Tuesday 6 March 2012

ವಲಸಿಗರಿಗೆ ವ್ಯವಸ್ಥೆ ಕಟ್ಟುತ್ತಿರುವ ಆರ್.ಟಿ.ಓ. ಕಚೇರಿ.


ಈಚೆಗೆ ಕೆಲವು ದಿನಗಳ ಹಿಂದೆ ಕೆ.ಎಸ್.ಆರ್.ಟಿ.ಸಿ ಯಲ್ಲಿ ಹೇಗೆ ಕನ್ನಡವನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬುದರ ಬಗ್ಗೆ ಬರೆದಿದ್ದೆ. ಈಗ ಸಾರಿಗೆ ಇಲಾಖೆಗೆ ಸಂಬಂದಿಸಿದ ಮತ್ತೊಂದು ಅಂಗದ ಸರದಿ. ಚಾಲನಾ ಪರವಾನಗಿ ಪಡೆದುಕೊಳ್ಳುವುದು, ವಾಹನಗಳ ನೊಂದಣಿ ಮಾಡಿಸಿಕೊಳ್ಳುವುದು, ಅವುಗಳಿಗೆ ಸಂಬಂದಿಸಿದಂತೆ ತಿದ್ದುಪಡಿಗಳಾಗುವುದು ಹೀಗೆ ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ಸಾರ್ವಜನಿಕರು ಸಾರಿಗೆ ಇಲಾಖೆಯ ಆರ್.ಟಿ.ಕಚೇರಿಗೆ ಭೇಟಿ ಕೊಡುತ್ತಾರೆ.

ಗಾಡಿ ಕಲಿಯೋ ಮುನ್ನ ಇಂಗ್ಲೀಶ್ ಕಲಿರಿ: ಹೌದು. ಚಾಲನಾ ಪರವಾನಗಿ ಪಡೆಯಬೇಕಿದ್ದರೆ, ನೀವು ನಿಮ್ಮ ದಿನನಿತ್ಯದ ವ್ಯವಹಾರಗಳಿಗೆ ಕನ್ನಡವನ್ನೇ ನೆಚ್ಚಿಕೊಂಡಿದ್ದರೆ ಗಾಡಿ ಕಲಿಯುವ ಮುನ್ನ ಇಂಗ್ಲೀಶ್ ಕಲಿರಿ ಎನ್ನುತದೆ ನಮ್ಮ ರಾಜ್ಯ ಸರಕಾರದ ಸಾರಿಗೆ ಇಲಾಖೆ. ಆಡಳಿತದಲ್ಲಿ ಕನ್ನಡ ಅಂತ ಹೇಳುವ ಸರಕಾರ ಹೀಗೆ ಹೇಳಲು ಸಾದ್ಯವೇ ಅಂತಿರಾ.! ಹೀಗಂತ ಆದೇಶವನ್ನೇನು ಸರಕಾರ ಹೊರಡಿಸಿಲ್ಲ, ಆದರೆ ಅಲ್ಲಿನ ವ್ಯವಸ್ಥೆ ಮಾತ್ರ ಸ್ಪಷ್ಟವಾಗಿ ಇದನ್ನೇ ಹೇಳುತ್ತದೆ. ಯಾಕಂದ್ರೆ, ಆರ್.ಟಿ. ಕಚೇರಿಯಲ್ಲಿನ ವ್ಯವಹಾರವೆಲ್ಲ ಸಂಪೂರ್ಣ ಇಂಗ್ಲೀಷಮಯವಾಗಿದೆ. ಪರವಾನಗಿ ಅರ್ಜಿ, ಗಾಡಿ ನೊಂದಣಿ ಅರ್ಜಿ, ಗಾಡಿ ಮಾಲೀಕತ್ವ ಬದಲಿಸಲು ಬಳಸುವ ಅರ್ಜಿ   ಹೀಗೆ ಯಾವ ಅರ್ಜಿಯಲ್ಲೂ ಒಂದಕ್ಷರ ಕನ್ನಡವಿಲ್ಲ. ಪರವಾನಗಿ ಅಥವಾ ನೊಂದಣಿ ಮಾಡಿಸಲು ಹೋದವರಿಗೆ ಇದು ಗಮನಕ್ಕೆ ಬಂದಿರಬಹುದು. ಕನ್ನಡ ಬಾರದವರು ಸಲೀಸಾಗಿ ತಮ್ಮ ಕೆಲಸ ಮಾಡಿಕೊಳ್ಳುತ್ತಾರೆ, ಆದರೆ ವಿಪರ್ಯಾಸವೆಂದರೆ ತಮ್ಮ ದಿನನಿತ್ಯದ ವ್ಯವಹಾರಗಳಿಗಾಗಿ ಕನ್ನಡವನ್ನೇ ನೆಚ್ಚಿಕೊಂಡವರು ಸ್ವಾಬಾವಿಕವಾಗಿ ಇನ್ನೊಬರ ಸಹಾಯ ಪಡೆಯಲೇ ಬೇಕಾಗುತ್ತದೆ. ಆಗ ನೆನಪಾಗುವುದೇ ಏಜೆಂಟರು. ಹೀಗಾಗಿ ಸಾರಿಗೆ ಇಲಾಖೆಯ ವ್ಯವಸ್ಥೆಯಲ್ಲಿ ಸ್ಥಳೀಯರ ಬಾಶೆಯಾದ ಕನ್ನಡ ಇಲ್ಲದಿರುವುದು ಕೂಡ ಏಜೆಂಟರ ಹಾವಳಿ ಹೆಚ್ಚಾಗಲು ಪ್ರಮುಖ ಕಾರಣ ಎಂದರೆ ತಪ್ಪಾಗಲ್ಲ.

ಯಾರಿಗಾಗಿ ವ್ಯವಸ್ಥೆ: ಕನ್ನಡಿಗರ ಪ್ರತಿನಿಧಿಯಾಗಿ ಅವರ ಅನುಕೂಲತೆಗಳನ್ನು ಗಮನದಲ್ಲಿರಿಸಿಕೊಂಡು ಕೆಲಸ ನಿರ್ವಹಿಸಬೇಕಾದ್ದು ಸರಕಾರದ ಜವಾಬ್ದಾರಿ. ಕರ್ನಾಟಕ ಸರಕಾರ ಕಟ್ಟುವ ವ್ಯವಸ್ಥೆ ಕನ್ನಡಿಗರಿಗೆ ಎಂಬುದು ದಿಟವಾಗಿದ್ದರೆ ವ್ಯವಸ್ಥೆ ನಿರ್ಮಾಣವನ್ನು ಕನ್ನಡಿಗರ ಬಾಶೆ/ಆಡಳಿತ ಬಾಶೆ ಮೂಲಕನೇ ಕಲ್ಪಿಸಿಕೊಡಬೇಕಿರುವುದು ರಾಜ್ಯ ಸರಕಾರ ಹೊಣೆ. ಕನ್ನಡವನ್ನು ಕಲಿಯದವರು ಕೂಡ ಇಲ್ಲಿ ಆರಾಮಾಗಿ ತಮ್ಮ ವ್ಯವಹಾರವನ್ನು ನಿಭಾಯಿಸುತ್ತಾರೆ. ಆದರೆ ಕನ್ನಡವನ್ನು ನೆಚ್ಚಿಕೊಂಡವರಿಗೆ ಕರ್ನಾಟಕದಲ್ಲೇ ಅದೂ ಸರಕಾರದ ಇಲಾಖೆಯಲ್ಲೇ ಸೇವೆ ಲಭ್ಯವಿಲ್ಲ ಎಂದರೆ ಆಡಳಿತದಲ್ಲಿ ಕನ್ನಡ ಎಂಬುದಕ್ಕೆ ಅರ್ಥವೆಲ್ಲಿದೆ. ಬಾಶಾ ಸೂತ್ರವನ್ನು ನಾವು ಹೀಗೆ ಹೇಳಬಹುದು. ಸ್ಥಳೀಯರ ಅನುಕೂಲಕ್ಕಾಗಿ ಸ್ಥಳೀಯ ಬಾಶೆ ಮತ್ತು ವಲಸಿಗರ ಅನುಕೂಲಕ್ಕಾಗಿ ಇಂಗ್ಲೀಶ್ ಬಾಶೆ ಬಳಕೆ ಮಾಡಬಹುದು. ಆದರೆ ಸಾರಿಗೆ ಇಲಾಖೆ ಇಂಗ್ಲೀಶ್ ಒಂದನ್ನೇ ತಮ್ಮ ವ್ಯವಹಾರದಲ್ಲಿ ಬಳಸುವುದನ್ನು ನೋಡಿದರೆ, ವಲಸಿಗರಿಗೆನೇ ವ್ಯವಸ್ಥೆಯನ್ನು ಕಟ್ಟುತ್ತಿದೆಯೇ ಎಂಬ ಅನುಮಾನ ಮೂಡುತ್ತದೆ. ಸರಕಾರದ ಆಡಳಿತ ರಾಜ್ಯದ ಜನಸಾಮಾನ್ಯರಿಗೆ ತಲುಪಬೇಕು ಎನ್ನುವ ಉದ್ದೇಶದಿಂದಲೇ ಅಲ್ಲವೇ ಆಡಳಿತದಲ್ಲಿ ರಾಜ್ಯದ ಜನರ ನುಡಿಯಾದ ಕನ್ನಡದ ಅನುಷ್ಟಾನ ಆಗಬೇಕು ಎಂದಿದ್ದು. ಹೀಗಿರುವಾಗ ಜನರ ನುಡಿಯನ್ನೇ ವ್ಯವಸ್ಥೆಯಿಂದ ದೂರ ಇಡುವುದು, ಕನ್ನಡವನ್ನು ಬಳಕೆ ಮಾಡಲು ಅವಕಾಶ ನೀಡದೇ ಇರುವುದು ಹೇಗೆ ಆಡಳಿತವನ್ನು ಪರಿಣಾಮಕಾರಿಯಾಗಿಸಲು ಸಾದ್ಯ.!