Sunday 23 December 2012

ಗ್ರಾಹಕ ಹಕ್ಕು ರಕ್ಶಣೆಗೆ ಬೇಕಿದೆ ಅರಿವಿನ ಮದ್ದು.

ಇವತ್ತು ಡಿಸೆಂಬರ್ ೨೪. ದಿನವನ್ನು ರಾಶ್ಟ್ರೀಯ ಗ್ರಾಹಕರ ಹಕ್ಕು ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ೧೯೮೬ ರಲ್ಲಿ ಇದೇ ದಿನದಂದು ಗ್ರಾಹಕ ಸಂರಕ್ಷಣಾ ಕಾಯ್ದೆ ೧೯೮೬ (Consumer Protection Act – 1986) ಎಂಬುದನ್ನು ಜಾರಿಗೆ ತರಲಾಯಿತು. ಗ್ರಾಹಕರ ಅನುಕೂಲತೆಗಳಿಗೆ ರಕ್ಷಣೆ ಕೊಡುವುದೇ ಕಾಯ್ದೆಯ ಉದ್ದೇಶ. ಎಲ್ಲ ರೀತಿಯ ಸೇವೆ ಸವಲತ್ತುಗಳಿಗೆ ಕಾಯ್ದೆ ಅನ್ವಯಿಸುತ್ತದಲ್ಲದೇ ಅನೇಕ ರೀತಿಯ ಮೋಸ, ವಂಚನೆಗಳಿಂದ ಗ್ರಾಹಕರನ್ನು ರಕ್ಷಿಸುವ ಗುರಿ ಹೊಂದಿದೆ. ತ್ವರಿತಗತಿಯ ಮತ್ತು ಕಡಿಮೆ ಕರ್ಚಿನ ನ್ಯಾಯಾಂಗ ವ್ಯವಸ್ಥೆಗೂ ಇದು ಅವಕಾಶ ಕಲ್ಪಿಸಿದೆ.


ಗ್ರಾಹಕ ಅಂದ್ರೆ ಯಾರು.?
ಒಂದು ವಸ್ತುವನ್ನು ಕೊಳ್ಳುವ ಅಥವಾ ಕೊಳ್ಳುಗನ ಅನುಮತಿಯೊಂದಿಗೆ ಬಳಸುವ ಯಾವುದೇ ವ್ಯಕ್ತಿಯನ್ನು ಗ್ರಾಹಕ ಎನ್ನಬಹುದಾಗಿದೆ. ಒಂದು ಸೇವೆಯನ್ನು ಪಡೆಯುವ ಅಥವಾ ಬಾಡಿಗೆದಾರನ ಅನುಮತಿಯೊಂದಿಗೆ ಸೇವೆಯ ಅನುಕೂಲ ಪಡೆದುಕೊಳ್ಳುವ ಯಾವುದೇ ವ್ಯಕ್ತಿಯನ್ನು ಗ್ರಾಹಕ ಎನ್ನಬಹುದಾಗಿದೆ. ಇಂತಹ ಗ್ರಾಹಕರ ಹಕ್ಕುಗಳನ್ನು ಪ್ರೇರೆಪಿಸುವ ಮತ್ತು ರಕ್ಶಿಸುವ ಹೊಣೆಯನ್ನು ಕಾಯ್ದೆಯ ಅಡಿ ನೀಡಲಾಗಿದೆ. ಗ್ರಾಹಕ ಸಂರಕ್ಶಣಾ ಕಾಯ್ದೆಯ ಅನ್ವಯ ನಾಲ್ಕು ರೀತಿಯ ಹಕ್ಕುಗಳನ್ನು ವಿವರಿಸಲಾಗಿದೆ. ಅವುಗಳೆಂದರೆ, ರಕ್ಶಣೆಯ ಹಕ್ಕು, ಮಾಹಿತಿಯ ಹಕ್ಕು, ಆಯ್ಕೆಯ ಹಕ್ಕು, ಆಗ್ರಹಿಸುವ ಹಕ್ಕು. ಗ್ರಾಹಕ ವ್ಯವಸ್ಥೆಯಲ್ಲಿ ಬೆಲೆ, ತೂಕ, ಗುಣಮಟ್ಟದ ಆಯಾಮವಿರುವಂತೆಯೇ ಬಾಶಾ ಆಯಾಮವೂ ಪ್ರಮುಖವಾಗಿದೆ. ಬಾಶಾ ಆಯಾಮವನ್ನು ಗಣನೆಗೆ ತೆಗೆದುಕೊಳ್ಳದೇ ಕಾಯ್ದೆಯ ಉದ್ದೇಶ ಈಡೇರಲು ಸಾದ್ಯವಿಲ್ಲ. ಯಾವುದೇ ಸೇವೆ, ಸವಲತ್ತುಗಳನ್ನು ತನ್ನ ಬಾಶೆಯಲ್ಲಿ ಪಡೆದುಕೊಳ್ಳುವ ಹಕ್ಕು ಅದನ್ನು ಬಳಸುವ ಗ್ರಾಹಕನಿಗೆ ಇರುತ್ತದೆ. ಗ್ರಾಹಕನಿಗೆ ಅನುಕೂಲವಾಗುವ ಹಾಗೆ ಕಾಯ್ದೆಯ ಅವಕಾಶಗಳು ಇದ್ದರೂ ನಮ್ಮ ಸುತ್ತಮುತ್ತಲಿನ ಕೆಲವು ವ್ಯವಸ್ಥೆಗಳು ಇನ್ನೂ ಗ್ರಾಹಕ ಸ್ನೇಹಿಯಾಗಿಲ್ಲದಿರುವುದು ಕಾಣುತ್ತದೆ. ಗ್ರಾಹಕ ಹಕ್ಕು ದಿನದ ಸಂದರ್ಬದಲ್ಲಿ ಪ್ರತಿಯೊಬ್ಬರೂ ಬಳಸುವಂಥ ವೈದ್ಯಕೀಯ ಸೇವೆಯಲ್ಲಿ ಕಂಡುಬರುವ ನ್ಯೂನ್ಯತೆಗಳತ್ತ ಗಮನ ಹರಿಸೋಣ.

ರಕ್ಶಣೆ, ಮಾಹಿತಿ, ಆಯ್ಕೆ ನೀಡದ ಫಾರ್ಮಸಿ ವ್ಯವಸ್ಥೆ:
ಪ್ರತಿಯೊಬ್ಬರು ಒಮ್ಮೆಯಾದರೂ ಪಡೆದಿರುವಂಥ ಸೇವೆ ಎಂದರೆ ಅದು ವೈದ್ಯಕೀಯ ಸೇವೆ. ವೈದ್ಯಕೀಯ ಸೇವೆಯ ಮೂಲಕ ಔಶದಿ ವಸ್ತುಗಳು ಜನರನ್ನು ತಲುಪುತ್ತವೆ. ಹೀಗೆ ಜನರಿಗೆ ತಲುಪುವ ಔಶದಿ ವಸ್ತುಗಳ ಮೇಲೆ ಅದನ್ನು ತೆಗೆದುಕೊಳ್ಳಬೇಕಾದ ಪ್ರಮಾಣ, ಔಶದದಲ್ಲಿನ ಅಂಶಗಳ ಮಾಹಿತಿ ಇರುತ್ತದೆ. ವಿಪರ್ಯಾಸವೆಂದರೆ, ಬಹುತೇಕ ಔಶದಿ ವಸ್ತುವಿನ ಮಾಹಿತಿ ಸ್ಥಳೀಯ ಜನರ ನುಡಿಯಲ್ಲಿ ಇಲ್ಲದೇ ಇರುವುದೇ ನಮ್ಮ ಈಗಿನ ವ್ಯವಸ್ಥೆಯಲ್ಲಿ ಕಾಣುತ್ತದೆ. ಔಶದಿ ವಸ್ತುವಿನ ಪ್ರಮಾಣ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಗ್ರಾಹಕ ವ್ಯವಸ್ಥೆಯಲ್ಲಿ ಸರಿಯಾದ ಗುಣಮಟ್ಟದ ವಸ್ತುವನ್ನು ಒದಗಿಸುವುದು ಎಶ್ಟು ಮಹತ್ವವೋ ವಸ್ತುವಿನ ಬಗ್ಗೆ ಸರಿಯಾದ ಮಾಹಿತಿ ಜನರಿಗೆ ಒದಗಿಸುವುದು ಕೂಡ ಅಶ್ಟೇ ಮಹತ್ವದ್ದಾಗಿರುತ್ತದೆ. ಸರಿಯಾದ ಮಾಹಿತಿಯಿಂದ ಜನರನ್ನು ದೂರ ಮಾಡುವುದು ವಸ್ತುವಿನ ಗುಣಮಟ್ಟ ತಗ್ಗಿಸಿ ಜನರನ್ನು ವಂಚಿಸಿದಂತೆಯೇ ಸರಿ. ಕರ್ನಾಟಕದಲ್ಲಿರುವ ವ್ಯವಸ್ಥೆಯನ್ನೇ ಗಮನಿಸಿದರೆ ಬಹುತೇಕ ಔಶದಿ ವಸ್ತುವಿನ ಮಾಹಿತಿ ಕೇವಲ ಇಂಗ್ಲೀಶ್ ಅಥವಾ ಹಿಂದಿಯಲ್ಲಿರುತ್ತದೆ. ಕರ್ನಾಟಕದಲ್ಲಿರುವ ಕನ್ನಡ ಮಾತ್ರ ಬಲ್ಲ ಕೋಟ್ಯಂತರ ಜನರ ಪಾಡೇನು ಆಗ.? ಗ್ರಾಹಕನ ಹಕ್ಕು ಕುರಿತಾದ ಕಾಯ್ದೆ ಹೇಳುವ ನಾಲ್ಕೂ ಅಂಶಗಳಲ್ಲಿ ಇವರಿಗೆ ಅನಾನುಕೂಲ ಆಗುತ್ತಿರುವುದು ಕಾಣುತ್ತದೆ.

ಔಶದಿ ವಸ್ತುಗಳ ವ್ಯವಸ್ಥೆಗೆ ಬೇಕಿದೆ ಮಲಾಮು:
ಔಶದಿ ವಸ್ತುಗಳು ಜೀವ ಉಳಿಸಬಹುದು, ಜೀವ ತೆಗೆಯಲೂಬಹುದಾಗಿದೆ. ಅದು ಔಶದಿಗಳ ಮೇಲಿರುವ ಮಾಹಿತಿ ಎಶ್ಟರ ಮಟ್ಟಿಗೆ ಜನರಿಗೆ ತಲುಪುತ್ತಿದೆ ಎಂಬುದರ ಮೇಲೆ ಅವಲಂಬಿಸುತ್ತದೆ. ಯಾವುದೇ ವ್ಯವಸ್ಥೆಯ ಸೇವೆ ಜನರ ಬಾಶೆಯಲ್ಲಿ ಇದ್ದಾಗ ಮಾತ್ರ ಗ್ರಾಹಕ ಅದರ ಅನುಕೂಲತೆಗಳನ್ನು ಪಡೆದುಕೊಳ್ಳಲು ಸಾದ್ಯ. ನಿಟ್ಟಿನಲ್ಲಿ, ತೂಕ, ಅಳತೆ, ಗುಣಮಟ್ಟ ಇವುಗಳ ಜೊತೆ ಬಾಶಾ ಆಯಾಮದ ಮಹತ್ವವನ್ನು ಅರಿಯಬೇಕಿದೆ. ನಿಟ್ಟಿನಲ್ಲಿ ಪ್ರತಿಯೊಬ್ಬ ಗ್ರಾಹಕನ ಪಾತ್ರವೂ ಇದ್ದು, ಎಲ್ಲ ಸೇವೆ ಸವಲತ್ತುಗಳನ್ನು ತನ್ನ ನುಡಿಯಲ್ಲಿ ಪಡೆದುಕೊಳ್ಳುವ ಹಕ್ಕು ಅವನಿಗಿದೆ ಎಂಬುದನ್ನು ಅರಿಯಬೇಕಿದೆ. ಎಲ್ಲ ರೀತಿಯಲ್ಲೂ ಗ್ರಾಹಕ ಸ್ನೇಹಿ ವಾತಾವರಣವನ್ನು ಸ್ರುಶ್ಟಿಸಬಲ್ಲ ಕಾನೂನು ಇದ್ದು, ಗ್ರಾಹಕ ಸಂರಕ್ಶಣಾ ಕಾಯ್ದೆಯಲ್ಲಿ ಅದಕ್ಕೆ ಅವಕಾಶವಿದೆ. ಅದನ್ನು ಪಡೆದುಕೊಳ್ಳುವತ್ತ ಹೆಜ್ಜೆ ಇಡಬೇಕಿದೆ. ಗ್ರಾಹಕರ ಹಕ್ಕನ್ನು ಮಂಡಿಸಬೇಕಿದೆ.