Monday 15 March 2010

ನಮ್ಮ ಹಣ, ನಮ್ಮ ಹಕ್ಕು.................!!


ಇಂದು (ಮಾರ್ಚ್ ೧೫) ವಿಶ್ವ ಗ್ರಾಹಕರ ಹಕ್ಕುಗಳ ದಿನ. ಇದೊಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಗ್ರಾಹಕರ ಹಕ್ಕುಗಳ ಮತ್ತು ಅವರು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ಬೆಳಕು ಚೆಲ್ಲಲು ಒದಗುವ ಒಂದು ವಾರ್ಷಿಕ ಸಂದರ್ಭ. ಈ ವರ್ಷದ ಈ ದಿನದ ವಿಷಯ " ನಮ್ಮ ಹಣ, ನಮ್ಮ ಹಕ್ಕು" (“Our money, Our rights”). ಈ ವಿಷಯದ ಹಿಂದಿರುವ ಉದ್ದೇಶ ಅಥವಾ ಪ್ರೇರಣೆ ಏನೆಂದರೆ ಗ್ರಾಹಕರಿಗೆ "ವಿಶ್ವಾಸಾರ್ಹ ಆರ್ಥಿಕ ಸೇವೆ" ಕಲ್ಪಿಸಿಕೊಡುವುದು. ಈ ಗುರಿಯ ಬೆನ್ನಟ್ಟಿ ಈಗಾಗಲೇ ಅನೇಕ ಗ್ರಾಹಕರ ಸಂಸ್ಥೆಗಳು ವಿಶ್ವದಾದ್ಯಂತ ದಣಿವಿಲ್ಲದ ಪ್ರಯತ್ನದಲ್ಲಿ ತೊಡಗಿವೆ. ಆದರೆ ಈ ಲೇಖನದ ವ್ಯಾಪ್ತಿಯನ್ನು ಕೇವಲ ನಮ್ಮ ರಾಜ್ಯಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ.

ಕರ್ನಾಟಕ, ಭಾರತವೆಂಬ ಸಂಯುಕ್ತ ರಾಷ್ಟ್ರದ ಒಂದು ಪ್ರಮುಖ ರಾಜ್ಯ. ಇಲ್ಲಿನ ಗ್ರಾಹಕರು "ವಿಶ್ವಾಸಾರ್ಹ ಆರ್ಥಿಕ ಸೇವೆ"ಯಿಂದ ಮಾತ್ರ ತೊಂದರೆ ಅನುಭವಿಸದೇ ಅದಕ್ಕಿಂತಲೂ ಮಹತ್ವವಾದ ಮತ್ತು ಅತ್ಯವಶ್ಯಕವಾಗಿರುವ ಸೇವೆ ಯಿಂದ ವಂಚಿತರಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿದೆ. ಅದೇ ಪ್ರಾದೇಶಿಕ ಭಾಷೆಯಲ್ಲಿ ಗ್ರಾಹಕ ಸೇವೆ. ಒಂದು ರಾಜ್ಯದಲ್ಲಿ ಅದರಲ್ಲೂ ಸಂಯುಕ್ತ ರಾಷ್ಟ್ರದಲ್ಲಿರುವ ಒಂದು ರಾಜ್ಯದಲ್ಲಿ ಪ್ರಾದೇಶಿಕ ಭಾಷೆಯೆ ಸರ್ವಸ್ವ. ಮೊಟ್ಟ ಮೊದಲನೇ ಪ್ರಾಶಸ್ತ್ಯ ಅದಕ್ಕೆ ದಕ್ಕಬೇಕು. ಆದರೆ ಈ ನಿಯಮವನ್ನು ಕರ್ನಾಟಕ ಪ್ರವೇಶಿಸುವ ಬಹುತೇಕ ಮತ್ತು ಕರ್ನಾಟಕದಲ್ಲೇ ಹುಟ್ಟಿರುವ ಅನೇಕ ಸಂಸ್ಥೆಗಳು ಉಲ್ಲಂಘಿಸುತ್ತಿರುವುದು ನಮ್ಮ ಗ್ರಾಹಕರ ನಿರ್ಲಕ್ಷತನಕ್ಕೆ ಹಿಡಿದ ಕೈಗನ್ನಡಿ ಎಂದರೆ ತಪ್ಪಾಗಲಾರದು. ಈ ನಿಟ್ಟಿನಲ್ಲಿ ಜಾಗೃತಿ ಕಾರ್ಯ ಭರದಿಂದ ಸಾಗಬೇಕಿದೆ.

ಗ್ರಾಹಕರ ಹಕ್ಕು: ಅಂತರರಾಷ್ಟ್ರೀಯ ಮಟ್ಟದಲ್ಲಿ ಹೇಳಬೇಕೆಂದರೆ, ನಾವು ಕೊಟ್ಟ ಹಣಕ್ಕೆ ಯೋಗ್ಯವಾದ, ವಿಶ್ವಾಸಾರ್ಹ ಆರ್ಥಿಕ ಸೇವೆ ನಮಗೆ ಸಿಗುವ ಹಾಗೆ ಒತ್ತಾಯಿಸುವುದೇ ಗ್ರಾಹಕರ ಹಕ್ಕು. ಅದು ಸಾಮಾನ್ಯವಾಗಿ ಅನ್ವಯವಾಗುವ ಅರ್ಥ. ಕರ್ನಾಟಕದ ಮಟ್ಟಿಗೆ ಈಗಿನ ಪರಿಸ್ಥಿತಿಗೆ ಅನ್ವಯವಾಗುವಂತೆ ಹೇಳುವುದಾದರೆ ನಾವು ಕೊಟ್ಟ ಹಣಕ್ಕೆ ನಮಗೆ ವಿಶ್ವಾಸಾರ್ಹ ಆರ್ಥಿಕ ಸೇವೆಯ ಜೊತೆಗೆ ನಮ್ಮ ರಾಜ್ಯ ಭಾಷೆಯಲ್ಲಿ, ಪ್ರಾದೇಶಿಕ ಭಾಷೆ ಕನ್ನಡದಲ್ಲಿ ಸೇವೆ ಸಿಗುವಂತೆ ಒತ್ತಾಯಿಸುವುದೇ ಗ್ರಾಹಕರ ಹಕ್ಕು. ಒಬ್ಬ ಗ್ರಾಹಕ ತಮ್ಮ ರಾಜ್ಯದಲ್ಲಿ ಯಾವುದೋ ಒಂದು ಸ್ಥಳಕ್ಕೆ ಹೋದರೆ ಅಲ್ಲಿ ಆ ರಾಜ್ಯದ ಪ್ರಾದೇಶಿಕ ಭಾಷೆಯಲ್ಲೇ ವ್ಯವಹರಿಸುವುದು, ಪ್ರಾದೇಶಿಕ ಭಾಷೆಯಲ್ಲೇ ಸೇವೆ ಪಡೆಯುವುದು ಅವನ ಜನ್ಮ ಸಿದ್ದ ಹಕ್ಕು. ಆ ತರಹದ ಸೇವೆ ಅವನಿಗೆ ಅಲ್ಲಿ ಕಂಡು ಬರದೇ ಇದ್ದಲ್ಲಿ ಅವನು ಪ್ರತಿಭಟಿಸಿ ಹಕ್ಕು ಚಲಾಯಿಸುವುದು ಒಬ್ಬ ಜಾಗೃತ ಗ್ರಾಹಕನ ಕರ್ತವ್ಯ.

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಗ್ರಾಹಕರು ತಮ್ಮ ಹಕ್ಕುಗಳನ್ನು ಸರಿಯಾಗಿ ಚಲಾವಣೆ ಮಾಡದೇ ಇರುವುದರಿಂದ ಪ್ರಾದೇಶಿಕ ಭಾಷೆಯನ್ನೇ ಕಳೆದುಕೊಳ್ಳುವ ಹಂತಕ್ಕೆ ಅದು ತಲುಪಬಹುದಾಗಿದೆ. ಆದ್ದರಿಂದ ಗ್ರಾಹಕ ಇದನ್ನೆಲ್ಲ ಮೆಟ್ಟಿ ನಿಂತು, ತನ್ನ ಭಾಷೆಯಲ್ಲಿ ಸೇವೆ ಸಿಗದೇ ಇದ್ದಾಗ ಪ್ರತಿಭಟಿಸಬೇಕಾದಂಥ ಅನಿವಾರ್ಯತೆ ಒದಗಿದೆ. ಕರ್ನಾಟಕದಲ್ಲಿ ಕನ್ನಡಿಗ ಗ್ರಾಹಕನಿಗೆ ಸರಿಯಾದ ಸವಲತ್ತು ದೊರಕುತ್ತಿಲ್ಲ ಎಂದರೆ ಅದಕ್ಕೆ ಗ್ರಾಹಕ ತನ್ನ ಹಕ್ಕನ್ನು ಸರಿಯಾದ ರೀತಿಯಲ್ಲಿ ಮಂಡಿಸದೇ ಇರುವುದೇ ಮುಖ್ಯ ಕಾರಣ ಅಂಥ ಹೇಳಬಹುದು. ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಸೇವೆಯಿಂದ ಲಾಭವಾಗುವುದಿಲ್ಲ ಎಂಬ ಸ್ವಯಂ ಘೋಷಿತ ಕಲ್ಪನೆ ಅಥವಾ ಭ್ರಮೆಯಿಂದ ಉದ್ಯಮಿಗಳು ಬಳಲುತ್ತಿದ್ದು, ಅವರನ್ನು ಆ ರೋಗದಿಂದ ಗುಣಮುಖರನ್ನಾಗಿ ಮಾಡುವ ಕೆಲಸ ಪ್ರತಿಯೊಬ್ಬ ಗ್ರಾಹಕರ (ಜಾಗೃತ) ಮೇಲಿದೆ. ಒಬ್ಬೊಬ್ಬ ಜಾಗೃತ ಗ್ರಾಹಕ ಉದ್ಯಮಿಗಳನ್ನು ಆ ರೋಗದಿಂದ ಪಾರು ಮಾಡುವ ಒಂದೊಂದು ಮಾತ್ರೆ (ಔಷದಿ) ಇದ್ದಂತೆ.


ಮೊದಲ ಮಾತ್ರೆ: ಆದ್ದರಿಂದ ಒಬ್ಬ ಜಾಗೃತ ಗ್ರಾಹಕ ಏನೆಲ್ಲವನ್ನು ನಿರೀಕ್ಷಿಸಬೇಕೆಂದರೆ,,
ಬ್ಯಾಂಕಿಗೆ ಹೋದರೆ ಕನ್ನಡದಲ್ಲೇ ವ್ಯವಹರಿಸುವುದು. ಕನ್ನಡದಲ್ಲೇ ಅರ್ಜಿಗಳನ್ನು ಬರೆಯಬೇಕು. ಹೋಟೆಲಗೆ ಹೋದರೆ ಅಲ್ಲಿ ಕನ್ನಡದಲ್ಲಿ ಸಂಭಾಷಿಸುವುದು, ಅಲ್ಲಿನ ಹೊತ್ತಿಗೆಯಲ್ಲಿ ಕನ್ನಡವಿರಬೇಕು. ಹೀಗೆ ಕಣ್ಣು ಹಾಯಿಸಿದಲ್ಲೆಲ್ಲ ಕಡೆಗಣನೆಯಾಗುತ್ತಿರುವ ಪ್ರಾದೇಶಿಕ ಭಾಷೆಯ ಮಹತ್ವವನ್ನು ಮತ್ತು ಅವಶ್ಯಕತೆಯನ್ನು ಒತ್ತಾಯಿಸುವದಲ್ಲದೇ, ಸಾರಿ ಸಾರಿ ಯಾರ್ ಯಾರಿಗೆ ಹೇಗ್ ಹೇಗೆ ಹೇಳಬೇಕೊ ಹಾಗೆ ಹೇಳಲೇಬೇಕಾಗಿದೆ. ಉದ್ಯಮಿಗಳನ್ನು ಮತ್ತು ಉದ್ದಿಮೆಗಳನ್ನು ಈ ಕಾಯಿಲೆಗಳ ವ್ಯಾಪ್ತಿಯಿಂದ ಹೊರತರಬೇಕಿದೆ. ನಾವು ಕೊಟ್ಟ ಹಣಕ್ಕೆ ಪ್ರತಿಯಾಗಿ ಕನ್ನಡದಲ್ಲಿ ಗ್ರಾಹಕ ಸೇವೆ ನಮಗೆ ಸಿಗುವ ಹಾಗೆ ಮಾಡಬೇಕಿದೆ. ಕರ್ನಾಟಕದ ಮಟ್ಟಿಗೆ ಆಗ "ನಮ್ಮ ಹಣ, ನಮ್ಮ ಹಕ್ಕು" ಎಂಬುದು ಯಶಸ್ವಿಯಾಗಲು ಸಾದ್ಯವಾಗುತ್ತದೆ.


ಸೃಷ್ಟಿಯ ಮಜಾ: ಹಲವರಿಗೆ ಕೆಲವು ಸವಲತ್ತುಗಳು ಬಯಸದೇ ಸಿಕ್ಕಿಬಿಡುತ್ತವೆ. ಇನ್ನು ಕೆಲವರು ಹಲವು ಸವಲತ್ತುಗಳನ್ನು ಹೋರಾಟ ಮಾಡಿ, ಹಕ್ಕು ಮಂಡಿಸಿ ಪಡೆಯಬೇಕಾಗುತ್ತದೆ. ಮತ್ತು ಇದೇ ಶಾಶ್ವತ..................