Saturday 6 August 2016

ಮಹದಾಯಿ ಕುಡಿಯುವ ನೀರಿಗೆ ಮದ್ಯಂತರ ತಡೆ; ತೀರ್ಪಿನಿಂದ ಏಳುವ ಪ್ರಶ್ನೆಗಳು.

    ಇತ್ತೀಚಿಗೆ ಹೊರಬಿದ್ದ ಮಹದಾಯಿ ನ್ಯಾಯಮಂಡಳಿ ಮದ್ಯಂತರ ತೀರ್ಪು, ಅಂತಿಮ ತೀರ್ಪು ಬರುವವರೆಗೆ ಕುಡಿಯುವ ನೀರು ಸೇರಿದಂತೆ ಒಟ್ಟು 7.56 ಟಿಎಂಸಿ ನೀರು ಬಳಕೆಗೆ ಅವಕಾಶ ಕೋರಿ ಕರ್ನಾಟಕ ಸಲ್ಲಿಸಿದ್ದ ಮದ್ಯಂತರ ಅರ್ಜಿಯನ್ನು ತಿರಸ್ಕರಿಸಿದೆ. ಆ ಮೂಲಕ ವರುಶದಿಂದ ಹೋರಾಟ ಮಾಡುತ್ತಿದ್ದ ಜನರ ನೋವಿಗೆ ಇನ್ನಶ್ಟು ಬರೆ ಎಳೆದಿದೆ. ಹಾಗಾದರೆ ಕರ್ನಾಟಕದ ಅರ್ಜಿ ತಿರಸ್ಕಾರಕ್ಕೆ ನ್ಯಾಯಮಂಡಳಿ ನೀಡಿದ ಕಾರಣಗಳೇನು.?
ನ್ಯಾಯಾಧಿಕರಣದ ಮದ್ಯಂತರ ತೀರ್ಪಿನಲ್ಲಿ ಪ್ರಮುಖವಾಗಿ ಏನಿದೆ?

  • ·         ನದಿಗಳು ಸಾಕಷ್ಟು ಕಾರಣಗಳಿಂದ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲಿ ಮುಖ್ಯವಾಗಿ ನದಿಗಳು ಹೆಚ್ಚು ಪ್ರಮಾಣದ ನೀರನ್ನು ಭೂಪ್ರದೇಶದಿಂದ ಸಮುದ್ರಕ್ಕೆ ಸೇರಿಸುತ್ತವೆ. ಸಮುದ್ರದ ನೀರು ಆವಿಯಾಗಿ ಮೋಡಗಳಾಗುತ್ತವೆ. ಮೋಡಗಳು ಮತ್ತೆ ಮಳೆಯಾಗಿ ಭೂಮಿ ಸೇರುತ್ತದೆ. ಭೂಮಿ, ಸಮುದ್ರ ಮತ್ತು ಗಾಳಿಯ ನಡುವಿನ ನೀರಿನ ಸಂಚರವನ್ನು ನೀರಿನ ಚಕ್ರ ಎನ್ನುತ್ತಾರೆ. ನೀರಿನ ಚಕ್ರದಿಂದಾಗಿಯೇ ಭೂಮಿಯ ಮೇಲಿನ ಜೀವಿಗಳಿಗೆ ಅಗತ್ಯವಿರುವ ಸಿಹಿನೀರು ಮತ್ತೆ ಮತ್ತೆ ಪೂರೈಕೆಯಾಗುತ್ತದೆ. ಕೆಲವು ನದಿಗಳನ್ನು ಬಿಟ್ಟರೆ ಬಹುತೇಕ ನದಿಗಳು ಕೊನೆಗೆ ಸಮುದ್ರವನ್ನೇ ಸೇರುತ್ತದೆ. ಅದು ಅರಬ್ಬಿ ಸಮುದ್ರವಾದರೂ ಆಗಬಹುದು ಬಂಗಾಳ ಕೊಲ್ಲಿಯೂ ಇರಬಹುದು. ನದಿಗಳು ಸಮುದ್ರ ಸೇರುವ ಮುನ್ನ ಮಾತ್ರ ಸಂಬಂಧಪಟ್ಟ ರಾಜ್ಯಗಳಿಗೆ ಬಳಕೆಗೆ ಸಿಗುತ್ತದೆ. ಆದ್ದರಿಂದ ಮಹದಾಯಿ ನದಿ (ಅದರ ಬಳಕೆಗಳ ಹೊರತಾಗಿಯೂ) ಅರಬ್ಬಿ ಸಮುದ್ರ ಸೇರುವುದರಿಂದ ನೀರು ವ್ಯರ್ಥವಾಗುತ್ತಿದೆ ಎಂದು ಹೇಳಲು ಬರುವುದಿಲ್ಲ.
  • ·         ಮಹದಾಯಿ ನದಿಯಲ್ಲಿ 108.72 ಟಿಎಂಸಿ ನೀರು ಲಭ್ಯವಿದ್ದು, ಮಲಪ್ರಭಾ ನದಿಗೆ ವರ್ಗಾಯಿಸಲು ಬಯಸುವ ಮೂರು ಸ್ಥಳಗಳಲ್ಲಿ ಹೆಚ್ಚುವರಿ ನೀರು ಲಭ್ಯವಿದೆ ಎಂದು ಸಾಬೀತುಪಡಿಸಲು ಈ ಹಂತದಲ್ಲಿ ಕರ್ನಾಟಕ ರಾಜ್ಯ ವಿಫಲವಾಗಿದೆ ಎಂದು ಈ ನ್ಯಾಯಾಧಿಕರಣ ಅಭಿಪ್ರಾಯಪಟ್ಟಿದೆ. ಈ ಕಾರಣದಿಂದಾಗಿ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ ಎಂಬ ಕರ್ನಾಟಕದ ವಾದವನ್ನು ಒಪ್ಪಲು ನ್ಯಾಯಾಧಿಕರಣಕ್ಕೆ ಕಷ್ಟವಾಗುತ್ತದೆ. ಒಂದು ವೇಳೆ ಅಧಿಕ ನೀರು ಲಭ್ಯವಿದ್ದಾಗ ಮಾತ್ರ ನೀರು ವ್ಯರ್ಥವಾಗುತ್ತಿದೆ ಎಂಬ ಮನವಿ ಸಿಂಧುವಾಗುತ್ತದೆ.
  • ·         1974ರ ಪರಿಸರ ಮಾಲಿನ್ಯ ತಡೆ ಮತ್ತು ನಿಯ೦ತ್ರಣ ಕಾಯ್ದೆ, 1986ರ ಪರಿಸರ ರಕ್ಷಣಾ ಕಾಯ್ದೆ, ವನ್ಯಜೀವಿ ಸ೦ರಕ್ಷಣೆ ಮತ್ತು ಜೀವ ವೈವಿಧ್ಯಗಳ ರಕ್ಷಣಾ ಕಾಯ್ದೆಗಳ ಪ್ರಕಾರ ಬೃಹತ್ ಯೋಜನೆ ಹಮ್ಮಿಕೊಳ್ಳುವಾಗ ಒಪ್ಪಿಗೆ ಪಡೆದುಕೊಳ್ಳಬೇಕು. ಆದರೆ ಕರ್ನಾಟಕ ಎಲ್ಲಿಯೂ ಅನುಮತಿ ತೆಗೆದುಕೊಂಡಿಲ್ಲ. ಕೇಂದ್ರ ಸರ್ಕಾರ ಮತ್ತು ಯೋಜನಾ ಆಯೋಗಕ್ಕೂ ಮಾಹಿತಿ ಸಲ್ಲಿಕೆ ಮಾಡಿಲ್ಲ.
  • ·         ಮಹದಾಯಿ ಮತ್ತು ಮಲಪ್ರಭಾ ನದಿಗಳ ನಡುವೆ ನೀರನ್ನು ಒ೦ದೆಡೆಯಿ೦ದ ಮತ್ತೊ೦ದೆಡೆ ತಿರುಗಿಸಲು ಶಾಶ್ವತ ಕಾಮಗಾರಿ ಅತ್ಯಗತ್ಯ. ಹೀಗಾಗಿ ಶಾಶ್ವತ ಕಾಮಗಾರಿ ಬೇಕಾಗಿಲ್ಲ ಎ೦ದು ಕರ್ನಾಟಕ ವಾದ ಮಾಡುತ್ತಿರುವುದರಲ್ಲಿ ಅರ್ಥವಿಲ್ಲ.
ನ್ಯಾಯಾದೀಕರಣದ ತೀರ್ಪಿನಿಂದ ಏಳುವ ಪ್ರಶ್ನೆಗಳು.

  • ·      ಮದ್ಯಮ/ಬೃಹತ್ ನೀರಾವರಿ ಯೋಜನೆಗಳ ಮೂಲ ಉದ್ದೇಶ ಹರಿಯುವ ನೀರನ್ನು ಆಣೆಕಟ್ಟೆ ಕಟ್ಟಿ ತಡೆಹಿಡಿದು ಗುರುತ್ವಾಕರ್ಷಣ ಅಥವಾ ಏತ ನೀರಾವರಿ ಮಾಡಿ ಕಾಲುವೆ ಮೂಲಕ ಇತರ ಪ್ರದೇಶಗಳಿಗೆ ನೀರು ವರ್ಗಾಯಿಸುವುದು. ಕಳಸಾ ಬಂಡೂರಿ ಯೋಜನೆಯಲ್ಲಿ ಬೇರೆ ಕಣಿವೆಗೆ ಅಂದರೆ ಮಹದಾಯಿ ಕಣಿವೆಯಿಂದ ಮಲಪ್ರಬಾ ಕಣಿವೆಗೆ ನೀರನ್ನು ವರ್ಗಾಯಿಸುವುದು ಬಿಟ್ಟರೆ ಇದು ಎಲ್ಲ ನೀರಾವರಿ ಯೋಜನೆ ತರದ ಯೋಜನೆಯೇ ಆಗಿದೆ. ಇನ್ನು, ಪರಿಸರದ ಅಸಮತೋಲನವನ್ನು ತಡೆಯಲು ಮತ್ತು ನೀರಿನ ಚಕ್ರವನ್ನು ಕಾಪಾಡಿಕೊಂಡು ಹೋಗಲು ನದಿ ನೀರು ಸಮುದ್ರ ಸೇರಬೇಕು ಎಂಬುದನ್ನು ಒಪ್ಪಿಕೊಂಡರೂ ನದಿಯಲ್ಲಿ ಹುಟ್ಟುವ ಒಟ್ಟು ಪ್ರಮಾಣದ ನೀರಿನಲ್ಲಿ ಕನಿಷ್ಟ ಹರಿವನ್ನು ಹೊರತುಪಡಿಸಿ ಉಳಿದ ನೀರನ್ನು ಬಳಸಿಕೊಳ್ಳಬಹುದು. ಆದರೆ ನದಿ ಹರಿವನ್ನು ತಡೆಯದೇ, ಕಾಮಗಾರಿ ನಡೆಸದೇ ಲಭ್ಯವಿರುವ ನೀರಿನ ಬಳಕೆ ಹೇಗೆ ಸಾದ್ಯ.?
  • ·         ಮಹದಾಯಿ ಯೋಜನೆಗೆ ಶಾಶ್ವತ ಕಾಮಗಾರಿ ಬೇಕಾಗಿಲ್ಲ ಎಂದು ಕರ್ನಾಟಕ ವಾದ ಮಾಡಿದ್ದರೆ ಅದು ತಪ್ಪು ನಿರ್ದಾರವಲ್ಲವೇ.? ಅಣೆಕಟ್ಟೆ ನಿರ್ಮಾಣ ತಾತ್ಕಾಲಿಕ ಕಾಮಗಾರಿ ಹೇಗೆ ಆಗುತ್ತದೆ.? ಮುಂದೆ ಅಂತಿಮ ತೀರ್ಪಿನಲ್ಲಿ 45 ಟಿಎಂಸಿ ನೀರಿನ ಪಾಲು ಹೊಂದಿರುವ ಕರ್ನಾಟಕಕ್ಕೆ ಒಂದಿಷ್ಟು ನೀರು ಹಂಚಿಕೆಯಾದರೇ ಶಾಶ್ವತ ಕಾಮಗಾರಿಯನ್ನು ಮಾಡದೇ ಆ ನೀರನ್ನು ಹೇಗೆ ಬಳಸಿಕೊಳ್ಳುವುದು.?
  • ·      ಇನ್ನು, ಅಂತರ್ ಕಣಿವೆ ನೀರು ವರ್ಗಾವಣೆ ಯೋಜನೆ ಇದು ಮೊದಲೇನಲ್ಲ. ತೆಲುಗು ಗಂಗಾ ಯೋಜನೆಯಲ್ಲಿ ಕೃಷ್ಣಾ ಕಣಿವೆಯಿಂದ ಪೆನ್ನಾರ್ ಕಣಿವೆ ಮೂಲಕ 406 ಕಿ.ಮೀ ದೂರದ ಚೆನ್ನೈ ನಗರಕ್ಕೆ 5 ಟಿ.ಎಂ.ಸಿ ಕುಡಿಯುವ ನೀರು ಒದಗಿಸಲಾಗಿದೆ. ಇದು ಕೂಡ ಅಂತರ್ ಕಣಿವೆ ನೀರು ವರ್ಗಾಯಿಸುವ ಕುಡಿಯುವ ನೀರಿನ ಯೋಜನೆ. ಕೃಷ್ಣಾ ನ್ಯಾಯಾದೀಕರಣದ ಪ್ರತಿವಾದಿ ರಾಜ್ಯವೂ ಅಲ್ಲದ ತಮಿಳುನಾಡಿನ ಕುಡಿಯುವ ನೀರಿನ ಯೋಜನೆಗೆ ಅನುಮತಿ ಸಿಕ್ಕಿರುವಾಗ ತನ್ನ ರಾಜ್ಯದಲ್ಲೇ ಹರಿಯುವ ಮಹದಾಯಿ ನೀರನ್ನು ಕುಡಿಯುವ ನೀರಿನ ಯೋಜನೆಗೆ ಹತ್ತಾರು ಕಿ.ಮೀ ನೀರು ವರ್ಗಾಯಿಸಿ ಬಳಸಿಕೊಳ್ಳುವ ಹಕ್ಕು ಕರ್ನಾಟಕಕ್ಕಿಲ್ಲವೇ.? ನ್ಯಾಯಾದೀಕರಣದ ಪಾರದರ್ಶಕತೆ ಪ್ರಶ್ನೆ ಇಲ್ಲಿ ಏಳುವುದಿಲ್ಲವೇ.?
  • ·      ಮಹಾದಾಯಿಯಲ್ಲಿ ವಾರ್ಷಿಕ ಹರಿವು ಹೆಚ್ಚುವರಿಯಾಗಿಯೇ ಇದೆ ಎಂದು ರಾಷ್ಟ್ರೀಯ ಜಲ ಅಭಿವೃದ್ಧಿ ಏಜೆನ್ಸಿ (ಎನ್‌ಡಬ್ಲ್ಯೂಡಿಎ) ವರದಿ ಸಲ್ಲಿಸಿದ್ದರೂ, ಮಹಾರಾಷ್ಟ್ರದ ನಾಗಪುರದಲ್ಲಿರುವ ನ್ಯಾಷನಲ್ ಎನ್‌ವಿರಾನ್‌ಮೆಂಟಲ್ ಇಂಜಿನಿಯರಿಂಗ್ ರೀಸರ್ಚ್ ಇನ್‌ಸ್ಟಿಟ್ಯೂಟ್ `ನೀರಿಅಧ್ಯಯನ ನಡೆಸಿ ಮಹದಾಯಿ ತಿರುವು ಯೋಜನೆಯಿಂದ ಪರಿಸರದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾಗುವುದಿಲ್ಲವೆಂದೂ ಮತ್ತು ಮಹದಾಯಿ ಕಣಿವೆ ನೀರಿನ ಕೊರತೆ ಇರುವ ಪ್ರದೇಶ ಅಲ್ಲವೇ ಅಲ್ಲವೆಂದೂ ತಿಳಿಸಿವೆ. ಕೇಂದ್ರ ಜಲ ಆಯೋಗವೂ ಇದನ್ನು ಒಪ್ಪಿಕೊಂಡಿದೆ. ಹೀಗಿದ್ದರೂ ಹೆಚ್ಚುವರಿ ನೀರು ಲಭ್ಯವಿದೆ ಎಂದು ಸಾಬೀತುಪಡಿಸಲು ಈ ಹಂತದಲ್ಲಿ ಕರ್ನಾಟಕ ರಾಜ್ಯ ವಿಫಲವಾಗಿದೆ ಎಂದು ನ್ಯಾಯಾದೀಕರಣ ಹೇಳಲು ಕಾರಣವೇನು.? ಕೇಂದ್ರ ಸರಕಾರದ ಅಡಿಯಲ್ಲಿ ಬರುವ ಆ ಸಂಸ್ಥೆಗಳ ವರದಿ ಪರಿಗಣಿಸಲು ಯೋಗ್ಯವಲ್ಲವೇ.? ಈಗ ಕಾಣದ ಹೆಚ್ಚುವರಿ ನೀರು, ಈಗ ಪರಿಗಣನೆಗೆ ಬಾರದ ಅದ್ಯಯನ ವರದಿಗಳು ಮತ್ತು ಕರ್ನಾಟಕದ ವಾದಗಳು ಅಂತಿಮ ತೀರ್ಪಿನಲ್ಲಿ ಗಣನೆಗೆ ಬರಲು ಸಾದ್ಯವೇ.?
  • ·      ಗೋವಾ ಪರ ವಾದ ಮಂಡಿಸಿರುವ ಗೋವಾ ಅಡ್ವೊಕೇಟ್‌ ಜನರಲ್‌ ಆಗಿರುವ ಆತ್ಮಾರಾಮ್‌ ನಾಡಕರ್ಣಿ ಹೆಚ್ಚುವರಿ ಸಾಲಿಸಿಟರ್‌ ಜನರಲ್ ಸಹ ಆಗಿರುವುದರಿಂದ ಕೇಂದ್ರ ಸರ್ಕಾರದ ವಾದವೂ ಅದೇ ಎನ್ನಬಹುದೇ.? ಹಾಗಿದ್ದಲ್ಲಿ ಈಗ ಬಂದಿರುವ ಮದ್ಯಂತರ ತೀರ್ಪಿನಲ್ಲಿ ಕೇಂದ್ರದ ಪಾತ್ರವಿದೆ ಎನ್ನಬಹುದೇ.? ಗೋವಾ ಒಪ್ಪದ ಅದ್ಯಯನ ವರದಿಗಳನ್ನು ನ್ಯಾಯಾದೀಕರಣವೂ ಒಪ್ಪದಿರುವುದು ಇಲ್ಲಿ ಗಮನಿಸಬೇಕಾದ ಅಂಶ.
  • ·      ನದಿಗಳು ಸಮುದ್ರ ಸೇರುವ ಮುನ್ನ ಸಂಬಂಧಪಟ್ಟ ರಾಜ್ಯಗಳಿಗೆ ಬಳಕೆಗೆ ಸಿಗುತ್ತದೆ. ಆದ್ದರಿಂದ ಮಹದಾಯಿ ನದಿ (ಅದರ ಬಳಕೆಗಳ ಹೊರತಾಗಿಯೂ) ಅರಬ್ಬಿ ಸಮುದ್ರ ಸೇರುವುದರಿಂದ ನೀರು ವ್ಯರ್ಥವಾಗುತ್ತಿದೆ ಎಂದು ಹೇಳಲು ಬರುವುದಿಲ್ಲ  ಎಂದು ನ್ಯಾಯಾದೀಕರಣ ಹೇಳಿದೆ. ಮಹದಾಯಿ/ಮಾಂಡೋವಿ ಒಟ್ಟು ನದಿ ಪಾತ್ರದಲ್ಲಿ ಲಬ್ಯವಿರುವ ನೀರಿನ ಬಹುತೇಕ ಪ್ರಮಾಣದ ನೀರು ಸಮುದ್ರಕ್ಕೆ ಸೇರುವುದು ವ್ಯರ್ಥವಲ್ಲವೇ.? ಕೃಷ್ಣಾ, ಕಾವೇರಿ ನದಿ ಹರಿಯುವ ಪಾತ್ರಗಳಲ್ಲಿ ಕೂಡ ಬೃಹತ್ ಯೋಜನೆಗಳ ಮೂಲಕ ನೀರು ವರ್ಗಾಯಿಸಿ ಜನರ ಅಗತ್ಯ ಬಳಕೆಗೆ ಬಳಸಿಕೊಳ್ಳಲಾಗಿದೆ.
  • ·      ಕರ್ನಾಟಕ ರಾಜ್ಯ ಸರಕಾರ ಯೋಜನೆಗೆ ಅರಣ್ಯ ಇಲಾಖೆ ಅನುಮತಿ ಪಡೆದಿಲ್ಲ ಎಂದು ನ್ಯಾಯಾದೀಕರಣ ಹೇಳಿದೆ. ನೀರು ಹಂಚಿಕೆ ಆದ ಮೇಲೆ ಅರಣ್ಯ ಇಲಾಖೆ ಅನುಮತಿ ನೀಡಲಿದೆ ಎಂಬುದು ರಾಜ್ಯದ ವಾದ. ಹಾಗಿದ್ದಲ್ಲಿ ಯೋಜನೆಗೆ ಅರಣ್ಯ ಇಲಾಖೆ ಒಪ್ಪಿಗೆ ನೀಡಲು ಇರುವ ಮಾನದಂಡವೇನು.? ನೀರಿನ ಹಂಚಿಕೆಯೋ ಅಥವಾ ಯೋಜನೆಯಿಂದ ಪರಿಸರದಲ್ಲಾಗುವ ಪರಿಣಾಮಗಳೋ.? ಯೋಜನಾ ವರದಿ ಮತ್ತು ನೀಲಿ ನಕ್ಷೆ ಆಧಾರದ ಮೇಲೆ ಅರಣ್ಯ ಇಲಾಖೆ ಅನುಮತಿ ನಿರ್ದಾರ ಆಗುವುದಲ್ಲವೇ.? ಇನ್ನು, ಕುಡಿಯುವ ನೀರಿನ ಯೋಜನೆ ಆದರೂ ಅರಣ್ಯ ಇಲಾಖೆ ಒಪ್ಪಿಗೆ ಇಲ್ಲದೇ ಯೋಜನೆಯ ಅನುಮತಿ ಹೇಗೆ ಸಾದ್ಯ. ಕರ್ನಾಟಕ ಸರಕಾರದ ಅರಿವಿಗೆ ಇದು ಬಂದಿಲ್ಲವೇ.?
  • ·      ಮದ್ಯಂತರ ಅರ್ಜಿ ಸಲ್ಲಿಸುವ ಬಗ್ಗೆ ಕರ್ನಾಟಕ ಪರ ವಕೀಲ ಫಾಲಿ ನಾರಿಮನ್ ಸೇರಿದಂತೆ ಹಲವರ ಸಮ್ಮತ ಇರಲಿಲ್ಲ ಎಂಬ ಮಾತಿದೆ. ಮದ್ಯಂತರ ಅರ್ಜಿ ಸಲ್ಲಿಸದೇ ಇದ್ದಿದ್ದರೂ ಈಗ ಅರ್ಜಿ ತಿರಸ್ಕಾರದ ತೀರ್ಪಿನಲ್ಲಿ ನ್ಯಾಯಾದೀಕರಣ ನೀಡಿದ ಕಾರಣಗಳು, ಒಪ್ಪದ ಅದ್ಯಯನ ವರದಿಗಳು ಅಂತಿಮ ತೀರ್ಪಿನಲ್ಲಿ ಹೇಗೆ ಬದಲಾಗುತ್ತವೆ..?
  • ·         ಗೋವಾ ಚುನಾವಣೆ ಹತ್ತಿರವಿದ್ದಂತೆ ಗೋವಾ ಪರ ತೀರ್ಪು ಹೊರಬಿದ್ದಿದ್ದು ನ್ಯಾಯಾದೀಕರಣದ ತೀರ್ಪಿನಲ್ಲಿ ರಾಜಕೀಯ ದುರ್ವಾಸನೆ ಬಾರದಿರದೇ.?
ನ್ಯಾಯಾದೀಕರಣ ಎಂಬ ಮರೀಚಿಕೆ ಮತ್ತು ಕಾಂಗ್ರೆಸ್-ಬಿಜೆಪಿ ರಾಜಕೀಯ ಕೆಸರೆರಚಾಟ:
ನ್ಯಾಯಾದೀಕರಣದ ಮೊರೆ ಹೋದ ನೀರು ಹಂಚಿಕೆ ವಿವಾದಗಳಲ್ಲಿ ಬಹುತೇಕ ಇಂದು ಸುಪ್ರೀಂ ಕೋರ್ಟ್ ಅಂಗಳದಲ್ಲಿವೆ. ಕರ್ನಾಟಕಕ್ಕಂತೂ ನ್ಯಾಯಾದೀಕರಣವೆನ್ನುವ ಬದಲು ಅನ್ಯಾಯಾದೀಕರಣ ಎನ್ನುವುದು ಸೂಕ್ತವೆನಿಸುತ್ತದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ನಡುವಿನ ಸಮಸ್ಯೆಯನ್ನು ರಾಜ್ಯಗಳೇ ಮಾತುಕತೆ ಮೂಲಕ ಬಗೆಹರಿಸುವುದು ಸರಿಯಾದುದಾಗಿದೆ.  1989 ರಲ್ಲಿ ಎಸ್. ಆರ್. ಬೊಮ್ಮಾಯಿ  ಮುಖ್ಯಮಂತ್ರಿಯಾಗಿದ್ದಾಗ ಗೋವಾ ಮುಖ್ಯಮಂತ್ರಿ ಪ್ರತಾಪ್ ಸಿಂಗ್ ರಾಣಾ ಜೊತೆ ಮಾತುಕತೆ ನಡೆಸಿ ಯೋಜನೆಗೆ ಎರಡೂ ರಾಜ್ಯಗಳು ಪರಸ್ಪರ ಒಪ್ಪಿಗೆ ಸೂಚಿಸಿದ್ದವು. 2006 ರಲ್ಲಿ ಸುಪ್ರೀಂ ಕೋರ್ಟ್ ಮೂರು ರಾಜ್ಯಗಳೊಂದಿಗೆ ಮಾತುಕತೆ ಮೂಲಕ ಬಗೆಹರಿಸುವಂತೆ ಪ್ರದಾನಿಗೆ ಸೂಚಿಸಿತು. ನಂತರ ಮಾತುಕತೆಗೆ ಪ್ರದಾನಿ ಮನಮೋಹನ್ ಸಿಂಗ್ ಕರೆದ ಸಭೆಗೆ ಗೋವಾ ಕಾಂಗ್ರೆಸ್ ಮುಖ್ಯಮಂತ್ರಿ ಗೈರಾದರು. ಮಾತುಕತೆ  ಪ್ರಯತ್ನ ವಿಫಲವಾಯಿತು.
ಈಗಲೂ ಉಳಿದಿರುವ ದಾರಿಯಾಗಿ ಅದೇ ಗೋಚರಿಸುತ್ತದೆ. ಗೋವಾ ಮಾತುಕತೆಗೆ ಸಿದ್ದವಿಲ್ಲವೆಂದಾದರೆ ಕೇಂದ್ರ ಸರಕಾರದ ಮದ್ಯಸ್ಥಿಕೆಯಲ್ಲಿ ಆ ಮಾತುಕತೆ ನಡೆಯಲಿ. ಗೋವಾ ವಿರೋದ ಪಕ್ಷದವರನ್ನು ನೀವು ಮನವಲಿಸಿ, ನಮ್ಮ ಪಕ್ಷದ ಮುಖ್ಯಮಂತ್ರಿಗಳನ್ನು ನಾವು ಮನವೊಲಿಸುತ್ತೇವೆ ಎಂಬ ಮೊಂಡುವಾದ ಬಿಟ್ಟು ಮೂರು ರಾಜ್ಯಗಳ ಸರ್ವಪಕ್ಷ ಸಭೆಯನ್ನು ಕರೆದು ಮಾತುಕತೆ ನಡೆಸುವಂತ ರಾಜಕೀಯ ಮುತ್ಸದ್ದಿತನವನ್ನು ಪ್ರದಾನಿಗಳು ಪ್ರದರ್ಶಿಸಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್/ಬಿಜೆಪಿ ಸಂಸದರು, ಶಾಸಕರು ನೆಲ, ಜಲ, ಭಾಷೆ ಬಗ್ಗೆ ರೆಡಿಮೇಡ್ ಉತ್ತರ ಕೊಡುವುದನ್ನು ಬಿಟ್ಟು ಮಾತುಕತೆ ಮೂಲಕ ಪರಿಹಾರ ಪಡೆದುಕೊಳ್ಳುವತ್ತ ಪ್ರದಾನಿಗೆ ಒಕ್ಕೋರಲವಾಗಿ ಒತ್ತಡ ಹೇರುವ ಕೆಲಸ ಮಾಡಲಿ. ಕರ್ನಾಟಕದ ಕಾಂಗ್ರೆಸ್ ನಾಯಕರು ಗೋವಾ ಚುನಾವಣೆ ಸಮಯದಲ್ಲಿ ಮಹದಾಯಿ ಯೋಜನೆಗೆ ವಿರೋದ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂದಿ ಅವರಿಗೂ ಯೋಜನೆ ಹೇಗೆ ಕರ್ನಾಟಕ ಭಾಗದ ಕುಡಿಯುವ ನೀರಿಗೆ ಆಸರೆಯಾಗಿದೆ ಎಂಬುದರ ಜೊತೆಗೆ ಕಾಂಗ್ರೆಸ್ಸಿಗೂ ಕರ್ನಾಟಕ ಹೇಗೆ ಆಸರೆಯಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಡಲಿ. ಇನ್ನು, ಜೆಡಿಎಸ್ ಪ್ರಾದೇಶಿಕ ಪಕ್ಷ ಎಂಬ ಗುರುತನ್ನು ಉಳಿಸಿಕೊಂಡಿಲ್ಲವಾದರೂ ಮಾತುಕತೆ ಪರಿಹಾರದ ವಿಶಯದಲ್ಲಿ ಮಾಜಿ ಪ್ರದಾನಿ ದೇವೇಗೌಡರ ಮೇಲೆ ರಾಜ್ಯದ ಜನರ ನಿರೀಕ್ಷೆ ಇದ್ದೇ ಇದೆ. ಕಳಸಾ ಕಿಚ್ಚಿನಲ್ಲಿ ದಶಕಗಳಿಂದ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಕಾಂಗ್ರೆಸ್ ಬಿಜೆಪಿಗಳೆರಡು ಯೋಜನೆ ವಿಳಂಬಕ್ಕೆ ಪಾಲುದಾರರು. ಇನ್ನಾದರೂ ಒಟ್ಟಿಗೆ ನಿಲ್ಲದಿದ್ದರೆ ಜನರು ತಿರುಗಿ ಬೀಳುವುದರಲ್ಲಿ ಸಂಶಯವಿಲ್ಲ. ಕುಡಿಯುವ ನೀರಿನ ಯೋಜನೆಗೆ ಅನುಮತಿ ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗುವುದರ ಜೊತೆಗೆ ಮಾತುಕತೆ ಮೂಲಕ ಪರಿಹಾರದ ಗಂಬೀರ ಪ್ರಯತ್ನವನ್ನು ಎಲ್ಲರೂ ಮಾಡಬೇಕಿದೆ.