. ಹೊರಗಿನಿಂದ ಬಂದವರು ಹೊರಗಿನವರಾಗಿ ಬಹಳ ದಿನ ಅಲ್ಲಿ ನೆಲೆಸಲು ಸಾದ್ಯವಿಲ್ಲ. ಅವರು ಅಲ್ಲಿನ ಮುಖ್ಯವಾಹಿನಿಗೆ ಬೆರೆಯಲೇಬೇಕಾಗುತ್ತದೆ. "ತಮಿಳುನಾಡಿಗೆ ಬಂದ ವಲಸಿಗರಿಗೆ ತಮ್ಮ ಭಾಷೆಯನ್ನು ಕಲಿಯುವ ಹಾಗೆ ಮಾಡಿ, ತಮ್ಮ ಸಂಪ್ರದಾಯಕ್ಕೆ ಹೊಂದಿಕೊಳ್ಳುವ ಹಾಗೆ ಮಾಡಿ, ಅವರನ್ನೂ ತಮಿಳುನಾಡಿನವರನ್ನಾಗಿ ಮಾಡುವ ತಮಿಳರು, ತಾವು ಬೇರೆ ಕಡೆಗೆ ವಲಸಿಗರಾಗಿ ಹೋದಾಗ ಆ ನಿಯಮವನ್ನು ಪಾಲಿಸಬೇಕು, ಅಲ್ಲಿನವರಾಗಿ ತಾವೂ ಬಾಳಬೇಕು ಎಂಬ ಮನೋಭಾವನೆಯನ್ನು, ಸೌಜನ್ಯವನ್ನು, ಕರ್ತವ್ಯವನ್ನು ಬೆಳೆಸಿಕೊಳ್ಳದೇ ಇರುವುದು ಮಾತ್ರ ಎಲ್ಲರೂ ಒಕ್ಕೊರಲಿನಿಂದ ಖಂಡಿಸುವಂಥದ್ದು". ಇನ್ನು ನಗರದ ಬಗ್ಗೆ ಹೇಳಬೇಕೆಂದರೆ, ವಾತಾವರಣ, ಸ್ವಚ್ಛತೆ, ನಗರಾಭಿವೃಧ್ಧಿ ಮತ್ತು ಮೂಲಸೌಕರ್ಯಗಳ ವಿಷಯದಲ್ಲಿ ನಮ್ಮ ಬೆಂಗಳೂರಿಗೆ ಚೆನ್ನೈ ಇನ್ನೂ ಸರಿಸಾಟಿಯಾಗಿಲ್ಲ ಎಂದೆನಿಸಿತು. ಬರೋವಾಗ ಚೈನ್ನೈನಲ್ಲಿರೋ ನಮ್ಮ ಕೆ.ಎಸ್.ಆರ್.ಟಿ.ಸಿ ಕಚೇರಿಯ ಫಲಕದಲ್ಲಿ ಕನ್ನಡವಿಲ್ಲದೇ ಇರುವುದನ್ನು ಕಂಡು ಬೇಜಾರಾಯಿತು. (ಬೆಂಗಳೂರಿನಲ್ಲಿರುವ ತಮಿಳನಾಡಿನ ಬಸ್ ಬುಕ್ಕಿಂಗ್ ಆಫೀಸಿನ ಫಲಕದಲ್ಲಿ ತಮಿಳನ್ನು ಮೊದಲನೇ ಸ್ಥಾನದಲ್ಲಿ ಕಾಣಬಹುದು). ಇಷ್ಟು, ಒಂದು ದಿನದ ಅಲ್ಪ ಸ್ವಲ್ಪ ಅನುಭವಗಳನ್ನು ಮತ್ತು ಅನಿಸಿಕೆಗಳನ್ನು ಹೊತ್ತುಕೊಂಡು ನನ್ನ ಒಂದು ದಿನದ ಚೆನ್ನೈ ಪ್ರವಾಸವನ್ನು ಮುಗಿಸಿ ತಾಯ್ನಾಡಿಗೆ ಮರಳಿದೆ.

ನನ್ನ ಅನಿಸಿಕೆಗಳಲ್ಲಿನ ತಪ್ಪುಗಳನ್ನು ದಯವಿಟ್ಟು ಕ್ಷಮಿಸದೇ ಅವುಗಳನ್ನು ತಿದ್ದುವ ಪೂರ್ಣ ಅಧಿಕಾರ ನಿಮಗಿದೆ.......................