Thursday 23 February 2012

ಚಿತ್ರಲೋಕ ಕನ್ನಡ ಮೆಗಾ ಪೋರ್ಟಲ್ ಪರಬಾಶೆ ಚಿತ್ರಪ್ರಚಾರದ ವೇದಿಕೆ ಆಗದಿರಲಿ.


ತಂತ್ರಜ್ನಾನ ಬೆಳೆದಂತೆ ಎಲ್ಲ ಮಾಹಿತಿಗಳು ಕ್ಷಣಮಾತ್ರದಲ್ಲಿ ಕೈಗೆಟುಕುತ್ತಿವೆ. ಮನರಂಜನಾ ಮಾಹಿತಿಗಳು ಇದರಿಂದ ಹೊರತಾಗಿಲ್ಲ. ಮೊದಲು ಹಾಳೆ, ಪತ್ರಿಕೆಗಳ ಮೂಲಕ ಚಲನಚಿತ್ರಗಳ ಮಾಹಿತಿಯನ್ನು ಹೆಚ್ಚಾಗಿ ಕಾಣುತ್ತಿದ್ದದ್ದು ಇಂದು ಪ್ರಕ್ರಿಯೆ ಮಿಂಬಲೆ ಮೂಲಕ, ಸಾಮಾಜಿಕ ತಾಣಗಳ ಮೂಲಕ ಜೋರಾಗಿ ಮತ್ತು ತ್ವರಿತಗತಿಯಲ್ಲಿ ನಡೆಯುತ್ತಿದೆ. ಸಾಲಿಗೆ ಚಿತ್ರಲೋಕ ಕನ್ನಡ ಮೆಗಾ ಪೋರ್ಟಲ್ ಎಂಬ ವೇದಿಕೆ ಕೂಡ ಒಂದು ಮತ್ತು ಪ್ರಮುಖವಾದದ್ದು.
ಕನ್ನಡ ಪೋರ್ಟಲ್ ಎನ್ನುವುದು ನಿಜವೇ.?
ಚಿತ್ರಲೋಕ ಒಂದು ದಕ್ಷಿಣ ಬಾರತ ಚಿತ್ರರಂಗದ ಪೋರ್ಟಲ್ ಆಗಿದ್ದರೆ ಆಗ ಪ್ರಶ್ನೆಯೇ ಉದ್ಬವಿಸುತ್ತಿರಲಿಲ್ಲ. ಹೆಸರೇ ಸ್ಪಷ್ಟವಾಗಿ ಹೇಳುವ ಹಾಗೆ ಇದು ಕನ್ನಡ ಚಿತ್ರರಂಗದಲ್ಲಿನ ಮಾಹಿತಿಯನ್ನು ಜನರಿಗೆ ತಲುಪಿಸಬೇಕಾದಂಥ ಒಂದು ವೇದಿಕೆ. ಇಂತಹ ಒಂದು ವೇದಿಕೆಯಲ್ಲಿ ಇತ್ತೀಚಿನ ದಿನಗಳಲ್ಲಿ ಪರಬಾಶೆ ಮನರಂಜನೆಯೂ ಸ್ಥಾನ ಪಡೆದುಕೊಳ್ಳುತ್ತಿರುವುದು ಇದು ನಿಜವಾಗಿಯೂ ಕನ್ನಡ ಪೋರ್ಟಲ್ ಎನ್ನುವ ಪ್ರಶ್ನೆ ಹುಟ್ಟು ಹಾಕುತ್ತಿದೆ. ತಾಣದಲ್ಲಿ ಪ್ರಕಟಿಸಲಾಗಿರುವ ಕೆಲವು ಸುದ್ದಿಗಳನ್ನು ಗಮನಿಸೋಣ. ದರ್ಶನ್ ಅಬಿನಯದ ವಿರಾಟ ಎಂಬ ಕನ್ನಡ ಚಿತ್ರದ ಮಾಹಿತಿ ಇದಾಗಿದ್ದು, ದರ್ಶನ್ ಜೊತೆ ಒಂದು ಚಿತ್ರದಲ್ಲಿ ನಟಿಸಲಿರುವ ಒಬ್ಬ ನಾಯಕಿ ತೆಲುಗು ಚಿತ್ರರಂಗದಲ್ಲಿ ಮೊದಲು ನಟಿಸಿದ್ದಳು ಎಂದಿದ್ದರೆ ಬಹುಶ ಸಮರ್ಪಕವಾಗಿರುತ್ತಿತ್ತು. ಆದರೆ ಇದರ ಜೊತೆಗೆ ಅವರು ನಟಿಸಿದ ಚಿತ್ರಗಳ ಸಂಪೂರ್ಣ ಹಿನ್ನೆಲೆ, ಅವುಗಳ ಯಶಸ್ಸು ಮತ್ತು ನಾಯಕಿಯ ಮುಂದಿನ ಚಿತ್ರ ಹೀಗೆ ಪ್ರಚಾರ ಸಾಗುತ್ತದೆ. ಮತ್ತೊಂದು, ಪ್ರಕಟಣೆಯಲ್ಲಿ ತೆಲುಗಿನ ನಿರ್ದೇಶಕ ರಾಜಮೌಳಿ ತಯಾರಿಸುತ್ತಿರುವ (ತೆಲುಗು ತಮಿಳು ಒಟ್ಟಿಗೆ) ಚಿತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ ಎಂಬ ಕಾರಣಕ್ಕೆ ಅದರ ಪ್ರಚಾರಕ್ಕೂ ಕನ್ನಡ ಪೋರ್ಟಲನ್ನು ಬಳಸಿಕೊಳ್ಳಲಾಗಿದೆ. ಇನ್ನೊಂದು, ಪ್ರಕಟಣೆಯಲ್ಲಿ ತಮಿಳಿನ ರಾಣಾ ಚಿತ್ರದ ಬಗ್ಗೆ ಹೇಳಲಾಗಿದೆ. ರಾಣಾ ಚಿತ್ರದಲ್ಲಿ ನಟಿಸುವವರು ಕರ್ನಾಟಕದವರು ಎಂಬುದಾಗಿ ಲೇಖನದಲ್ಲಿ ಹೇಳಲಾಗಿದೆ, ಆದರೆ ನಿಜಕ್ಕೂ ಅಂಶ ಪೋರ್ಟಲ್ಲಿಗೆ ಅಪ್ರಸ್ತುತ. ಏಕೆಂದರೆ, ಕನ್ನಡ ಚಿತ್ರರಂಗಕ್ಕೂ ಚಿತ್ರಕ್ಕೂ ಸಂಬಂದವಿಲ್ಲ ಮತ್ತು ಪೋರ್ಟಲ್ಲಿನ ಸಂಬಂದ ಇರುವುದು ಕನ್ನಡ ಚಿತ್ರಗಳ ಜೊತೆಗೆ ಹೊರತು ಕನ್ನಡ ಮೂಲದವರ ಜೊತೆಗೆ ಅಲ್ಲ. ಕನ್ನಡಿಗರು ಎಂಬ ಅಂಶದ ಜಾಡು ಹಿಡಿದು ಪೋರ್ಟಲ್ಲಿನಲ್ಲಿ ಸುದ್ದಿ ಪ್ರಕಟಿಸಲು ಶುರು ಮಾಡಿದರೆ, ಪೋರ್ಟಲ್ ತುಂಬಾ ಹಿಂದಿ, ತೆಲುಗು, ತಮಿಳು ಚಿತ್ರಗಳೇ ತುಂಬಿ ಹೋಗುತ್ತವೆ. ಕನ್ನಡ ಪೋರ್ಟಲ್ ಎಂಬ ವೇದಿಕೆಯಲ್ಲಿ ಅದನ್ನು ಯಾರೂ ನಿರೀಕ್ಷಿಸಲ್ಲ.
ಪೋರ್ಟಲ್ ಯಾರಿಗಾಗಿ.?
ಕನ್ನಡ ಪೋರ್ಟಲ್ ಎನ್ನುವುದು ಕನ್ನಡ ಚಿತ್ರರಂಗದ ಮಾಹಿತಿಯುಳ್ಳ ಪೋರ್ಟಲ್ ಆಗಬೇಕೆ ಹೊರತು ಕನ್ನಡ, ಕನ್ನಡಿಗರ ಹೆಸರಿನಲ್ಲಿ ಪರಬಾಶೆ ಚಿತ್ರಗಳಿಗೆ ಪ್ರಚಾರ ಕೊಡುವುದು ಸೂಕ್ತವಲ್ಲ. ಕನ್ನಡ ಪೋರ್ಟಲ್ ಎಂದು ಬಿಂಬಿಸಿ ಅದರಿಂದ ಮಿಂಬಲೆಯನ್ನು ಜನಪ್ರೀಯಗೊಳಿಸಿ, ಒಳ್ಳೆ ಪುಟವೀಕ್ಷಣೆಗಳನ್ನು (ಹಿಟ್ಸ್) ಪಡೆದುಕೊಂಡು ಈಗ ಕನ್ನಡೇತರ ಚಿತ್ರಗಳಿಗೆ ಮಣೆ ಹಾಕುವುದು ಸರಿಯೇ.? ಕನ್ನಡ ನಟ-ನಟಿಯರು ಅಥವಾ ಕರ್ನಾಟಕ ಮೂಲದವರು ಯಾವುದೋ ತೆಲುಗು ತಮಿಳು ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದ ಮಾತ್ರಕ್ಕೆ ಚಿತ್ರವನ್ನು ವೇದಿಕೆಯಲ್ಲಿ ಪ್ರಚಾರ ಕೊಡುವುದು ಒಪ್ಪತಕ್ಕದ್ದಲ್ಲ. ಚಿತ್ರಲೋಕ ಕನ್ನಡ ಮೆಗಾ ಪೋರ್ಟಲ್ ಹೆಸರಿನಲ್ಲಿರುವ ಹಾಗೆ ತನ್ನ ಕೆಲಸದಲ್ಲೂ ಕನ್ನಡಕ್ಕೆ ಮಾತ್ರ ಮೀಸಲಿರಬೇಕಾದ್ದು ಸರಿಯಾದ ನಡೆಯಾಗಿದೆ.

Monday 13 February 2012

ಪಬ್ಲಿಕ್ ಟಿವಿಯ ಪಬ್ಲಿಕ್ ಕನ್ನಡ ಬಲ್ಲವರು ಮಾತ್ರ ಅಲ್ಲವೇ.?


ಎಲೆಕ್ಟ್ರೋನಿಕ ಮಾದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಮೈಲಿಗಲ್ಲನ್ನು ಸಾದಿಸಿರುವ ಕನ್ನಡದ ಸುದ್ದಿ ವಾಹಿನಿಗಳ ಗುಂಪಿಗೆ ಮತ್ತೊಂದು ಹೊಸ ಸುದ್ದಿ ವಾಹಿನಿ ಪಬ್ಲಿಕ್ ಟಿವಿ ಎಂಬ ಹೆಸರಿನ ಮೂಲಕ ಇದೇ ೧೨ ರಂದು ಸೇರಿಕೊಂಡಿದೆ. ಇದು ಯಾರ ಆಸ್ತಿಯೂ ಅಲ್ಲ, ಇದು ನಿಮ್ಮ ಟಿವಿ ಎಂಬ ಶೀರ್ಷಿಕೆಯೊಂದಿಗೆ ಹೊರ ಬಂದಿದೆ. ತಮ್ಮ ವಿಭಿನ್ನ ಶೈಲಿಯ ಮೂಲಕ ಪತ್ರಿಕೋದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿರುವ ಶ್ರೀ ರಂಗನಾಥ್ ಅವರು ಸುದ್ದಿ ವಾಹಿನಿಯ ಮುಖ್ಯಸ್ಥರಾಗಿದ್ದು, ಅವರ ಹಿನ್ನೆಲೆಯನ್ನು ಅರಿತ ಜನತೆಗೆ ಸ್ವಾಬಾವಿಕವಾಗಿ ದೊಡ್ಡ ಮಟ್ಟದ ನಿರೀಕ್ಷೆ ಸುದ್ದಿ ವಾಹಿನಿಯಿಂದ ಇದೆ ಎಂದರೆ ತಪ್ಪಾಗಲ್ಲ.

ಪಬ್ಲಿಕ್ ಯಾರು ಎಂಬ ಬಗ್ಗೆ ಸ್ಪಷ್ಟತೆ ಇದೆಯೇ.?
ಹೆಸರಿನಲ್ಲೇ ಇರುವ ಹಾಗೆ, ಸುದ್ದಿ ವಾಹಿನಿಯ ಮುಖ್ಯ ಅಂಶ ಪಬ್ಲಿಕ್. ಹೀಗಾಗಿ ಸುದ್ದಿ ವಾಹಿನಿಗೆ ತಾವು ಹೇಳಲು ಹೊರಟಿರುವ ಪಬ್ಲಿಕ್ ಯಾರು ಎಂಬ ಬಗ್ಗೆ ಸ್ಪಷ್ಟತೆ ಇರಬೇಕಾದ್ದು ಉತ್ತಮ. ಆದರೆ, ತಮ್ಮ ಕೆಲವು ದಿನದ ಪರೀಕ್ಷಾರ್ಥ ಪ್ರಸಾರದಲ್ಲಿ ಅವರು ತೋರಿಸುತ್ತಿದ್ದ ಜಾಹೀರಾತನ್ನು ಮತ್ತು ಶುರು ನಂತರದ ಪ್ರಸಾರ ಕಾರ್ಯಕ್ರಮಗಳನ್ನು ನೋಡಿದರೆಅವರಲ್ಲಿ ಕರ್ನಾಟಕದ ಪಬ್ಲಿಕ್ ಯಾರು ಎಂಬ ಬಗ್ಗೆ ಸ್ಪಷ್ಟತೆ ಇದೆಯೋ ಇಲ್ಲವೋ ಎಂಬ ಅನುಮಾನ ಮೂಡುತ್ತದೆ. ಪರೀಕ್ಷಾರ್ಥ ಪ್ರಸಾರದಲ್ಲಿ ಪಬ್ಲಿಕ್ ಟಿವಿಯ ಜಾಹೀರಾತು ಹಿಂದಿಯಲ್ಲಿ ಬರ್ತಾ ಇತ್ತು. ಇನ್ನು ಇದು ನಿಮ್ಮ ಟಿವಿ ಎಂದು ಹೇಳುತ್ತಲೇ ಪ್ರಾರಂಭದಲ್ಲೇ ಹಿಂದಿ ಚಿತ್ರಗಳಿಗೆ ಪ್ರಚಾರ ಕೊಟ್ಟು ಕರ್ನಾಟಕದ ಪಬ್ಲಿಕನ್ನು ಹಿಂದಿಗೆ ಅಡ ಇಟ್ಟಿದ್ದು ಕಂಡಿದ್ದೇವೆ. ಪಬ್ಲಿಕ್ ಟಿವಿಯ ಪಬ್ಲಿಕ್ ಕರ್ನಾಟಕದಲ್ಲಿರುವ ಹಿಂದಿ ಬಲ್ಲ ಜನರೇ.? ಎಲ್ಲ ಅಂಶಗಳು ಪಬ್ಲಿಕ್ ಟಿವಿ ಪ್ರತಿನಿಧಿಸಲು ಹೊರಟಿರುವ ಪಬ್ಲಿಕ್ ಯಾರು ಎಂಬ ಪ್ರಶ್ನೆ ಹುಟ್ಟು ಹಾಕುತ್ತೆ.

ಯಾವ ಜನರಿಂದ ಯಾವ ಜನರಿಗೋಸ್ಕರ.?:

ಜನರಿಂದ ಜನರಿಗೋಸ್ಕರ ಎಂಬುದು ಪಬ್ಲಿಕ್ ಟಿವಿಯ ಘೋಷವಾಕ್ಯ. ಪಬ್ಲಿಕ್ ಟಿವಿಯ ಕಾರ್ಯಕ್ರಮ ಕರ್ನಾಟಕದಾದ್ಯಂತ ಪ್ರಸಾರವಾಗುತ್ತದೆ. ಕರ್ನಾಟಕದಾದ್ಯಂತ ವಾಸಿಸುವ ಬಹುತೇಕ ಜನರ ನುಡಿ ಕನ್ನಡ. ಪಬ್ಲಿಕ್ ಟಿವಿ ಕನ್ನಡ ಸಮ್ಮೇಳನ ಜನ ಕಾರ್ಯಕ್ರಮ ನೀಡಬೇಕಿರುವುದು ಜನರಿಗೋಸ್ಕರವೇ. ಪಬ್ಲಿಕ್ ಟಿವಿ ಉನ್ನತ ಸ್ಥಾನಕ್ಕೆ ಬಡ್ತಿ ಪಡೆಯಲು ಸಾದ್ಯವಾಗುವುದೂ ಅದೇ ಜನರಿಂದ. ಜನರಿಗೆ ಪರಬಾಷೆ ಮನರಂಜನೆಯ ಸುದ್ದಿಗಳು ಊಟದಲ್ಲಿರುವ ಉಪ್ಪಿನಕಾಯಿಯಂತಿರಬೇಕೇ ಹೊರತು ಊಟವೇ ಅದೇ ಆಗಬಾರದು. ಇನ್ನು ಉಪ್ಪಿನಕಾಯಿ ಆಯಾ ಭಾಷೆಯ ಸುದ್ದಿ ವಾಹಿನಿಗಳಲ್ಲಿ ಇವರಿಗಿಂತ ರುಚಿಯಾಗಿ ಬಡಿಸುತ್ತಾರೆ. ಕನ್ನಡದ ಜನರಿಗೆ ಉಪ್ಪಿನಕಾಯಿಯೇ ಅವಶ್ಯಕವಾಗಿದ್ದರೆ ಅವರು ನೇರವಾಗಿ ಅದೇ ಭಾಷೆಯ ಸಾಕಷ್ಟು ಸುದ್ದಿವಾಹಿನಿಗಳನ್ನು ನೋಡುವ ಅವಕಾಶವಿರುತ್ತದೆ. ಆದರೆ ಊಟವನ್ನು ಬಯಸುವ ಬಹುಪಾಲು ಪಬ್ಲಿಕ್ಕಿಗೆ ಇರುವುದು ಕನ್ನಡದ ಸುದ್ದಿ ವಾಹಿನಿಗಳೇ. 2011 ಕೊನೆಯಲ್ಲಿ ಬಂದ ಐ.ಆರ್.ಎಸ್  ಸರ್ವೆ ವರದಿ ಪ್ರಕಾರ ರಾಜ್ಯದಲ್ಲಿನ ಪತ್ರಿಕೆ ಓದುಗಾರರಲ್ಲಿ ಕನ್ನಡ ಪತ್ರಿಕೆ ಓದುಗಾರರ ಪಾಲು 88.9%. ಅಂದರೆ ಇವರೆಲ್ಲರೂ ಕನ್ನಡದವರೇ. ಇನ್ನು ಉಳಿದ 11.1% ರಲ್ಲಿ ಪರಬಾಷೆ ಪತ್ರಿಕೆ ಓದುವ ಕನ್ನಡ ಬಲ್ಲ ಜನರು ಸಾಕಷ್ಟಿದ್ದಾರೆ. ಹೀಗೆ ಕನ್ನಡವೇ ಬಹುಪಾಲು ಜನರ ಜೀವನಕ್ರಮದ ನುಡಿಯಾಗಿರುವಾಗ, ಪರಭಾಷೆ ಮನರಂಜನೆ ವೈಭವೀಕರಣ, ಇಂಗ್ಲೀಷ್ ಹಿಂದಿ ಮಿಶ್ರಿತ ಶಿರ್ಷಿಕೆ(ಟ್ಯಾಗ್ ಲೈನ)ಗಳನ್ನು ಬಳಸುವುದು ಜನರಿಂದ ಜನರಿಗೋಸ್ಕರ ಎಂಬ ತತ್ವಕ್ಕೆ ವಿರುದ್ದವಾದುದಲ್ಲವೇ


ಹೊಸ ಬಣ್ಣ ಹಚ್ಚಿದ ಹಳೇ ಕಾರು:
ನಾವು ಇತರರಿಗಿಂತ ಬಿನ್ನ ಎಂದು ಹೇಳಿಕೊಳ್ಳುವ ಪಬ್ಲಿಕ್ ಟಿವಿಯ ವಿಭಿನ್ನತೆ, ಹಳೇ 2000 ಮಾಡೆಲ್ ಅಂಬಾಸಿಡರ್ ಕಾರಿಗೆ ಹೊಸ ಬಣ್ಣ ಹಚ್ಚಿದಂತಿದೆ. ಇತರ ಚಾನಲ್ಲಿನಲ್ಲಿರುವ ಅನಗತ್ಯ ಇಂಗ್ಲೀಷ್ ಬಳಕೆಯ ಚಟ ಇವರಿಗೂ ಹಿಡಿದಿದೆ. ಕಾರ್ಯಕ್ರಮಗಳ ಹೆಸರುಗಳಿಗೆ ಕನ್ನಡದ ಹೆಸರು ಬಳಸದೇ/ಹುಟ್ಟುಹಾಕದೇ ಇತರ ಚಾನಲ್ಲಿನ ಹಳಸಲು ಶೈಲಿಯನ್ನೇ ಬಳಸಿದ್ದಾರೆ. ಇಂಗ್ಲೀಷಬಳಸುವುದೇ ಕೂಲ್ ಎಂಬ ಬ್ರಮೆ ಇದ್ದಂಗಿದೆ. ಕಾರ್ಯಕ್ರಮದ ಹೆಸರನ್ನು ಆಕರ್ಷಕವನ್ನಾಗಿ ಮಾಡಲು ಇಂಗ್ಲೀಷ್ ಅಥವಾ ಹಿಂದಿ ಲೇಪನ ಇರಲೇಬೇಕು ಎಂದು ನಂಬಿದಂತಿದೆ. ದಮಾಕಾ, ಬಿಗ್ ಬುಲೆಟಿನ್, ಪಬ್ಲಿಕ್ ಅಪ್ಡೇಟ್,ಗುಡ್ ನೈಟ್ ನ್ಯೂಸ್ ಎಂಬಂತ ಪದಗಳಿಗೆ ಆಕರ್ಷಕವಾದ ಕನ್ನಡ ಪದ ಹುಟ್ಟುಹಾಕಲು ಸಾದ್ಯವಿಲ್ಲದ ಪರಿಸ್ಥಿತಿಗೆ ಇವರೂ ಸೇರಿಕೊಂಡಿದ್ದಾರೆ. ಇನ್ನು ಪಬ್ಲಿಕ್ ಟಿವಿ ಕಚೇರಿಯ ಕೋಣೆಗಳು ಇಂಗ್ಲೀಷಮಯವಾಗಿವೆ. ಸಿನಿ ಅಡ್ಡಾ ಎಂಬ ಕಾರ್ಯಕ್ರಮದ ಮೂಲಕ ಪರಬಾಷೆ ವೈಬವೀಕರಣವೂ ನಡೆದೇ ಇದೆದಿನಬೆಳಗಾದರೆ ನಡೆಯುವ ಬಾಲಿವುಡನಲ್ಲಿನ ಗುಸು ಗುಸು ಪಿಸು ಪಿಸುಗಳನ್ನು ವಿಶೇಷ ಕಾರ್ಯಕ್ರಮವನ್ನಾಗಿ ಮಾಡುವುದೇ ತಮ್ಮ ಮಾರುಕಟ್ಟೆ ನಿರ್ಮಾಣದ (ಟಿ.ಆರ್.ಪಿ) ಒಂದಂಕಿ ಸೂತ್ರ ಎಂದು ತಿಳಿದ ಹಾಗಿದೆ ನಮ್ಮ ಸುದ್ದಿ ವಾಹಿನಿಗಳು. ಕನ್ನಡ, ಕನ್ನಡಿಗ, ಕರ್ನಾಟಕದ ನೂರೆಂಟು ಸಮಸ್ಯೆಗಳು ಒಂದು ಸಮರ್ಥ ವೇದಿಕೆಗಾಗಿ ಕಾಯುತ್ತಿರುವಾಗ, ಸಮಾಜ ಸುದಾರಣೆಯಲ್ಲಿ ದೊಡ್ಡ ಪಾತ್ರ ವಹಿಸುವ ಮಾದ್ಯಮದವರು ಹೀಗೆ ಬೇಜವಾಬ್ದಾರಿಯಿಂದ ಚಿಲ್ಲರೆ ವ್ಯಾಪಾರಿಗಳಾಗುತ್ತಿರುವುದು ಎಷ್ಟರ ಮಟ್ಟಿಗೆ ಸರಿ.? ಇದರಿಂದ ಪರಬಾಷೆ ಮನರಂಜನೆಗೆ ಇಲ್ಲದ ಮಾರುಕಟ್ಟೆಯನ್ನು ನಮ್ಮ ಸುದ್ದಿ ವಾಹಿನಿಗಳೇ ಮುಂದೆ ನಿಂತು ಸೃಷ್ಟಿ ಮಾಡಿ ಕೊಟ್ಟಂತಾಗುವುದಿಲ್ಲವೇ.!


ಸಮಾಜ ಮುಖಿಯಾಗಲಿ ಪಬ್ಲಿಕ್ ಟಿವಿ:
ಸಮಾಜ ಮುಖಿ ಚಿಂತನೆಯನ್ನು ಕೈಬಿಟ್ಟು ಟಿ.ಆರ್.ಪಿ ಗೆ ಜೋತು ಬಿದ್ದಿರುವ ಈಗೀರುವ ಸುದ್ದಿ ವಾಹಿನಿಗಳಲ್ಲಿನ ಸಾಮಾಜಿಕ ಚಿಂತನೆಯ ಕೊರತೆಯೋ ಅಥವಾ ಕನ್ನಡ ಕೇಂದ್ರಿತ ವ್ಯವಸ್ಥೆ ನಿರ್ಮಾಣದ ಬಗೆಗೆ ಅವರಿಗಿರುವ ಅಸಡ್ಡೆಯೋ ಒಟ್ಟಾರೆ ಪಬ್ಲಿಕ್ ಟಿವಿ ಮತ್ತು ರಂಗನಾಥ ಅವರ ಮೇಲೆ ಸಾರ್ವಜನಿಕರ ನಿರೀಕ್ಷೆ ಸ್ವಲ್ಪ ಜಾಸ್ತಿನೇ ಇದೆ ಎನ್ನಬಹುದು. ಹೀಗಾಗಿ, ಪಬ್ಲಿಕ್ ಟಿವಿ ಹತ್ತರಲ್ಲಿ ಹನ್ನೊಂದು ಎಂಬಂತಾಗದೇ ಕರ್ನಾಟಕದ ಪಬ್ಲಿಕ್ಕಿನ ದ್ವನಿಯಾಗಿ ಕಾರ್ಯನಿರ್ವಹಿಸಲಿ. ಹಿಂದಿ ಮನರಂಜನೆಯನ್ನು ಅನಗತ್ಯವಾಗಿ ತಮ್ಮ ಕಾರ್ಯಕ್ರಮಗಳಲ್ಲಿ ತುರುಕದೇ, ಕನ್ನಡಿಗರ ಮನರಂಜನೆ ಕನ್ನಡದಲ್ಲಿ ಎಂಬ ನಿಲುವು ಹೊಂದಲಿ. ಹಿಂದಿ ಮನರಂಜನೆ ಮೇಲು ಕನ್ನಡ ಮನರಂಜನೆ ಏನಿದ್ದರೂ ಅದರ ನಂತರ ಸ್ಥಾನಕ್ಕೆ ಬರುವಂಥವು ಎಂಬ ಕುರುಡು ನಂಬಿಕೆಯಿಂದ ದೂರವಾಗಲಿ. ಇಂಗ್ಲೀಶ್ ಮತ್ತು ಇತರ ಬಾಶೆಗಳ ಮನರಂಜನೆಯನ್ನು ಕನ್ನಡಿಗರಿಗೆ ಕನ್ನಡದಲ್ಲೇ ದೊರಕಿಸಿಕೊಡುವತ್ತ ಚಿತ್ತ ಹರಿಸಲಿ. ದಿನನಿತ್ಯದ ಪ್ರಸಾರದಲ್ಲಿ ಅನಗತ್ಯ ಇಂಗ್ಲೀಷ್ ಮತ್ತು ಹಿಂದಿ ಬಳಕೆಗೆ ಕಡಿವಾಣ ಬೀಳಲಿ, ಅವುಗಳಿಗೆ ಪೂರಕವಾದ ಕನ್ನಡ ಪದಗಳನ್ನು ಬಳಸಲಿ. ಒಕ್ಕೂಟ ವ್ಯವಸ್ಥೆಯನ್ನು ಎತ್ತಿ ಹಿಡಿಯುವತ್ತ ಮತ್ತು ಕರ್ನಾಟಕದಲ್ಲಿ ಕನ್ನಡದಲ್ಲಿ ಸೇವೆ ನೀಡಲು ನಿರಾಕರಿಸುವ ಭಾಷಾನೀತಿ ವ್ಯವಸ್ಥೆಯನ್ನು ಸರಿಪಡಿಸುವತ್ತ ಜವಾಬ್ದಾರಿ ಪ್ರದರ್ಶಿಸಲಿ. ಜನರಿಂದ ಜನರಿಗೋಸ್ಕರ ಎಂಬ ಘೋಶವಾಕ್ಯವನ್ನು ಹೊಂದಿರುವ ಸುದ್ದಿ ವಾಹಿನಿ, ಕರ್ನಾಟಕದ ಜನರ ಕಷ್ಟಗಳಿಗೆ ಸ್ಪಂದಿಸುವ, ನಷ್ಟಗಳಿಗೆ ಪಾಲುದಾರನಾಗುವ, ಇಷ್ಟಗಳಿಗೆ ಸಹಕರಿಸುವ ವೇದಿಕೆಯಾಗಲಿ. ಒಟ್ಟಾರೆ, ಶ್ರೀ ರಂಗನಾಥ ಅವರು, ಜನರು ಪಬ್ಲಿಕ್ ಟಿವಿ ಮೇಲೆ ಇಟ್ಟಿರುವ ನಂಬಿಕೆಯನ್ನು ಹುಸಿ ಮಾಡದೇ ಕರ್ನಾಟಕದ ಪಬ್ಲಿಕ್ ಕನ್ನಡಿಗರು, ಅವರ ನುಡಿ ಕನ್ನಡ, ಹೀಗಾಗಿ ಚಾನಲ್ಲಿನಲ್ಲಿ ಕನ್ನಡ ಮನರಂಜನೆಗೆ ಆದ್ಯತೆ ಮತ್ತು ಪ್ರಸಾರ ಕನ್ನಡದಲ್ಲೇ ಇರಬೇಕು ಎಂಬುದನ್ನು ಅರಿತು ಕಾರ್ಯ ನಿರ್ವಹಿಸಲಿ ಎಂಬುದು ನಮ್ಮ ಆಶಯ. ಪಬ್ಲಿಕ್ ಟಿವಿಯ ತಂಡಕ್ಕೆ ಶುಭ ಹಾರೈಕೆಗಳು...