Saturday 25 June 2011

ಹಿಂದಿ ಹೇರಿಕೆಯಲ್ಲೂ ಸುಣ್ಣ ಬೆಣ್ಣೆ..!

ಇವತ್ತಿನ (೨೬-೦೬-೧೧) ಪ್ರಜಾವಾಣಿ ದಿನಪತ್ರಿಕೆಯಲ್ಲಿ ಮಿನಿಸ್ಟ್ರಿ ಆಫ್ ಮೈಕ್ರೊ, ಸ್ಮಾಲ್ ಆಂಡ್ ಮಿಡಿಯಮ್ ಎಂಟರಪ್ರೈಜಸ್ ಅವರು ತಮ್ಮ ಕಾಯರ್ ಬೋರ್ಡ್ ಎಂಬ ಸಂಸ್ಥೆಯ ಮೂಲಕ ಒಂದು ಜಾಹೀರಾತನ್ನು ಕೊಟ್ಟಿದ್ದಾರೆ. ಅದು ಸಂಪೂರ್ಣ ಹಿಂದಿಯಲ್ಲಿರೋದು ಕಾಣುತ್ತೆ. ಅವರ ಮಾಹಿತಿ ಪ್ರಜಾವಾಣಿ ಓದುವ ಅಥವಾ ಜಾಹೀರಾತನ್ನು ನೋಡುವ ಬಹುತೇಕ ಜನರಿಗೆ, ಕಣ್ಣಿಗೆ ಬಿದ್ದರೂ ಮಾಹಿತಿ ತಿಳಿಸುವ ಹಂತಕ್ಕೆ ಅದು ಹೋಗುವುದಿಲ್ಲ ಎಂಬುದು ಸತ್ಯ. ಹೀಗಾಗಿ ಮಾಹಿತಿ ಕೊಡುವ ಉದ್ದೇಶಕ್ಕಿಂತ ಅದರಲ್ಲಿ ಹಿಂದಿ ಹೇರಿಕೆಯ ಉದ್ದೇಶನೇ ಎದ್ದು ಕಾಣುತ್ತೆ.
ಇನ್ನು ಜಾಹೀರಾತು ಕೊಟ್ಟ ಕಾಯರ್ ಬೋರ್ಡ ಅನ್ನೋ ಸಂಸ್ಥೆಯ ಕೇಂದ್ರ ಕಚೇರಿ ಕೇರಳದ ಕೊಚ್ಚಿಯಲ್ಲಿದೆ. ಕೇರಳದ ಬಾಶೆ ಮಲಯಾಳಂ, ಹೀಗಾಗಿ ಅಲ್ಲಿನೂ ಇದೇ ರೀತಿ ಹಿಂದಿಯಲ್ಲಿ ಕೊಟ್ಟಿದ್ದಾರಾ ಅಂತ ನೋಡಿದ್ರೆ,, ಅಲ್ಲಿನ ಮಲಯಾಳ ಮನೋರಮಾ ದಿನಪತ್ರಿಕೆಯಲ್ಲಿ ಇದೇ ಜಾಹೀರಾತು ಸಂಪೂರ್ಣ ಆಂಗ್ಲ್ ಬಾಶೆಯಲ್ಲಿತ್ತು. ವಿಚಿತ್ರ ಅಂದ್ರೆ, ಕಾಯರ್ ಬೋರ್ಡ ತಮ್ಮೂರಿನಲ್ಲಿ ಆಂಗ್ಲ ಬಾಶೆಯಲ್ಲಿ ಜಾಹೀರಾತು ಹಾಕಿಸಿ, ನಮ್ಮೂರಿನಲ್ಲಿ ಹಿಂದಿಯಲ್ಲಿ ಜಾಹೀರಾತು ಹಾಕಿಸಿದ್ದು.! ಎರಡು ಹಿಂದಿಯೇತರ ದಿನಪತ್ರಿಕೆಗಳೇ. ಒಂದು ಪ್ರಾದೇಶಿಕ ದಿನಪತ್ರಿಕೆಯಲ್ಲಿ ಆಂಗ್ಲ ಮತ್ತೊಂದರಲ್ಲಿ ಹಿಂದಿ ಹಾಕಿದ್ದು ಯಾಕೆ ಅನ್ನೋದಶ್ಟೆ ಪ್ರಶ್ನೆ. ಎರಡೂ ಕಡೆ ಪ್ರಾದೇಶಿಕ ಬಾಶೆನೇ ಇರಬೇಕಿತ್ತು ಅನ್ನೋದು ಮಾತ್ರ ವಿವಾದಕ್ಕೆ ಎಡೆ ಇಲ್ಲದ ವಾದ.! ಅಂದಹಾಗೆ ಬೆಂಗಳೂರಿನಲ್ಲೂ ಅದರ ಪ್ರಾದೇಶಿಕ ಕಚೇರಿ ಇದೆ.




ಮಲಯಾಳಂ ಆಡಳಿತ ಬಾಶೆಯಾಗಿರುವ ಕೇರಳದಲ್ಲಿ ಹಿಂದಿಯಲ್ಲಿ ಜಾಹೀರಾತು ಕೊಡಬಾರದು ಎಂಬುದು ಗೊತ್ತಿರುವ ಕೇಂದ್ರ ಸರಕಾರಕ್ಕೆ, ಕನ್ನಡ ಆಡಳಿತ ಬಾಶೆಯಾಗಿರುವ ಕರ್ನಾಟಕದಲ್ಲಿ ಹಿಂದಿಯಲ್ಲಿ ಕೊಡಬೇಕು ಅಂತ ಹೇಗೆ ಅನ್ನಿಸಿತು.! ಇದು ನಿಸ್ಸಂದೇಹವಾಗಿ, ಹಿಂದಿ ಹೇರಿಸಿಕೊಳ್ಳುವುದರಲ್ಲಿ ಕೇರಳಕ್ಕಿಂತ ನಾವು ಮುಂದೆ ಇದ್ದೇವೆ ಎಂಬುದನ್ನು ತೋರಿಸುತ್ತದೆ.
ಕೆಲವೊಮ್ಮೆ ಕೇಂದ್ರ ಸರಕಾರದ ಜಾಹೀರಾತುಗಳು ಪ್ರಾದೇಶಿಕ ಬಾಶೆಯಲ್ಲೇ ಬರುತ್ತವೆ. ಆದರೆ ನಿಯಮವನ್ನು ಕೆಲವೊಮ್ಮೆ ಇಲಾಖೆಗಳು ಪಾಲಿಸಲ್ಲ ಅಥವಾ ಪಾಲಿಸಲು ಬಯಸಲ್ಲ.! ಕನ್ನಡ ಪತ್ರಿಕೆ ಓದುವವರು ಕನ್ನಡ ಬಲ್ಲವರೇ ಆಗಿರುತ್ತಾರೆ. ಹಿಂದಿಯಲ್ಲಿ ಜಾಹೀರಾತು ಕೊಡುವುದರಿಂದ ಅದು ಬಹಳಶ್ಟು ಜನರಿಗೆ ತಲುಪುವುದಿಲ್ಲ ಎಂಬ ಸತ್ಯ ಕೇಂದ್ರ ಸರಕಾರಕ್ಕೆ ಗೊತ್ತಿರದೇ ಇರದು. ಆದ್ರೂ ಕೊಡುತ್ತಾರೆ ಅಂದ್ರೆ, ಅದು ವರ್ಶಕ್ಕೆ ಕಾಯ್ದಿರಿಸಿದ ೩೬ ಕೋಟಿ ರೂಪಾಯಿ ಹಿಂದಿ ಹೇರಿಕೆಯ ಬಜೆಟ್ ಹಣದ ಲೆಕ್ಕ ತೋರಿಸಲು ಅಂತನೇ ಇರಬೇಕು.! ಅಲ್ಲಿಗೆ ಹಿಂದಿ ಹೇರಿಕೆಯೇ ಜಾಹೀರಾತಿನ ಮೂಲಮಂತ್ರ ಎಂಬುದು ಸ್ಪಶ್ಟವಾಗುತ್ತದೆ. ಸ್ಥಳೀಯ ಬಾಶೆಯನ್ನು ಮತ್ತು ಸ್ಥಳೀಯ ಜನರನ್ನು ಕಡೆಗಣಿಸುವ ಕೇಂದ್ರ ಸರಕಾರದ ಇಂತಹ ನಿಲುವಿಗೆ ವಿರೋದ ವ್ಯಕ್ತಪಡಿಸಲೇಬೇಕಲ್ಲವೇ.!