Monday 9 January 2012

ನಮ್ಮನ್ನು ಕನ್ನಡದಿಂದ ದೂರ ಸರಿಸುವ ಈ ಕಟ್ಟುಪಾಡನ್ನು ನಾವು ಒಪ್ಪಿಕೊಳ್ಳಬೇಕೇ.?

ಹಿಸ್ಟರಿ ಟಿವಿ ೧೮ ಎಂಬ ಚಾನಲ್ ಇಂಗ್ಲೀಶ್ ಜೊತೆಗೆ ಹಿಂದಿ ಸೇರಿದಂತೆ ಭಾರತದ ಅನೇಕ ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರವಾಗಲಿದೆ ಎಂಬ ಸುದ್ದಿ ಇತ್ತೀಚಿಗೆ ಹೊರಬಿತ್ತು. ಭಾರತದಲ್ಲಿ ಒಟ್ಟು ಆರು ಭಾಷೆಗಳಲ್ಲಿ ಪ್ರಸಾರವಾಗುತ್ತಿದ್ದು, ಇಂಗ್ಲೀಶ್, ತೆಲುಗು, ಬೆಂಗಾಲಿ, ಮರಾಠಿ, ತಮಿಳು ಮತ್ತು ಹಿಂದಿಯಲ್ಲಿ ಲಭ್ಯವಿದೆ. ಆದರೆ ಈ ಸೌಲಭ್ಯ ೬ ಕೋಟಿಗಿಂತಲೂ ಹೆಚ್ಚು ಗ್ರಾಹಕರಿರುವ ಕನ್ನಡಕ್ಕೆ ಮಾತ್ರ ಲಭ್ಯವಿಲ್ಲ.

ಡಬ್ಬಿಂಗ್ ನಿಶೇಧ ಎಂಬ ಅಡ್ಡಗೋಡೆ.
ಭಾರತದ ಪ್ರಮುಖ ಭಾಷೆಯಾಗಿರುವ ಮತ್ತು ಕೋಟಿಗಟ್ಟಲೇ ಗ್ರಾಹಕರಿರುವ ಒಂದು ಭಾಷೆಯಲ್ಲಿ ಸೇವೆ ಒದಗಿಸದೇ ಇರಲು ಕಾರಣವೇನು.? ಕನ್ನಡಿಗರು ಹಿಸ್ಟರಿ ಚಾನಲ್ ಒದಗಿಸುವ ಮನರಂಜನೆಯನ್ನು ಕನ್ನಡದಲ್ಲಿ ಪಡೆಯಬಾರದೇಕೇ ಎಂದು ಅನೇಕ ಗ್ರಾಹಕರು ಅವರ ಫೇಸಬುಕ್ ಖಾತೆ ಮೂಲಕ ಕೇಳಿದಾಗ ಅವರು ಕೊಟ್ಟ ಉತ್ತರ "ಪ್ರಸಾರ ವಸ್ತು (ಕಂಟೆಂಟ್) ನಿಯಮ ಪ್ರಕಾರ ಕರ್ನಾಟಕದಲ್ಲಿ ಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಿಗೆ ಡಬ್ಬಿಂಗ್ ನಿಶೇಧ ಇದೆ. ಆದರೆ ಎಲ್ಲ ಕಡೆಗಳಲ್ಲೂ ಇಂಗ್ಲೀಶ್ ಹಿಂದಿಯಲ್ಲಿ ಲಭ್ಯವಿದೆ ಎಂದು". ಯಾರೋ ಕೆಲವರು ತಮ್ಮ ಸ್ವಹಿತಾಸಕ್ತಿಗೆ ಅನುಗುಣವಾಗಿ ಮಾಡಿರುವ ಒಂದು ನಿಯಮ ಇವತ್ತು ನಮಗೆ ಜಗತ್ತಿನ ಅನೇಕ ಶೈಕ್ಷಣಿಕ ಉಪಯುಕ್ತ ಮಾಹಿತಿಗಳನ್ನು, ವಿಸ್ಮಯಕಾರಿ ಸಂಗತಿಗಳನ್ನು, ಒಳ್ಳೆಯ ಮನರಂಜನೆಯನ್ನು ನಾವಾಡುವ ನುಡಿಯಲ್ಲಿ ಪಡೆದುಕೊಳ್ಳಲು ಬಿಡುತ್ತಿಲ್ಲ ಎಂದರೆ ಅದಕ್ಕಿಂತ ದುರಂತ ಮತ್ತೇನಿದೆ ಗೆಳೆಯರೇ.


ಇದ್ಯಾವ ಸೀಮೆ ಕಟ್ಟುಪಾಡು ಗುರು:
ಪ್ರತಿ ಬಾರಿ ಡಬ್ಬಿಂಗ್ ವಿಷಯ ಬಂದಾಗಲೆಲ್ಲ ಜಗತ್ತಿನ ಯಾವ ಭಾಷೆಯ ಡಬ್ಬಿಂಗಿಗೂ ಇಲ್ಲದ ಲಿಪ್ ಸಿಂಕ್, ಭಾಷೆಯ ಬೇರಿಗೆ ಕೊಡಲಿ ಪೆಟ್ಟು, ಸಂಸ್ಕೃತಿ ನಾಶ ಎಂಬ ಕಾರಣಗಳನ್ನು ಕನ್ನಡದ ಡಬ್ಬಿಂಗಿಗೆ ನೀಡುತ್ತಿದ್ದ ಡಬ್ಬಿಂಗ್ ವಿರೋದಿಸುವವರು ಇಂದು "ಈ ರಾಜ್ಯದಲ್ಲಿ ಯಾವುದೇ ಕ್ರಿಯೆಗೆ ನಿಷೇಧ ಇಲ್ಲ. ಅಂತಹ ಕಾನೂನೂ ಸಹ ಇಲ್ಲ. ಅದೊಂದು ಸಾಮಾಜಿಕ ಕಟ್ಟುಪಾಡು" ಎಂದು ಕರೆಯುತ್ತಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ "ಕನ್ನಡ ಸಮಾಜ ಕಟ್ಟುಪಾಡು ಮಾಡಿಕೊಂಡು ಡಬ್ಬಿಂಗನ್ನು ಬೇಡ ಎನ್ನುತ್ತಿದೆ" ಎಂದಿದ್ದಾರೆ. ಇದೆಂಥ ತೂಕ ತಪ್ಪಿದ ಮಾತು. ಹೊರ ಜಗತ್ತಿನ ಮನರಂಜನೆಯನ್ನು ಕನ್ನಡದಲ್ಲಿ ಪಡೆಯಲು ಕನ್ನಡ ಸಮಾಜ ಬೇಡ ಎಂದು ಕಟ್ಟು ಪಾಡು ಮಾಡಿಕೊಂಡಿದೆಯಂತೆ. ಇಷ್ಟಕ್ಕೂ ಯಾವುದಿದು ಕನ್ನಡ ಸಮಾಜ. ಕನ್ನಡ ಸಮಾಜವೆಂದರೆ ಆಗಾಗ ಗೆಟ್ ಟುಗೆದರ ನಲ್ಲಿ ಸೇರುವ ಜನರು ಮಾತ್ರವೇ.? ಕನ್ನಡಿಗರನ್ನು ಗುತ್ತಿಗೆ ಪಡೆದುಕೊಂಡವರ ತರಹ ಹೀಗೆ ಮಾತನಾಡುವುದು ಸರಿಯೇ.? ಇನ್ನು, ಯಾವುದಿದು ಕಟ್ಟುಪಾಡು, ಯಾರ ಅನುಕೂಲಕ್ಕಾಗಿ ಈ ಕಟ್ಟುಪಾಡು, ಯಾರ ಕೇಳಿ ಈ ಕಟ್ಟುಪಾಡು ಮಾಡಲಾಯಿತು. ಇಂಗ್ಲೀಶ್, ತೆಲುಗು, ಬೆಂಗಾಲಿ, ಮರಾಠಿ, ತಮಿಳು ಮತ್ತು ಹಿಂದಿ ಬಲ್ಲವರಿಗೆ ಇರುವ ಸೌಕರ್ಯವನ್ನು ಕನ್ನಡ ಬಲ್ಲವರಿಗೆ ಸಿಗದ ಹಾಗೆ ಮಾಡುವುದು ಒಂದು ಸಾಮಾಜಿಕ ಚಿಂತನೆಯುಳ್ಳ ಕಟ್ಟುಪಾಡೇ.? ಅಥವಾ ಹುನ್ನಾರದ ಕಟ್ಟುಪಾಡೇ.? ಅನೇಕ ವಾಹಿನಿಯವರು ಕನ್ನಡದಲ್ಲಿ ಕಾರ್ಯಕ್ರಮ ಪ್ರಸಾರಮಾಡಲು ತಯಾರಾಗಿದ್ದರೂ ಅದನ್ನು ತಡೆಯುವುದು ಜನಾಬಿಪ್ರಾಯದ ಕಟ್ಟುಪಾಡೇ.? ಅಥವಾ ಪಾಳೆಗಾರಿಕೆಯ ಕಟ್ಟುಪಾಡೇ.? ಕರ್ನಾಟಕದಲ್ಲಿ ಕನ್ನಡದಲ್ಲಿ ಮನರಂಜನೆ ಸಿಗದ ಹಾಗೆ ನಿಯಮ ಮಾಡುವುದು ಕನ್ನಡಪರ ಕಟ್ಟುಪಾಡೇ.? ಅಥವಾ ಕನ್ನಡ ವಿರೋದಿ ಕಟ್ಟುಪಾಡೇ.?


ನೂರು ಕಟ್ಟುಪಾಡುಗಳಿದ್ದರೂ ಗ್ರಾಹಕನಿಗೆ ಅವು ಅಪ್ರಸ್ತುತ:

ಇಷ್ಟಕ್ಕೂ ಮೇಲೆ ಚರ್ಚಿಸಿದ ವಿಷಯಗಳೆಲ್ಲ ನನ್ನಂಥ ಸಾಮಾನ್ಯ ಕನ್ನಡ ಗ್ರಾಹಕನಿಗೆ ಬೇಡವಾದದ್ದು. ಹಿಸ್ಟರಿ ವಾಹಿನಿಯನ್ನು ಕನ್ನಡದಲ್ಲೇ ನೋಡಬೇಕೆನ್ನುವ ಹಂಬಲ ಅವನದು. ಕೆಲವರು ಮಾಡುವ ಕಟ್ಟುಪಾಡು, ಡಬ್ಬಿಂಗಿನಿಂದ ಒದಗಬಹುದಾದ ಸಮಸ್ಯೆ, ತುಟಿ ಚಲನೆ ಸಮಸ್ಯೆ, ಭಾಷೆಯ ಬುಡಕ್ಕೆ ಪೆಟ್ಟು, ಸಂಸ್ಕ್ರುತಿ ನಾಶ ಈ ತರಹದ ಕಂಡು ಕೇಳರಿಯದ ಸಂಗತಿಗಳು ಅವನಿಗೆ ಅಪ್ರಸ್ತುತ. ತನ್ನನ್ನು ಕನ್ನಡದಿಂದ ಸಿಗುವ ಸೌಲಭ್ಯದಿಂದ ದೂರ ಸರಿಸುವ ಯಾವುದೇ ಕಟ್ಟುಪಾಡನ್ನು ಅವನು ಒಪ್ಪುವುದಿಲ್ಲ. ಕನ್ನಡ ಸಮಾಜದ ಹೆಸರಿನಲ್ಲಿ ಕಟ್ಟುಪಾಡು ಮಾಡಿಕೊಂಡು ತನಗೆ ಕನ್ನಡದಲ್ಲಿ ಮನರಂಜನೆ, ಮಾಹಿತಿ, ವಿಷಯಗಳು ದೊರಕದ ಹಾಗೆ ಮಾಡುತ್ತಿರುವವರಲ್ಲೇ ಅವನಿಗೆ ಹುನ್ನಾರ ಎದ್ದು ಕಾಣುತ್ತದೆ ಹೊರತು ಕನ್ನಡದಲ್ಲಿ ಸೇವೆ ಒದಗಿಸಲು ಮುಂದೆ ಬರುವ ಬಂಡವಾಳಶಾಹಿಗಳಲ್ಲಲ್ಲ.! ಡಬ್ಬಿಂಗ್ ನಿಶೇದ ಎಂಬ ಕನ್ನಡ ವಿರೋದಿ ಕಟ್ಟುಪಾಡು ಕೊನೆಗೊಳ್ಳಲಿ. ಎಲ್ಲ ಕನ್ನಡಿಗರಿಗೂ ಕನ್ನಡದಲ್ಲಿ ಮನರಂಜನೆ ಸಿಗುವಂತಾಗಲಿ. ಗ್ರಾಹಕನಿಗೆ ಆಯ್ಕೆ ಸ್ವಾತಂತ್ರ್ಯ ದೊರೆಯಲಿ.




4 comments:

  1. Mahesh ravare , super aagi bardidira , inndonu vishya naale sankranthige 4 parabhanshe chitra galige hedurukondu kannada chitragallannu bidugade golisuthilla.Sankranthige kannadigarige mosa madtha iddare , idara bagge janarige heccharirisiri

    ReplyDelete
  2. ದನ್ಯವಾದ ಪ್ರಶಾಂತ್,,
    ಪರಬಾಶೆ ಚಿತ್ರ ಬಿಡುಗಡೆ ಸಮಯ ನೋಡ್ಕೊಂಡು ನಮ್ ಚಿತ್ರ ಬಿಡುಗಡೆ ಮಾಡೋದು ನಿಜಕ್ಕೂ ದುರದ್ರುಶ್ಟಕರ ನಡೆ. ಪೈಪೋಟಿ ಎದುರಿಸುವ ಯೋಗ್ಯತೆಯನ್ನು ಇದು ತೋರಿಸುತ್ತದೆ.

    ReplyDelete
  3. ನಿಮ್ಮ ಅಭಿಪ್ರಾಯ ಸರಿಯಾಗಿದೆ.ಕನ್ನಡದ ಗ್ರಾಹಕನಿಗೆ ಕನ್ನಡದಲ್ಲಿ ಸೇವೆ ಸಿಗಬೇಕಾದದ್ದೇ ನ್ಯಾಯ. ಉಳಿದದ್ದೆಲ್ಲ ಗೌಣ.

    ReplyDelete
  4. Nanna kannada baashe uddara aagabeku andare dubbing maadalebeku, yellaru onde haadiyalli nadedare, namma chitra ranga bere haadi hiditide, adu naale baashe nirnaama maaduvantha kelsa, idanna spastavaagi helabayasuvenu.. gumpinalli irri andare illa naavu bere ne irthivi antha heltiddare evarugalu, ee reethi varthenegalinda baashe secured aagilla.. Kannadigarigae yella kalkondamele ne buddi barodu antha kaanutte..

    ReplyDelete

ನಿಮ್ಮ ಮಾತು...