Saturday 24 December 2011

ಜನ್ರಿಗೆ ವಿಶ್ಯ ಮುಟ್ಲಿ, ಇಲ್ಲ ಹಾಳಾಗ್ ಹೋಗ್ಲಿ, ಮೊದ್ಲು ಹಿಂದಿ ಹೇರಿರಿ.!


ಪ್ರಜಾವಾಣಿ ೨೪-೧೨-೧೧
ಈ ಚಿತ್ರದಲ್ಲಿ ಕಾಣುತ್ತಿರುವುದು ಮೊನ್ನೆಯ ಒಂದು ದಿನಪತ್ರಿಕೆಯಲ್ಲಿ ಬಂದಿರುವ ಜಾಹೀರಾತು. ಚಿತ್ರವನ್ನು ನೋಡಿ, ಇದ್ಯಾವುದೋ ಹಿಂದಿ ದೈನಿಕದಲ್ಲಿ ಬಂದಿರ್ಬೌದು ಅನ್ಕೊಂಡಿದ್ರೆ, ನಿಮ್ಮ ಊಹೆ ತಪ್ಪು. ಇದು ಬಂದಿರುವುದು ಪ್ರಜಾವಾಣಿ ಕನ್ನಡ ದಿನಪತ್ರಿಕೆಯಲ್ಲಿ. ಕೊಟ್ಟಿರುವುದು ಬಾರತೀಯ ರೇಲ್ವೇ ಇಲಾಖೆ. ಇದನ್ನು ನೋಡಿದ ಮೇಲೆ ಕೆಲವು ಮೂಲಬೂತ ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ. ಜನರಿಗೆ ವಿಶಯ ಮುಟ್ಟಿಸುವ ಉದ್ದೇಶ ರೇಲ್ವೇ ಇಲಾಖೆಗೆ ಇದೆಯೇ.? ಇಲ್ಲ ಎಂದರೆ ಬೇರ್ಯಾವ ಉದ್ದೇಶಕ್ಕೆ ಈ ಜಾಹೀರಾತನ್ನು ಕೊಡಲಾಗಿದೆ. ಇದೆ ಎಂದರೆ, ಕನ್ನಡ ಪತ್ರಿಕೆಯಲ್ಲಿ, ಆ ಪತ್ರಿಕೆಯನ್ನು ಓದುವ ಜನರಿಗೆ ಸಂಬಂದವೇ ಇಲ್ಲದ ಹಿಂದಿ ಬಾಶೆಯಲ್ಲಿ ಜಾಹೀರಾತು ಕೊಟ್ಟಿದ್ದೇಕೆ.? ಯಾವ ಆಧಾರದ ಮೇಲೆ ಕನ್ನಡ ದಿನಪತ್ರಿಕೆಯಲ್ಲಿ ಹಿಂದಿಯಲ್ಲಿ ಜಾಹೀರಾತು ಕೊಟ್ಟರು.

ಒಂದು ಜಾಹೀರಾತು ಜನರಿಗೆ ಮುಟ್ಟಬೇಕೆಂದರೆ ಅದು ಜನರ ನುಡಿಯಲ್ಲಿರಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಯಾವುದೇ ಸಂಸ್ಥೆ, ಇಲಾಖೆಯಾದರೂ ಕರ್ನಾಟಕದಲ್ಲಿ ಕನ್ನಡದ ಮೂಲಕವೇ ಜನರನ್ನು ತಲುಪಬೇಕು. ಆ ಪ್ರದೇಶದ ಜನರಿಗೆ ಸಂಬಂದವೇ ಇಲ್ಲದ ಬಾಶೆ ಮೂಲಕ ಜನರನ್ನು ತಲುಪಲು ಪ್ರಯತ್ನಿಸುವುದು ಹೇರಿಕೆಯೇ ಎಂದರ್ಥ. ಇಂಥ ಹಿಂದಿ ಹೇರಿಕೆ ದಿನನಿತ್ಯ ನಮ್ಮ ಮೇಲೆ ನಡೆಯುತ್ತಲೇ ಇದೆ. ಹೀಗೆ ಹಿಂದಿಯನ್ನು ನಮ್ಮ ಮೇಲೆ ಹೇರಿ ಹೇರಿ ಇವತ್ತು ಕೇಂದ್ರ ಸರಕಾರದ ಇಲಾಖೆ ಎಂದರೆ ಜನ ಕಣ್ಣು ಮುಚ್ಚಿಕೊಂಡು ತಮ್ಮದಲ್ಲದ ಹಿಂದಿಯನ್ನು ಒಪ್ಪಿಕೊಳ್ಳುವ ಮಟ್ಟಿಗೆ ತಂದು ನಿಲ್ಲಿಸಿದ್ದಾರೆ. ಇದಕ್ಕೆ ರಾಶ್ಟ್ರೀಯತೆ, ಬಾವೈಕ್ಯತೆಯ ಲೇಪನ ಬೇರೆ.! ಇದನ್ನು ಪ್ರಶ್ನಿಸಿದರೆ, ಈಗಿನ ಬಾಶಾ ನೀತಿ ಪ್ರಕಾರ ಹಿಂದಿ ಕೇಂದ್ರ ಸರಕಾರದ ಆಡಳಿತ ಬಾಶೆ ಎಂಬ ವಾದ. ಇಲ್ಲಿ ಮತ್ತೆ ಕೆಲವು ಮೂಲಬೂತ ಪ್ರಶ್ನೆಗಳು ಎದುರಾಗುತ್ತವೆ. ನಮ್ಮೂರಿನಲ್ಲಿ ಬಳಸುವ ಸೇವೆ, ಸೌಲಬ್ಯ, ಮಾಹಿತಿಗಳಲ್ಲಿ ನಾವಾಡುವ ಬಾಶೆಯಿಲ್ಲ ಎಂದಾದ ಮೇಲೆ ಇದೆಂಥ ಬಾಶಾ ನೀತಿ ಮಾರಾಯ್ರೆ.! ನಮ್ಮೂರಿನಲ್ಲಿ ನಾವು ನೆಮ್ಮದಿಯ ಜೀವನ ನಡೆಸಲು, ಎಲ್ಲ ಸೌಕರ್ಯಗಳನ್ನು ಪಡೆಯಲು ನಮ್ಮದಲ್ಲದ ಮತ್ತೊಂದು ಬಾಶೆಯನ್ನು ಕಲಿಯಬೇಕು ಎಂಬ ಈಗಿನ ಬಾಶಾ ನೀತಿ ನಮ್ಮನ್ನು ಉದ್ದಾರ ಮಾಡಲು ಸಾದ್ಯವೇ.? ಎಲ್ಲ ಬಾರತೀಯರಿಗೆ ಸಮಾನ ಅವಕಾಶ ನೀಡದ, ಎಲ್ಲ ಬಾಶೆಗಳನ್ನು ಸಮಾನವಾಗಿ ಕಾಣದ ಈಗಿನ ಬಾಶಾ ನೀತಿ ಮುಂಬಯಿ ತರಹದ ಸಂಘರ್ಷಗಳಿಗೆ ಕಾರಣವಾಗುತ್ತದೆಯೇ ಹೊರತು ಬಾರತೀಯರ ಮದ್ಯೆ ಸಮಾನತೆಯ ಬೀಜವನ್ನು ಬಿತ್ತಲು ಸಾದ್ಯವೇ.? ವಿವಿದತೆಯಲ್ಲಿ ಏಕತೆ ಎಂಬ ತತ್ವವನ್ನು ಭೋದಿಸಲು  ಸಾದ್ಯವೇ.?


ಹಿಂದಿ ಹೇರಿಕೆಯ ಕರಾಳ ಮುಖವನ್ನು ಅರಿತುಕೊಂಡೇ ಇತ್ತೀಚಿಗೆ ಗಂಗಾವತಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅದ್ಯಕ್ಷರಾದ ಸಿಪಿಕೆಯವರು ನಮಗೆ "ಇಂಗ್ಲಿಷ್ ಮರದ ದೊಣ್ಣೆಯಾದರೆ, ಹಿಂದಿ ಕಬ್ಬಿಣದ ದೊಣ್ಣೆ" ಎಂದು ಹೇಳಿದ್ದರು. ಕನ್ನಡ ಪತ್ರಿಕೆಯಲ್ಲಿ ಕನ್ನಡದಲ್ಲಿ ಏಕೆ ಜಾಹೀರಾತು ಕೊಡಬೇಕು ಎಂಬ ಅಬಿಪ್ರಾಯ ಹೊಂದಿರುವ ಕೇಂದ್ರ ಸರಕಾರದ ಬಾಶಾ ನೀತಿಯ ಈ ದೋರಣೆಯನ್ನು ವಿರೋದಿಸದಿದ್ದರೆ ಕರ್ನಾಟಕದಲ್ಲಿ ಏಕೆ ಕನ್ನಡ ಇರಬೇಕು, ದೇಶಕ್ಕೊಂದೇ ಬಾಶೆ ಸಾಕು ಎಂಬ ಅಬಿಪ್ರಾಯ ವ್ಯಕ್ತಪಡಿಸುವ ದಿನ ದೂರ ಇಲ್ಲ.