Monday 22 February 2010

ಆತ್ಮಾವಲೋಕನಕ್ಕೆ ಇದು ಸಕಾಲ; ಆಚಾರ್ಯ ಸಾಹೇಬರೇ...........!


"ಕಾಸರಗೋಡಿನಲ್ಲಿ ಕನ್ನಡ ಸಮಾವೇಶ ನಡೆಯುತ್ತಿರುವಾಗ, ಸೊಲ್ಲಾಪೂರಿನಲ್ಲಿ ಕನ್ನಡಿಗರು ಒಗ್ಗೂಡಿ ಸಮಾರಂಭ ಮಾಡುತ್ತಿರುವಾಗ ಬೆಳಗಾವಿಯಲ್ಲಿ ಮರಾಠಿಗರು ನಡೆಸಲುದ್ದೇಶಿಸಿರುವ ಸೀಮಾ ಪರಿಷತ್ ಬೇಡ ಎನ್ನಲು ಹೇಗೆ ಸಾದ್ಯ. ಆದರೆ ಅವರಿಗೆ ನಾವು ಷರತ್ತು ಬಧ್ಧ ಅನುಮತಿ ನೀಡಿದ್ದೇವೆ." ಇದು ಫೇ ೫ ರಂದು ನಡೆದ ಮರಾಠಿಗರ ಸೀಮಾ ಪರಿಷತ್ ಸಮಾವೇಶವನ್ನು ತಡೆ ಹಿಡಿಯಬೇಕು, ಅದಕ್ಕೆ ಅನುಮತಿ ಕೊಡಬಾರದು ಎಂದು ಒತ್ತಾಯಿಸಿದ ಕನ್ನಡಪರ ಸಂಘಟನೆಗಳಿಗೆ ನಮ್ಮ ರಾಜ್ಯದ ಘನತೆವೆತ್ತ ಮನೆ ಮಂತ್ರಿಗಳಾದ (ಗೃಹ ಸಚಿವ) ವಿ.ಎಸ್.ಆಚಾರ್ಯ ಅವರು ನೀಡಿದ ಉತ್ತರ. ಫೆ ೫ ರಂದು ಸೀಮಾ ಪರಿಷತ್ ನಡೆದೇ ಹೋಯಿತು. ಆದರೆ ಗೃಹ ಸಚಿವರ ಅನುಮತಿಯಂತೆ ನಡೆಯಲಿಲ್ಲ. ಅವರ ಷರತ್ತು ಯಾವ ಎಮ್.ಇ.ಎಸ್ ನವರ ಮುಂದೆಯೂ ಹಾಯ್ದು ಹೋಗಲಿಲ್ಲ. ಕರ್ನಾಟಕದ ನೆಲದಲ್ಲೇ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರನ್ನು ಬೈಯ್ದು, ಮನ ಬಂದಂತೆ ಥಳಿಸುವಷ್ಟು ಷರತ್ತು ಬಧ್ಧ ಅನುಮತಿಯನ್ನು ಸರಕಾರ ನೀಡಿತ್ತು ಎಂಬುದನ್ನು ಯಾರೂ ಊಹಿಸಿರಲಿಲ್ಲ. ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಬ್ರಿಟಿಷರು ಭಾರತೀಯರ ಮೇಲೆ ಮಾಡಿದ ಹಲ್ಲೆಯನ್ನು ಮರೆತಿದ್ದ ಕನ್ನಡಿಗರು, ಈ ಸಂದರ್ಭದಲ್ಲಿ ಸ್ವಲ್ಪ ಮಟ್ಟಿಗಾದರೂ ನೆನಪಿಸಿಕೊಂಡಿರಬಹುದು. ಆದರೆ ಅದಕ್ಕೂ ಇದಕ್ಕೂ ಅಜಗಜಾಂತರ ವ್ಯತ್ಯಾಸ. ಅಲ್ಲಿ ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಂಡ ಪರಕೀಯರನ್ನು ದೇಶ ಬಿಟ್ಟು ತೊಲಗಿಸಲು ನಡೆಸಿದ ಹೋರಾಟ. ಇಲ್ಲಿಯ ಘಟನೆಯಲ್ಲಿ ಯಾರೂ ಪರಕೀಯರಲ್ಲ, ಎಲ್ಲರೂ ಭಾರತಿಯರೆ. ಆದರೆ ಕೆಲವರು, ಒಣ ರಾಜಕೀಯದ ದುರುದ್ದೇಶದಿಂದ ವಿವಾದವನ್ನು ಮತ್ತಷ್ಟು ಕೆಣಕಿ, ಮುಗ್ಧ ಜನರಲ್ಲಿ ಅಶಾಂತಿಯನ್ನು ಹುಟ್ಟುಹಾಕಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಭಾರತೀಯರು. ಇನ್ನು ಹಲವರು ವಿವಾದವನ್ನು ಬಗೆಹರಿಸಿ, ಸ್ಥಳೀಯರಲ್ಲಿ ಮತ್ತು ವಲಸಿಗರಲ್ಲಿ ಸಾಮರಸ್ಯವನ್ನು ಬೆಳೆಸಿ, ಜನರಲ್ಲಿ ಶಾಂತಿ ಮೂಡಿಸಲು ಪ್ರಯತ್ನಿಸಿ ತಮ್ಮ ನಿಷ್ಠೆ ಪ್ರದರ್ಶಿಸುತ್ತಿರುವ ಭಾರತೀಯರು.

ಗೃಹ ಸಚಿವರಿಗೆ ಇದು ಆತ್ಮಾವಲೋಕನಕ್ಕೆ ಸಕಾಲ. ಕಾಸರಗೋಡಿನಲ್ಲಿ, ಸೋಲ್ಲಾಪುರಿನಲ್ಲಿ ಕನ್ನಡ ಸಮಾವೇಶ ಮಾಡುವ ಬಗ್ಗೆ ಮಾತನಾಡುವ ಸಚಿವರು, ಆ ಸಮಾವೇಶಗಳಲ್ಲಿ ಕಂಡು ಬರುವ ಶಿಸ್ತಿನ ಬಗ್ಗೆ ಆಲೋಚನೆ ಮಾಡಿದ್ದಾರೆಯೆ...? ಮಹಾರಾಷ್ಟದಲ್ಲಿ ಹಲವಾರು ಕನ್ನಡ ಸಂಘಗಳಿದ್ದಾವೆ. ಅವುಗಳು ಪ್ರತಿ ವರ್ಷ ಹಲವಾರು ಕನ್ನಡ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸುತ್ತವೆ. ಕನ್ನಡ ರಾಜ್ಯೊತ್ಸವವನ್ನು ಅಧ್ಧೂರಿಯಿಂದ ಆಚರಿಸುತ್ತವೆ. ಆದರೆ ಯಾವತ್ತಾದರೂ ಅವುಗಳಿಂದ ಮತ್ತು ಅವುಗಳು ಮಾಡುವ ಕಾರ್ಯಕ್ರಮಗಳಿಂದ ಅಲ್ಲಿನ ಮಹಾರಾಷ್ಟ್ರದ ಜನರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾದ ಉದಾಹರಣೆಗಳಿವೆಯೆ...? ಯಾವುದೇ ಅಹಿತಕರ ಘಟನೆಗಳು ಸಂಭವಿಸಿದ ನಿದರ್ಶನಗಳಿವೆಯೆ....? ಯಾವುದೇ ಹೊರರಾಜ್ಯ ಕನ್ನಡದ ಸಮಾರಂಭದಲ್ಲಿ ಅಲ್ಲಿನ ಗೌರವಕ್ಕೆ ಚ್ಯುತಿ ಬರುವಂತಹ ನಿರ್ಣಯಗಳನ್ನು ಅಂಗೀಕರಿಸಲಾಗಿದೆಯೇ.......? ಎಲ್ಲಿಯಾದರೂ ಮಹಾರಾಷ್ಟ್ರದಲ್ಲಿ ಮಹಾರಾಷ್ಟ್ರದ ಜನರ ಮೇಲೆ ಕನ್ನಡಿಗರು ಹಲ್ಲೆ ಮಾಡಿ, ಅವರ ಭಾವನೆಗಳ ಜೊತೆ ಆಟ ಆಡಿದ ಸುದ್ದಿಗಳಿವೆಯೆ....? ಈ ಪ್ರಶ್ನೆಗಳು ಕೇವಲ ಮಹಾರಾಷ್ಟ್ರಕ್ಕೆ ಸಂಬಂದ ಪಡದೇ ಇಡಿ ಜಗತ್ತಿನಲ್ಲಿ ಎಲ್ಲೆಲ್ಲಿ ಕನ್ನಡ ಸಂಘಗಳಿವೆಯೋ ಅಲ್ಲೆಲ್ಲ ಅನ್ವಯಿಸುತ್ತದೆ. ಜಗತ್ತಿನಲ್ಲಿ ಎಲ್ಲಿಯೂ ವಲಸಿಗ ಕನ್ನಡಿಗರು ಸ್ಥಳಿಯ ಜನರ ವಿರುದ್ಧ ಹೋದ ಉದಾಹರಣೆಗಳಿಲ್ಲ. ತಾವು ಕಾಲಿಟ್ಟ ಪ್ರತಿಯೊಂದು ಸ್ಥಳವನ್ನು ಗೌರವಿಸುತ್ತ ಅಲ್ಲಿನ ಜನರ ವಿಶ್ವಾಸಕ್ಕೆ ಪಾತ್ರರಾಗಿ, ತಾವೂ ಅಲ್ಲಿಯ ನಾಗರಿಕರಾಗಿ ಬೆರೆತು ತಮ್ಮ ತಾಯ್ನಾಡಿನ ಸಂಸ್ಕೃತಿ, ಸಂಪ್ರದಾಯವನ್ನು ಕಾಪಾಡಿಕೊಂಡು ಹಿರಿಮೆ ಮೆರೆಯುತ್ತಿದ್ದಾರೆ. ಹೀಗೆ ವಿದೇಶಗಳಲ್ಲೆಲ್ಲ ಕನ್ನಡದ ಕಂಪು ಹರಡುತ್ತಿರುವಾಗ ನಮ್ಮ ನೆಲದಲ್ಲೇ ದುಷ್ಟ ಶಕ್ತಿಗಳು ಅಶಾಂತಿ ಹುಟ್ಟುಹಾಕಲು ಪ್ರಯತ್ನಿಸುತ್ತಿರುವಾಗ ನೋಡಿಕೊಂಡು ಸುಮ್ಮನಿರಬೇಕೆ ಮಾನ್ಯ ಆಚಾರ್ಯ ಸಾಹೇಬರೇ.....? ಹಿಂದೆ ನಡೆದ ಹಲವಾರು ಸಮಾವೇಶಗಳಿಂದ ಮತ್ತು ಘಟನೆಗಳಿಂದ ಎಮ್.ಇ.ಎಸ್ ನವರ ಪುಂಡಾಟದ ಬಗ್ಗೆ ಸರಕಾರಕ್ಕೆ ಅರಿವಾಗಿಲ್ಲವೇ.......? ಅಥವಾ ಇದನ್ನು ಸರಕಾರದ ಜಾಣ ಕುರುಡುತನವೆಂದು ತಿಳಿದುಕೊಳ್ಳಬಹುದೇ........? ಪ್ರತಿ ಬಾರಿ ಬೇರೆ ಬೇರೆ ಹೆಸರಿನಲ್ಲಿ ಸಮ್ಮೇಳನ ಮಾಡಿ, ಅಲ್ಲಿನ ಮರಾಠಿ ಭಾಷಿಕರಿಗೆ ಬೇಡವಾದ ಭಾವನೆಗಳನ್ನು ಮೂಡಿಸಿ, ನೀವು ಮರಾಠಿಗರು ಇದು ಮಹಾರಾಷ್ಟ್ರಕ್ಕೆ ಸೇರಬೇಕು, ಇಲ್ಲಿನ ಕಛೇರಿಗಳಲ್ಲಿ ಮರಾಠಿಗೂ ಸ್ಥಾನ ಬೇಕು ಎಂದೆಲ್ಲ ಪೊಳ್ಳು ನಿರ್ದಾರಗಳನ್ನು ಕೈಗೊಂಡು ಅಲ್ಲಿನ ಮರಾಠಿ ಮತ್ತು ಕನ್ನಡ ಭಾಷಿಕರ ನಡುವೆ ಇರುವ ಸಾಮರಸ್ಯವನ್ನು ಹಾಳು ಮಾಡುತ್ತಿರುವವರ ಬಗ್ಗೆ ಸರಕಾರ ಮೃದು ಧೋರಣೆ ತಾಳಿದ್ದು ಏಕೆ........? ಈ ಎಲ್ಲ ಮುನ್ಸೂಚನೆಗಳ ಆದಾರವಾಗಿಟ್ಟುಕೊಂಡೆ ಕನ್ನಡ ಪರ ಸಂಘಟನೆಗಳು ಇದಕ್ಕೆ ಅನುಮತಿ ಬೇಡ ಎಂದಿದ್ದು, ಇಷ್ಟಾಗಿಯೂ ಸೀಮಾ ಪರಿಷತಗೆ ಅವಕಾಶ ಮಾಡಿಕೊಟ್ಟಿದ್ದರ ಪರಿಣಾಮವನ್ನು ಒಮ್ಮೆ ನಮ್ಮ ಸಚಿವರು ಆತ್ಮಾವಲೋಖನ ಮಾಡಿಕೊಳ್ಳಲಿ. ಇನ್ನು ಸೀಮಾ ಪರಿಷತ ಸಮಾವೇಶವನ್ನು ಬೆಳಗಾವಿ ಮರಾಠಿಗರು ಯಾವ ರೀತಿ ಸ್ವೀಕರಿಸಿದ್ದಾರೆ ಎಂಬುದಕ್ಕೆ ನಿರೀಕ್ಷಿಸಿದ್ದ ಲಕ್ಷ ಲಕ್ಷ ಜನರ ಬದಲಿಗೆ ಅಲ್ಲಿ ನೆರೆದಿದ್ದ ಸಾವಿರದಷ್ಟು ಜನರೇ ಸಾಕ್ಷಿ.

ಎಲೆಯಡಿಕೆ: ಆದ್ದರಿಂದ ಇಂತಹ ಸಮಾವೇಶಗಳು ಮರಾಠಿಗರ ಸಮ್ಮಿಲನಕ್ಕೆ ಒಂದು ವೇದಿಕೆಯಾಗುವ ಬದಲು ಕೇವಲ ಕನ್ನಡವನ್ನು, ಕನ್ನಡಿಗರನ್ನು, ಕರ್ನಾಟಕವನ್ನು ಮತ್ತು ಸರಕಾರವನ್ನು ಟೀಕಿಸಲು ಬಳಸಿಕೊಳ್ಳುವ ವೇದಿಕೆಗಳಾಗುತ್ತವೆ, ಅಲ್ಲಿನ ಶಾಂತಿಯನ್ನು ಕೆದಕುವ ವೇದಿಕೆಗಳಾಗುತ್ತವೆ, ಕನ್ನಡಿಗರ ತಾಳ್ಮೆ ಪರೀಕ್ಷಿಸುವ ವೇದಿಕೆಗಳಾಗುತ್ತವೆ ಎಂಬುದನ್ನು ಇನ್ನಾದರೂ ನಮ್ಮ ಘನ ಸರಕಾರ ಮತ್ತು ಆಚಾರ್ಯ ಸಾಹೇಬರು ಅರ್ಥ ಮಾಡಿಕೊಳ್ಳಬೇಕು. ಬೆಳಗಾವಿ ಗಡಿ ಎಂಬ ಏಕೀಕರಣ ಸಮಯದಲ್ಲಿ ಉದ್ಭವವಾದ ಸಣ್ಣ ಸಮಸ್ಯೆಯನ್ನು ಬಗೆ ಹರಿಸದೇ ಪ್ರತಿ ಬಾರಿ ನುಣುಚಿಕೊಂಡು ಅದನ್ನು ಕರ್ನಾಟಕದ ಮೂಲಭೂತ ವಿವಾದವನ್ನಾಗಿ ಮಾಡಿದ ಕೀರ್ತಿ ನಮ್ಮ ಹಿಂದಿನ ಸರಕಾರಗಳಿಗೆ ಸಲ್ಲುತ್ತದೆ. ಈಗಿರುವ ಬಿಜೆಪಿ ಸರಕಾರ ಈ ಸಮಸ್ಯೆಯನ್ನು ಬಗೆಹರಿಸುವ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸದಿದ್ದರೂ ಸರಿ, ಆದರೆ ಇಂತಹ ಶಾಂತಿ, ಸುವ್ಯವಸ್ಥೆಯನ್ನು ಕದಡುವ ಮತ್ತು ವಿವಾದವನ್ನು ಇನ್ನಷ್ಟು ಜಟಿಲಗೊಳಿಸುವ ಸಮಾವೇಶಗಳಿಗೆ ಅನುಮತಿ ನೀಡಬಾರದೆಂದು ಕರ್ನಾಟಕ ಶಾಂತಿಪ್ರಿಯರ ಒಕ್ಕೋರಲಿನ ಆಗ್ರಹವಾಗಿದೆ.

ಹೆಬ್ಬಯಕೆ: Every Belagavian should feel like this….
" My native is BELAGAVI, and I am not a MAHARASHTRIAN"