Thursday 7 April 2011

ಕರ್ನಾಟಕವಿಲ್ಲದ ’ಆಲ್ ಇಂಡಿಯಾ’ವನ್ನು ಒಪ್ಪಕ್ಕಾಗುತ್ತಾ..?

ಈ ಚಿತ್ರ ನೋಡಿ. ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟುಡೆಂಟ್ಸ್ ಆರ್ಗನೈಸೇಷನ್ ಎಂಬ ಸಂಘಟನೆಯ ವತಿಯಿಂದ ಬೆಂಗಳೂರಿನಲ್ಲಿ ವಿದ್ಯಾರ್ಥಿ ಸಮ್ಮೇಳನ ನಡಿತಾ ಇದೆ. ಅದರ ಪ್ರಯುಕ್ತ ಮುದ್ರಿಸಿದ ಪತ್ರಿಕಾ ಹಾಳೆಯಲ್ಲಿ ಐದು ಜನ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರವನ್ನು ತೋರಿಸಲಾಗಿದೆ. ಇರಲಿ, ಆದರೆ ಕರ್ನಾಟಕದಲ್ಲಿ ಮುದ್ರಿಸಿದ ಈ ಚಿತ್ರದಲ್ಲಿ ಕರ್ನಾಟಕದ ಯಾರೊಬ್ಬರ ಪರಿಚಯನೂ ಇಲ್ಲ. ಇದು ಸ್ವಾಭಾವಿಕವಾಗಿ ಮೊದಲ ನೋಟದಲ್ಲೇ ಬಿಂಬಿಸುವುದೇನೆಂದರೆ, ಸ್ವಾತಂತ್ರ ಸಂಗ್ರಾಮದಲ್ಲಿ ಕರ್ನಾಟಕದ ಕೊಡುಗೆ ಇಲ್ಲ. ದೇಶಭಕ್ತಿ ಸಂಕೇತವಾಗಿ ಕರ್ನಾಟಕದ ಯಾರನ್ನೂ ಬಿಂಬಿಸಲಾಗುವುದಿಲ್ಲ ಅಂತಾನೇ ಅಲ್ಲವೇ. ಇದು ನಿಜನಾ.?
ಹಾಗಾದರೆ...,
  • ಭಾರತದ ವೀರಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿದ, ಬ್ರಿಟೀಶರ ವಿರುದ್ದ ಹೋರಾಡಿದ ಪ್ರಥಮ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ,
  • ಭಾರತದ ಮೊತ್ತಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ, ಪೋರ್ಚುಗೀಸರ ವಿರುದ್ಧ ಹೋರಾಡಿದ ತುಳು ನಾಡಿನ ಉಲ್ಲಾಳದ ರಾಣಿ ಅಬ್ಬಕ್ಕ,
  • ಭಾರತದಲ್ಲಿನ ಗೆರಿಲ್ಲಾ ಯುದ್ದದ ಹರಿಕಾರ ಎಂದು ಕರೆಯಲ್ಪಡುವ, ಬ್ರಿಟೀಶರ ವಿರುದ್ದ ತೊಡೆ ತಟ್ಟಿ ನಿಂತ ಕಿತ್ತೂರಿನ ಇನ್ನೊಬ್ಬ ಧೀರ ಸಂಗೊಳ್ಳಿ ರಾಯಣ್ಣ,
  • ಇನ್ನೂ ಅನೇಕರು....
ಇವರ ಕೊಡುಗೆಗೆ ಬೆಲೆ ಇಲ್ಲವೇ.?

ಆ ಪತ್ರಿಕಾ ಹಾಳೆಯಲ್ಲಿ ಅವರು ಇರಬಾರದು ಬರೀ ಇವರೇ ಇರಬೇಕು ಎನ್ನುವ ವಾದ ಖರೇಗೂ ಇದಲ್ಲ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರ ಕೊಡುಗೆನೂ ಪ್ರಶಂಸನೀಯ. ಆದರೆ, ವಿಷಯ ಏನಪ್ಪಾ ಅಂದ್ರೆ, ಹೆಸರಲ್ಲೇ "ಆಲ್ ಇಂಡಿಯಾ" ಅಂಥ ಇಟ್ಕೊಂಡು ಭಾರತದ ಎಲ್ಲ ಕಡೆ ಗಮನಹರಿಸದೇ, ಕರ್ನಾಟಕದಲ್ಲೇ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರನ್ನು ನಿರ್ಲಕ್ಷಿಸಿರುವುದು ಯಾಕೆ.? ಕರ್ನಾಟಕದಲ್ಲಿ ಮುದ್ರಿಸಿದ ಹಾಳೆಯಲ್ಲಿ ಇಲ್ಲಿನ ಅರ್ಹರಿಗೆ ಸ್ಥಾನನೇ ಇಲ್ಲ ಅಂದ್ರೆ, ಸಂಘಟನೆಯ "ಆಲ್ ಇಂಡಿಯಾ"ದಲ್ಲಿ ಕರ್ನಾಟಕ ಇಲ್ಲವೇ.? ಅಥವಾ "ಆಲ್ ಇಂಡಿಯಾ" ಮಟ್ಟಕ್ಕೆ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರನ್ನು ತೋರಿಸಲು ನಿರ್ಲಕ್ಷತನವೇ.? ಸ್ವಾತಂತ್ರ್ಯದ ಮೊದಲ ಕಿಚ್ಚು ಹಚ್ಚಿದ ಮೇಲಿನವರ ದೇಶಭಕ್ತಿ ಯುವ ಜನತೆಗೆ ಸ್ಪೂರ್ತಿ ನೀಡುವುದಿಲ್ಲವೇ.? ನಮ್ಮ ಇತಿಹಾಸವನ್ನು ಮರೆಮಾಚುವ, ನಮ್ಮ ನಾಡಿನ ಹೋರಾಟಗಾರರನ್ನು ಎರಡನೇ ಪಂಕ್ತಿಯಲ್ಲಿ ಕಾಣುವ ಈ ನಡೆ ಖಂಡಿತ ಒಪ್ಪುವಂಥದ್ದಲ್ಲ.