Thursday 24 December 2009

ಶೇಷಾದ್ರಿಪುರ ಓಕೆ, ಅದರ ಮುಂದೆ ಅಂ ಯಾಕೆ?


ಮಲ್ಲೇಶ್ವರಂ, ಶೇಷಾದ್ರಿಪುರಂ ಇವು ಬದಲಾವಣೆಯಾಗಿರುವಂತಿರುವ ಹೆಸರುಗಳು. ಓಕಳೀಪುರಂ, ಕೋರಮಂಗಲಂ, ಶ್ರೀರಾಮಪುರಂ ಇವು ಬದಲಾವಣೆಯಾಗುತ್ತಿರುವ ಹೆಸರುಗಳು. ವಿಜಯನಗರಂ, ರಾಜಾಜಿನಗರಂ ಇವು ಬದಲಾಗಬಹುದಾದ ಹೆಸರುಗಳು. ಮುಂದೆ ಊಹೆ ಮಾಡಿಕೊಂಡರೆ ಸಾಕಷ್ಟು ಹೆಸರುಗಳು ಕಾಣುತ್ತವೆ.
ಹೆಸರಲ್ಲೇನಿದೆ....? ಶೇಷಾದ್ರಿಪುರ ಅನ್ನೊ ಬದಲು ಶೇಷಾದ್ರಿಪುರಂ ಅಂದರೆ ಏನ್ ತಪ್ಪು, ಅದರಲ್ಲೇನು ಮಹಾ ತಪ್ಪಿದೆ ಅಂಥ ಕೇಳೊ ವಿಟ್ಯಾಮಿನ್ ಎನ್ ( ನಮ್ಮತನ) ಕಡಿಮೆಯಿರೋ ನಮ್ಮ ಜನರು ಸಾಕಷ್ಟಿದ್ದಾರೆ. ಆದರೆ ಇದು ನಮ್ಮತನವನ್ನು ಮಾಯ ಮಾಡುವ, ಕನ್ನಡ ಅನುಷ್ಟಾನವನ್ನು ನಿರ್ಲಕ್ಷಿಸುವ ಒಂದು ಸಣ್ಣ ಹೆಜ್ಜೆ ಎಂದು ಕನ್ನಡದ ಕಣ್ಣಿನಿಂದ ನೋಡಿದಾಗ ಮಾತ್ರ ಅವರಿಗೆ ಅರ್ಥವಾಗುತ್ತದೆ. ಇದರಲ್ಲಿ ಬರೀ ಹೆಸರನ್ನಷ್ಟೆ ನೋಡದೆ ನಮ್ಮ ಸಂಸ್ಕೃತಿ, ಒಗ್ಗಟ್ಟು, ನುಡಿಯ ಹಿರಿಮೆ, ಸ್ವಾಭಿಮಾನ ಎಲ್ಲವನ್ನು ನೋಡಬೇಕು ಅಂಥ. ಶೇಷಾದ್ರಿಪುರಂಗೆ ಹೋಗಿ ಬರ್ತಿನಿ ಎಂಬ ವಾಕ್ಯಕ್ಕಿಂತ ಶೇಷಾದ್ರಿಪುರಕ್ಕೆ ಹೋಗಿ ಬರ್ತಿನಿ ಅನ್ನೊ ವಾಕ್ಯದಲ್ಲಿ ಕನ್ನಡ ಎದ್ದು ಕಾಣುತ್ತದೆ. ನಮ್ಮ ನುಡಿಯ ದರ್ಶನವಾಗುತ್ತದೆ.
ಬ್ರಿಟಿಷರು ತಾವು ಹೋದ ಕಡೆಯಲ್ಲೆಲ್ಲ ಊರುಗಳ ಹೆಸರುಗಳನ್ನು ತಮ್ಮ ನಾಲಿಗೆಗೆ ಹೊರಳೊ ಹಾಗೆ ಮಾರ್ಪಾಡಿಸಿಕೊಂಡಿದ್ದರು. ಅವರು ನಮ್ಮ ದೇಶ ಬಿಟ್ಟು ೬೨ ವರ್ಷಗಳಾದರೂ ಎಷ್ಟೋ ಕಡೆ ಅದೇ ಹೆಸರುಗಳು ಮುಂದುವರೆದಿರುವುದನ್ನು ಕಾಣಬಹುದು. ಹೀಗಿರುವಾಗ, ಇದೇ ರೀತಿ ಯಾರೋ ಕೆಲವರ ನಾಲಿಗೆಯ ಹಿತಕ್ಕೆ ಕೋಟಿ ಕೋಟಿ ನಾಲಿಗೆಗಳು ಹೆಸರನ್ನು ತಿರುಚಿ ಹೇಳುವುದು ಎಷ್ಟು ಸೂಕ್ತ. ಈಗ ವಿಜಯನಗರ ಅಂಥ ಇರೋದನ್ನು ವಿಜಯನಗರಂ ಅಂಥ ಯಾರೋ ಕೆಲವು ಜನ "ಅಂ" ಪ್ರೀಯರು ಕರೀತಾರೆ ಅಂಥ ನಾವು ಅದನ್ನೇ ಅನ್ನೋಕೆ, ಬರಿಯೋಕೆ ಶುರು ಮಾಡಿದ್ರೆ,, ನಾಳೆ ನಮ್ ಉತ್ತರದ ಮಹಾಶಯರು ಬಂದಬಿಟ್ಟು ವಿಜಯನಗರಂ ಅಂಥ ನಮಗೆ ಅನ್ನೋಕೆ ಬರೋದಿಲ್ಲ, ನಾವು ಅದನ್ನು ಭಿಜಯನಗರಂ ಅಂಥ ಕರೀತಿವಿ ಅಂದ್ರೆ, ನಾವು ಹಂಗೆ ಅನ್ನೋಕೆ ಆಗುತ್ತಾ...? ಎಲ್ಲರೂ ಅನ್ನೋದನ್ನೇ ನಾವು ಅನ್ನೋಕೆ, ನಮ್ಮ ನಾಲಿಗೆಗೆ ನಿಯತ್ತೇ ಇಲ್ಲವೇ...? ಸುಂದರವಾಗಿದ್ದ ವಿಜಾಪುರವನ್ನು ಬಿಜಾಪುರ ಅಂಥ ಮಾಡಿದ್ದನ್ನೇ ಇನ್ನೂ ಸರಿ ಮಾಡಕ್ಕಾಗ್ತಿಲ್ಲ. ಇನ್ನೂ ಹಾಗೆ ಎರಡು ಹೆಸರುಗಳ ಮದ್ಯೆ ಗೋಳಾಡ್ತಿದೆ.
ಈಗ ಮಲ್ಲೇಶ್ವರ, ಶೇಷಾದ್ರಿಪುರ ಅಂಥ ಬರೆದಿರೋ ಫಲಕಗಳನ್ನು ನಾವು ಬೆಂಗಳೂರಿನಲ್ಲಿ ಬೆರಳೆಣಿಕೆಯಷ್ಟು ಕಡೆ ನೋಡಬಹುದು. ಬಹುತೇಕ ಕಡೆ ಮುಂದೆ "ಅಂ" ಹಚ್ಚಿ ಬರೆದಿರುವುದನ್ನು ಕಾಣುತ್ತೇವೆ. ಅದೇ ರೀತಿ ಓಕಳೀಪುರ, ಶ್ರೀ ರಾಮಪುರ ಅಂಥ ಕೆಲವು ಕಡೆ ನೋಡಬಹುದು. ಆದರೆ ಈಗಿನ ಪರಿಸ್ಥಿತಿಯಲ್ಲಿ ೫-೧೦ ವರ್ಷಗಳ ನಂತರ ಈಗಿರುವ ಹೆಸರುಗಳೂ ಬದಲಾಗುವ ವಾತಾವರಣ ಅಗೋಚರವಾಗಿ ನಿರ್ಮಾಣವಾಗುತ್ತಿದೆ. ದೇವಾಲಯದ ಪ್ರಸಾದಕ್ಕೂ ಇದು ಬಿಟ್ಟಿಲ್ಲ. ಕನ್ನಡದಲ್ಲಿ "ಪ್ರಸಾದ" ಅಂಥ ಇರುವಂಥದ್ದು ಆಂಗ್ಲ ಭಾಶೆಯಲ್ಲಿ ಪ್ರಸಾದಂ ಹೆಂಗ್ ಆಗುತ್ತೆ ಅಂಥ ಆ ದೇವಾಲಯದ ದೇವರಿಗೂ ಯಕ್ಷ ಪ್ರಶ್ನೆಯಾಗಿದೆ. ಲಾಲ್ ಬಾಗಿನ ಮುಖ್ಯ ದ್ವಾರದಲ್ಲಿ ಕಾಣುವ ಫಲಕದಲ್ಲಿ ತೋಟ ಇರುವ ಬದಲು "ತೋಟಂ" ಹೆಂಗ್ ಬಂತು ಅನ್ನೋದು ಅಲ್ಲಿಯ ಹೂಗಿಡಗಳಿಗೂ ತಿಳಿಯದಾಗಿದೆ. ಹೀಗೆ ಮುಂದುವರೆದರೆ ಈಗಿರುವ ವಿಜಯನಗರ ಮುಂದೆ ವಿಜಯನಗರಂ ಅಂಥ, ಈಗಿರುವ ಜಾಲಹಳ್ಳಿ ಮುಂದೆ ಜಾಲಪಲ್ಲಿ ಅಂಥ, ಈಗಿರುವ ಬನ್ನೇರುಘಟ್ಟ ಮುಂದೆ ಬನ್ನೇರುಗುಟ್ಟ ಅಂಥ ಆಗಲು ಬಹಳ ವರ್ಷ ಕಾಯಬೇಕಿಲ್ಲ. ಪೋಕಿರಿಯನ್ನು ಚಿತ್ರಮಂದಿರದಲ್ಲಿ ನೋಡಿ, ವಂಶಿಯನ್ನು ಟಿವಿ ಚಾನಲನಲ್ಲಿ ಹಾಕಿದಾಗ ಕೂಡ ನೋಡದೇ ಇರುವವರಿಗೆ, ನಿಯತ್ತಿಲ್ಲದ ನಾಲಿಗೆಗಳಿಗೆ ಹೇಗೆ ತಿಳಿಯೊಕ್ ಸಾದ್ಯ. ನಿಯತ್ತಿರುವ ನಾಲಿಗೆಗಳು ಈ ಸಮಸ್ಯೆಯನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಕೊನೆ ಗುಟುಕಂ: ಹೆಸರಲ್ಲೇನಿದೆ...? ಅಂಥ ಹೇಳುವವರು ಹೆಸರಲ್ಲೇ ಎಲ್ಲ ಇದೆ ಅಂಥ ಹೇಳುವವರ ಮತ್ತು ಪ್ರತಿಪಾದಿಸುವವರ ಜೊತೆ ಸಹಕರಿಸಬೇಕಲ್ಲವೇ....?

ವಿಟ್ಯಾಮಿನ್ ಎನ್ (ನಮ್ಮತನ) ಕೊರತೆಯಿಂದ ಬರುವ "ಅಂ ಜ್ವರ" ಎಂಬ ಹೊಸ ಸಾಂಕ್ರಾಮಿಕ ರೋಗ.......

ನಮಸ್ಕಾರ ಗೆಳೆಯರೆ......

ಕೋಳಿ ಜ್ವರ, ಡೆಂಗ್ಯೂ ಜ್ವರ, ಹಂದಿ ಜ್ವರ, ಮಂದಿ ಜ್ವರ ಈ ರೀತಿ ಅನೇಕ ಮಾರಣಾಂತಿಕ, ಸಾಂಕ್ರಾಮಿಕ ಕಾಯಿಲೆಗಳನ್ನು ಕಂಡ ಬೆಂಗಳೂರಿಗೆ ಇದೀಗ ಬಹು ದಿನಗಳಿಂದ ವ್ಯವಸ್ಥಿತವಾಗಿ, ನಿಧಾನವಾಗಿ, ಅಗೋಚರವಾಗಿ ಹರಡುತ್ತಿರುವ ಹೊಸ ಸಾಂಕ್ರಾಮಿಕ ರೋಗದ ಪತ್ತೆಯಾಗಿದೆ. ಬನ್ರಿ ಅದೇನು ಅಂಥ,, ಒಂದ್ ಸ್ವಲ್ಪ ನಮ್ ಕಣ್ಣನ್ನು ಅದರ ಮೇಲೆ ಹಾಯಿಸೋಣ.

ರೋಗದ ಸಂಕ್ಷಿಪ್ತ ಪರಿಚಯ: ಈ ರೋಗದ ಹೆಸರು " ಅಂ ಜ್ವರ ". ಇದು ಆರೋಗ್ಯ ಇಲಾಖೆಗೆ ಸಂಬಂಧಪಡದೇ ಇರುವ ಒಂದು ಸಾಂಕ್ರಾಮಿಕ ರೋಗ. ಇದು ಸಾರ್ವಜನಿಕ ಇಲಾಖೆಗೆ ಸಂಬಂಧವಿರುವ ರೋಗ. ಇದು ಹೆಸರುಗಳಿಗೆ, ವಿಶೇಷವಾಗಿ ಬೆಂಗಳೂರಿನ ಕೆಲವು ಬಡಾವಣೆಗಳ ಹೆಸರುಗಳಿಗೆ ಸದ್ಯದ ಮಟ್ಟಿಗೆ ಮೀಸಲಿರುವ ರೋಗ. ಇದು ಅಗೋಚರವಾಗಿ ಹರಡುತ್ತಿರುವ ಒಂದು ರೋಗವಾಗಿದೆ. ಕನ್ನಡದ ಕಣ್ಣಿನಿಂದ ನೋಡಿದಾಗ ಮಾತ್ರ ಈ ರೋಗ ಕಾಣಸಿಗುವುದು ಇದರ ವಿಶೇಷತೆ.

ರೋಗದ ಗುಣ ಲಕ್ಷಣಗಳು: ಈ ರೋಗದ ಗುಣ ಲಕ್ಷಣಗಳನ್ನು ನಿಖರವಾಗಿ ಹೇಳಲು ಅಸಾದ್ಯ. ಏಕೆಂದರೆ ಅಷ್ಟೊಂದು ವ್ಯವಸ್ಥಿತವಾಗಿ, ಅಗೋಚರವಾಗಿ ಹರಡುತ್ತದೆ. ಸಂಶೋದನಾ ನಿರತ ಕೆಲವು ತಜ್ನ ವೈದ್ಯರ ಪ್ರಕಾರ, "ಕೆಲವೇ ಕೆಲವು ರೋಗಜಂತುಗಳ" ಸ್ವಾರ್ಥದ ಪರಿಣಾಮದಿಂದ ಹುಟ್ಟುವ ಈ ರೋಗ ಮುಂದೆ ವಿಟ್ಯಾಮಿನ್ ಎನ್ ( ನಮ್ಮತನ) ಕಡಿಮೆಯಿರುವ " ಅಸಂಖ್ಯಾತ ಕ್ರಿಮಿಕೀಟಗಳ" ಅರಿವಿನ ಕೊರತೆಯಿಂದ ಮತ್ತು ವಿಟ್ಯಾಮಿನ್ ಎನ್ ಇರುವ "ಹಲವು ಸೂಕ್ಷಜೀವಿಗಳ" ಅಸಹಾಯಕತೆಯಿಂದ ಈ ರೋಗ ಅಚ್ಚುಕಟ್ಟಾಗಿ ಈಗ ಬೆಂಗಳೂರಿನಲ್ಲಿ ಹರಡುತ್ತಿದೆ.

ರೋಗ ಹರಡುವಿಕೆ: ಮೊದ ಮೊದಲು ತೆರೆಮರೆಯಲ್ಲಿ ಕಂಡುಬರುವ ಈ ರೋಗವು ನಿಧಾನ ಗತಿಯಲ್ಲಿ "ಕೆಲವೇ ಕೆಲವು ರೋಗಜಂತುಗಳ" ಸಹಾಯದಿಂದ ಕಾಡ್ಗಿಚ್ಚಿನಂತೆ ಹರಡಿ ಮುಖ್ಯವಾಹಿನಿಗೆ ಬಂದು ಗೋಚರವಾಗುತ್ತದೆ. ಈ ರೋಗ ಹರಡುವುದನ್ನು ತಡೆಯುವುದು ಎಷ್ಟು ಮುಖ್ಯ ಅಂದ್ರೆ,, ಕೇವಲ ರೋಗ ಜಂತುಗಳು ಹೆಚ್ಚಾಗಿರುವ ಕೆಲವು ಪ್ರದೇಶಕ್ಕೆ ಸೀಮಿತವಾಗಿರುವ ಈ ರೋಗ ಮುಂದೆ ರಾಜ್ಯದಾದ್ಯಂತ ವಿಸ್ತಾರವಾಗುವ ಹಂತ ತಲುಪುಬಹುದು. ಇನ್ನೂ ವಿಚಿತ್ರ ಅಂದ್ರೆ ಈ ರೋಗ ವ್ಯಾಪಕವಾಗಿ ಹರಡಿದರೆ ಇದು ಕೆಲವು ಹೊಸ ಸಾಂಕ್ರಾಮಿಕ ರೋಗಗಳಾದ ಪಲ್ಲಿ, ಗುಟ್ಟ ಎಂಬವುಗಳನ್ನು ಹುಟ್ಟು ಹಾಕುತ್ತದೆ. ಇದರಿಂದ ಕೇವಲ ಪುರ ಮತ್ತು ನಗರ ಪ್ರದೇಶಗಳಿಗೆ ಇದ್ದ ಈ ರೋಗ ಮುಂದೆ ನಮ್ಮ ಹಳ್ಳಿಗಳಿಗೆ ವಿಸ್ತರಿಸಿ ಜಾಲಹಳ್ಳಿಯನ್ನು ಜಾಲಪಲ್ಲಿಯನ್ನಾಗಿ, ಬೊಮ್ಮನಹಳ್ಳಿಯನ್ನು ಬೊಮ್ಮನಪಲ್ಲಿಯನ್ನಾಗಿ, ಬನ್ನೇರುಘಟ್ಟವನ್ನು ಬನ್ನೇರುಗುಟ್ಟವನ್ನಾಗಿ ಹೀಗೆ ಹಳ್ಳಿಗಳ ಮತ್ತು ಗುಡ್ಡಗಳ ಸ್ವಾಭಿಮಾನದ ಆರೋಗ್ಯವನ್ನೇ ಹದಗೆಡಿಸುತ್ತದೆ. ಬಾಗೆಪಲ್ಲಿಗೆ ಹಿಡಿದಿರುವ ರೋಗಾನೇ ಭಾಗ್ಯನಗರವಾದರೂ ಇನ್ನೂ ಸರಿಯಾಗಿ ಬಿಟ್ಟಿಲ್ಲ, ಆ ತಾಲೂಕಿನಲ್ಲಿರುವ ಎಷ್ಟೊಂದು ಹಳ್ಳಿಗಳು ಇನ್ನೂ "ಪಲ್ಲಿ ಜ್ವರ" ದಿಂದ ಬಳಲುತ್ತಿವೆ. ಹೀಗಿರುವಾಗ ಬಹಳಷ್ಟು ಹಳ್ಳಿಗಳು ಈ ರೋಗಕ್ಕೆ ತುತ್ತಾದ್ರೆ ಸಾರ್ವಜನಿಕ ಇಲಾಖೆ ಒತ್ತಡಕ್ಕೆ ಸಿಲುಕುತ್ತವೆ. ಈಗಿಗ ದೇವಾಲಯಗಳಿಗೂ, ಅಲ್ಲಿನ ಪ್ರಸಾದಕ್ಕೂ ಈ ರೋಗ ವಿಸ್ತರಿಸಿದೆ.

ರೋಗಕ್ಕೆ ಚಿಕಿತ್ಸೆಗಳು: ಈ ರೋಗಕ್ಕೆ ಮೂರು ತರಹದ ಚಿಕಿತ್ಸೆಗಳನ್ನು ವೈದ್ಯರು ಕಂಡು ಹಿಡಿದಿದ್ದಾರೆ. ಮೊದಲನೆಯದಾಗಿ ಈ ರೋಗಕ್ಕೆ ಮುಖ್ಯ ಕಾರಣವಾಗಿರುವ "ಕೆಲವೇ ಕೆಲವು ರೋಗಜಂತುಗಳನ್ನು" ಹಿಡಿತದಲ್ಲಿಟ್ಟು, ರೋಗ ಹುಟ್ಟುವಿಕೆಯಲ್ಲಿ ಸಕ್ರೀಯಗೊಳ್ಳದಂತೆ ನೋಡಿಕೊಳ್ಳಬೇಕು. ಎರಡನೆಯದಾಗಿ ಈ ರೋಗ ಬೆಳೆಯಲು ಕಾರಣವಾಗುವ ವಿಟ್ಯಾಮಿನ್ ಎನ್ ಕಡಿಮೆಯಿರುವ "ಅಸಂಖ್ಯಾತ ಕ್ರಿಮಿಕೀಟಗಳಿಗೆ" ವಿಟ್ಯಾಮಿನ್ ಎನ್ ಒದಗಿಸುವ ಅಥವಾ ಹೆಚ್ಚಿಸಿಕೊಳ್ಳುವ ವ್ಯವಸ್ಥೆ ಮಾಡಬೇಕು. ಮತ್ತು ಮೂರನೆಯದಾಗಿ ಸಾಕಷ್ಟು ವಿಟ್ಯಾಮಿನ್ ಎನ್ ಇದ್ದರೂ ರೋಗ ತಡೆಯುವಿಕೆಯ ಸಾಮರ್ಥ್ಯದ ಕೊರತೆಯಿರುವ "ಹಲವು ಸೂಕ್ಷಜೀವಿಗಳಿಗೆ" ರೋಗ ತಡೆಯುವಿಕೆ ಬಗ್ಗೆ ಮಾರ್ಗದರ್ಶನ ಮಾಡಬೇಕು.

ಕೊನೆ ಔಷದಿ: ಭಾರತೀಯ ವಿಜ್ನಾನ ಸಂಸ್ಥೆ. ಬೆಂಗಳೂರು. ವಿಜ್ನಾನಿಗಳ ಸಂಶೋಧನೆ ಪ್ರಕಾರ ವಿಟ್ಯಾಮಿನ್ ಎನ್ (ನಮ್ಮತನ) ಹೆಚ್ಚಿಸಿಕೊಳ್ಳುವುದರಿಂದ, ನಮ್ಮ ಕಣ್ಣುಗಳನ್ನು ಕನ್ನಡದ ಕಣ್ಣುಗಳಾಗಿ ಉಚಿತವಾಗಿ ಬದಲಾಯಿಸಿಕೊಳ್ಳಬಹುದು. ಮತ್ತು ಸಾರ್ವಜನಿಕ ಇಲಾಖೆಗೆ ಸಂಬಂಧಪಟ್ಟ ಬಹುತೇಕ ಕಾಯಿಲೆಗಳನ್ನು ತಡೆಗಟ್ಟಬಹುದು.

Tuesday 3 November 2009

ನಮಗೂ ಒಂದು ಪ್ರಾದೇಶಿಕ ಪಕ್ಷ ಏಕೆ ಬೇಕು..........?

!!......................................................................................................!!
ಯಾರಿಗೋ ಏನೇನೋ ನೀಡುವ ದೇವನೇ, ಕನ್ನಡಿಗನ ಮನವಿ ಸಲ್ಲಿಸ..ಲೇನು......?
ಕನ್ನಡದ ಜನತೆ ಕಾಣುತಿರುವ ಮನಸಿನ ಆಸೆ ಕೇಳಿಸ..ಲೇನು...........?

ನಾವು ಈಗ ಸ್ವಾಭಿಮಾನದಲ್ಲಿ ಏಳ.ಬೇಕು.......ನಮಗೂ ಒಂದು ಪಕ್ಷ ಬೇಕು..
ಕರವೇ ಇದ್ದ ಹಾಗೆ ಬದಲೇನು ಆಗದಂತೆ ಮನಸ್ಸು ಕದ್ದು ಗೆಲ್ಲ..ಬೇಕು..

ನಾವು ಈಗ ಸ್ವಾಭಿಮಾನದಲ್ಲಿ ಏಳ.ಬೇಕು.......ನಮಗೂ ಒಂದು ಪಕ್ಷ ಬೇಕು..
!!.....................................................................................................!!
ನಮ್ಮ ಕರ್ನಾಟಕ ರಾಜ್ಯ ರಚನೆಯಾಗಿ, ಏಕೀಕರಣವಾಗಿ ೫೩ ವರ್ಷಗಳು ಕಳೆದರೂ ನಮ್ಮ ಕರ್ನಾಟಕ, ಕನ್ನಡ, ಕನ್ನಡಿಗ ನಿರೀಕ್ಷಿತ ಮಟ್ಟದಲ್ಲಿ ಸುದಾರಣೆ ಕಾಣದೇ ಇರೋದೇ ಇವತ್ತಿನ ಈ ಯೋಚನೆಗೆ ಪ್ರೇರಣೆ.......
ಸ್ವಲ್ಪ ಹಿಂದೆ ಹೋಗಿ ನೋಡಿದರೆ ನಮಗೆ ಗೊತ್ತಾಗುವ ಸಂಗತಿ ಏನೆಂದರೆ, ಕನ್ನಡ ಶಾಲೆಗಳಿಗಿಂತ ಬೇರೆ ಭಾಷೆಯ ಶಾಲೆಗಳೆ ಹೆಚ್ಚಾಗಿದ್ದ ಕೆಲವು ಪ್ರದೇಶಗಳ ಇಂದಿನ ಸ್ವಲ್ಪ ಸುಧಾರಿತ ಬೆಳವಣಿಗೆಗಳಿಗೆ ನಮ್ಮ ಹಿರಿಯರು ಪಟ್ಟ ಶ್ರಮವೇ ಕಾರಣ. ಬಹಳಷ್ಟು ಮಹನೀಯರ ಶ್ರಮ, ಹೋರಾಟದ ಫಲವಾಗಿಯೇ ಇಂದು ನಾವು ಕರ್ನಾಟಕವೆಂಬ ಸುಂದರ ನಾಡಿನಲ್ಲಿ ಜೀವನ ಮಾಡುತ್ತಿರುವುದು.
ಈ ನಾಡಿಗೆ ಈಗ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಏಕೆ........? ಎಂಬ ಪ್ರಶ್ನೆ ನಮ್ಮ ಮುಂದೆ ಎದುರಾದಾಗ ಕೆಲವು ಹಿಂದೆ ನಡೆದ ಘಟನೆಗಳನ್ನು ನೆನಪಿಸಿಕೊಳ್ಳುವುದು ಇಲ್ಲಿ ಸೂಕ್ತವೆನಿಸುತ್ತದೆ.

ಬೆಳಗಾವಿ ಗಡಿ ವಿವಾದ: ಈ ಸಮಸ್ಯೆ ಇಂದು ನಿನ್ನೆಯದಲ್ಲ. ಇದು ಏಕೀಕರಣವಾದ ಕಾಲದಿಂದಲೂ ಸಣ್ಣ ಪುಟ್ಟ ಹೇಳಿಕೆಗಳ ಮುಖಾಂತರ ಪ್ರಾರಂಭವಾದ ವಿವಾದ, ಒಂದು ಸಂಘಟನೆಯಾಗಿ ನಮ್ಮ ರಾಜ್ಯದಲ್ಲೆ ಇದ್ದು ನಮ್ಮ ಪ್ರದೇಶವನ್ನು ತಮ್ಮ ಪ್ರದೇಶವೆಂದು ಸಾರಿ ಸರಕಾರಿ ಮಟ್ಟದಲ್ಲಿ ನಿರ್ಣಯ ಕೈಗೊಳ್ಳುವಷ್ಟು ಮುಂದುವರೆದದ್ದು ನಿಜಕ್ಕೂ ಕನ್ನಡಿಗರೂ ತಲೆ ತಗ್ಗಿಸುವ ವಿಚಾರ ಅಂಥ ಪ್ರತಿಯೊಬ್ಬ ಸ್ವಾಭಿಮಾನಿ ಕನ್ನಡಿಗರಿಗೆ ಅನ್ನಿಸದೇ ಇರದು.
ಈ ವಿವಾದ ಇಷ್ಟು ವರ್ಷ ಜೀವಂತವಾಗಿ ಇರಲು ನಮ್ಮನ್ನಾಳಿದ ರಾಷ್ಟ್ರೀಯ ಪಕ್ಷಗಳೇ ಕಾರಣ. ಒಂದು ಕನ್ನಡ ಪರ ಸಂಘಟನೆಯ ಶ್ರಮದ ಫಲವಾಗಿ ಇಂದು ಬೆಳಗಾವಿಯಲ್ಲಿ ಕನ್ನಡದ ಮೇಯರ್ ಆಯ್ಕೆಯಾಗಿದ್ದಾರೆ. ಕನ್ನಡದ ಕಂಪು ವಿಸ್ತಾರವಾಗತೊಡಗಿದೆ. ಸರಕಾರ ಮಾಡಬೇಕಾದ ಕೆಲಸವನ್ನು ಮಾಡಿದ್ದು ಕನ್ನಡ ಪರ ಸಂಘಟನೆ. ನಮ್ಮಲ್ಲೂ ಒಂದು ಪ್ರಾದೇಶಿಕ ಪಕ್ಷ ಮೊದಲೇ ಇದ್ದಿದ್ದರೆ ಬಹುಶ್ಃ ಇವತ್ತಿನ ಪತ್ರಿಕೆಗಳಲ್ಲಿ ಎಮ್ ಇ ಎಸ್ ಎಂಬ ಸಂಘಟನೆ ಬೆಳಗಾವಿಯಲ್ಲಿ ಮಾಡಿದ ಪುಂಡಾಟಿಕೆಯ ಸುದ್ದಿ ನಾವು ಕೇಳುತ್ತಿರಲಿಲ್ಲ.

ಹೊಗೆನಕ್ಕಲ್ ವಿವಾದ: ಈಗಲೂ ಹಳ್ಳಿಗಳಲ್ಲಿ ಒಂದೊಂದು ಅಡಿಗಳಷ್ಟು ಜಾಗದ ಸಲುವಾಗಿ ಜಗಳಗಳಾಗುವುದನ್ನು ನಾವು ಕಂಡಿದ್ದೇವೆ. ಇನ್ನು ಹೊಗೆನಕ್ಕಲ್ ಎಂಬ ನೂರಾರು ಎಕರೆ ಅರಣ್ಯ ಪ್ರದೇಶದ ಜಾಗವನ್ನು ನೆರೆ ರಾಜ್ಯದವರು ನೀರಾವರಿ ಯೋಜನೆಯ ನೆಪದಲ್ಲಿ ಕಬಳಿಸುತ್ತಿದ್ದರೆ, ಸ್ವಾಭಿಮಾನಿಯಾದ ಯಾವೊಬ್ಬ ಕನ್ನಡಿಗನು ಸುಮ್ಮನಿರಲು ಸಾದ್ಯವೇ..? ಇಲ್ಲವೇ ಇಲ್ಲ. ಆದರೆ ಇಲ್ಲ ಅನ್ನೋದು ಏಕೀಕರಣವಾದ ಕಾಲದಿಂದಲೂ ಆಳುತ್ತ ಬಂದಿರುವ ನಮ್ಮ ರಾಷ್ಟ್ರೀಯ ಪಕ್ಷಗಳ ಜನಪ್ರತಿನಿಧಿಗಳಿಗೆ ಇಲ್ಲಿಯವರೆಗೂ ಗೊತ್ತಾಗದೇ ಇರುವುದು ನಮ್ಮ ದುರಾದ್ರಷ್ಟ. ಈ ವಿವಾದಕ್ಕೆ ಗಾಯದ ಮೇಲೆ ಬರೆ ಎಳೆದ ಹಾಗೆ, ಕೇಂದ್ರ ಸರಕಾರ ಇದಕ್ಕೆ ಸಮ್ಮತಿಸಿ ಯೋಜನೆಗೆ ಜಪಾನನಿಂದ ೧೩೩೪ ಕೋಟಿ ರೂ. ನೆರವು ಪಡೆಯಲು ತಮಿಳನಾಡಿಗೆ ಒಪ್ಪಿಗೆ ಸೂಚಿಸಿತು. ಇದಕ್ಕೆ ನಮ್ಮ ರಾಷ್ಟ್ರೀಯ ಪಕ್ಷದ ಜನಪ್ರಿತಿನಿಧಿಗಳು ತಾನೆ ಏನು ಮಾಡಿಯಾರು..? ಅವರು ಈ ಕೆಲಸಕ್ಕೆ ಕೈ ಹಾಕಿದರೆ ಅವರ ಕುರ್ಚಿ ಕಾಪಾಡುವವರು ಯಾರು...? ಇಲ್ಲಿ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶ ಅಂದರೆ ತಮಿಳುನಾಡು ಸರಕಾರ ಕಬಳಿಸಲು ಕೆಂದ್ರ ಸರಕಾರದ ಅನುಮತಿ ಪಡೆಯುವಷ್ಟು ಮುಂದುವರೆಯಲು ಕಾರಣ ಅಲ್ಲಿರುವ ಪ್ರಾದೇಶಿಕ ಪಕ್ಷವೇ ಹೊರತು ಮತ್ತೇನಲ್ಲ. ನಮ್ಮ ಪ್ರಾದೇಶಿಕ ಪಕ್ಷ ಎಷ್ಟರ ಮಟ್ಟಿಗೆ ಪ್ರಭಾವ ಬೀರಿತು ಎಂದು ಒತ್ತಿ ಹೇಳುವ ಅಗತ್ಯ ಇಲ್ಲ. ಒಂದು ಕನ್ನಡ ಪರ ಸಂಘಟನೆ ಆ ಸಂಧರ್ಭದಲ್ಲಿ ಪ್ರಾದೇಶಿಕ ಪಕ್ಷದ ಜವಾಬ್ದಾರಿ ವಹಿಸಿಕೊಂಡಿದ್ದು ಮಾತ್ರ ನಿಜಕ್ಕೂ ಪ್ರಶಂಸನಿಯ.

ಪ್ರತಿಮೆ ಅನಾವರಣ ವಿವಾದ: ತಿರುವಳ್ಳುವರ್ ಒಬ್ಬ ಶ್ರೇಷ್ಟ ಕವಿ ಇರಬಹುದು. ಆದರೆ ಇಲ್ಲಿ ಕೆಲವು ಸಂಗತಿಗಳನ್ನು ನಾವು ಮೆಲುಕು ಹಾಕೋದು ಸೂಕ್ತ. -ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಲು ಭರವಸೆ ನೀಡುವ, ಅದಕ್ಕೆ ಪ್ರಯತ್ನಿಸುವ ಸದಸ್ಯನಿಗೆ ಮಾತ್ರ ಚುನಾವಣೆಗಳಲ್ಲಿ ಮತ ಹಾಕಿ ಎಂದು ಇಲ್ಲಿನ ತಮಿಳು ಸಮುದಾಯಕ್ಕೆ ಆದೇಶ ಹೊರಡಿಸಿದ್ದು, -ವೀರಪ್ಪನ್ ಒತ್ತಾಸೆಯಿಂದ ರಾಜಕುಮಾರ್ ಬಿಡುಗಡೆ ಆಗಬೇಕಾದ್ರೆ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಆಗಬೇಕು ಎಂಬ ಹಠ ಮಾಡಿದ್ದು. -ಇದರ ಜತೆಗೆ ಇತ್ತೀಚಿನ ದಿನಗಳಲ್ಲಿ ಕನ್ನಡಿಗರನ್ನು ಒದೆಯಬೇಕು ಎಂದು ಹೇಳಿಕೆ ನೀಡಿದ್ದು, -ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗದಂತೆ ತೊಡರುಗಾಲು ಹಾಕಿರುವುದು, -ತಮ್ಮ ರಾಜ್ಯದ ಯೋಜನೆಗಳ ಅನುಷ್ಠಾನಕ್ಕಾಗಿ ಕರ್ನಾಟಕದ ಹಿತಾಸಕ್ತಿಯನ್ನು ಬಲಿಗೊಡುತ್ತಿರುವುದು. -ತಮಿಳರು ನಾವು ಬೆಂಗಳೂರಿನವರು ಆದರೆ ಕರ್ನಾಟಕಕ್ಕೆ ಸೇರಿದವರಲ್ಲ ಎಂಬ ಭಾವನೆ ಇಟ್ಟುಕೊಂಡಿರುವುದು, -ಇಲ್ಲಿ ನೆಲೆಸಿರುವ ತಮಿಳರ ಉದ್ದೇಶ ಬೆಂಗಳೂರನ್ನು ಕೇಂದ್ರಾಡಳಿತಕ್ಕೆ ಒಳಪಡಿಸುವುದಾಗಿರುವುದು. ಈ ಎಲ್ಲ ಸಂಗತಿಗಳನ್ನು ಬಲ್ಲವರು ಯಾರೇ ಆದರೂ ಪ್ರತಿಮೆ ಅನಾವರಣಕ್ಕೆ ಮುಂದಾಗುವುದಿಲ್ಲ. ಇನ್ನು ನಮ್ಮ ರಾಜ್ಯದಲ್ಲಿರುವ ಎಷ್ಟು ಶ್ರೇಷ್ಟ ಕವಿಗಳ ಪ್ರತಿಮೆ ನಮ್ಮ ರಾಜ್ಯದಲ್ಲಿವೆ. ಎಷ್ಟು ಜನ ಕವಿಗಳಿಗೆ ಅವರಿಗೆ ಸಿಗಬೇಕಾದ ಗೌರವ ಸಿಕ್ಕಿದೆ ಸ್ವಲ್ಪ ಯೋಚಿಸಬೇಕಾಗಿದೆ. ಹೀಗಿದ್ದಾಗ ಸೌಹಾರ್ಧದ ನೆಪದಲ್ಲಿ ಒಂದು ರೀತಿಯ ತಮಿಳರ ಸಂಕೇತವಾದ ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಎಷ್ಟು ಸಮಂಜಸ...? ಆದರೆ ನಮ್ಮ ರಾಷ್ಟ್ರೀಯ ಪಕ್ಷದ ಜನಪ್ರತಿನಿಧಿಗಳು ಮಾಡಿದ್ದೇನು...? ಬೆಂಗಳೂರು ಮಾತ್ರವಲ್ಲದೆ ನಮ್ಮ ಸಾಂಸ್ಕ್ರತಿಕ ನಗರ ಮೈಸೂರಿನಲ್ಲಿ ಕೂಡ ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಲು ಮುಂದಾಗಿದ್ದು ನಾವು ಮರೆಯುವಂತಿಲ್ಲ. ನಮ್ಮ ರಾಜ್ಯದ ಪ್ರಾದೇಶಿಕ ಪಕ್ಷ ಅನ್ನಿಸಿಕೊಂಡಿರುವ ಜೆ ಡಿ ಎಸ್ ಕೂಡ ಇದನ್ನು ಬೆಂಬಲಿಸಿದ್ದು ಕಂಡಾಗ ಅದನ್ನು ಹೇಗೆ ನಾವು ನಮ್ಮ ಪ್ರಾದೇಶಿಕ ಪಕ್ಷ ಅಂಥ ಒಪ್ಪುವುದು....? ಇಲ್ಲಿ ಮತ್ತೆ ಒಂದು ಸಮರ್ಥ ಪ್ರಾದೇಶಿಕ ಪಕ್ಷದ ಜವಾಬ್ದಾರಿ ಹೊತ್ತಿದ್ದು ನಮ್ಮ ಕನ್ನಡ ಪರ ಸಂಘಟನೆ........

ಮೇಲಿನವುಗಳು ಕೇವಲ ಉದಾಹರಣೆಗಳು. ಕಾವೇರಿ ವಿವಾದ, ರೇಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ತಾರತಮ್ಯ, ಕನ್ನಡ ಅನುಷ್ಟಾನ ನಿರ್ಲಕ್ಷ್ ಈ ತರಹದ ಅನೇಕ, ನಮ್ಮ ನಾಡು, ನುಡಿ, ನೆಲ, ಜಲಗಳಿಗೆ ಹಾನಿಯುಂಟು ಮಾಡುವ ಅನೇಕ ಘಟನೆಗಳು ನಡೆದಿವೆ. ಆ ಎಲ್ಲ ಸಂದಭಗಳಲ್ಲಿ ನಮ್ಮ ರಾಷ್ಟ್ರೀಯ ಪಕ್ಷದ ಜನಪ್ರತಿನಿಧಿಗಳು, ನಮ್ಮ ಪ್ರಾದೇಶಿಕ ಪಕ್ಷದ ಜನಪ್ರತಿನಿಧಿಗಳು ಸಮಸ್ಯೆಗಳನ್ನು ಬಗೆ ಹರಿಸುವಲ್ಲಿ, ಕನ್ನಡ, ಕರ್ನಾಟಕ ಮತ್ತು ಕನ್ನಡಿಗರನ್ನು ಕಾಪಾಡುವಲ್ಲಿ ವಿಫಲರಾಗಿರುವುದು ಮೇಲ್ನೋಟಕ್ಕೆ ಎದ್ದು ಕಾಣುವ ಸಂಗತಿ.
ಮತ್ತು ಈ ಎಲ್ಲ ಸಂಧಭಗಳಲ್ಲಿ ಕನ್ನಡದ, ಕನ್ನಡಿಗರ, ಕರ್ನಾಟಕದ ಪರವಾಗಿ ನಿಂತು ಒಂದು ಪ್ರಾದೇಶಿಕ ಪಕ್ಶ ಮಾಡಬೇಕಾದ ಕೆಲಸ ಮಾಡಿದ್ದು, ಒಂದು ಸಂಘಟನೆ. “ಆ ಸಂಘಟನೆ ಈಗ ನಮ್ಮ ರಾಜ್ಯದ ರಾಜಕೀಯ ಪ್ರಾದೇಶಿಕ ಪಕ್ಷವಾಗಿ ಮಾರ್ಪಾಡಾಗಬೇಕಾಗಿರುವುದು ಇಂದಿನ ಅಗತ್ಯತೆ ಮತ್ತು ನಮ್ಮ ಆಶಯ”.

Friday 30 October 2009

ಬಿಜಾಪುರದ ಜನತೆ ಕಳೆದ ಜನ್ಮದಲ್ಲಿ ಮಾಡಿದ ಪಾಪ......!!!

ಕಳೆದ ತಿಂಗಳು ಬಂದ ಭೀಕರ ನೆರೆ ಪ್ರವಾಹ ಉತ್ತರ ಕರ್ನಾಟಕದ ಜನತೆಯನ್ನು ತೀವ್ರ ಸಂಕಷ್ಟದಲ್ಲಿ ಸಿಲುಕಿಸಿದ ವಿಚಾರ ಎಲ್ಲರಿಗೂ ಗೊತ್ತು. ಅದೇ ರೀತಿ ಕಳೆದ ಎರಡು ವರ್ಷಗಳ ಹಿಂದೆ ಬಂದ ಬರ ಕೂಡ ಮಾಡಿದ ನಷ್ಟ ಅಷ್ಟಿಷ್ಟಲ್ಲ. ವ್ರತ್ತ ಪತ್ರಿಕೆಗಳ ಹಿಂದಿನ ಪುರವಣಿಗಳನ್ನು ಗಮನಿಸಿದಾಗ ಈ ತರಹದ, ಸಾಮಾನ್ಯ ಜನರಲ್ಲಿ ಜೀವನದ ಬಗ್ಗೆ ಜಿಗುಪ್ಸೆ ಮೂಡಿಸುವಂಥ ಅನೇಕ ಘಟನೆಗಳು ಉತ್ತರ ಕರ್ನಾಟಕದ ಭಾಗದಲ್ಲಿ ಅದರಲ್ಲೂ ವಿಶೇಷವಾಗಿ ಬಿಜಾಪುರ ಜಿಲ್ಲೆಯಲ್ಲಿ ನಡೆದು ಹೋಗಿವೆ. ಕನ್ನಡ ನಾಡಿನಲ್ಲಿ ಏನೇ ಪ್ರವಾಹದ ಅಥವಾ ಬರದ ಬಗ್ಗೆ ಸುದ್ದಿ ಬರಲಿ ಅದರಲ್ಲಿ ಖಂಡಿತ ಬಿಜಾಪುರ ಅನ್ನುವ ಜಿಲ್ಲೆಯ ಹೆಸರು ಸೇರಿರಲೇಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿರುವುದು ನಿಜಕ್ಕೂ ನಂಬಲಸಾದ್ಯವಾದರೂ ಬೇರೆ ದಾರಿ ಇಲ್ಲ. ಈ ರೀತಿ ಬಿಜಾಪುರದ ಜನತೆ ವರ್ಷದಿಂದ ವರ್ಷಕ್ಕೆ ಹೆಚ್ಚು ಸಂಕಷ್ಟಕ್ಕೆ ಒಳಗಾಗುತ್ತಿರುವುದನ್ನು ಸಮೀಪದಿಂದ ಬಲ್ಲವರೂ ಯಾರೇ ಆದರೂ ಅವರಿಗೆ, ಬಿಜಾಪುರದ ಜನತೆ ಕಳೆದ ಜನ್ಮದಲ್ಲಿ ಏನಾದರು ಪಾಪ ಮಾಡಿದ್ದಾರೆಯೇ......? ಎಂಬ ಸಂದೇಹ ಖಂಡಿತ ಮೂಡುತ್ತದೆ. ಈಗಾಗಲೇ ಬಿಜಾಪುರ ಜಿಲ್ಲೆಗೆ ಬರದ ಜಿಲ್ಲೆ ಎಂಬ ಹಣೆಪಟ್ಟಿ ನೀಡಿ ಗೌರವಿಸಲಾಗಿದೆ. ಈಗ ನೆರೆ ಕೂಡ ಬಂದಿರುವದರಿಂದ ನೆರೆ ಜಿಲ್ಲೆ ಆಗಿ, ಇದೇ ಪರಿಸ್ಥಿತಿ ಮುಂದುವರೆದರೆ ಮುಂದೊಂದು ದಿನ ಶಾಶ್ವತ ಸಂಕಷ್ಟದ ಜಿಲ್ಲೆ ಎಂದು ಕರೆಯಬೇಕಾಗುತ್ತದೆ. ಇವೆಲ್ಲವುಗಳನ್ನು ಗಮನಿಸಿದಾಗ ಇದಕ್ಕೆ ಕೊನೆಯೆ ಇಲ್ಲವೆ? ಇದನ್ನು ಕೊನೆಗಾಣಿಸುವುದು ಹೇಗೆ? ಎಂಬೆಲ್ಲ ಪ್ರಶ್ನೆಗಳು ಎದುರಾಗುತ್ತವೆ. ಹೇಳಿಕೊಳ್ಳಲು ಬಿಜಾಪುರ ಜಿಲ್ಲೆ ಐದು ನದಿಗಳು ಹರಿಯುವ ಕರ್ನಾಟಕದ ಪಂಜಾಬ. ಆದರೆ ಪಂಜಾಬನಲ್ಲಿ ಕಾಣುವ ಅಭಿವ್ರಧ್ಧಿ, ಫಲವತ್ತಾದ ಭೂಮಿ ಇಲ್ಲಿ ಕಾಣುವುದು ಅಷ್ಟಕ್ಕಷ್ಟೆ.

ಇನ್ನು ಇಂಥಹ ಪರಿಸ್ಥಿತಿಗಳಲ್ಲಿ ನಮ್ಮ ಸರಕಾರಗಳು ತೋರುವ ಔದಾರ್ಯ ಕೂಡ ಹೇಳಿಕೊಳ್ಳುವಂಥದ್ದಲ್ಲ. ಇದಕ್ಕೆ ತಾಜಾ ಉದಾಹರಣೆ ಎಂದರೆ, ಕೇಂದ್ರ ಸರಕಾರ ನಮ್ಮ ರಾಜ್ಯದ ಮೇಲೆ ತೋರಿಸುವ ಮಲತಾಯಿ ಧೋರಣೆ. ಪಕ್ಕದ ಆಂದ್ರಪ್ರದೇಶಕ್ಕಿಂತ ನಮ್ಮ ರಾಜ್ಯದಲ್ಲಿ ಹೆಚ್ಚು ಆಸ್ತಿ-ಪಾಸ್ತಿ ಹಾನಿ, ಹೆಚ್ಚು ಪ್ರಾಣ ಹಾನಿ, ಹೆಚ್ಚು ಜಾನುವಾರುಗಳ ಹಾನಿ ಸಂಭವಿಸಿದ್ದರೂ ಮೊದಲಿನ ತುರ್ತು ಪರಿಹಾರದಲ್ಲಿ ತಾರತಮ್ಯ ಮಾಡಿ ಕರ್ನಾಟಕಕ್ಕೆ ೫೨.೨೬ ಕೋಟಿ, ಆಂದ್ರಕ್ಕೆ ಇದರ ಮೂರು ಪಟ್ಟು ಅಂದರೆ ೧೫೬.೮೪ ಕೋಟಿ ಬಿಡುಗಡೆ ಮಾಡಲಾಯಿತು. ನೆರೆ ಪರಿಸ್ಥಿತಿಯ ಅವಲೋಕನಕ್ಕೆಂದು ಬಂದ ಪ್ರದಾನಮಂತ್ರಿಗಳು, ಯು ಪಿ ಯೆ ಅದ್ಯಕ್ಷರು ಮತ್ತು ಸಚಿವರು ಕರ್ನಾಟಕಕ್ಕೆ ಭೇಟಿ ಕೊಟ್ಟದ್ದು ಮಾತ್ರ ಕೇವಲ ಒಂದು ಜಿಲ್ಲೆಗೆ. ಇದು ಕಾಟಾಚಾರದ ಭೇಟಿ ಅಂಥ ಅನ್ನಿಸಿದರೂ ತಪ್ಪಾಗಲಿಕ್ಕಿಲ್ಲ. ಇನ್ನು ನೆರೆ ಪರಿಹಾರ ಕಾಮಗಾರಿ ವೀಕ್ಷಣೆ ಮಾಡಲು ಬಂದ ಅಧಿಕಾರಿಗಳ ಕೇಂದ್ರ ತಂಡ ಮುಖ್ಯವಾಗಿ ಮತ್ತು ಹೆಚ್ಚು ಸಂಕಷ್ಟಕ್ಕೀಡಾದ ಹಾಗೂ ಪ್ರತಿ ವರ್ಷ ತೊಂದರೆ ಅನುಭವಿಸುವ ಬಿಜಾಪುರ ಜಿಲ್ಲೆಯನ್ನೇ ಕಡೆಗಣಿಸಿದ್ದು ವಿಪರ್ಯಾಸ. ಕೇಂದ್ರ ತಂಡವನ್ನು ತಮ್ಮ ಜಿಲ್ಲೆಗೆ ಕರೆತರುವಲ್ಲಿ ವಿಫಲವಾದ ಬಿಜಾಪುರ ಜಿಲ್ಲೆಯ ಜನಪ್ರತಿನಿದಿಗಳ ಬಗ್ಗೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿರುವ ಜಿಲ್ಲೆಯ ಜನತೆಯ ತಾಳ್ಮೆ ಪ್ರಶಂಸಿಸಲು ಅನರ್ಹ ಎಂದರೆ ತಪ್ಪಾಗಲ್ಲ.

ಕರ್ನಾಟಕದ ಕುಲ ಪುರೋಹಿತ ಆಲೂರು ವೆಂಕಟರಾಯರು, ಬಸವಣ್ಣ ನವರಂಥಹ ಮಹನೀಯರು ಹುಟ್ಟಿದ ಈ ನಾಡಿನ ಇಂದಿನ ಪರಿಸ್ಥಿತಿ ನಿಜಕ್ಕೂ ದುರದ್ರಷ್ಟಕರ. ಇಂದಿನ ಯುವ ಪೀಳಿಗೆ ಇದರ ಬಗ್ಗೆ ಚಿಂತನೆ ಮಾಡಿ, ಒಂದು ಒಗ್ಗಟ್ಟಿನ ಬದಲಾವಣೆಯನ್ನು ತರಬೇಕಾಗಿದೆ.........