Monday 21 February 2011

ಬೀದರ್ ಉತ್ಸವ ಕನ್ನಡಿಗರಿಗೆ ಅಲ್ಲೇನ್ರಿ..?



ಕರ್ನಾಟಕದ ಪ್ರತಿಯೊಂದು ಪ್ರದೇಶನೂ ತನ್ನದೇ ಆದ ವಿಶಿಷ್ಟತೆಗಳನ್ನು ಹೊಂದಿವೆ. ಆ ವಿಶಿಷ್ಟತೆಗಳನ್ನು, ಇತಿಹಾಸವನ್ನು, ಸಂಸ್ಕೃತಿ ಸಂಪ್ರದಾಯವನ್ನು ಪರಿಚಯಿಸಲು ಹೊರಜಗತ್ತಿಗೆ ತೋರ್ಪಡಿಸಲು ಅಲ್ಲಿ ನಡೆಯುವ ಉತ್ಸವಗಳು ಪ್ರಮುಖ ಪಾತ್ರ ವಹಿಸುತ್ತವೆ. ಹೀಗೆ ಸಂಘಟಿಸುವ ಉತ್ಸವದಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯಾ ಪ್ರದೇಶದ ಜನರ ನುಡಿಗೆ ಹೊಂದಿಕೊಂಡಿರುವ ಮನರಂಜನೆಗೆ ಮೀಸಲಾಗಿರಬೇಕಾಗಿರುವುದು ವಾಡಿಕೆ. ಆದರೆ, ಜಾಗತೀಕರಣದ ಫಲಾನೋ, ಹಿಂದೆ ಇದ್ದ ಹಿಂದಿ ಮುಂದೆ ಬರುತ್ತಿರುವ ಫಲಾನೋ, ಅದೇನ್ ರೋಗ ಬಂತೋ ಈ ಉತ್ಸವಗೋಳಿಗಿ ಕನ್ನಡಿಗರನ್ನ ಕನ್ನಡದಿಂದ ಮತ್ತ ಕರ್ನಾಟಕದಿಂದ ದೂರ ಒಯ್ಯಾಕತ್ತ್ಯಾವು.

ಮೈಸೂರು ಉತ್ಸವ ಆಯ್ತು, ಬೆಂಗಳೂರು ಹಬ್ಬ ಆಯ್ತು, ಈಗ ಈ ಬೀದರ್ ಉತ್ಸವ :--
ಇತ್ತೀಚಿಗೆ (ಫೆ. ೧೮,೧೯,೨೦) ಬೀದರಿನಲ್ಲಿ ಮೂರು ದಿನಗಳ ಕಾಲ ಬೀದರ್ ಉತ್ಸವ ಜರುಗಿತು. ಬೀದರ್ ಕರ್ನಾಟಕದ ಗಡಿ ಪ್ರದೇಶ. ಅಲ್ಲಿರುವವರು ಕನ್ನಡಿಗರು, ಅಲ್ಲಿ ಮಾತನಾಡುವ ಭಾಷೆ ಕನ್ನಡ (ಗಡಿ ಪ್ರದೇಶ ಇದ್ರೂ, ಅಲ್ಲಿ ಕನ್ನಡನೇ ಹೆಚ್ಚು ಮಾತಾಡ್ತಾರೆ), ಹೀಗಿರುವಾಗ ಬೀದರನಲ್ಲಿ ಸಂಘಟಿಸುವ ಉತ್ಸವದಲ್ಲಿ ಕಾಣುವ ಮನರಂಜನೆ, ಯಾವ ಭಾಷೆಯದ್ದಾಗಿರಬೇಕು. ಅಲ್ಲಿರುವ ಕಾರ್ಯಕ್ರಮಗಳ ಕಲಾವಿದರು ಯಾರಾಗಿರ್ಬೇಕು.? ಕಾರ್ಯಕ್ರಮಗಳ ಪಟ್ಟಿ ಕಡೆ ಗಮನಹರಿಸಿದರೆ, ಶಿಫಾಲಿ ಜಾರಿವಾಲಾ, ದಲೆಲ್ ಮೆಹಂದಿ, ಖವಾಲಿ, ಅಲ್ಖಾ ಯಾಗ್ನಿಕ್, ಪಂಕಜ್ ಉದಾಸ್, ಶಾಂತನು ಮುಖರ್ಜಿ ಹೀಗೆ ಸಾಲು ಸಾಲು ಕನ್ನಡೇತರ ಕಲಾವಿದರು ಕಾಣುತ್ತಾರೆ. ಅವರು ಬಂದು "ಚೆಲ್ಲಿದರೂ ಮಲ್ಲಿಗೆಯ" ಅಂಥ ಹಾಡಲು ಸಾದ್ಯನಾ.? ಮತ್ತೆ ಅದೇ "ತೇರಾ ಸುರೂ..ರ್" ಅಂಥ ಹಾಡೌರು. ಈ ಆಹ್ವಾನ ಪತ್ರಿಕೆಯನ್ನು ಹಿಂದಿಯಲ್ಲಿ ಬರೆಸಿ, ಮುಂಬಯಿಯಲ್ಲೋ ಲಕನೌದಲ್ಲೋ ಕಾರ್ಯಕ್ರಮ ನಡೆಸಿದ್ದರೆ ಒಂದಕ್ಕೊಂದು ಹೊಂದಾಣಿಕೆ ಇರುತ್ತಿತ್ತು. ನಾವು ತಲೆ ಕೆಡಿಸಿಕೊಳ್ಳುವ ಅಗತ್ಯ ಇರ್ತಿರ್ಲಿಲ್ಲ. ಆದರೆ ಈಗ ಆಗಿರುವುದೇ ಬೇರೆ. ನಮ್ಮ ಉಪೇಂದ್ರ ಒಬ್ಬರನ್ನು ಬಿಟ್ಟು ಉಳಿದೆಲ್ಲ ಬಹುತೇಕ ಕಲಾವಿದರು ಹೊರರಾಜ್ಯದವರೇ. ಹಾಗಾದರೆ ನಮ್ಮ ಕನ್ನಡದ ಗಾಯಕರು, ಹಾಸ್ಯ ಕಲಾವಿದರು, ಸಂಗೀತ ವಾದ್ಯ ಪರಿಣಿತರು, ಮಿಮಿಕ್ರಿ ಪರಿಣಿತರು, ಏಕ ಪಾತ್ರಾಭಿನಯದವ್ರು ಇವರಿಗೆಲ್ಲರಿಗೂ ಈ ಉತ್ಸವ ಯೋಗ್ಯ ಅಲ್ವಾ.? ಅಥವಾ ಯೋಗ್ಯತೆ ಇಲ್ವಾ.? ಕನ್ನಡದ ಮನರಂಜನೆಯ ಯೋಗ್ಯತೆ ಪ್ರಶ್ನಿಸಿದಂತಾಗುತ್ತದೆ ಇದು. ಇದು ನಮ್ಮ ಕಲಾವಿದರಿಗೆ ಮಾಡಿದ ಅವಮಾನವಲ್ಲವೇ.? ಯಾರಾದ್ರು ಇದನ್ನ ಪ್ರಶ್ನೆ ಮಾಡಿ ನೋಡ್ರಿ ಅವರ ಹತ್ರ ಉತ್ತರ ರೆಡಿಯಾಗಿರುತ್ತೆ, "ಕಲೆಗೆ ಭಾಷೆಯಿಲ್ಲ.!!!" ಆ ಕಲೆಯನ್ನು ನೋಡುವವರಿಗೆ ಭಾಷೆಯಿದೆ, ಆ ಕಲೆ ನಡೆಯುವ ಸ್ಥಳಕ್ಕೆ ಅಲ್ಲಿನ ಭಾಷೆ ಇದೆ ಅನ್ನೋದು ಗೊತ್ತಾಗಬೇಕಲ್ವ. ಕರ್ನಾಟಕದ ಪ್ರದೇಶವಾದ ಬೀದರಿನಲ್ಲಿ ನಡೆದ, ನಮ್ಮ ಸಂಸ್ಕೃತಿ ಸಂಪ್ರದಾಯವನ್ನು ಬಿಂಬಿಸುವ ಒಂದು ಉತ್ಸವದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಬಹುತೇಕ ಹೊರರಾಜ್ಯದವರೇ ಇರ್ತಾರೆ ಅಂದ್ರೆ ಅದು ಜಗತ್ತಿಗೆ ಯಾವ ಸಂದೇಶ ರವಾನಿಸುತ್ತದೆ ಅನ್ನುವ ಅರಿವಿದ್ದವರೂ ಬಹುಶ: ಹೀಗೆ ಮಾಡುತ್ತಿರಲಿಲ್ಲ. ಬೆಂಗಳೂರಿನಲ್ಲಿ ವಲಸಿಗರನ್ನು ಕನ್ನಡದ ಮುಖ್ಯವಾಹಿನಿಗೆ ತರಲು ಪ್ರಯತ್ನಗಳು ಸಾಗಿದ್ದರೆ ಅತ್ತ ನಮ್ಮ ಗಡಿಗಳಲ್ಲಿ ಕನ್ನಡ ಕಡೆಗಣಿಸುವ ಇಂಥ ಉತ್ಸವಗಳು ನಮ್ಮ ರಾಜ್ಯದ ಜನರನ್ನು ಕನ್ನಡದ ಮುಖ್ಯವಾಹಿನಿಯಿಂದ ದೂರ ಒಯ್ಯುತ್ತಿವೆ. ಉತ್ಸವವೆಂಬ ಊಟದಲ್ಲಿ ಕನ್ನಡ ಕಾರ್ಯಕ್ರಮ ಅನ್ನೋದು ಉಪ್ಪಿನಕಾಯಿ ಥರ ಆಗೋಗಿದೆ.

ಕೊನೆ ಮಾತು: ಗಡಿ ಅಭಿವೃದ್ದಿ ಪ್ರಾದಿಕಾರ, ಗಡಿ ಕಾವಲು ಪಡೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಒಂದೇ ಎರಡೇ ಸರಕಾರದ ಸಂಸ್ಥೆಗಳು. ಆದರೂ..?