Monday 15 August 2011

ಕಲಾವಿದರು ಕಸಿದುಕೊಳ್ಳುತ್ತಿರುವ ಕನ್ನಡ ಗ್ರಾಹಕನ ಸ್ವಾತಂತ್ರ್ಯ.!

ಇವತ್ತು ಮದ್ಯಾನ್ಹ ಜೀ ಟಿವಿಯಲ್ಲಿ ಜಾನ್ಸಿ ರಾಣಿ ಅನ್ನೊ ಹಿಂದಿ ದಾರಾವಾಹಿಯನ್ನು ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡಿದ್ರು ಅಂತ ನಮ್ಮ ಕಿರುತೆರೆ ಕಲಾವಿದರು ಆ ವಾಹಿನಿಯ ಕಚೇರಿಗೆ ನುಗ್ಗಿ ಪ್ರತಿಭಟನೆ ನಡೆಸಿದರು. ಕಲಾವಿದರ ಪ್ರಕಾರ ಇದರಿಂದ ಕಿರುತೆರೆಯನ್ನೇ ನಂಬಿ ಜೀವನ ನಡೆಸುತ್ತಿರುವ ಅನೇಕ ಕುಟುಂಬಗಳು ಬೀದಿಗೆ ಬರುತ್ತವಂತೆ. ಇದರ ಜೊತೆಗೆ ಜೀ ಟಿವಿಯ ಈ ನಡೆ ಕನ್ನಡ ವಿರೋದಿಯಂತೆ. ಇವರ ವಾದವನ್ನು ಮತ್ತು ಕನ್ನಡತನವನ್ನು ಸ್ವಲ್ಪ ಆಳವಾಗಿ ನೋಡಿ ಬರೋಣ ಬನ್ನಿ.

ಹುರುಳಿಲ್ಲದ ವಾದ: ದಾರಾವಾಹಿ ಈಗಾಗಾಲೇ ತೆಲುಗು, ತಮಿಳು ಬಾಶೆಗೆ ಡಬ್ ಆಗಿ ಅಲ್ಲಿ ಪ್ರಸಾರವಾಗುತ್ತಿದೆ. ಹಾಗಾದರೆ ಆಂದ್ರ ತಮಿಳುನಾಡಿನಲ್ಲಿ ಕಲಾವಿದರೇ ಇಲ್ಲವೇ.? ಅಲ್ಲಿಯೂ ಕಲಾವಿದರಿದ್ದಾರೆ, ಅವರಲ್ಲಿಯೂ ಅನೇಕರಿಗೆ ಕಿರುತೆರೆಯಿಂದಲೇ ಹೊಟ್ಟೆ ತುಂಬುತ್ತದೆ. ಅಲ್ಲಿ ಅವರಿಗೆ ಇಲ್ಲದ ಸಮಸ್ಯೆ ದಿಡೀರನೇ ಕರ್ನಾಟಕಕ್ಕೆ ಬಂದ ಕೂಡಲೇ ಹೇಗೆ ಹುಟ್ಟುತ್ತದೆ. ಇದಕ್ಕೆ ಯಾರು ಕಾರಣ. ಯಾಕೆ ಈ ಮನಸ್ಥಿತಿ.! ಇದೇ ಸಂದರ್ಬದಲ್ಲಿ ಒಬ್ಬ ಕಲಾವಿದರು ಹೇಳಿದ್ರು, ಒಂದು ದಾರಾವಾಹಿ ಕನ್ನಡಕ್ಕೆ ಡಬ್ ಮಾಡಲು ಬಿಟ್ಟರೆ, ಅದರ ಜೊತೆಗೆ ನೂರಾರು ದಾರಾವಾಹಿಗಳು ಬಂದು ನಿಲ್ಲುತ್ತವೆ ಅಂತ.! ಇದು ಯಾವ ಮನಸ್ಥಿತಿಯನ್ನು ತೋರಿಸುತ್ತದೆ. ಸ್ಪರ್ದೆ ಎದುರಿಸುವ ಹಿಂಜರಿಕೆಯನ್ನು ತೋರಿಸುತ್ತದೆ ಅಲ್ಲವೇ.! ಸ್ಪರ್ದೆ ಎಂದ ತಕ್ಷಣ ಬೀದಿಗೆ ಬರುವ ಮಾತು ಇತರ ಬಾಶೆಯ ಕಲಾವಿದರ ಬಾಯಲ್ಲಿ ಬರದೇ ಬರೀ ನಮ್ಮ ಕಲಾವಿದರ ಬಾಯಲ್ಲಿ ಮಾತ್ರ ಏಕೆ ಬರುತ್ತದೆ.? ಒಂದು ಹಿಂದಿ ಬಾಶೆಯಲ್ಲಿರುವ ದಾರಾವಾಹಿಯನ್ನು ಕನ್ನಡ ಚಾನಲ್ಲಿನಲ್ಲಿ ಕನ್ನಡದಲ್ಲಿ ತೋರಿಸಿದರೇ ಅದು ಕನ್ನಡ ವಿರೋದಿ ಎನ್ನುವ ಇವರ ಕನ್ನಡತನಕ್ಕೆ ಏನನ್ನಬೇಕು. ಡಬ್ ಮಾಡದೇನೇ ಹಿಂದಿಯಲ್ಲೇ ತೋರಿಸಿದರೆ ಅದು ಕನ್ನಡಪರವಾಗುವುದೋ.!

ಅರ್ಥವಾಗದ ಕನ್ನಡತನ: ಇಷ್ಟಕ್ಕೂ ಡಬ್ಬಿಂಗ್ ವಿಶಯ ಬಂದಾಗ ಕನ್ನಡವನ್ನು ಮುಂದೆ ಮಾಡಿ ವಾದ ಮಾಡುವವರು, ಅನೇಕ ಕನ್ನಡ ವಾಹಿನಿಯಲ್ಲಿ ಹಿಂದಿ ಹಾಡುಗಳನ್ನು ಪ್ರಸಾರ ಮಾಡುವುದು, ಆ ಹಾಡಿಗೆ ಕುಣಿಯುವುದು ನಡೆದಾಗ ಯಾವ ಲೋಕದಲ್ಲಿದ್ದರು,? ಅದು ಅವರಿಗೆ ಕನ್ನಡ ವಿರೋದಿಯಾಗಿ ಕಾಣಲಿಲ್ಲವೇ.? ಆ ಕಾರ್ಯಕ್ರಮಗಳಿಗೆ ತೀರ್ಪುಗಾರರಾಗಿ ಹೋಗಿದ್ದು ಇದೇ ಕಲಾವಿದರಲ್ಲವೇ.? ನೀರಾವರಿ, ಶಾಸ್ತ್ರೀಯ ಬಾಶೆ ಸ್ಥಾನಮಾನ ಹೀಗೆ ಅನೇಕ ವಿಶಯಗಳಲ್ಲಿ ಕನ್ನಡಿಗರಿಗೆ ಅನ್ಯಾಯವಾದಾಗ ದ್ವನಿಗೂಡಿಸದ ಇವರ ಕನ್ನಡತನ ಆಗ ಎಲ್ಲಿತ್ತು.? ಮೊನ್ನೆ ನಡೆದ ಕನ್ನಡ ಚಲನಚಿತ್ರ ಪ್ರಶಸ್ತಿ ಸಮಾರಂಬದಲ್ಲಿ ಮೂರು ಬಿಟ್ಟವರಂತೆ ಹಿಂದಿ ಹಾಡುಗಳಿಗೆ ಕುಣಿದು ಕುಪ್ಪಳಿಸಿದಾಗ ಎಲ್ಲಿ ಅಡಗಿತ್ತು ಇವರ ಕನ್ನಡ ಸ್ವಾಭಿಮಾನ.? ಡಬ್ಬಿಂಗ್ ವಿರೋದಿಯಂತಹ ನಿಲುವಿನಿಂದಾಗಿಯೇ ಇವತ್ತು ವಿಜ್ಞಾನ (ಡಿಸ್ಕವರಿ, ನ್ಯಾಟ್ ಜಿಯೊ,ಅನಿಮಲ್ ಪ್ಲಾನೇಟ್), ಕಾರ್ಟೂನ್ (ಪೊಗೊ, ಡಿಸ್ನಿ, ಕಾರ್ಟೂನ್ ನೆಟವರ್ಕ್) ತರಹದ ವಿಶಯಗಳು ಕನ್ನಡದ ಮಕ್ಕಳಿಗೆ ಆಡುವ ನುಡಿಯಲ್ಲಿ ದೊರಕದೇ ಅವರು ಅವಕಾಶ ವಂಚಿತರಾಗುತ್ತಿರುವುದು. ಹೋಗಲಿ, ಡಬ್ಬಿಂಗ್ ಬಗ್ಗೆ ಇಶ್ಟೊಂದು ಕಿಡಿ ಕಾರುವ ಇವರು ಇಂಗ್ಲೀಶ್ ಚಿತ್ರ ತೆಲುಗಿಗೆ, ಹಿಂದಿಗೆ ಡಬ್ ಆಗಿ ರಾಜ್ಯದಾದ್ಯಂತ ಓಡುತ್ತ ಇದೆ, ಇದು ಹೇಗೆ ಅವರ ಕಣ್ಣಿಗೆ ಕಾಣಲಿಲ್ಲ.! ಹಿಂದಿ ಸಿಂಗಂ ಚಿತ್ರದಲ್ಲಿ ಕನ್ನಡಿಗರ ಮೇಲೆ ಜನಾಂಗೀಯ ನಿಂದನೆ ನಡೆದಾಗ ಈಗ ಪ್ರತಿಭಟನೆ ಮಾಡಿದವರಲ್ಲಿ ಎಶ್ಟು ಜನ ಬೀದಿಗಿಳಿದಿದ್ದರು.? ಓಟ್ಟಾರೆ ಏನಾದ್ರು ಆಗಲಿ, ಯಾವುದೇ ಮನರಂಜನೆ ಕನ್ನಡಕ್ಕೆ ಡಬ್ ಆಗಬಾರದು ಎನ್ನುವ ವಾದದಲ್ಲಿ ಅಡಗಿರೋದು ಕನ್ನಡದ ಹಿತಾಸಕ್ತಿಯೋ, ಸ್ವಹಿತಾಸಕ್ತಿಯೋ ಎಂಬುದು ಅರ್ಥವಾಗದ ಸಂಗತಿಯೇನಲ್ಲ.!

ಒಟ್ಟಿನಲ್ಲಿ, ಗ್ರಾಹಕನ ಬೇಡಿಕೆಗೆ ಅನುಗುಣವಾಗಿ ಜೀ ಟಿವಿಯವರು ದಾರಾವಾಹಿಯನ್ನು ಕನ್ನಡದಲ್ಲಿ ಪ್ರಸಾರ ಮಾಡಿದ್ದಾರೆ. ಜಾನ್ಸಿ ರಾಣಿ ದಾರಾವಾಹಿ ಹಿಂದಿಯಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾದರೆ ದ್ವನಿ ಎತ್ತಬೇಕು. ಕನ್ನಡದಲ್ಲೇ ಪ್ರಸಾರ ಆಗುತ್ತಿರುವಾಗ ಅದರಲ್ಲಿ ತಪ್ಪೇನಿದೆ..? ಅದು ತಪ್ಪು ಅಂತ ಸಮರ್ಥಿಸಲು ಅವಕಾಶಗಳೇ ಇಲ್ಲ. ಅದನ್ನು ತಪ್ಪು ಅನ್ನುವವರ ವಾದವೇ ತಪ್ಪು. ತಮ್ಮ ಹೊಟ್ಟೆಪಾಡು ಎಂದು ಹೇಳುವ ಕಲಾವಿದರು ಆ ಹೊಟ್ಟೆಪಾಡಿಗೆ ಕಾರಣನಾದ ಅನ್ನದಾತನಿಗೆ ತನ್ನ ನುಡಿಯಲ್ಲೇ ಮನರಂಜನೆ ಪಡೆದುಕೊಳ್ಳಲು ಬಿಡದೇ ವಂಚಿಸುತ್ತಿದ್ದಾರೆ. ಈ ಜಗತ್ತಿನಲ್ಲಿ ಪ್ರತಿಯೊಂದು ಉದ್ದಿಮೆ ಅವಲಂಬಿತವಾಗಿರುವುದು ಗ್ರಾಹಕನ ಮೇಲೆನೇ. ಮನರಂಜನೆ ಉದ್ದಿಮೆ ಅಂತ ನೋಡಿದರೆ ನಮಗೆ ಕಾಣುವುದು ಗ್ರಾಹಕ, ಟಿವಿ ಮಾಲೀಕ, ಜಾಹೀರಾತುದಾರ ಮತ್ತು ಸರಕು ಪೂರೈಕೆದಾರ. ಇಲ್ಲಿ ಇತರ ಮೂವರೂ ಅವಲಂಬಿತವಾಗಿರುವುದು ಗ್ರಾಹಕನ ಮೇಲೆ. ಹೀಗಾಗಿ ಗ್ರಾಹಕನನ್ನು ಯಾರೋ ಸರಕು ಪೂರೈಕೆದಾರರು ನಿಯಂತ್ರಿಸುವುದು ಬಾಲವೇ ನಾಯಿನ ಅಲ್ಲಾಡಿಸಿದಂತೆ ಆಗುತ್ತದೆ. ಒಂದು ಕಡೆ ಸ್ವಾತಂತ್ರ್ಯ ಬಂದಿದೆ ಅಂತ ಆಚರಣೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ಆ ಸ್ವಾತಂತ್ರ್ಯವನ್ನೇ ಕಿತ್ತುಕೊಂಡು ಗ್ರಾಹಕನನ್ನು ನಿಯಂತ್ರಿಸಲು ಕೆಲವರು ಹೊರಟಿರುವುದು ಸಂವಿದಾನ ವಿರೋದಿ ನಡೆಯಾಗಿದೆ.