Thursday 19 January 2012

ಕನ್ನಡ ಗ್ರಾಹಕರನ್ನು ಲೆಕ್ಕಿಸದೇ ಓಡುತ್ತಿರುವ ಕೆ.ಎಸ್.ಆರ್.ಟಿ.ಸಿ.


ನಮ್ಮ ರಾಜ್ಯದಲ್ಲಿ ಹೆಚ್ಚೆಚ್ಚು ಜನರು ಬಳಸುವಂಥ ಸೇವೆ ಸಾರಿಗೆಯದ್ದಾಗಿದ್ದು, ಅದರಲ್ಲಿ ಎಲ್ಲ ವರ್ಗದ ಜನರು ಸೇರಿರುತ್ತಾರೆ. ಹೀಗೆ ರಾಜ್ಯದ ಬಹುತೇಕ ಜನರಿಗೆ ಸೇವೆ ನೀಡುತ್ತಿರುವ ಸಂಸ್ಥೆಯಾದ ಕೆ.ಎಸ್.ಆರ್.ಟಿ.ಸಿ ರಾಜ್ಯದ ಜನರ ಬಾಷೆಯಾದ ಕನ್ನಡವನ್ನೇ ತನ್ನ ಸೇವೆಯಲ್ಲಿ ಮರೆತಂತಿದೆಸಾರಿಗೆ ಇಲಾಖೆ ಮೂಲಕ ನಾವು ಬಳಸುವ ಹಲವು ಸೇವೆ, ಮಾಹಿತಿಗಳಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆಯೇ ಇಲ್ಲದಂತಾಗಿದೆ.  


ಅಂತರ್ಜಾಲದಲ್ಲಿ ಪ್ರಾಥಮಿಕ ಬಾಷೆಯಾಗದ ಕನ್ನಡ:

ಜನರಿಗೆ ಸಿಗುತ್ತಿರುವ ಸೇವೆಗಳನ್ನು ಇನ್ನಷ್ಟು ಸರಳ ಮತ್ತು ಉಪಯುಕ್ತವಾಗಿಸಲು ಅನೇಕ ತಂತ್ರಜ್ನಾನಗಳನ್ನು ಇಲಾಖೆ ಅಳವಡಿಸಿಕೊಂಡಿದ್ದರೂ ಅವುಗಳನ್ನು ಜನರ ಬಾಷೆಯಿಂದ ದೂರವೇ ಇಟ್ಟು ಅವು ಇದ್ದು ಇಲ್ಲದಂತಾಗಿವೆ. ಗ್ರಾಹಕರು ಆಗ್ರಹಿಸುವವರೆಗೂ ಕೆ.ಎಸ್.ಆರ್.ಟಿ.ಸಿ ಇಲಾಖೆಯ ಮಿಂಬಲೆ(ಅಂತರ್ಜಾಲ ತಾಣ)ಯಲ್ಲಿ ಕನ್ನಡವೇ ಇರಲಿಲ್ಲ. ಅನೇಕ ಗ್ರಾಹಕರು ಸತತವಾಗಿ ಹಲವು ಬಾರಿ ಒತ್ತಾಯ ಮಾಡಿದ ಪರಿಣಾಮವಾಗಿ ಈಚೆಗೆ ಕೆಲವು ದಿನಗಳ ಹಿಂದಷ್ಟೇ ಕೆ.ಎಸ್.ಆರ್.ಟಿ.ಸಿ ಇಲಾಖೆಯ ಮಿಂಬಲೆಯಲ್ಲಿ ಕನ್ನಡವನ್ನು ಅಳವಡಿಸಲಾಯಿತು. ಮಿಂಬಲೆಯಲ್ಲಿ ಕನ್ನಡವಿದ್ದರೂ ಅದನ್ನು ಪ್ರಾಥಮಿಕ ಬಾಶೆಯನ್ನಾಗಿ ಮಾಡದೇ ಮಿಂಬಲೆಯಲ್ಲಿ ಕನ್ನಡದ ಆಯ್ಕೆ ಕೊಡಲಾಗಿದೆ. ಕನ್ನಡಿಗರೇ ಹೆಚ್ಚು ಉಪಯೋಗಿಸುವ ಸೇವೆಯಲ್ಲಿ ಕನ್ನಡವನ್ನು ಪ್ರಾಥಮಿಕ ಬಾಶೆಯನ್ನಾಗಿ ಮಾಡಿದರೆ ಅದರಿಂದ ಗ್ರಾಹಕರಿಗೆ ಹೆಚ್ಚು ಅನುಕೂಲವಾಗುತ್ತದೆಯಲ್ಲವೇ.? ಇದೇ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಪಕ್ಕದ ರಾಜ್ಯ ಮಹಾರಾಷ್ಟ್ರದ ಸಾರಿಗೆ ಇಲಾಖೆಯ ಮಿಂಬಲೆಯಲ್ಲಿ ಅಲ್ಲಿನ ಬಾಶೆ ಮರಾಠಿಯನ್ನೇ ಪ್ರಾಥಮಿಕ ಬಾಶೆಯನ್ನಾಗಿ ಅಳವಡಿಸಿ ಸ್ಥಳೀಯ ಜನರಿಗೆ ಅನುಕೂಲ ಮಾಡಿಕೊಡಲಾಗಿದೆ. ಇನ್ನು ಒಂದು ಸಮೀಕ್ಷಾ ವರದಿ ಪ್ರಕಾರ ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಜನರು ತಮ್ಮ ಬಾಶೆಯಲ್ಲೇ ಅಂತರ್ಜಾಲವನ್ನು ಬಳಸಲಿದ್ದು ಕರ್ನಾಟಕದ ಅಂತರ್ಜಾಲಗಳಲ್ಲಿ ಕನ್ನಡವೇ ಮುಂದಾಗಲಿದೆ. ಹೀಗಿದ್ದರೂ ಅಂತರ್ಜಾಲದ ಸೇವೆಯಲ್ಲಿ ಕನ್ನಡವನ್ನು ಅಳವಡಿಸುವಲ್ಲಿ ಆಸಕ್ತಿ ತೋರದ ಇಲಾಖೆಯ ನಡೆ ಆಡಳಿತದಲ್ಲಿ ಕನ್ನಡವೆಂಬ ಸರಕಾರದ ಕಾರ್ಯಕ್ರಮಕ್ಕೆ ಹಿನ್ನಡೆ ಒದಗಿಸುತ್ತಿದೆ.
ಗ್ರಾಹಕ ಸೇವಾ ಕೇಂದ್ರಕ್ಕೆ ಮಾಡೋ ಕರೆಯಲ್ಲೂ ಕನ್ನಡ ಆಯ್ಕೆಯ ಬಾಶೆ.
ಕೆ.ಎಸ್.ಆರ್.ಟಿ.ಸಿ ಯಿಂದ ಬೇಕಾಗುವ ಮಾಹಿತಿಗಳನ್ನು ಅನೇಕ ಜನರು ಇಲಾಖೆಯ ಗ್ರಾಹಕ ಸೇವಾ ಪ್ರತಿನಿಧಿಗೆ ಕರೆ ಮಾಡುವ ಮೂಲಕ (08044554422) ತಿಳಿದುಕೊಳ್ಳಲು ಬಯಸುತ್ತಾರೆ.  ಆದರೆ ಇಲ್ಲೂ ಇಂಗ್ಲೀಶನ್ನೇ ಪ್ರಾಥಮಿಕ ಬಾಶೆಯನ್ನಾಗಿಸಿ ಕನ್ನಡಕ್ಕೆ ಎರಡನೇ ಸ್ಥಾನ ಅಥವಾ ಆಯ್ಕೆಯ ಸ್ಥಾನ ಕೊಡಲಾಗಿದೆ. ಹೀಗೆ ಇಲಾಖೆಗೆ ಕರೆ ಮಾಡುವ ಜನರಲ್ಲಿ ರಾಜ್ಯದ ಎಲ್ಲ ಪ್ರದೇಶದ ಎಲ್ಲ ಶೈಕ್ಷಣಿಕ ವರ್ಗದ ಜನರೇ ಹೆಚ್ಚಾಗಿ ಸೇರಿರುತ್ತಾರೆ. ಎಲ್ಲರಿಗೂ ತಿಳಿದಿರುವ ಏಕೈಕ ಬಾಶೆ ಕನ್ನಡ. ಹೀಗಾಗಿ ಕನ್ನಡದಲ್ಲೇ ಸೇವೆ ಲಭಿಸಿದರೆ ಎಲ್ಲ ಜನರಿಗೂ ಮೊದಲಿಗಿಂತಲೂ ಹೆಚ್ಚು ಅನುಕೂಲವಾಗುತ್ತದೆ. ಹೀಗೆ ತಂತ್ರಜ್ನಾನ ಬಳಸಿ ನೀಡುವ ಯಾವುದೇ ಮಾಹಿತಿ, ಸೇವೆ ಕನ್ನಡದಲ್ಲಿ ಇದ್ದಾಗ ಮಾತ್ರ ಕರ್ನಾಟಕದಲ್ಲಿರುವ ಎಲ್ಲ ವರ್ಗದ ಜನರು ಅದನ್ನು ಹೆಚ್ಚೆಚ್ಚು ಮತ್ತು ಸರಳವಾಗಿ ಉಪಯೋಗಿಸಬಲ್ಲರು ಎಂಬ ಸಾಮಾನ್ಯ ಸಂಗತಿಯನ್ನು ಇಲಾಖೆಯವರು ಅರಿಯಬೇಕಿದೆ. ಹೋಲಿಕೆಯಲ್ಲಿ ತುಂಬಾ ಕಡಿಮೆ ಇರುವ ಕನ್ನಡೇತರರ ಕರೆಗಳಿಗೆ ಅನುಕೂಲವಾಗಲು ಇಂಗ್ಲೀಶಿನ ಅಯ್ಕೆ ಕೊಡಬಹುದು.
ಮೊಬೈಲ್ ತಂತ್ರಜ್ನಾನದಲ್ಲಂತೂ ಕನ್ನಡಕ್ಕೆ ಜಾಗವೇ ಇಲ್ಲ.
ಈಗ ಕೆ.ಎಸ್.ಆರ್.ಟಿ.ಸಿ ತನ್ನ ಸೇವೆಯನ್ನು ಮೊಬೈಲ್ ಮೂಲಕನೂ ಒದಗಿಸುತ್ತಿದ್ದು, ಮೊಬೈಲಿನಲ್ಲೇ ಬಸ್ಸಿನಲ್ಲಿ ನಮ್ಮ ಸ್ಥಳವನ್ನು ಕಾಯ್ದಿರಿಸಬಹುದು. ಆದರೆ ತಂತ್ರಜ್ನಾನವೂ ಹೆಚ್ಚು ಜನರನ್ನು ತಲುಪುವಲ್ಲಿ ವಿಫಲವಾಗಿದೆ. ಯಾಕಂದ್ರೆ ಸೇವೆಯಲ್ಲಿ ಕನ್ನಡಕ್ಕೆ ಸ್ಥಾನವೇ ಇಲ್ಲ. ಇದನ್ನು ಪ್ರಶ್ನಿಸಿದರೆ, ಇದು ನಮ್ಮ ತಪ್ಪಲ್ಲ ಮೊಬೈಲ್ ಕಂಪನಿಗಳು ಕನ್ನಡದ ತಂತ್ರಾಂಶವನ್ನು ಮೊಬೈಲಿನಲ್ಲಿ ಅಳವಡಿಸದಿರುವುದೇ ಕಾರಣ ಎನ್ನುತ್ತಾರೆ. ಮೊಬೈಲ್ ಆಡಳಿತ ಹೆಚ್ಚು ಜನರನ್ನು ತಲುಪಲು ತಂತ್ರಜ್ನಾನ ಕನ್ನಡದಲ್ಲಿ ಇರಬೇಕು. ಕನ್ನಡವನ್ನು ಮೊಬೈಲಿನಲ್ಲಿ ಓದಲು ಬರೆಯಲು ಬೇಕಿರುವ ತಂತ್ರಜ್ನಾನವನ್ನು ಅಬಿವೃದ್ದಿಪಡಿಸಲು ಕ್ರಮ ಕೈಗೊಳ್ಳಬೇಕಾದ ಸರಕಾರ ಮೊಬೈಲ್ ಆಡಳಿತದಿಂದ ಕನ್ನಡವನ್ನು ದೂರವೇ ಇಟ್ಟು ಅದು ಜನರನ್ನು ತಲುಪದ ಹಾಗೆ ಮಾಡುವುದು ಎಷ್ಟರ ಮಟ್ಟಿಗೆ ಸರಿ.? ಈಗ ಮೊಬೈಲ್ ಫೋನ್ ಅನ್ನೋದು ಸುಲಭವಾಗಿ ಕೈಗೆಟುವ ವಸ್ತುವಾಗಿದೆ. ರಾಜ್ಯದ ಬಹುತೇಕ ಜನರು ಮೊಬೈಲ್ ಸೇವೆಯನ್ನು ಬಳಸುತ್ತಿದ್ದಾರೆ ಮತ್ತು ಹೀಗೆ ಮೊಬೈಲ್ ಬಳಸುವವರಲ್ಲಿ ಎಲ್ಲ ಶೈಕ್ಷಣಿಕ ವರ್ಗದ ಜನರು ಸೇರಿರುತ್ತಾರೆ. ರಾಜ್ಯದ ಎಲ್ಲ ಶೈಕ್ಷಣಿಕ ವರ್ಗದ ಜನರಿಗೂ ತಿಳಿದಿರುವ ಒಂದೇ ಬಾಶೆ ಎಂದರೆ ಅದು ಕನ್ನಡ. ಹೀಗಿರುವಾಗ ಸೇವೆಯಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ಕೊಡದೇ ಇರುವುದು ಕರ್ನಾಟಕದಲ್ಲೇ ಕನ್ನಡ ಬಲ್ಲ ಜನರನ್ನು ಸೇವೆಯಿಂದಾಗುವ ಲಾಭದಿಂದ ದೂರವಿಟ್ಟಂತಾಗುವುದಿಲ್ಲವೇ.?
ಆಡಳಿತದಲ್ಲಿ ಕನ್ನಡ ಎನ್ನುವುದು ಕೆ.ಎಸ್.ಆರ್.ಟಿ.ಸಿ ಗೆ ಅನ್ವಯವಾಗುವುದಿಲ್ಲವೇ.?
ಗ್ರಾಹಕರಿಗೆ ಅನುಕೂಲವಾಗುತ್ತಿದ್ದರೂ ಕನ್ನಡವನ್ನು ತನ್ನ ಸೇವೆಯಿಂದ ದೂರವಿಟ್ಟಿರುವ ಕೆ.ಎಸ್.ಆರ್.ಟಿ.ಸಿ ನಡೆ ಗಮನಿಸಿದರೆ ಆಡಳಿತದಲ್ಲಿ ತಂತ್ರಜ್ನಾನ ಅಳವಡಿಕೆ ಅಥವಾ ಅಂತರ್ಜಾಲವೆಂದರೆ ಅಲ್ಲಿ ಕೇವಲ ಇಂಗ್ಲೀಶ್ ಇರಬೇಕು ಕನ್ನಡಕ್ಕೆ ಯೋಗ್ಯತೆ ಇಲ್ಲ ಎಂದು ಇಲಾಖೆಯವರೇ ನಂಬಿರುವಂತಿದೆ. ನಮ್ ಬದಾಮಿ ರೈತ ಬಸಪ್ಪ ಸರಕಾರದ ಮಾಹಿತಿ ಪಡೆದುಕೊಳ್ಳಬೇಕಂದ್ರೆ ಇಂಗ್ಲೀಶ್ ಕಲಿಯಬೇಕಾ.? ಕರ್ನಾಟಕದಲ್ಲೇ ಅದೂ ಸರಕಾರದ ಇಲಾಖೆಯಲ್ಲೇ ಅವನಿಗೆ ಕನ್ನಡದಲ್ಲಿ ಸೇವೆ ಸಿಗುತ್ತಿಲ್ಲ ಎಂದಾದರೆ ಸರಕಾರ ಅವನ ಪರವಾಗಿಲ್ಲ ಎಂದೇ ಅರ್ಥ. ಆಡಳಿತದಲ್ಲಿ ಕನ್ನಡ ಎನ್ನುವುದು ಪತ್ರ ವ್ಯವಹಾರ, ಇಲೇಕ್ಟ್ರಾನಿಕ್ ವ್ಯವಹಾರ, ಮಿಂಬಲೆ, ಮೊಬೈಲ್ ತಂತ್ರಜ್ನಾನ ಹೀಗೆ ಎಲ್ಲ ಹಂತಗಳಿಗೂ ಅನ್ವಯವಾಗಬೇಕು. ಹಳೇ ವಿದಾನಕ್ಕೆ ಕನ್ನಡ ಅಳವಡಿಸಿ ಹೊಸ ಹೊಸ ತಂತ್ರಜ್ನಾನಗಳಿಂದ ಕನ್ನಡವನ್ನು ದೂರವಿಡುವುದು ಜನರನ್ನು ಆಯಾ ಸೇವೆಯಿಂದ ದೂರವಿಟ್ಟು ಅವರಿಗೆ ಅನುಕೂಲವಾಗದೇ ತಡೆದಂತೆಯೇ ಸರಿ.  

ಇನ್ನು, ಗ್ರಾಹಕರಾಗಿ ಸರಕಾರ ಮತ್ತು ಸರಕಾರೇತರ ಹೀಗೆ ಎಲ್ಲ ಸಂಸ್ಥೆಗಳಲ್ಲೂ ಕನ್ನಡದಲ್ಲಿ ಸೇವೆ, ಮಾಹಿತಿ ಪಡೆಯುವ ಅವಕಾಶ ಮತ್ತು ಹಕ್ಕು ನಮಗಿದೆ. ಹಕ್ಕನ್ನು ಚಲಾಯಿಸಲು ಮತ್ತು ಗ್ರಾಹಕನಿಗೆ ಮಾರುಕಟ್ಟೆಯಲ್ಲಿ ಮೋಸವಾಗದಂತೆ ರಕ್ಷಣೆ ಕೊಡಲು "Consumer Protection Act" ಎಂಬ ಮಸೂದೆಯನ್ನು 1986 ರಲ್ಲಿ ಅಂಗೀಕರಿಸಲಾಗಿದ್ದು, ಒಬ್ಬ ಕನ್ನಡಿಗನಿಗೆ ಗ್ರಾಹಕ ಸೇವೆಗಳನ್ನು ಕನ್ನಡದಲ್ಲೇ ಪಡೆಯಲು ಮಸೂದೆ ಸಹಕಾರಿಯಾಗಿದೆ. ಹೀಗೆ, ಎಲ್ಲ ಗ್ರಾಹಕ ಸೇವೆಗಳನ್ನು ಕನ್ನಡದಲ್ಲಿ ಪಡೆಯಲು ನೀತಿ ನಿಯಮಗಳು ಇದ್ದರೂ ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಗ್ರಾಹಕರಾದ ನಾವು ತಕ್ಕ ಮಟ್ಟಿಗೆ ಹಿಂದೆ ಬಿದ್ದಿದ್ದೇವೆ. ಇನ್ನಾದರೂ ಇದರತ್ತ ಗಮನ ಹರಿಸಿ, ಕೆ.ಎಸ್.ಆರ್.ಟಿ.ಸಿ ಎಲ್ಲ ಗ್ರಾಹಕ ಸೇವೆಗಳನ್ನು ಕನ್ನಡದಲ್ಲಿ ಪಡೆದುಕೊಳ್ಳುವತ್ತ ಪ್ರಯತ್ನಿಸಬೇಕು. ಗ್ರಾಹಕನಾಗಿ ಹಕ್ಕು ಚಲಾಯಿಸೋಣ. ಎಲ್ಲ ಸೇವೆಗಳನ್ನೂ ಕನ್ನಡದಲ್ಲಿ ನೀಡುವಂತೆ ಅವರ ಮಿಂಚೆ ವಿಳಾಸ (feedback@ksrtc.org) ಮತ್ತು ಫೇಸಬುಕ್ ಖಾತೆಗಳ ಮೂಲಕನೂ ಒತ್ತಾಯಿಸೋಣ.