Monday 1 November 2010

ಗ್ರಾಹಕನ ಹಕ್ಕು ಚಲಾಯಿಸಿ, ಇಲ್ಲ "ದಿವಾಳಿ" ಆಚರಿಸಲು ಸಜ್ಜಾಗಿ..!


ಗೆಳೆಯರೆ,
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು.

ಇಲ್ಲಿ ಲಗತ್ತಿಸಿರುವ ಚಿತ್ರದಲ್ಲಿ "ಶುಭೋ ಬಿಜೊಯ" ಅಂಥ ಅಚ್ಚ ಬೆಂಗಾಲಿಯನ್ನು ಇಂಗ್ಲೀಷ ಲಿಪಿಯಲ್ಲಿ ಬರೆದು ಶುಭಾಶಯ ಕೋರಲಾಗಿದೆ. "ಶುಭೋ ಬಿಜೊಯ" ಅನ್ನೊದು ಬೆಂಗಾಲಿಯಲ್ಲಿ ’ದಸರಾ ಹಬ್ಬ’ ಇದ್ದ ಹಾಗೆ. ಕೆಲವು ದಿನಗಳ ಹಿಂದೆ ಈ ಚಿತ್ರ ಒಂದು ಮಾಲ್ ನ ಸ್ಕ್ರೀನ್ ಮೇಲೆ ಕಂಡುಬಂತು. ಇದು ಕಂಡು ಬಂದಿದ್ದು, ಪಶ್ಚಿಮ್ ಬಂಗಾಲದ ಯಾವುದೋ ಮಾಲನಲ್ಲಿ ಅಲ್ಲ, ಕರ್ನಾಟಕದ ರಾಜಧಾನಿ ಬೆಂಗಳೂರಿನ ಮಂತ್ರಿ ಮಾಲನ ಸ್ಕ್ರೀನ್ ಮೇಲೆ. ಅದನ್ ನೋಡಿದ ಮೇಲೆ ಒಂದ್ ಕ್ಷಣದಲ್ಲಿ ಕೊಲ್ಕತಾ ಪ್ರಯಾಣ ಮುಗಿಸಿ ಬಂದಂಗಾಯ್ತು. ಈಗ ವಿಷ್ಯ ಏನಪ್ಪ ಅಂದ್ರೆ, ಸುಮಾರು ೧೮೦೦ ಕಿ.ಮೀ ದೂರದಲ್ಲಿ ಆಚರಿಸುವ ಹಬ್ಬವನ್ನು ನಮ್ಮ ಬೆಂಗಳೂರಿನಲ್ಲಿ ಅಚ್ಚ ಅಲ್ಲಿಯ ಭಾಷೆಯಲ್ಲೇ ಶುಭಾಶಯ ಕೋರುವ ಅಗತ್ಯ ಕಾಣುವವರು, ಕಣ್ ಮುಂದೆ ಇರುವ ೬ ಕೋಟಿ ಕನ್ನಡಿಗರಿಗೆ ಯಾವ ಭಾಷೆಯಲ್ಲಿ ಯಾವ ಲಿಪಿಯಲ್ಲಿ, ಶುಭಾಶಯ ಕೋರಬೇಕು ಎಂಬ ಸಾಮಾನ್ಯ ಪರಿಜ್ನಾನ ಇಲ್ಲವೇ.? ಇದು ಯಾವುದೋ ಒಂದು ಮಾಲ್ ನ ಕಥೆ ಅಲ್ಲ, ಬದಲಾಗಿ ಕಣ್ಣು ಹಾಯಿಸಿದಲ್ಲೆಲ್ಲ ಕನ್ನಡಿಗ ನಿತ್ಯ ಕಾಣುವ ವ್ಯಥೆಯಾಗಿದೆ.
ನಮ್ಮದೇ ನಾಡಿನಲ್ಲಿ ನಮ್ಮ ಹಬ್ಬಗಳಾದ ದಸರಾ, ದೀಪಾವಳಿಗಳನ್ನು "Happy Dusshera", "Happy Diwali" ಎಂದು ಕರೆದು ಕನ್ನಡಿಗರನ್ನು ದಿವಾಳಿ ಎಬ್ಬಿಸುವ ಈ ಪ್ರಯತ್ನ ಖಂಡಿಸುವಂಥದ್ದು. ನಮ್ಮ ಊರಲ್ಲೇ ದೀಪಾವಳಿ, ದಸರಾ ಹಬ್ಬಗಳ ಶುಭಾಶಯಗಳನ್ನು ನಮ್ಮ ನುಡಿಯಲ್ಲಿ ಪಡೆದುಕೊಳ್ಳಲಾರದಷ್ಟು ನತದೃಷ್ಟರೇ ನಾವು ಕನ್ನಡಿಗರು.? ಅರ್ಥವಾಗದ ಸಂಗತಿ ಅಂದ್ರೆ, ತಾವು ನಿಂತಿರುವ ಜಾಗವನ್ನೇ ಮರೆತು, ತಾವು ಅವಲಂಬಿತವಾಗಿರುವ ಕನ್ನಡ ಗ್ರಾಹಕನ ಅನುಕೂಲಗಳನ್ನೇ ಮರೆತು, ಕೆಲವೇ ಕೆಲವು ಬೆರಳೆಣಿಕೆಯಷ್ಟು ಗ್ರಾಹಕರ ಸಲುವಾಗಿ ಜಾಹೀರಾತಿಗಾಗಿ ಬೆಂಗಳೂರಿನಲ್ಲಿ ಹಿಂದಿ, ಇಂಗ್ಲೀಷ ಮೊರೆ ಹೋಗುತ್ತಿರುವ ಕಂಪನಿಗಳಿಗೆ, ಕನ್ನಡಿಗ ಗ್ರಾಹಕನ ಮಹತ್ವವನ್ನು, ತಮ್ಮ ಸೇವೆಯಲ್ಲಿ ಕನ್ನಡದ ಬಳಕೆಯಿಂದಾಗುವ ಪ್ರಯೋಜನವನ್ನು ಮನದಟ್ಟು ಮಾಡಿಸುವ ಅಗತ್ಯತೆ ಇದೆ. ಗ್ರಾಹಕನ ಹಕ್ಕನ್ನು ಬರೀ ವಸ್ತುವಿನ ಗುಣ, ಪ್ರಮಾಣದಲ್ಲೇ ಅಳೆಯುವ ನಾವು, ನಮ್ಮ ನುಡಿಯಲ್ಲಿ ಸೇವೆ ಪಡೆಯುವುದು ಕೂಡ ನಮ್ಮ ಹಕ್ಕು ಎಂಬ ಕಟು ಸತ್ಯವನ್ನು ಮನಗಾಣಬೇಕಿದೆ, ಕರ್ನಾಟಕದಲ್ಲೇ ಕನ್ನಡಿಗ ಗ್ರಾಹಕ "ದಿವಾಳಿ" (DIWALI) ಆಗುವುದನ್ನು ತಡೆಯಬೇಕಿದೆ.
ಈ ವಿಷಯದ ಬಗ್ಗೆ ಮಂತ್ರಿ ಮಾಲ್ನ್ ಗಮನ ಸೆಳೆಯಲು ಇಲ್ಲಿ ಸಂಪರ್ಕಿಸಿ.