Tuesday 17 May 2011

ನವರಸಪುರ ಉತ್ಸವ ಹಾಗೂ ಕನ್ನಡ ಮತ್ತು ಸಂಸ್ಕೃತಿ.!



ಕಳೆದ
ಕೆಲವು ವರುಶಗಳಿಂದ ಸ್ಥಗಿತಗೊಂಡಿದ್ದ ನವರಸಪುರ ಉತ್ಸವ ಮತ್ತೆ ಈ ವರುಶ ಹಮ್ಮಿಕೊಳ್ಳಲಾಗಿದ್ದು ಸಂತೋಶದ ವಿಶಯ ಮತ್ತು ಅದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು. ವಿಜಾಪುರದ ಇತಿಹಾಸ, ಸಂಸ್ಕೃತಿ, ಕಲೆ, ಸಾಹಿತ್ಯ, ಪರಂಪರೆಯನ್ನು ಹೊರಜಗತ್ತಿಗೆ ತೋರಿಸುವಲ್ಲಿ, ಆ ಮೂಲಕ ನಾಡಿನ ಜನರಲ್ಲಿ ತಮ್ಮೂರಿನ ಬಗ್ಗೆ ಹೆಮ್ಮೆ ಮೂಡಿ, ನಾಡು-ನುಡಿಯ ಚೌಕಟ್ಟಿನಲ್ಲಿ ಅವರನ್ನು ಒಗ್ಗೂಡಿಸಲು ಇಂತಹ ಉತ್ಸವಗಳು ಸಹಕಾರಿಯಾಗುತ್ತವೆ. ಈ ಬಾಗದ ಸ್ಥಳೀಯ ಕಲಾವಿದರಿಗೂ ತಮ್ಮ ಪ್ರತಿಬೆಯನ್ನು ಪರಿಚಯಿಸಲು ಇದೊಂದು ಒಳ್ಳೆಯ ವೇದಿಕೆ.
ಈ ಉತ್ಸವವನ್ನು ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತಗಳ ಸಹಯೋಗದಲ್ಲಿ ನಡೆಸಲಾಗುತ್ತಿರುವುದರಿಂದ ಉತ್ಸವದಲ್ಲಿ ನಮ್ಮ ಕನ್ನಡ ಮತ್ತು ಸಂಸ್ಕೃತಿ, ಇತಿಹಾಸ, ಪರಂಪರೆಗೆ ಸಂಬಂದಿಸಿದ ಕಾರ್ಯಕ್ರಮಗಳಿಗೆ ಮಾತ್ರ ಸ್ಥಾನ ಇರಬೇಕಾಗಿರುವುದು ಸ್ವಾಬಾವಿಕ. ಉತ್ಸವದಲ್ಲಿ ವೈಬವೀಕರಣಕ್ಕಿಂತ ಹೆಚ್ಚಾಗಿ ನಮ್ಮತನ ಕಾಣಿಸಬೇಕು ಮತ್ತು ಹೊರಜಗತ್ತಿಗೆ ಪರಿಚಯಿಸಬೇಕು. ಈಗ ಸಿದ್ದಪಡಿಸಲಾಗಿರುವ ಕಾರ್ಯಕ್ರಮಗಳ ಪಟ್ಟಿಯಲ್ಲಿ ಅವಿಬಜಿತ ವಿಜಾಪುರ ಜಿಲ್ಲೆಯ ಮತ್ತು ಸುತ್ತ ಮುತ್ತಲಿನ ಬೆಳಗಾವಿ, ದಾರವಾಡ, ರಾಯಚೂರು ಜಿಲ್ಲೆಯ ಅನೇಕ ಕಲಾವಿದರಿಗೆ ಇಲ್ಲಿ ವೇದಿಕೆ ಕಲ್ಪಿಸಿದ್ದು ಸಂತೋಶದ ವಿಶಯ. ಇದರ ಮದ್ಯೆ ಕೊಂಚ ಅಸಮಾದಾನ ಆಗಿದ್ದು, ನವರಸಪುರ ಉತ್ಸವಕ್ಕೆ ಅಥವಾ ವಿಜಾಪುರಕ್ಕೆ ಅಥವಾ ಕರ್ನಾಟಕಕ್ಕೆ ಸಂಬಂದವಿರದ ಅನೇಕ ಕಾರ್ಯಕ್ರಮಗಳಿಗೆ ಇಲ್ಲಿ ಜಾಗ ಕಲ್ಪಿಸಿದ್ದು.
ಭುವನೇಶ್ವರದ ಓರಿಸ್ಸಾ ನೃತ್ಯ, ಮಹಾರಾಷ್ಟ್ರದ ಲಾವಣಿ ನೃತ್ಯ, ದೆಹಲಿಯ ಕವ್ವಾಲಿ ತಂಡ, ಬಾಂಬೆಯ ಗೋಲ್ಡನ್ ಮೆಲೋಡಿಸ್ ತಂಡ ಹೀಗೆ ಇತ್ಯಾದಿ ಹೊರಗಿನ ಕಲಾವಿದರಿಗೆ ಮನ್ನಣೆ ನೀಡಲಾಗಿದೆ. ಇವರು ಕೊಡುವ ಕಾರ್ಯಕ್ರಮಕ್ಕೂ ಮತ್ತು ಈ ಉತ್ಸವವನ್ನು ಆಯೋಜಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉದ್ದೇಶಕ್ಕೂ ಹೋಲಿಕೆಯೇ ಇಲ್ಲ. ಭುವನೇಶ್ವರ ಮತ್ತು ಮಹಾರಾಷ್ಟ್ರದ ನೃತ್ಯದ ಬದಲಾಗಿ ನಮ್ಮಲ್ಲೇ ಹಲವರಿಗೆ ಪರಿಚಯವಿರದ ಕರ್ನಾಟಕದ ಅನೇಕ ನೃತ್ಯ ಕಲೆಗಳನ್ನು ಪರಿಚಯಿಸುವ ಕೆಲಸ ಮಾಡಬಹುದು. ಉದಾ: ನಂದಿ ಕುಣಿತ, ಕಂಸಾಳೆ ಕುಣಿತ, ಡೊಳ್ಳು ಕುಣಿತ, ಹಾಲಕ್ಕಿ ಕುಣಿತ, ತುಳು ಜಾನಪದ ನೃತ್ಯ ಹೀಗೆ ಹಲವು ಬಗೆಯ ನೃತ್ಯ ಕಲೆಗಳ ಕಾರ್ಯಕ್ರಮಗಳನ್ನು ಉತ್ಸವದಲ್ಲಿ ಆಯೋಜಿಸಬಹುದು. ಇನ್ನು ಸಂಗೀತದ ಕಾರ್ಯಕ್ರಮ ನೀಡುವ ಆರ್ಕೆಸ್ಟ್ರಾ (ಸಂಗೀತ ತಂಡ) ಗಳಿಗೆ ಕರ್ನಾಟಕದಲ್ಲಿ ಏನು ಬರ. ಪ್ರತಿ ಜಿಲ್ಲೆಯಲ್ಲಿ ಅಂತಹ ತಂಡಗಳನ್ನು ಕಾಣಬಹುದು. ಹೀಗಿರುವಾಗ ಬಾಂಬೆಯಿಂದ ಗೋಲ್ಡನ್ ಮೆಲೋಡಿಸ್ ಎಂಬ ಆರ್ಕೆಸ್ಟ್ರಾ ಕರೆಯಿಸುವ ಅವಶ್ಯಕತೆ ಏನಿತ್ತು. ಅವರಿಂದ ಹಿಂದಿ ಹಾಡುಗಳೇ ಕೇಳುತ್ತವೆ ಹೊರತು ಕನ್ನಡದ ಹಾಡುಗಳು ಕೇಳುವುದಿಲ್ಲ. ಕರ್ನಾಟಕದಲ್ಲಿ ಈ ತರದ ಹಿಂದಿ ಮನರಂಜನೆಗೆ ಈ ಉತ್ಸವವನ್ನು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಬಳಸಿಕೊಳ್ಳುವುದು ಅಷ್ಟೊಂದು ಸಮಂಜಸವಲ್ಲ.
ಇತ್ತೀಚಿಗೆ ನಡೆದ ಉತ್ಸವಗಳನ್ನು ನೋಡಿದರೆ, ಹೊರಗಿನ ಕಲಾವಿದರನ್ನು ಕರೆಸಿದರೆ ಉತ್ಸವದ ಮೆರುಗು ಮತ್ತು ವೈಭವ ಹೆಚ್ಚಬಹುದು ಎಂಬ ತಪ್ಪುಕಲ್ಪನೆಯಲ್ಲಿ ಉತ್ಸವಗಳ ಆಯೋಜಕರು ಇದ್ದಂಗಿದೆ. ಈ ವರುಶದಲ್ಲಿ ನಡೆದ ಗುಲ್ಬರ್ಗಾ ಉತ್ಸವ, ಬೀದರ
ತ್ಸವಗಳಲ್ಲಿ ಇದು ಸಾಬೀತಾಗಿದೆ. ಇದರಿಂದಾಗುವ ಕೆಲವು ಹಿನ್ನಡೆಗಳನ್ನು ಗಮನಿಸಬೇಕಾಗಿದೆ.
* ಹೊರಗಿನ ಕಲಾವಿದರನ್ನು ಕರೆಸುವುದರಿಂದ ಉತ್ಸವದ ಮೂಲಕ ನಮ್ಮ ಕಲಾವಿದರಿಗೆ ಸಿಗಬಹುದಾದ ಅವಕಾಶ ತಪ್ಪಿ ಹೋಗುತ್ತದೆ.
* ಉತ್ಸವದಲ್ಲಿ ಹಿಂದಿ ಮನರಂಜನೆಗೆ ಒತ್ತು ಕೊಡುವುದರಿಂದ ಕನ್ನಡ ಮನರಂಜನೆಯ ಯೋಗ್ಯತೆಯನ್ನು ಪ್ರಶ್ನಿಸಿದಂತಾಗುತ್ತದೆ ಮತ್ತು ಸರಕಾರವೇ ಹಿಂದಿಗೆ ಮಾರುಕಟ್ಟೆ ಕಲ್ಪಿಸಿಕೊಟ್ಟಂತಾಗುತ್ತದೆ.

* ಕನ್ನಡೇತರ ಕಾರ್ಯಕ್ರಮಗಳಿಂದ ಅಲ್ಲಿಯ ಜನರು ಕನ್ನಡ ಮನರಂಜನೆಯಿಂದ ಇನ್ನಷ್ಟು ದೂರ ಸರಿಯುತ್ತಾರೆ ಮತ್ತು ಅವರಲ್ಲಿ ಕೀಳರಿಮೆ ಬೆಳೆಯುತ್ತದೆ.
* ಕಲಾವಿದರು ಹೊರಗಿನವರು ಮತ್ತು ಕಾರ್ಯಕ್ರಮಗಳು ಕನ್ನಡೇತರಗಳಾದರೆ ಕನ್ನಡ ಮತ್ತು ಸಂಸ್ಕೃತಿಯ ಉತ್ಸವ ನಡೆಸುವ ಮೂಲ ಉದ್ದೇಶಕ್ಕೆ ಹಾನಿ ಆಗುತ್ತದೆ.
ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಿಲ್ಲಾಡಳಿತದ ಸಹಯೋಗದಲ್ಲಿ ನಡೆಯುತ್ತಿರುವ ಈ ಉತ್ಸವದಲ್ಲಿ ದೇಶ, ವಿದೇಶದ ಕಲಾವಿದರು, ಆಸಕ್ತರು, ಅತಿಥಿಗಳು ಬರಲಿ ತಪ್ಪೇನಿಲ್ಲ.! ಆದರೆ ಉತ್ಸವದಲ್ಲಿ ನಡೆಯುವ ಕಾರ್ಯಕ್ರಮಗಳು ಮತ್ತು ಬಾಗವಹಿಸುವ ಕಲಾವಿದರು ನಮ್ಮವರಾಗಿರಬೇಕು. ಕನ್ನಡ ಮತ್ತು ಸಂಸ್ಕೃತಿ ಪ್ರೋತ್ಸಾಹಿಸಲು ಕೈಗೊಳ್ಳುವ ಇಂತ ಉತ್ಸವಗಳಿಗೆ ನೀಡುವ ಸರಕಾರದ ಹಣ, ಹಿಂದಿ ಮನರಂಜನೆಗೆ ಅಥವಾ ಹೊರಗಿನ ಕಲಾವಿದರ ಕಾರ್ಯಕ್ರಮಗಳಿಗೆ ಉಪಯೋಗಿಸಿದರೆ ಯೋಜನೆಗಳಲ್ಲಾಗುವ ಹಣ ದುರ್ಬಳಕೆ ಅವ್ಯವಹಾರಕ್ಕೂ ಇದಕ್ಕೂ ವ್ಯತ್ಯಾಸವಿಲ್ಲದಂತಾಗುತ್ತದೆ.

ಇನ್ನು ನವರಸಪುರದ/ವಿಜಾಪುರದ ಇತಿಹಾಸಕ್ಕೆ ಸಂಬಂದಪಟ್ಟಂತೆ ಸಾಕ್ಷ್ಯಚಿತ್ರದ ಮೂಲಕ ಮಾಹಿತಿ ಕೊಡಬೇಕು. ಆದಿಲ್ ಶಾಹಿಗಳ ಆಳ್ವಿಕೆ ಬಗ್ಗೆ ಮತ್ತು ಅವರ ಕಾಲದಲ್ಲಿ ಸಂಗೀತ, ಸಾಹಿತ್ಯ, ನೃತ್ಯ ಸೇರಿದಂತೆ ನವರಸ ಕಲೆಗಳ ತಾಣವಾಗಿ ಬೆಳೆದ ಆಗಿನ ವಿಜಾಪುರದ ಬಗ್ಗೆ ಉತ್ಸವದಲ್ಲಿ ಬೆಳಕು ಚೆಲ್ಲಬೇಕು. ಇಲ್ಲಿನ ಐತಿಹಾಸಿಕ ಕಟ್ಟಡಗಳ ಹಿನ್ನೆಲೆಯನ್ನು ಪರಿಚಯಿಸುವ ಕೆಲಸ ಆಗಬೇಕು.
ಒಟ್ಟಾರೆ ಈ ಉತ್ಸವದಲ್ಲಿ ವಿಜಾಪುರ ಹಾಗೂ ಕನ್ನಡ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳಿಗೆ ಮಾತ್ರ ಒತ್ತು ಕೊಡುವ ಮೂಲಕ
ನವರಸಪುರ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಿ ಎಂಬುದು ಕನ್ನಡಿಗರ ಆಶಯವಾಗಿದೆ.

6 comments:

  1. ಕಲೆಯ ವಿಷಯದಲ್ಲಿ ಸಂಕುಚಿತ ಮನೋಭಾವ ಬೇಡ ಮಹೇಶ್, ನಮ್ಮ ಕಲಾವಿದರಲ್ಲದೆ ಹೊರ ರಾಜ್ಯದ ಕಲೆ ಮತ್ತು ಕಲಾವಿದರು ನವರಸಪುರದ ಉತ್ಸವದಲ್ಲಿ ಭಾಗವಹಿಸಿದರೆನೇ ಆ ಉತ್ಸವಕ್ಕೊಂದು ಮೆರಗು. ಜೊತೆಗೆ ನಮ್ಮ ಜನರಿಗೂ ಈ ಮೂಲಕ ದೇಶದ ಉನ್ನತ ಕಲಾವಿದರ ಕಲಾನೈಪುಣ್ಯವನ್ನು ಸವಿಯುವ ಸೌಭಾಗ್ಯ. ಬರೀ ನಮ್ಮವರೇ ಇರಬೇಕೆಂದು ಹೇಳುತ್ತಾ ಉತ್ಸವವನ್ನು ಸಂಕುಚಿತಗೊಳಿಸಬೇಡಿ ದಯವಿಟ್ಟು.

    ReplyDelete
  2. ಜಯಲಕ್ಷ್ಮಿ ಅವರೇ ನಮಸ್ಕಾರ,,
    ಖಾಸಗಿಯಾಗಿ ಹೊರ ರಾಜ್ಯದಿಂದ ಕಲಾವಿದರನ್ನ ಕರೆಸಿ ಕಾರ್ಯಕ್ರಮ ನಡೆಸಿದರೆ ತಲೆಕೆಡೆಸಿಕೊಳ್ಳೊ ಅವಶ್ಯಕತೆ ಇರ್ತಿರ್ಲಿಲ್ಲ. ಆದ್ರೆ ಇದು ಸರಕಾರದ ಕಾರ್ಯಕ್ರಮ. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಕನ್ನಡ ನೆಲದಲ್ಲಿ ನಡೆಯುವ ಉತ್ಸವದಲ್ಲಿ ನಮ್ಮ ನಾಡಿನ ಕಲೆ/ಕಲಾವಿದರಿಗೆ ಉತ್ತೇಜನ ನೀಡಬೇಕು ಅನ್ನೊದು ನಿಮಗೆ ಸಂಕುಚಿತ ಮನೊಭಾವವಾಗಿ ಕಂಡಿತೆ.? ಸರಕಾರದ ಹಣ ಖರ್ಚು ಮಾಡಿ, ಹೊರಗಿನವರನ್ನು ಕರೆಸಿ, ಅವರಿಗೆ ವೇದಿಕೆ ಕಲ್ಪಿಸಿಕೊಟ್ಟು, ಅವರಿಂದ ಕನ್ನಡೇತರ ಕಾರ್ಯಕ್ರಮ ಕೊಡಿಸಿ, ಆ ಮೂಲಕ ಸ್ಥಳೀಯರಲ್ಲೂ ಕನ್ನಡ ಮನರಂಜನೆಯ ಬಗ್ಗೆ ಕೀಳರಿಮೆ ಮೂಡಲು (ಹೆಚ್ಚಾಗಲು) ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಉತ್ಸವ ಮಾಡಬೇಕೆ.? ಯಾರು, ಯಾವ ಉದ್ದೇಶಕ್ಕಾಗಿ ಮತ್ತು ಯಾರಿಗಾಗಿ ಈ ಉತ್ಸವ ಮಾಡ್ತಾ ಇದ್ದಾರೆ ಅನ್ನೊದು ಬಹಳ ಮುಖ್ಯ. ಉತ್ಸವದಲ್ಲಿ ಹಿಂದಿ ಮನರಂಜನೆ ಕೊಡಿಸುವುದರಿಂದ ಕನ್ನಡ ಮತ್ತು ಸಂಸ್ಕೃತಿ ಹೇಗೆ ಬೆಳೆಯುತ್ತೆ ಅನ್ನೊದು ವಿವರಿಸ್ತಿರಾ.?

    ReplyDelete
  3. @ ಜಯಲಕ್ಷ್ಮಿ - ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಡೆಯುತ್ತಿರುವ ಈ ಉತ್ಸವ ಕನ್ನಡಿಗರ ತೆರಿಗೆ ಹಣದಿಂದ ಬಂದಿದ್ದು. ಇದನ್ನು ಎಲ್ಲೋ ಇರುವ ಕಲಾವಿದರನ್ನು ಕರೆಸಿ ಅವರಿಂದ ಕಾರ್ಯಕ್ರಮ ನಡೆಸಿ ಅವರಿಗೆ ನಮ್ಮ ಹಣವನ್ನು ಕೊಡುವುದು ಎಷ್ಟು ಸಮಂಜಸ ಹೇಳಿ. ಇದರ ಬದಲು ನಿಮ್ಮನ್ನು ಕರೆಸಿದ್ದರೆ ನಾವೇನು ಬೇಡ ಅನ್ನುತ್ತಿರಲಿಲ್ಲ.
    ಅದು ಬಿಟ್ಟು ನಮ್ಮ ಹಣವನ್ನು ಯಾರಿಗೊ ಕೊಟ್ಟು ಅವರು ಕೊಡುವ ಅವರ ನುಡಿಯ ಮನರಂಜನೆಯನ್ನು ನೋಡಿ ಚಪ್ಪಾಳೆ ತಟ್ಟುವ ಗೀಳು ನಮಗಿನ್ನು ಬಂದಿಲ್ಲ ಅನ್ಕೊತಿನಿ. ನಮ್ಮ ನೆಲದಲ್ಲಿ ನಮ್ಮವರಿಗೆ ಕೆಲಸ ನಮ್ಮವರಿಗೆ ಆಧ್ಯತೆ ಸಿಗಬೇಕು ಎಂಬುವುದು ನಿಮ್ಮ ಪ್ರಕಾರ ಸಂಕುಚಿತವೆಂದರೆ ಏನು ಹೇಳೋದು. ಇದನ್ನೆ ನೀವು ಫ್ರಾನ್ಸ್ ನಲ್ಲೊ, ಜೆರ್ಮನಿಯಲ್ಲೊ, ಸ್ಪೇನ್ ನಲ್ಲೊ ಹೋಗಿ ಹೇಳಿ ನೋಡಿ ಅವರು ನಗುವುದು ಖಚಿತ. ಸರ್ಕಾರದ ವತಿಯಿಂದ ನಡೆಯುವ ಕಾರ್ಯಕ್ರಮಗಳಲ್ಲಿ ಅವರುಗಳು ನೆಲದ ಮಕ್ಕಳಿಗೆ ಆಧ್ಯತೆ ಕೊಡುತ್ತಾರೆ.

    ಇಂತಿ
    ರಮೇಶ್ ರಾವ್

    ReplyDelete
  4. ನಮ್ಮಲ್ಲಿ ಹಲವಾರು ಜನರಿಗೆ ಕನ್ನಡದ ಬಗ್ಗೆ ಏಕೋ ತಾತ್ಸಾರ ಮನೋಭಾವನೆ. ನಮ್ಮ ಕನ್ನಡ ಸಂಸ್ಕೃತಿ ಮತ್ತು ಪ್ರಚಾರ ಇಲಾಖೆ ವತಿಯಿಂದ ನಡೆಯೋ ಕಾರ್ಯಕ್ರಮಗಳಲ್ಲಿ ಅನ್ಯಭಾಷೆಯ ಚಟುವಟಿಕೆಗಳೇಕೆ ತಿಳಿಯದು? ನಮ್ಮ ರಾಜ್ಯದ ತೆರಿಗೆ ಹಣದಲ್ಲಿ ನಮ್ಮ ಸಂಸ್ಕೃತಿ ಪ್ರಚಾರಕ್ಕೆಂದೇ ಇರೋ ಇಲಾಖೆ ಇತರರಿಗೆ ಮಣೆ ಹಾಕೊದೆತಕೆ? ಇದರಲ್ಲಿ ಸಂಕುಚಿತ ಮನೋಭಾವನೆ ಎಲ್ಲಿಂದ ಬಂತು? ಮೊನ್ನೆ ನನ್ನ ರೂಂ-ಮೆಟ್ ಹೇಳ್ತಾ ಇದ್ದ , ಮಹಾರಾಷ್ಟ್ರದ ಲಾವಣಿ ನೃತ್ಯದಂತೆ ನಮ್ಮ ರಾಜ್ಯದಲ್ಲಿ ಜನಪ್ರಿಯ ನೃತ್ಯವೇ ಇಲ್ಲವಲ್ಲೋ ಜಯತೀರ್ಥ ಅಂತ (ನಾವಿಬ್ರು ವಿಜಾಪೂರದವ್ರೆ,ಸದ್ಯಕ್ಕೆ ಪೂನಾದಲ್ಲಿ ಇರೋದು). ಆಗ ನಾನು ಹೇಳಿದೆ ಕಂಸಾಳೆ,ಡೊಳ್ಳು ಕುಣಿತ,ಯಕ್ಷಗಾನ,ಗೀ ಗೀ ಪದ ಇವು ನಮ್ಮ ರಾಜ್ಯದ ಕೊಡುಗೆ, ಇದರ ಬಗ್ಗೆ ನೀನು ಜಾಸ್ತಿ ತಿಳಿದುಕೊಳ್ಳುಕೆ ಹೋಗಿಲ್ಲ;ಇದು ನಿನ್ನ ತಪ್ಪು ಅಂತ. ಇಲ್ಲಿ ವಿಚಿತ್ರ ವೆಂದರೆ ನಮ್ಮ ಜನಕ್ಕೆ ನಮ್ಮ ಬಗ್ಗೆನೇ ಗೊತ್ತಿಲ್ಲ, ನಮ್ಮ ಸರಕಾರಗಳು ಇದರ ಬಗ್ಗೆ ತಲೇನೆ ಕೆಡಿಸಿಕೊಂಡಿಲ್ಲ. ಮೊದಲು ನಮ್ಮಲ್ಲಿರುವ ವಿವಿಧ ಜನಪದ ಕಲೆಗಳ ಬಗ್ಗೆ ನಮ್ಮವರಿಗೆ ಮಾಹಿತಿ ಇರಬೇಕು,ಹಂಪಿ,ನವರಸಪುರ,ಬೀದರ,ಲಕ್ಕುಂಡಿ,ಕಲ್ಬುರ್ಗಿ ಉತ್ಸವಗಳು ಇದಕ್ಕೆ ವೇದಿಕೆ ಯಾಗಬೇಕು. ಅದು ಬಿಟ್ಟು ಅದ್ಯಾರೋ ಸೋನು ನಿಗಮ್,ಅದ್ನಾಡ್ ಸ್ವಾಮೀ ,ಮಿಖ ,ಡಾಲರ್ ಮೆಹಂದಿ ಯಂಥ ಕೊಟ್ಯನುಗಟ್ಟಲೆ ಹಣಗಳಿಸುವ ಬಾಲಿವುಡ್ ಗಾಯಕರಿಂದ ಕನ್ನಡ ಸಂಸ್ಕೃತಿ ಬಿಂಬಿಸ ಲಾದಿತೆ? ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ ಅನ್ನೋ ತರಹ ಆಗುತ್ತೆ. ಪ್ರವೀಣ್ ಗೋಡ್ಖಿಂಡಿ,ಸಂಗೀತ ಕಟ್ಟಿ,ಗುರುಕಿರಣ್,ಶಮಿತಾ ಮಲ್ನಾಡ,ಚಿತ್ರ,ಅರ್ಚನಾ ಉಡುಪ,ಏಣಗಿ ಬಾಳಪ್ಪ ಮುಂತಾದ ನಾಡಿನ ಪ್ರಖ್ಯಾತರಿಂದ ಸಂಗೀತ-ಕಳೆಯ ಸುರಿಮಳೆ ಹರಿಸಬಹುದು.ಇನ್ನು ಆಯ ನಗರದ ಪ್ರಖ್ಯಾತ ಸ್ಥಳೀಯರಿಗೆ ವೇದಿಕೆ ಒದಗಿಸಿಕೊಡಬೇಕು.ಸರಕಾರವೇ ಜನರನ್ನು ತಪ್ಪು ದಾರಿಗೆ ಎಳೆದರೆ ಹೇಗೆ? ಎಲ್ಲರೂ ನನ್ನ ಗೆಳೆಯನಂತೆ ನಮ್ಮ ಕಲೆಯನ್ನೇ ಮರೆತು ಹೋಗೋ ಭೀತಿ ಎದುರಾಗಿದೆ.

    ReplyDelete
  5. ವಿಜಾಪುರದಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವದು ತುಂಬಾ ಸಂತೋಷದ ಸುದ್ದಿ. ಕೆಲವು ವರ್ಷಗಳಿಂದ ನಿಂತು ಹೋಗಿರುವದು ತುಂಬಾ ವಿಷಾದ ಸಂಗತಿ.ವಿಜಾಪುರ ಐತಿಹಾಸಿಕ ನಗರವೇಂದು ಬರಿ ಬಾಯಿ ಮಾತಲ್ಲಿ ಹೇಳಿ ಕೆಲಸ ಮಾಡದ ಸರ್ಕಾರ, ಇಂತಹ ಉತ್ಸವಕ್ಕೆ ದುಡ್ಡು ನೀಡಿರುವದು ತುಂಬಾ ಸಂತೋಷದ ಸಂಗತಿ. ಆದಿಲ್ ಷಾಯಿ ದೊರೆಗಳು ಕಟ್ಟಿರುವ ಸ್ಮಾರಕಗಳನ್ನು ಉಳಿಸಿ ಬೆಳಸಿ ಮತ್ತೆ ವಿಜಾಪುರವನ್ನು ಅದರ ಗತವೈಭವಕ್ಕೆ ಕರೆದೊಯ್ಯಿವದು ನಮ್ಮೆಲ್ಲರ ಜವಾಬ್ದಾರಿ. ಜೈ ವಿಜಾಪುರ ಜೈ ಕರ್ನಾಟಕ್ ಜೈ ಭಾರತ್ !!

    ReplyDelete
  6. ಹೌದು ಸತೀಶ, ಸರಕಾರ ಈ ಉತ್ಸವಕ್ಕೆ ಹಣ ನೀಡಿರುವುದು ಸಂತೋಶದ ವಿಶಯ. ಅದರ ಸದ್ಬಳಕೆ ಆಗ್ಬೇಕು ಅಂದ್ರೆ, ಇಲ್ಲಿನ ಇತಿಹಾಸ, ಪರಂಪರೆಯನ್ನು ಬಿಂಬಿಸುವುದರ ಜೊತೆಗೆ ವಿಜಾಪುರ/ಕರ್ನಾಟಕದ ಕಲೆ/ಕಲಾವಿದರಿಗೆ ವೇದಿಕೆ ಕಲ್ಪಿಸಬೇಕು. ಆಗ ದೇಶ, ವಿದೇಶದಿಂದ ಬರುವ ಅತಿಥಿಗಳ ಎದುರು ತಮ್ಮ ಪ್ರತಿಭೆಯನ್ನು ಹೊರಹಾಕಲು ನಮ್ಮವರಿಗೆ ಇದೊಂದು ಒಳ್ಳೆಯ ಅವಕಾಶವಾಗುತ್ತದೆ.

    ReplyDelete

ನಿಮ್ಮ ಮಾತು...