Sunday 29 April 2012

ನೀವು ಕನ್ನಡ ಸಿನಿಮಾ ನೋಡ್ತಾ ಇದ್ದಿರಾ.? ನಿಮಗೆ ಸ್ವಾಬಿಮಾನ ಇದೆಯಾ.?

ಸತ್ಯ ಮೇವ ಜಯತೇ ಕನ್ನಡದಲ್ಲೂ ಡಬ್ ಆಗಲಿದೆ ಎಂಬ ಸುದ್ದಿ ಡಬ್ಬಿಂಗ್ ಕುರಿತಾದ ಪರ ವಿರೋದದ ಚರ್ಚೆಗೆ ಮತ್ತೊಮ್ಮೆ ನಾಂದಿ ಹಾಡಿದೆ. ಇಷ್ಟು ದಿನ ಅಂತರ್ಜಾಲದಲ್ಲಿ ಮಾತ್ರ ಸೀಮಿತವಾಗಿದ್ದ ಚರ್ಚೆ ಸುದ್ದಿ ವಾಹಿನಿಗಳ ಮೂಲಕ ಪರದೇ ಮುಂದೆ ಬಂದು ನಿಂತಿದೆ. ಇತ್ತೀಚಿಗೆ ಸುವರ್ಣ ಮತ್ತು ಜನಶ್ರೀ ವಾಹಿನಿಗಳಲ್ಲಿ ಕುರಿತು ಚರ್ಚೆ ಆಗಿದೆ. ಎರಡೂ ಚರ್ಚೆಗಳನ್ನು ನೋಡಿದ ಮೇಲೆ ಅನ್ನಿಸಿದ್ದು ಏನೆಂದರೆ, ಚಿತ್ರರಂಗದ ೭೫ ವರ್ಷಗಳ ಪಯಣಕ್ಕೆ ಮೂಲ ಬೆನ್ನೆಲುಬಾಗಿ ನಿಂತ ಪ್ರೇಕ್ಷಕ ಅಂದರೆ ಗ್ರಾಹಕನ ಬಗ್ಗೆ ಚಿತ್ರರಂಗದ ಕೆಲವರಿಗೆ ಎಳ್ಳಷ್ಟು ಗೌರವವಿಲ್ಲ
ಚಿತ್ರರಂಗ ಉದ್ಯಮವಲ್ಲದೇ ಮತ್ತೇನು.?
ನಮ್ಮ ಚಲನಚಿತ್ರಗಳು ಬರೀ ಕಲೆ, ಸಂಸ್ಕ್ರುತಿ, ಸೃಜನಶೀಲತೆಗಳನ್ನು ಪಸರಿಸಲು ಮಾತ್ರ ಸೀಮಿತ ಅಲ್ಲ. ಅಲ್ಲಿ ಕೊಡು ಕೊಳ್ಳುವಿಕೆಯ ವ್ಯವಹಾರ ಇರುತ್ತೆ, ಲಾಭ ನಷ್ಟಗಳ ಚಿಂತನೆ ಇರುತ್ತೆ, ಪ್ರೇಕ್ಷಕನ ಎದುರು ತಮ್ಮ ಸರಕು ಗೆಲ್ಲಬೇಕು ಎಂಬ ಹಂಬಲ ಇರುತ್ತೆ, ಸರಕನ್ನು ತಯಾರು ಮಾಡುವಾಗ ಪ್ರೇಕ್ಷಕನ ಅಭಿರುಚಿ ಬಗ್ಗೆ ವಿಶ್ಲೇಷಣೆಗಳು ನಡೆಯುತ್ತೆ. ತಮ್ಮ ಸರಕನ್ನು ತಯಾರು ಮಾಡುವಾಗ ಕಲೆ, ಸಂಸ್ಕ್ರುತಿ, ಸೃಜನಶೀಲತೆಗಳನ್ನು ಕಚ್ಚಾ ವಸ್ತುಗಳನ್ನಾಗಿ ಬಳಸಿಕೊಳ್ಳಲಾಗುತ್ತೆ. ಹೀಗೆ ಒಂದು ಉದ್ಯಮದಲ್ಲಿ ನಡೆಯುವ ಎಲ್ಲ ಬಗೆಯ ವಿಚಾರ ವಿನಿಮಯಗಳು ಇಲ್ಲಿ ನಡೆಯುತ್ತವೆ. ಆದ್ದರಿಂದ ಯಾವ ಅರ್ಥದಲ್ಲೂ ಚಿತ್ರರಂಗವನ್ನು ಒಂದು ಉದ್ಯಮದ ಹೊರತಾಗಿ ನೋಡಲು ಸಾದ್ಯವಿಲ್ಲ. ಚಿತ್ರರಂಗ ಕೂಡ ಒಂದು ಉದ್ಯಮವೆಂದಾದರೆ, ಇತರ ಉದ್ಯಮಗಳಿಗೆ ಇರುವ ಹಾಗೆ ಅದಕ್ಕೂ ಗ್ರಾಹಕರು ಇರಲೇಬೇಕಲ್ಲವೇ.? ಹಾಗಾದರೆ ಗ್ರಾಹಕ ಯಾರು ಎಂಬ ಪ್ರಶ್ನೆಗೆ ಚಿತ್ರರಂಗ ಎಂಬ ಉದ್ಯಮದಲ್ಲಿ ತಯಾರಾಗುವ ಚಲನಚಿತ್ರ ಎಂಬ ಸರಕುಗಳನ್ನು ಒಪ್ಪಿಕೊಳ್ಳುವ ಒಪ್ಪಿಕೊಳ್ಳದಿರುವ ಸಾಮರ್ಥ್ಯ ಇರುವ ಪ್ರೇಕ್ಷಕನೇ ಇದರ ಗ್ರಾಹಕ ಎಂಬುದೇ ಇದಕ್ಕೆ ಉತ್ತರವಾಗಿದೆ.
ಗ್ರಾಹಕನಿಗೆ ಕ್ಯಾರೇ ಎನ್ನದ ಮಂದಿ.!
ಎರಡು ದಿನಗಳಿಂದ ಸುದ್ದಿ ವಾಹಿನಿಗಳಲ್ಲಿ ನಡೆದ ಚರ್ಚೆಯಲ್ಲಿ  ಚಿತ್ರರಂಗದ ಸಾ.ರಾ.ಗೋವಿಂದು ಅವರು ಪ್ರೇಕ್ಷಕನನ್ನೇ ಬೈದು ಬಿಡುವುದೇ.! "ವರ್ಷದಲ್ಲಿ ಸುಮಾರು ೧೨೦ ಚಿತ್ರಗಳು ಬಿಡುಗಡೆ ಆಗ್ತಾವೆ. ನೂರಿಪ್ಪತ್ತು ಚಿತ್ರಗಳನ್ನೇ ನೀವು ನೋಡ್ತಿಲ್ಲ, ಇನ್ನು ನೀವು ಡಬ್ ಚಿತ್ರಗಳನ್ನು ಏನ್ ನೋಡ್ತಿರಾ.?" ಕೇಳಿದ್ರಾ ಇವರ ಮಾತು. ಇವರು ಗ್ರಾಹಕನನ್ನು ಗುತ್ತಿಗೆ ತೆಗೆದುಕೊಂಡಿದ್ದಾರೆ. ಇವರು ವರ್ಶಕ್ಕೆ ನೂರಿಪ್ಪತ್ತು ಚಿತ್ರ ತೆಗೀತಾರೆ. ನಾವು ಅವು ಹೆಂಗೇ ಇರಲಿ, ಅವುಗಳನ್ನೇ ನೋಡಬೇಕಂತೆ. ಮಾತಿನಲ್ಲಿ ನ್ಯಾಯ ಅನ್ನೋದು ಇದೆಯಾ.? ಒಳ್ಳೆ ಚಿತ್ರ ಬಂದರೆ ಗ್ರಾಹಕ ಗೆಲ್ಲಿಸಿಯೇ ಗೆಲ್ಲಸ್ತಾನೆ. ಅದೇ ಕಾರಣಕ್ಕೆ ಅಲ್ಲವೇ ದರ್ಶನ್ ಅಭಿನಯದ ಸಾರಥಿ ಚಿತ್ರಕ್ಕೆ ಗ್ರಾಹಕ ಬ್ಲಾಕ್ ಬಸ್ಟರ್ ಹಿಟ್ ಎಂಬ ಪಟ್ಟ ಕಟ್ಟಿದ್ದು. ಅದು ಬಿಟ್ಟು ನೀವು ಗೆಲ್ಲಿಸ್ತಿರಾ, ನಮ್ ಚಿತ್ರ ನೋಡ್ತಿರಾ ಅನ್ನೊದು ಸರಿಯೇ.? ಗ್ರಾಹಕನನ್ನೇ ತಪ್ಪಿತಸ್ಥನನ್ನಾಗಿ ಮಾಡುವ, ಅವನಲ್ಲೇ ಹುಳುಕನ್ನು ಹುಡುಕುವ ಯಾವುದೇ ಉದ್ಯಮ ಯಶಸ್ವಿಯಾಗಿಲ್ಲ. ಗ್ರಾಹಕನಿಗೆ ಆಯ್ಕೆ ಸ್ವಾತಂತ್ರ್ಯವಿದೆ. ಗ್ರಾಹಕನ ಆಯ್ಕೆ ನಮ್ಮ ಸರಕೇ ಆಗಬೇಕು ಎಂಬ ನಿರೀಕ್ಷೆಯೊಂದಿಗೆ ಎಲ್ಲ ಉದ್ಯಮಗಳು ಕಾರ್ಯ ನಿರ್ವಹಿಸುತ್ತವೆ. ಆದರೆ ನಮ್ಮ ಚಿತ್ರರಂಗ ಮಾತ್ರ ನಮ್ಮ ಸರಕು ಮಾತ್ರವೇ ಗ್ರಾಹಕನ ಆಯ್ಕೆಯಾಗಬೇಕು ಎಂಬ ಪಾಳೆಗಾರಿಕೆ ಮನಸ್ಥಿತಿಯನ್ನು ಹೊಂದಿರುವುದು ದುರಾದೃಷ್ಟ. ಇನ್ನೊಂದು ವಾಹಿನಿಯ ಚರ್ಚೆಯಲ್ಲಿ ಇವರು ಹೇಳ್ತಾರೆ ಕನ್ನಡಿಗರು ಸ್ವಾಭಿಮಾನಿಗಳಲ್ಲ ಎಂದು. ಪರಭಾಷೆ ಚಿತ್ರವನ್ನು ಕನ್ನಡದಲ್ಲಿ ನೋಡಲು ಬಿಡಿ ಎಂದವರು ಸ್ವಾಭಿಮಾನಿಗಳಲ್ವಂತೆ. ಕನ್ನಡ ವಿರೋದಿ ನಿಲುವನ್ನೇ ಕನ್ನಡ ಪರ ಎಂದು ಬೆಂಬಲಿಸುತ್ತಿರುವಾಗ ಸ್ವಾಬಿಮಾನಿ ಎಂಬುದಕ್ಕೆ ಇವರಲ್ಲಿ ಅರ್ಥ ಹುಡುಕುವುದೇ ತಪ್ಪು ಅಲ್ಲವೇ.? 

ಇನ್ನು ಅದೇ ಚರ್ಚೆಯಲ್ಲಿ ಇನ್ನೊಬ್ಬ ಹಿರಿಯ ನಿರ್ದೇಶಕರಾದ ನಾಗತೀಹಳ್ಳಿಯವರು ಹೇಳ್ತಾರೆ, ಇಂಗ್ಲೀಶ್ ಚಿತ್ರವನ್ನು ಇಂಗ್ಲೀಶಿನಲ್ಲೇ ನೋಡಬೇಕು. ತಮಿಳು ಚಿತ್ರವನ್ನು ತಮಿಳಿನಲ್ಲೇ ನೋಡಬೇಕು ಎಂದರು.. ನೋಡಿ ಎಂಥ ದುರಂತ. ಸ್ವಾಮೀ ನೀವು ಮೇದಾವಿ. ತ್ರಿಕಾಲ ಜ್ನಾನಿ ಇರಬಹುದು. ನೀವು ಹತ್ತಾರು ಭಾಷೆಗಳನ್ನು ಅರದು ಕುಡಿದಿರಬಹುದು. ಅದಕ್ಕೆ ಆಯಾ ಚಿತ್ರಗಳನ್ನು ಅವವೇ ಭಾಷೆಯಲ್ಲೇ ನೋಡಿ ನಿಮ್ಮ ಕನ್ನಡಪ್ರೇಮವನ್ನು ಹೊರಹಾಕ್ತಿರಿ. ಆದರೆ ನಾವು ಪ್ರತಿಯೊಂದಕ್ಕೂ ಕನ್ನಡವನ್ನೇ ನೆಚ್ಚಿಕೊಂಡವರು. ನಿಮ್ಮಷ್ಟು ಮೇದಾವಿಗಳು ನಾವಲ್ಲ. ಕನ್ನಡ ಬಿಟ್ಟು ಬೇರ್ಯಾವ ಭಾಷೆನೂ ಬರಲ್ಲ. ಅದಕ್ಕೆ ಒಳ್ಳೆಯ ಮನರಂಜನೆಯನ್ನು ನನಗರ್ಥವಾಗುವ ಭಾಷೆಯಲ್ಲಿ ನೋಡಬೇಕು ಎನ್ನುವುದು ನನ್ನ ಹಂಬಲ. ಕನಿಷ್ಟ ಪಕ್ಷ ಕನ್ನಡದಲ್ಲಿ ಅಂತ ಚಿತ್ರಗಳು ತಯಾರಾಗುತ್ತವೆಯೇ ಎಂದರೆ ೯೦೦ ಕೋಟಿ ಬಜೆಟ್ಟಿನ ಸಿನಿಮಾ ಕನ್ನಡದಲ್ಲಿ ತಯಾರಾಗುವುದನ್ನು ನಾನು ಜನ್ಮದಲ್ಲಿ ನೋಡುತ್ತೇನೆ ಎಂಬ ಭರವಸೆಯೂ ನನ್ನಲಿಲ್ಲ. ಇದಕ್ಕೆ ಮತ್ತೆ ನೀವು ಕೇಳಬಹುದು. ೯೦೦ ಕೋಟಿಯ ಚಿತ್ರ ಒಳ್ಳೆಯ ಚಿತ್ರವೇ ಅಂತ. ಅದು ನನ್ನಿಷ್ಟ. ಅಥವಾ ನೀವು ಹೀಗೆ ಹೇಳಬಹುದು, ನಮ್ಮ ನಿರ್ಮಾಪಕರು ನಷ್ಟದಲ್ಲಿರಬೇಕಾದ್ರೆ ೯೦೦ ಕೋಟಿ ಸಿನಿಮಾ ನೋಡಿ ಏನಾಗಬೇಕಿದೆ, ನಮ್ಮ ಸಿನಿಮಾನೇ ನೋಡಿ ಅಂತ. ಹೀಗೆ ಹೇಳುವ ಹಕ್ಕನ್ನು ನಿಮಗೆ ಯಾರು ಕೊಟ್ರೋ ಗೊತ್ತಿಲ್ಲ. ಆದರೆ ಒಂದಂತೂ ಸತ್ಯ. ಕನ್ನಡ ಪ್ರೇಕ್ಷಕರನ್ನು ಅಣ್ಣಾವ್ರು ಕಂಡ ರೀತಿಯಲ್ಲಿ ಈಗೀನ ಯಾವ ಕಲಾವಿದರು ಕಾಣುತ್ತಿಲ್ಲ. ತಮ್ಮ ಚಿತ್ರಗಳ ಬಗ್ಗೆ ವಿಮರ್ಶೆ ಮಾಡುವುದನ್ನು ಬಿಟ್ಟು ಪ್ರೇಕ್ಷಕನನ್ನೇ ಬೈಯ್ಯುವ ಮಟ್ಟಕ್ಕೆ ಇವರು ತಲುಪಿದ್ದಾರೆ. ಇಷ್ಟಕ್ಕೂ, ಇಂಗ್ಲೀಶ್ ಚಿತ್ರವನ್ನು ಇಂಗ್ಲೀಶಿನಲ್ಲೇ ನೋಡಬೇಕೆನ್ನುವುದು ನಾಗತೀಹಳ್ಳಿಯವರೇ ಅದು ನಿಮ್ಮ ಸ್ವಂತ ಅಬಿಪ್ರಾಯವೇ ಹೊರತು ಜನರ ಬಳಿಗೆ ತೆರಳಿ ಅಬಿಪ್ರಾಯವನ್ನು ಸಂಗ್ರಹಿಸಿಲ್ಲ. ನಿಮಗೆ ಇಂಗ್ಲೀಶ್ ಗೊತ್ತು ಅದಕ್ಕೆ ಹಾಗೇ ಹೇಳ್ತಿರಿ. ನಿಮ್ಮ ಸ್ವಂತ ಅಬಿಪ್ರಾಯವನ್ನು ಆರು ಕೋಟಿ ಜನರ ಮೇಲೆ ಹೇರುವ ಪ್ರಯತ್ನ ಯಾಕೆ ಸ್ವಾಮೀ. ಚರ್ಚೆಯಲ್ಲಿ ಒಂದು ಕಡೆ ಹೇಳ್ತಿರಿ. ಕನ್ನಡಿಗರ ಔದಾರ್ಯವನ್ನು ಕೆಲವು ಕಡೆ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು. ಈಗ ನೀವು ಮಾಡುತ್ತಿರುವುದು ಏನು ಹಾಗಾದರೆ. ಕನ್ನಡದಲ್ಲಿ ಮನರಂಜನೆ ಪಡೆಯುವ ಅವರ ಹಕ್ಕನ್ನು ಕಸಿದುಕೊಂಡು, ಅವರಿಗಿರುವ ಆಯ್ಕೆ ಸ್ವಾತಂತ್ರ್ಯವನ್ನು ಕಡೆಗಣಿಸಿ ಅವರ ಔದಾರ್ಯವನ್ನು ದುರುಪಯೋಗಪಡಿಸಿಕೊಂಡಿರುವುದು ನೀವೇ ಅಲ್ಲವೇ.? ನಿಮ್ಮ ಇಂತಹ ನಿಲುವಿನಿಂದ ನೀವು ಗಳಿಸಿರುವ ಲಾಭವಾದರೂ ಏನು.? ಕನ್ನಡ ಚಿತ್ರರಂಗ ಉತ್ತುಂಗಕ್ಕೇ ತಲುಪಿದಿಯೇ.? ಕನ್ನಡ ಚಿತ್ರರಂಗಕ್ಕೆ ಮೂಲವಾಗಿರುವ ಕನ್ನಡ ಭಾಷೆಯನ್ನೇ ಮನರಂಜನೆಗೆ ಯೋಗ್ಯವಿಲ್ಲದ ಭಾಷೆಯನ್ನಾಗಿ ಪರಿವರ್ತಿಸುತ್ತಿದ್ದಿರಿ. ಇಲ್ಲಿ ನೋಡಿ, ನೀವು ಚಿತ್ರರಂಗದವರು ನಿಮ್ಮ ಹಿತಕ್ಕೋಸ್ಕರ ನಿಮ್ಮ ಸ್ವಂತ ಅಬಿಪ್ರಾಯಗಳನ್ನು ಜನರ ಮೇಲೆ ಹೇರಿರುವ ಪರಿಣಾಮವಾಗಿ ನಮ್ಮೂರಲ್ಲಿ ಒಂದು ಪರಭಾಷೆ ಚಿತ್ರ ಮತ್ತೊಂದು ಪರಭಾಷೆಯಲ್ಲಿ ಡಬ್ ಆಗಿ ಬರುತ್ತಿದೆ. ನಮ್ಮ ಮೇಲೆ ಹಿಂದಿಯನ್ನು ಹೇರುವ ಅದಿಕಾರ ನಿಮಗೆ ಯಾರು ಕೊಟ್ಟರು. ಈಗ ನೀವು ಹೇಳಬಹುದು. ಇಂಗ್ಲೀಶ್ ಚಿತ್ರವನ್ನು ಇಂಗ್ಲೀಶಿನಲ್ಲಾದರೂ ನೋಡಿ, ಅಥವಾ ನಮ್ಮದೇ ಸೋ ಕಾಲ್ಡ್ ರಾಷ್ಟ್ರ ಭಾಷೆಯಾದ ಹಿಂದಿಯಲ್ಲಾದರೂ ನೋಡಿ ಅಂತ. ಯಾಕಂದ್ರೆ, ಇಂತಹ ಮಾತುಗಳು ಪ್ರೇಕ್ಷಕರಿಗೆ ಈಗೀಗ ಹೊಸದೇನಲ್ಲ. ಯಾಕಂದ್ರೆ, ನೀವೆಲ್ಲ ನಮ್ಮನ್ನು ಗುತ್ತಿಗೆ ತೆಗೆದುಕೊಂಡಿದ್ದಿರಿ. ನಾವು ಪ್ರೇಕ್ಷಕರೆಲ್ಲ ನಿಮ್ಮ ಅಡಿಯಾಳುಗಳಲ್ಲವೇ.? ನಿಮ್ಮ ಇಂತಹ ಗ್ರಾಹಕ ವಿರೋದಿ ಕೆಲಸಗಳಿಗೆ ಪ್ರಜಾಸತ್ತಾತ್ಮಕ ಎಂಬ ಲೇಪನ ಬೇರೆ ಕೊಡುತ್ತಿರಿ. ಇದು ಸರಿಯೇ.? 
ಅರ್ಥವಾಗದ ಕನ್ನಡಪರತೆ.?

ಡಬ್ಬಿಂಗ್ ವಿರೋದಿಗಳು ತಮ್ಮ ಎಲ್ಲ ವಾದಗಳ ಜೊತೆಗೆ ಕನ್ನಡಪರತೆ ಮತ್ತು ನೈತಿಕತೆಯನ್ನು ಸೇರಿಸುತ್ತಾರೆ. ಆದರೆ ಅವರ ಕನ್ನಡಪರತೆಯೇ ಗೊಂದಲಮಯವಾಗಿದೆ. ಒಬ್ಬರು ತಮಿಳಿನ ಸಿನಿಮಾವನ್ನು ತಮಿಳಿನಲ್ಲೇ ನೋಡಿ ಅಂತಾರೆ, ಮತ್ತೊಬ್ಬರು ನೀವು ನಮ್ಮ ಸಿನಿಮಾನೇ ನೋಡಲ್ಲ ಇನ್ನು ಡಬ್ಬಿಂಗ್ ಸಿನಿಮಾ ಯಾಕ್ರಿ ಬೇಕು ಅಂತ ಉದ್ದಟತನ ಮಾತಾಡ್ತಾರೆ. ಇನ್ನೊಬ್ರು ಹೇಳ್ತಾರೆ, ಡಬ್ಬಿಂಗ್ ಬೇಕು ಎನ್ನುವ ಮೂಲಕ ಪರಬಾಶೆಯನ್ನು ಬೆಳೆಸುತ್ತಿದ್ದಿವಿ ಅಂತ.! ಇನ್ನು, ನಮ್ಮ ಶಿವಣ್ಣನವರು ಏನು ಹೇಳಿದ್ದಾರೆ ಅನ್ನೋದು ವಸಿ ನೋಡಿ. ಹಿಂದಿ ರಾಷ್ಟ್ರ ಭಾಷೆ ಅದಕ್ಕೆ ನನ್ನದೇನೂ ತಕರಾರು ಇಲ್ಲ, ಬೇರೆ ಭಾಷೆ ಚಿತ್ರಗಳನ್ನು ನೋಡಿ, ಆದರೆ ಕನ್ನಡ ಪ್ರೀತಿಸಿ ಬೆಳೆಸಿ. ಮಾತುಗಳಲ್ಲಿ ಎಲ್ಲಿದೆ ಕನ್ನಡತನ.? ಎಲ್ಲಿದೆ ನೈತಿಕತೆ.? ಪರಭಾಷೆ ಚಿತ್ರಗಳನ್ನು ಆಯಾ ಭಾಷೆಗಳಲ್ಲೇ ನೋಡಬೇಕು ಎನ್ನುವುದು, ಕರ್ನಾಟಕದಲ್ಲಿರುವ  ಕನ್ನಡೇತರರನ್ನು ಕನ್ನಡದ ಮುಖ್ಯವಾಹಿನಿಗೆ ತರುವತ್ತ ಸರಕಾರ ಗಮನ ಹರಿಸಿರಬೇಕಾದರೆ ಬೇರೆ ಭಾಷಿಕರಿಗೋಸ್ಕರ ಬೇರೆ ಭಾಷೆ ಚಿತ್ರಗಳು ಬರಬೇಕು ಎಂದು ಹೇಳುವುದು, ಮೂಲಕ ಕನ್ನಡೇತರರು ಕರ್ನಾಟಕದಲ್ಲಿದ್ದರೂ ಅವರನ್ನು ಕನ್ನಡಿಗರನ್ನಾಗಿ ಮಾಡದ ಹಾಗೆ ದೂರ ತಳ್ಳುವುದು ಕನ್ನಡಪರತೆಯೇ.? ತಮ್ಮ ಇಡೀ ಸಿನಿಮಾ ಪಯಣದಲ್ಲಿ ಪ್ರೇಕ್ಷಕರನ್ನು ಎಂದಿಗೂ ನಿಂದಿಸದೇ, ಅವರನ್ನು ಪ್ರತಿಕ್ಷಣ ಗೌರವ ಭಾವನೆಯಿಂದ ಕಂಡ ಅಣ್ಣಾವ್ರ ಆದರ್ಶಗಳು ಅಣ್ಣಾವ್ರ ಹೆಸರು ಹೇಳುವವರಿಗೆ ತುಸುವಾದರೂ ಅನ್ವಯವಾಗುವುದಿಲ್ಲವೇ.?(ಆಗಿನ ಕಾಲದಲ್ಲಿ ಡಬ್ಬಿಂಗ್ ನಿಶೇದವನ್ನು ಬೆಂಬಲಿಸಿದ್ದ ಡಾ: ರಾಜಕುಮಾರ್ ಅವರ ನಿಲುವು ಆಗಿನ ಪರಿಸ್ಥಿತಿಗೆ ಪೂರಕವಾಗಿತ್ತು ಮತ್ತು ಕಾಲಕ್ಕೆ ತಕ್ಕಂತೆ ನಾವು ಬದಲಾಗಬೇಕು ಎಂಬುದು ಕೂಡ ಅವರ ಅಬಿಪ್ರಾಯವಾಗಿತ್ತು ಅಲ್ಲವೇ.!)