Tuesday 3 November 2009

ನಮಗೂ ಒಂದು ಪ್ರಾದೇಶಿಕ ಪಕ್ಷ ಏಕೆ ಬೇಕು..........?

!!......................................................................................................!!
ಯಾರಿಗೋ ಏನೇನೋ ನೀಡುವ ದೇವನೇ, ಕನ್ನಡಿಗನ ಮನವಿ ಸಲ್ಲಿಸ..ಲೇನು......?
ಕನ್ನಡದ ಜನತೆ ಕಾಣುತಿರುವ ಮನಸಿನ ಆಸೆ ಕೇಳಿಸ..ಲೇನು...........?

ನಾವು ಈಗ ಸ್ವಾಭಿಮಾನದಲ್ಲಿ ಏಳ.ಬೇಕು.......ನಮಗೂ ಒಂದು ಪಕ್ಷ ಬೇಕು..
ಕರವೇ ಇದ್ದ ಹಾಗೆ ಬದಲೇನು ಆಗದಂತೆ ಮನಸ್ಸು ಕದ್ದು ಗೆಲ್ಲ..ಬೇಕು..

ನಾವು ಈಗ ಸ್ವಾಭಿಮಾನದಲ್ಲಿ ಏಳ.ಬೇಕು.......ನಮಗೂ ಒಂದು ಪಕ್ಷ ಬೇಕು..
!!.....................................................................................................!!
ನಮ್ಮ ಕರ್ನಾಟಕ ರಾಜ್ಯ ರಚನೆಯಾಗಿ, ಏಕೀಕರಣವಾಗಿ ೫೩ ವರ್ಷಗಳು ಕಳೆದರೂ ನಮ್ಮ ಕರ್ನಾಟಕ, ಕನ್ನಡ, ಕನ್ನಡಿಗ ನಿರೀಕ್ಷಿತ ಮಟ್ಟದಲ್ಲಿ ಸುದಾರಣೆ ಕಾಣದೇ ಇರೋದೇ ಇವತ್ತಿನ ಈ ಯೋಚನೆಗೆ ಪ್ರೇರಣೆ.......
ಸ್ವಲ್ಪ ಹಿಂದೆ ಹೋಗಿ ನೋಡಿದರೆ ನಮಗೆ ಗೊತ್ತಾಗುವ ಸಂಗತಿ ಏನೆಂದರೆ, ಕನ್ನಡ ಶಾಲೆಗಳಿಗಿಂತ ಬೇರೆ ಭಾಷೆಯ ಶಾಲೆಗಳೆ ಹೆಚ್ಚಾಗಿದ್ದ ಕೆಲವು ಪ್ರದೇಶಗಳ ಇಂದಿನ ಸ್ವಲ್ಪ ಸುಧಾರಿತ ಬೆಳವಣಿಗೆಗಳಿಗೆ ನಮ್ಮ ಹಿರಿಯರು ಪಟ್ಟ ಶ್ರಮವೇ ಕಾರಣ. ಬಹಳಷ್ಟು ಮಹನೀಯರ ಶ್ರಮ, ಹೋರಾಟದ ಫಲವಾಗಿಯೇ ಇಂದು ನಾವು ಕರ್ನಾಟಕವೆಂಬ ಸುಂದರ ನಾಡಿನಲ್ಲಿ ಜೀವನ ಮಾಡುತ್ತಿರುವುದು.
ಈ ನಾಡಿಗೆ ಈಗ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಏಕೆ........? ಎಂಬ ಪ್ರಶ್ನೆ ನಮ್ಮ ಮುಂದೆ ಎದುರಾದಾಗ ಕೆಲವು ಹಿಂದೆ ನಡೆದ ಘಟನೆಗಳನ್ನು ನೆನಪಿಸಿಕೊಳ್ಳುವುದು ಇಲ್ಲಿ ಸೂಕ್ತವೆನಿಸುತ್ತದೆ.

ಬೆಳಗಾವಿ ಗಡಿ ವಿವಾದ: ಈ ಸಮಸ್ಯೆ ಇಂದು ನಿನ್ನೆಯದಲ್ಲ. ಇದು ಏಕೀಕರಣವಾದ ಕಾಲದಿಂದಲೂ ಸಣ್ಣ ಪುಟ್ಟ ಹೇಳಿಕೆಗಳ ಮುಖಾಂತರ ಪ್ರಾರಂಭವಾದ ವಿವಾದ, ಒಂದು ಸಂಘಟನೆಯಾಗಿ ನಮ್ಮ ರಾಜ್ಯದಲ್ಲೆ ಇದ್ದು ನಮ್ಮ ಪ್ರದೇಶವನ್ನು ತಮ್ಮ ಪ್ರದೇಶವೆಂದು ಸಾರಿ ಸರಕಾರಿ ಮಟ್ಟದಲ್ಲಿ ನಿರ್ಣಯ ಕೈಗೊಳ್ಳುವಷ್ಟು ಮುಂದುವರೆದದ್ದು ನಿಜಕ್ಕೂ ಕನ್ನಡಿಗರೂ ತಲೆ ತಗ್ಗಿಸುವ ವಿಚಾರ ಅಂಥ ಪ್ರತಿಯೊಬ್ಬ ಸ್ವಾಭಿಮಾನಿ ಕನ್ನಡಿಗರಿಗೆ ಅನ್ನಿಸದೇ ಇರದು.
ಈ ವಿವಾದ ಇಷ್ಟು ವರ್ಷ ಜೀವಂತವಾಗಿ ಇರಲು ನಮ್ಮನ್ನಾಳಿದ ರಾಷ್ಟ್ರೀಯ ಪಕ್ಷಗಳೇ ಕಾರಣ. ಒಂದು ಕನ್ನಡ ಪರ ಸಂಘಟನೆಯ ಶ್ರಮದ ಫಲವಾಗಿ ಇಂದು ಬೆಳಗಾವಿಯಲ್ಲಿ ಕನ್ನಡದ ಮೇಯರ್ ಆಯ್ಕೆಯಾಗಿದ್ದಾರೆ. ಕನ್ನಡದ ಕಂಪು ವಿಸ್ತಾರವಾಗತೊಡಗಿದೆ. ಸರಕಾರ ಮಾಡಬೇಕಾದ ಕೆಲಸವನ್ನು ಮಾಡಿದ್ದು ಕನ್ನಡ ಪರ ಸಂಘಟನೆ. ನಮ್ಮಲ್ಲೂ ಒಂದು ಪ್ರಾದೇಶಿಕ ಪಕ್ಷ ಮೊದಲೇ ಇದ್ದಿದ್ದರೆ ಬಹುಶ್ಃ ಇವತ್ತಿನ ಪತ್ರಿಕೆಗಳಲ್ಲಿ ಎಮ್ ಇ ಎಸ್ ಎಂಬ ಸಂಘಟನೆ ಬೆಳಗಾವಿಯಲ್ಲಿ ಮಾಡಿದ ಪುಂಡಾಟಿಕೆಯ ಸುದ್ದಿ ನಾವು ಕೇಳುತ್ತಿರಲಿಲ್ಲ.

ಹೊಗೆನಕ್ಕಲ್ ವಿವಾದ: ಈಗಲೂ ಹಳ್ಳಿಗಳಲ್ಲಿ ಒಂದೊಂದು ಅಡಿಗಳಷ್ಟು ಜಾಗದ ಸಲುವಾಗಿ ಜಗಳಗಳಾಗುವುದನ್ನು ನಾವು ಕಂಡಿದ್ದೇವೆ. ಇನ್ನು ಹೊಗೆನಕ್ಕಲ್ ಎಂಬ ನೂರಾರು ಎಕರೆ ಅರಣ್ಯ ಪ್ರದೇಶದ ಜಾಗವನ್ನು ನೆರೆ ರಾಜ್ಯದವರು ನೀರಾವರಿ ಯೋಜನೆಯ ನೆಪದಲ್ಲಿ ಕಬಳಿಸುತ್ತಿದ್ದರೆ, ಸ್ವಾಭಿಮಾನಿಯಾದ ಯಾವೊಬ್ಬ ಕನ್ನಡಿಗನು ಸುಮ್ಮನಿರಲು ಸಾದ್ಯವೇ..? ಇಲ್ಲವೇ ಇಲ್ಲ. ಆದರೆ ಇಲ್ಲ ಅನ್ನೋದು ಏಕೀಕರಣವಾದ ಕಾಲದಿಂದಲೂ ಆಳುತ್ತ ಬಂದಿರುವ ನಮ್ಮ ರಾಷ್ಟ್ರೀಯ ಪಕ್ಷಗಳ ಜನಪ್ರತಿನಿಧಿಗಳಿಗೆ ಇಲ್ಲಿಯವರೆಗೂ ಗೊತ್ತಾಗದೇ ಇರುವುದು ನಮ್ಮ ದುರಾದ್ರಷ್ಟ. ಈ ವಿವಾದಕ್ಕೆ ಗಾಯದ ಮೇಲೆ ಬರೆ ಎಳೆದ ಹಾಗೆ, ಕೇಂದ್ರ ಸರಕಾರ ಇದಕ್ಕೆ ಸಮ್ಮತಿಸಿ ಯೋಜನೆಗೆ ಜಪಾನನಿಂದ ೧೩೩೪ ಕೋಟಿ ರೂ. ನೆರವು ಪಡೆಯಲು ತಮಿಳನಾಡಿಗೆ ಒಪ್ಪಿಗೆ ಸೂಚಿಸಿತು. ಇದಕ್ಕೆ ನಮ್ಮ ರಾಷ್ಟ್ರೀಯ ಪಕ್ಷದ ಜನಪ್ರಿತಿನಿಧಿಗಳು ತಾನೆ ಏನು ಮಾಡಿಯಾರು..? ಅವರು ಈ ಕೆಲಸಕ್ಕೆ ಕೈ ಹಾಕಿದರೆ ಅವರ ಕುರ್ಚಿ ಕಾಪಾಡುವವರು ಯಾರು...? ಇಲ್ಲಿ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶ ಅಂದರೆ ತಮಿಳುನಾಡು ಸರಕಾರ ಕಬಳಿಸಲು ಕೆಂದ್ರ ಸರಕಾರದ ಅನುಮತಿ ಪಡೆಯುವಷ್ಟು ಮುಂದುವರೆಯಲು ಕಾರಣ ಅಲ್ಲಿರುವ ಪ್ರಾದೇಶಿಕ ಪಕ್ಷವೇ ಹೊರತು ಮತ್ತೇನಲ್ಲ. ನಮ್ಮ ಪ್ರಾದೇಶಿಕ ಪಕ್ಷ ಎಷ್ಟರ ಮಟ್ಟಿಗೆ ಪ್ರಭಾವ ಬೀರಿತು ಎಂದು ಒತ್ತಿ ಹೇಳುವ ಅಗತ್ಯ ಇಲ್ಲ. ಒಂದು ಕನ್ನಡ ಪರ ಸಂಘಟನೆ ಆ ಸಂಧರ್ಭದಲ್ಲಿ ಪ್ರಾದೇಶಿಕ ಪಕ್ಷದ ಜವಾಬ್ದಾರಿ ವಹಿಸಿಕೊಂಡಿದ್ದು ಮಾತ್ರ ನಿಜಕ್ಕೂ ಪ್ರಶಂಸನಿಯ.

ಪ್ರತಿಮೆ ಅನಾವರಣ ವಿವಾದ: ತಿರುವಳ್ಳುವರ್ ಒಬ್ಬ ಶ್ರೇಷ್ಟ ಕವಿ ಇರಬಹುದು. ಆದರೆ ಇಲ್ಲಿ ಕೆಲವು ಸಂಗತಿಗಳನ್ನು ನಾವು ಮೆಲುಕು ಹಾಕೋದು ಸೂಕ್ತ. -ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಲು ಭರವಸೆ ನೀಡುವ, ಅದಕ್ಕೆ ಪ್ರಯತ್ನಿಸುವ ಸದಸ್ಯನಿಗೆ ಮಾತ್ರ ಚುನಾವಣೆಗಳಲ್ಲಿ ಮತ ಹಾಕಿ ಎಂದು ಇಲ್ಲಿನ ತಮಿಳು ಸಮುದಾಯಕ್ಕೆ ಆದೇಶ ಹೊರಡಿಸಿದ್ದು, -ವೀರಪ್ಪನ್ ಒತ್ತಾಸೆಯಿಂದ ರಾಜಕುಮಾರ್ ಬಿಡುಗಡೆ ಆಗಬೇಕಾದ್ರೆ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಆಗಬೇಕು ಎಂಬ ಹಠ ಮಾಡಿದ್ದು. -ಇದರ ಜತೆಗೆ ಇತ್ತೀಚಿನ ದಿನಗಳಲ್ಲಿ ಕನ್ನಡಿಗರನ್ನು ಒದೆಯಬೇಕು ಎಂದು ಹೇಳಿಕೆ ನೀಡಿದ್ದು, -ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗದಂತೆ ತೊಡರುಗಾಲು ಹಾಕಿರುವುದು, -ತಮ್ಮ ರಾಜ್ಯದ ಯೋಜನೆಗಳ ಅನುಷ್ಠಾನಕ್ಕಾಗಿ ಕರ್ನಾಟಕದ ಹಿತಾಸಕ್ತಿಯನ್ನು ಬಲಿಗೊಡುತ್ತಿರುವುದು. -ತಮಿಳರು ನಾವು ಬೆಂಗಳೂರಿನವರು ಆದರೆ ಕರ್ನಾಟಕಕ್ಕೆ ಸೇರಿದವರಲ್ಲ ಎಂಬ ಭಾವನೆ ಇಟ್ಟುಕೊಂಡಿರುವುದು, -ಇಲ್ಲಿ ನೆಲೆಸಿರುವ ತಮಿಳರ ಉದ್ದೇಶ ಬೆಂಗಳೂರನ್ನು ಕೇಂದ್ರಾಡಳಿತಕ್ಕೆ ಒಳಪಡಿಸುವುದಾಗಿರುವುದು. ಈ ಎಲ್ಲ ಸಂಗತಿಗಳನ್ನು ಬಲ್ಲವರು ಯಾರೇ ಆದರೂ ಪ್ರತಿಮೆ ಅನಾವರಣಕ್ಕೆ ಮುಂದಾಗುವುದಿಲ್ಲ. ಇನ್ನು ನಮ್ಮ ರಾಜ್ಯದಲ್ಲಿರುವ ಎಷ್ಟು ಶ್ರೇಷ್ಟ ಕವಿಗಳ ಪ್ರತಿಮೆ ನಮ್ಮ ರಾಜ್ಯದಲ್ಲಿವೆ. ಎಷ್ಟು ಜನ ಕವಿಗಳಿಗೆ ಅವರಿಗೆ ಸಿಗಬೇಕಾದ ಗೌರವ ಸಿಕ್ಕಿದೆ ಸ್ವಲ್ಪ ಯೋಚಿಸಬೇಕಾಗಿದೆ. ಹೀಗಿದ್ದಾಗ ಸೌಹಾರ್ಧದ ನೆಪದಲ್ಲಿ ಒಂದು ರೀತಿಯ ತಮಿಳರ ಸಂಕೇತವಾದ ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಎಷ್ಟು ಸಮಂಜಸ...? ಆದರೆ ನಮ್ಮ ರಾಷ್ಟ್ರೀಯ ಪಕ್ಷದ ಜನಪ್ರತಿನಿಧಿಗಳು ಮಾಡಿದ್ದೇನು...? ಬೆಂಗಳೂರು ಮಾತ್ರವಲ್ಲದೆ ನಮ್ಮ ಸಾಂಸ್ಕ್ರತಿಕ ನಗರ ಮೈಸೂರಿನಲ್ಲಿ ಕೂಡ ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಲು ಮುಂದಾಗಿದ್ದು ನಾವು ಮರೆಯುವಂತಿಲ್ಲ. ನಮ್ಮ ರಾಜ್ಯದ ಪ್ರಾದೇಶಿಕ ಪಕ್ಷ ಅನ್ನಿಸಿಕೊಂಡಿರುವ ಜೆ ಡಿ ಎಸ್ ಕೂಡ ಇದನ್ನು ಬೆಂಬಲಿಸಿದ್ದು ಕಂಡಾಗ ಅದನ್ನು ಹೇಗೆ ನಾವು ನಮ್ಮ ಪ್ರಾದೇಶಿಕ ಪಕ್ಷ ಅಂಥ ಒಪ್ಪುವುದು....? ಇಲ್ಲಿ ಮತ್ತೆ ಒಂದು ಸಮರ್ಥ ಪ್ರಾದೇಶಿಕ ಪಕ್ಷದ ಜವಾಬ್ದಾರಿ ಹೊತ್ತಿದ್ದು ನಮ್ಮ ಕನ್ನಡ ಪರ ಸಂಘಟನೆ........

ಮೇಲಿನವುಗಳು ಕೇವಲ ಉದಾಹರಣೆಗಳು. ಕಾವೇರಿ ವಿವಾದ, ರೇಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ತಾರತಮ್ಯ, ಕನ್ನಡ ಅನುಷ್ಟಾನ ನಿರ್ಲಕ್ಷ್ ಈ ತರಹದ ಅನೇಕ, ನಮ್ಮ ನಾಡು, ನುಡಿ, ನೆಲ, ಜಲಗಳಿಗೆ ಹಾನಿಯುಂಟು ಮಾಡುವ ಅನೇಕ ಘಟನೆಗಳು ನಡೆದಿವೆ. ಆ ಎಲ್ಲ ಸಂದಭಗಳಲ್ಲಿ ನಮ್ಮ ರಾಷ್ಟ್ರೀಯ ಪಕ್ಷದ ಜನಪ್ರತಿನಿಧಿಗಳು, ನಮ್ಮ ಪ್ರಾದೇಶಿಕ ಪಕ್ಷದ ಜನಪ್ರತಿನಿಧಿಗಳು ಸಮಸ್ಯೆಗಳನ್ನು ಬಗೆ ಹರಿಸುವಲ್ಲಿ, ಕನ್ನಡ, ಕರ್ನಾಟಕ ಮತ್ತು ಕನ್ನಡಿಗರನ್ನು ಕಾಪಾಡುವಲ್ಲಿ ವಿಫಲರಾಗಿರುವುದು ಮೇಲ್ನೋಟಕ್ಕೆ ಎದ್ದು ಕಾಣುವ ಸಂಗತಿ.
ಮತ್ತು ಈ ಎಲ್ಲ ಸಂಧಭಗಳಲ್ಲಿ ಕನ್ನಡದ, ಕನ್ನಡಿಗರ, ಕರ್ನಾಟಕದ ಪರವಾಗಿ ನಿಂತು ಒಂದು ಪ್ರಾದೇಶಿಕ ಪಕ್ಶ ಮಾಡಬೇಕಾದ ಕೆಲಸ ಮಾಡಿದ್ದು, ಒಂದು ಸಂಘಟನೆ. “ಆ ಸಂಘಟನೆ ಈಗ ನಮ್ಮ ರಾಜ್ಯದ ರಾಜಕೀಯ ಪ್ರಾದೇಶಿಕ ಪಕ್ಷವಾಗಿ ಮಾರ್ಪಾಡಾಗಬೇಕಾಗಿರುವುದು ಇಂದಿನ ಅಗತ್ಯತೆ ಮತ್ತು ನಮ್ಮ ಆಶಯ”.