Wednesday 19 September 2012

ಕನ್ನಡವಿಲ್ಲದ ಕರ್ನಾಟಕ ಸರಕಾರದ ಮಿಂಬಲೆಗಳು:


ಆಡಳಿತದಲ್ಲಿ ಕನ್ನಡವನ್ನು ಅನುಶ್ಟಾನಗೊಳಿಸಲು ನಾವು ಬದ್ದರಾಗಿದ್ದೇವೆ ಎಂಬ ಸರಕಾರದ ಮಾತು ಸಂದರ್ಬಕ್ಕೆ ತಕ್ಕಂತೆ ಅರ್ಚಕರು ಹೇಳುವ ಮಂತ್ರದ ಥರ ಆಗೋಗಿದೆ. ತಾಯ್ನುಡಿಯಲ್ಲೇ ಎಲ್ಲ ಸೇವೆಯೂ ಸಿಕ್ಕಾಗ ಆಗುವಶ್ಟು ಅನುಕೂಲ, ಬೇರೆಲ್ಲೂ ಆಗಲ್ಲ. ಇದು ಅಸಾಮಾನ್ಯನಿಗೂ ಅನ್ವಯಿಸುವ ಸಾಮಾನ್ಯ ವಿಶಯ. ಇಂತ ವಿಶಯವನ್ನು ಕರ್ನಾಟಕದ ಗ್ರಾಹಕ ವ್ಯವಸ್ಥೆಯಲ್ಲಿ ಕನ್ನಡಕ್ಕೆ ಅಗ್ರಸ್ಥಾನ ಕೊಡಬೇಕಾದ ಸರಕಾರವೇ ನಿರ್ಲಕ್ಶಿಸಿರುವುದರಿಂದ ಯಾರಿಗೆಳೋಣ ನಮ್ ಪ್ರಾಬ್ಲಮ್ಮು ಎನ್ನುವಂತಾಗಿದೆ ಕನ್ನಡ ಗ್ರಾಹಕನ ಸ್ಥಿತಿ. ಕರ್ನಾಟಕ ಸರಕಾರ ಕನ್ನಡ ಅನುಶ್ಟಾನ ಅಂದ್ರೆ ಬರೀ ಉತ್ಸವ, ತೇರು, ಸಮ್ಮೇಳನ ಅಶ್ಟೇ ಅಂತ ತಿಳ್ಕೊಂಡಿದೆಯೇ ಎಂಬ ಅನುಮಾನ ಮೂಡುತ್ತೆ.!

ಮಿಂಬಲೆಗಳು ಹೇಗಿರ್ಬೇಕಿತ್ತು ಮತ್ತು ಹೇಗಿವೆ.!
ಕರ್ನಾಟಕ ಸರಕಾರದ ಅದೀಕ್ರುತ ತಾಣದಲ್ಲೇ ಕನ್ನಡದಲ್ಲಿ ಮಾಹಿತಿ ಸಿಗಲ್ಲ. ಇನ್ನು ಉಳಿದ ಇಲಾಕೆಗಳ ದುಸ್ಥಿತಿ ಹೇಗಿರ್ಬೇಡ ನೀವೇ ಊಹಿಸಿಕೊಳ್ಳಿ. ಆದರೂ ಕೆಲವುಗಳ ಒಳಹೊಕ್ಕು ನೋಡುವ ಪ್ರಯತ್ನ ಮಾಡೋಣ ಬನ್ನಿ.  ಗುಣಮಟ್ಟದ ಸೇವೆಗಾಗಿ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಸಾರಿಗೆ ಇಲಾಕೆಯ ಕೆ.ಎಸ್.ಆರ್.ಟಿ.ಸಿ ಮಿಂಬಲೆಯಲ್ಲಿ ಅನೇಕ ಗ್ರಾಹಕರ ಒತ್ತಾಯದ ಪರಿಣಾಮವಾಗಿ ಇತ್ತೀಚಿಗೆ ಕನ್ನಡವನ್ನು ಅಳವಡಿಸಿದರೂ ಅದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಯಾಕಂದ್ರೆ, ಕನ್ನಡದ ಮೂಲಕ ಸೀಟನ್ನು ಬುಕ್ ಮಾಡೋದು ಇರಲಿ, ನೋಡೊದಕ್ಕೂ ಸಾದ್ಯ ಆಗಲ್ಲ. ಅಂತಹ ಗುಣಮಟ್ಟದ ಸೇವೆಯನ್ನು ನಮ್ಮ ಸಾರಿಗೆ ಇಲಾಖೆ ಕನ್ನಡ ಗ್ರಾಹಕರಿಗೆ ಒದಗಿಸುತ್ತಿದೆ. ಇನ್ನು, ಕರ್ನಾಟಕದ ಚಿತ್ರಣವನ್ನು ತೆರೆದಿಡುವ ಪ್ರವಾಸೋದ್ಯಮ ಇಲಾಖೆ ಮಿಂಬಲೆಯಲ್ಲಿ ಇಂಗ್ಲೀಶ್, ಸ್ಪಾನಿಶ್, ಜಪನೀಸ್, ಜರ್ಮನ್ ಮತ್ತು ಫ್ರೆಂಚ್ ನುಡಿಗಳನ್ನು ಕಾಣಬಹುದು. ಆದರೆ ಸ್ಥಳೀಯ ನುಡಿ ಕನ್ನಡ ಇಲ್ಲ. ಸ್ಪೇನ್, ಜರ್ಮನಿ, ಫ್ರಾನ್ಸ್, ಜಪಾನಿನ ದೇಶದವರು ಕರ್ನಾಟಕದ ವಿಶಯವನ್ನು ತಮ್ಮ ನುಡಿಯಲ್ಲೆ ನೋಡಿ ತಿಳಿದುಕೊಳ್ಳಬಹುದು, ಆದರೆ ಸ್ಥಳೀಯರಿಗೆ ಮಾತ್ರ ಭಾಗ್ಯ ಇಲ್ಲ. ಇನ್ನು, ಕನ್ನಡದಲ್ಲಿ ಮಾಹಿತಿ ಒದಗಿಸಲಾಗುವುದು ಎಂದು ಇತ್ತೀಚಿಗೆ ಹೇಳಿಕೊಂಡಿದ್ದ ಬಿ.ಎಮ್.ಟಿ.ಎಫ್ ಸಂಸ್ಥೆಯಲ್ಲೂ ಪರಿಪೂರ್ಣ ಕನ್ನಡದ ಮಿಂಬಲೆ ಇಲ್ಲ. ಹೀಗೆ ಒಂದೊಂದಾಗಿ ಕರ್ನಾಟಕ ಸರಕಾರದ ಮಿಂಬಲೆಗಳನ್ನು ನೋಡುತ್ತ ಹೋದರೆ ಇಲ್ಲಗಳ ದೊಡ್ಡ ಪಟ್ಟಿಯೇ ಕಾಣುತ್ತದೆ. ಒಂದು ಅಂದಾಜಿನ ಪ್ರಕಾರ, ಕರ್ನಾಟಕ ಸರಕಾರದ ಸುಮಾರು ೧೨೦ ವೆಬ್ ತಾಣಗಳಲ್ಲಿ ಕನ್ನಡದಲ್ಲಿ ಮಾಹಿತಿ ಕೊಡುವ ಮಿಂಬಲೆಗಳ ಸಂಕ್ಯೆ ಒಂದಂಕಿ ದಾಟುವುದಿಲ್ಲ. ಆದರೆ, ಜಗತ್ತಿನ ಮುಂದುವರೆದ ದೇಶಗಳಲ್ಲಿ ಹೇಗಿದೆ ಅಂತ ಇಲಾಕಾವಾರು ವ್ಯತ್ಯಾಸ ನೋಡಿದ್ರೆ, ಚುಟುಕು ಮಾಹಿತಿ ಹೊತ್ತಿಗೆಯಿಂದ ಹಿಡಿದು ಮಿಂಬಲೆಯವರೆಗೆ ಎಲ್ಲವೂ ಅವರಿಗೆ ತಾವು ದಿನನಿತ್ಯ ಮಾತನಾಡುವ, ಕೇಳುವ, ಓದುವ ನುಡಿಯಲ್ಲೇ ಸಿಗುತ್ತೆ. ಎತ್ತುಗೆಗೆ (ಉದಾಹರಣೆಗೆ) ಫ್ರಾನ್ಸ್, ಸ್ಪೇನ್, ಜೆರ್ಮನಿ ಗಳ ಸಾರಿಗೆ ಸಂಸ್ಥೆ ಮಿಂಬಲೆಗಳನ್ನು ನೋಡಿದಾಗ ಅಲ್ಲಿನ ಸ್ಥಳೀಯ ನುಡಿಗೆ ಅಗ್ರಸ್ಥಾನ ಕೊಟ್ಟಿದ್ದು ಕಾಣುತ್ತೆ. ಅದೇ ರೀತಿ ಫ್ರಾನ್ಸ್,  ಸ್ಪೇನ್, ಜೆರ್ಮನಿ ಗಳ ಪ್ರವಾಸೋದ್ಯಮ ಇಲಾಖೆಗಳ ಮಿಂಬಲೆಯಲ್ಲೂ ಅಲ್ಲಿನ ನುಡಿಯಲ್ಲೇ ಮಾಹಿತಿ ಪಡೆಯಲು ಅವಕಾಶ ಕೊಟ್ಟಿರುವುದನ್ನು ಕಾಣಬಹುದು. ಅಶ್ಟು ದೂರ ಹೋಗೋದು ಬೇಡ ಅಂದ್ರೆ, ಪಕ್ಕದ ರಾಜ್ಯಗಳಾದ ತಮಿಳುನಾಡು ಕೇರಳದಲ್ಲಿ ನೋಡಿದ್ರೆ ಅಲ್ಲಿಯೂ ಅಲ್ಲಿನ ನುಡಿಯಲ್ಲಿ ಮಾಹಿತಿ ದೊರಕುವುದನ್ನು ಕಾಣುತ್ತೇವೆ. ದೂರದ ಅಮೇರಿಕಾದ ಪ್ರಮುಖ ತನಿಕಾ ಸಂಸ್ಥೆ ಎಫ್.ಬಿ. ಮಿಂಬಲೆಯಲ್ಲಿ ಕನ್ನಡದ ಆಯ್ಕೆ ಇದೆ ಎನ್ನುವುದು ಕರ್ನಾಟಕ ಸರಕಾರದ ಕನ್ನಡ ನಿರ್ಲಕ್ಶತನಕ್ಕೆ ಚಾಟಿಏಟಿನಂತಿದೆ.


ನಮ್ನುಡಿಯಲ್ಲಿ ಅಂತರ್ಜಾಲ.!
ಅಂತರ್ಜಾಲ ಎಂದ ತಕ್ಶಣ ಇಂಗ್ಲೀಶ್ ಆಯ್ಕೆಯ ಕಡೆಗೆ ಬೆರಳು ತೋರಿಸುವಂತಾಗಿದೆ. ಅಶ್ಟಕ್ಕೂ ನಮ್ಮ ದೇಶದಲ್ಲಿರುವ ಇಂಗ್ಲೀಶ ಬಲ್ಲವರ ಸಂಕ್ಯೆ ಎಶ್ಟಿದೆ ಎಂಬುದನ್ನು ಇಲ್ಲಿ ನೋಡಿದ್ರೆ, ಸರಕಾರದ ಮಾಹಿತಿ ಎಶ್ಟು ಜನರಿಗೆ ತಲುಪುತ್ತಿದೆ ಎಂಬುದು ಅರಿವಾಗುತ್ತದೆ. ಇಂಗ್ಲೀಶ ಬಲ್ಲವರಿಗೆ ಮಾತ್ರ ನಮ್ಮ ಸರಕಾರ ಮಿಂಬಲೆ ತಯಾರು ಮಾಡಿರೋದಾ ಹಾಗಾದ್ರೆ. ಕರ್ನಾಟಕ ಸರಕಾರವೇ ಕನ್ನಡ ಗ್ರಾಹಕರನ್ನು ಪರಿಗಣಿಸಲಿಲ್ಲವಾದರೆ, ಕರ್ನಾಟಕದಲ್ಲಿರುವ ಕಾಸಗಿ ಉದ್ಯಮಗಳು, ಕೇಂದ್ರ ಸರಕಾರಿ ಕಚೇರಿಗಳು, ಎಮ್.ಎನ್.ಸಿ ಕಂಪನಿಗಳು ಕನ್ನಡ ಗ್ರಾಹಕನಿಗೆ ಹೇಗೆ ನ್ಯಾಯ ಒದಗಿಸುತ್ತವೆಯೇ.? ಸರಕಾರದ ಪ್ರಮುಕ ಇಲಾಕೆಯೊಂದರಲ್ಲಿ ಗ್ರಾಹಕರು ಕನ್ನಡದ ಆಯ್ಕೆ ಕೇಳಿದ್ರೆ, ಸರಕಾರದ ಅದೀಕ್ರುತ ತಾಣದಲ್ಲೇ ಕನ್ನಡದ ಆಯ್ಕೆ ಇಲ್ಲ ಎಂಬ ಉದಾಹರಣೆಯನ್ನು ಅಲ್ಲಿನ ಅದಿಕಾರಿಗಳು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.  ಕನ್ನಡದ ಗ್ರಾಹಕ ಸೇವೆಗೆ ಕರ್ನಾಟಕ ಸರಕಾರ ಉದಾಹರಣೆ ಆಗಬೇಕೇ ಹೊರತು ಕನ್ನಡ ನಿರ್ಲಕ್ಶತನಕ್ಕೆ ಇತರರಿಗೆ ಉದಾರಹರಣೆ ಆಗಬಾರದಲ್ಲವೇ.! ಅಂತರ್ಜಾಲದಲ್ಲಿ ಜನರ ಆಡುನುಡಿಗೆ ಅಥವಾ ಅಲ್ಲಿನ ಸ್ಥಳೀಯ ನುಡಿಗೆ ಸ್ಥಾನ ಕೊಡದೇ, ಅಂತರ್ಜಾಲ ನೋಡಬೇಕೆಂದ್ರೆ ಇಂಗ್ಲೀಶ ಗೊತ್ತಿರಲೇ ಬೇಕು ಅನ್ನುವ ಮನಸ್ಥಿತಿಯನ್ನು ನಿರ್ಮಾಣ ಮಾಡಿರುವುದರಿಂದಲೇ ಇವತ್ತು ಬಾರತದಲ್ಲಿ ಅಂತರ್ಜಾಲ ಉಪಯೋಗಿಸುವವರ ಪ್ರತಿಶತ ಸಂಕ್ಯೆ ಎರಡಂಕಿ ದಾಟಿಲ್ಲ ಅಕ್ಷರಸ್ಥರ ಮತ್ತು ಅಂತರ್ಜಾಲ ಉಪಯೋಗಿಸುವವರ ಸಂಕೆಯ ನಡುವೆ ಇರುವ ಅಜಗಜಾಂತರ ವ್ಯತ್ಯಾಸಕ್ಕೂ ಇದೇ ಕಾರಣವೆನ್ನಬಹುದು.


ಅಂತರ್ಜಾಲದಲ್ಲಿ ಸ್ಥಳೀಯ ಬಾಶೆಗಳ ಪ್ರಾಮುಕ್ಯತೆಯನ್ನು ಆದರಿಸಿಯೇ ಎಲ್ಲ ಪ್ರಮುಕ ಸಂಸ್ಥೆಗಳು ಕನ್ನಡದಲ್ಲಿ ತಮ್ಮ ಸೇವೆಯನ್ನು ನೀಡಲು ಶುರು ಮಾಡಿವೆ. ಮುಂದಿನ ದಿನದ ಮಿಂಬಲೆಗಳಲ್ಲಿ ಕನ್ನಡವೇ ಪ್ರಮುಕ ಪಾತ್ರ ವಹಿಸಲಿದೆ ಎಂಬುದು ಇದರಿಂದ ಸ್ಪಶ್ಟವಾಗುತ್ತದೆ. ಆದಕಾರಣ, ಕರ್ನಾಟಕ ಸರಕಾರದ ಮಿಂಬಲೆಗಳು ಇಂತಹ ಒಂದು ಕನ್ನಡದ ವ್ಯವಸ್ಥೆಗೆ ಮುನ್ನುಡಿ ಆಗಲಿ. ಇದನ್ನು ಆಗಿಸುವುದಕ್ಕೆ ಗ್ರಾಹಕರಾದ ನಮ್ಮ ಪಾತ್ರವೂ ದೊಡ್ಡದಾಗಿದ್ದು, ಸರಕಾರದ ಮಿಂಬಲೆಯಲ್ಲಿ ಕನ್ನಡ  ಕಾಣದಿದ್ದಾಗ ಅದನ್ನು ಪ್ರಶ್ನಿಸಿ ಕನ್ನಡದ ಆಯ್ಕೆಯನ್ನು ಆಗ್ರಹಿಸುವ ಮೂಲಕ ಒತ್ತಾಯಿಸೋಣ.