Wednesday 7 July 2010

FYKI ಇದು ಮುಖಭಂಗ ಅಲ್ಲ, ಕಪಾಳಮೋಕ್ಷ......!





ಬೆಳಗಾವಿ, ಕಲ್ಬುರ್ಗಿ ಸೇರಿದಂತೆ ಮತ್ತಿತರ ಗಡಿ ಭಾಗಗಳು ಮಹಾರಾಷ್ಟ್ರಕ್ಕೆ ಸೇರಬೇಕೆಂಬ ಎಮ್.ಇ.ಎಸ್ ನವರ ಮೊಂಡುವಾದವನ್ನು ತಿರಸ್ಕರಿಸಿ, ಅಲ್ಲಿ ಮರಾಠಿ ಭಾಷಿಕರಿದ್ದರೂ ಅವುಗಳು ಕರ್ನಾಟಕಕ್ಕೆ ಸೇರಬೇಕು, ಅವುಗಳು ಕರ್ನಾಟಕದ ಅವಿಭಾಜ್ಯ ಅಂಗ ಎಂದು ಕೇಂದ್ರ ಸರಕಾರ ಸುಪ್ರೀಮ್ ಕೋರ್ಟಿಗೆ ಪ್ರಮಾಣ ಪತ್ರ (ಅಫಿಡೆವಿಟ್) ಸಲ್ಲಿಸಿದೆ ಎಂಬ ಸುದ್ದಿ ಬೆಳಿಗ್ಗೆ ಬೆಳಿಗ್ಗೆನೆ ಜೇನುತುಪ್ಪದ ರುಚಿ ತೋರಿಸ್ತು ಗುರು. ಇದು ನಿಜಕ್ಕೂ ತುಂಬಾ ಸಂತಸದ ಸುದ್ದಿ. ಈ ಹಿನ್ನೆಲೆಯಲ್ಲಿ ಇವತ್ತು ಇವರನ್ನು ನೆನೆಯದಿದ್ದರೆ, ಖಂಡಿತ ಸಂಭ್ರಮಕ್ಕೆ ಬೆಲೆ ಇರುವುದಿಲ್ಲ. ಬೆಳಗಾವಿಯನ್ನೇ ಕೈ ಚೆಲ್ಲಿದ್ದ ಸರಕಾರಕ್ಕೆ, ಸೆಡ್ಡು ಹೊಡೆದು ಅಲ್ಲಿ ನಡೆಯುತ್ತಿದ್ದ ಒಣ ವಿಷ ಬೀಜ ಬಿತ್ತುವ ಎಮ್.ಇ.ಎಸ್ ನವರ ಕೆಲಸಗಳಿಗೆ ಕಡಿವಾಣ ಹಾಕಿ, ಸರಕಾರ ನಿರ್ವಹಿಸಬೇಕಾದ ಜವಾಬ್ದಾರಿಯನ್ನು ನಿರ್ವಹಿಸಿದ ನಮ್ಮ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರಿಗೆ ಅಭಿನಂಧನೆಗಳು. ಅದರಂತೆಯೇ ಎಮ್.ಇ.ಎಸ್ ನವರ ಒಣ ಪುಂಡಾಟವನ್ನು ಮನಗಂಡು ಅವರ ದುರಾಲೋಚನೆಗೆ ತಕ್ಕ ಉತ್ತರ ಕೊಡುವಲ್ಲಿ ಹೆಜ್ಜೆ ಇಟ್ಟಿರುವ ಕೇಂದ್ರ ಸರಕಾರಕ್ಕೂ, ಕರ್ನಾಟಕದ ಪರವಾಗಿ ವಾದ ಮಂಡಿಸಿರಬಹುದಾದ ನಮ್ಮ ಜನಪ್ರತಿನಿಧಿಗಳಿಗೂ, ಅಧಿಕಾರಿ ವರ್ಗಕ್ಕೂ ಕೃತಜ್ನತೆಗಳು.
ಬೆಳವಣಿಗೆಯಿಂದ ಎಮ್.ಇ.ಎಸ್ ನವರ ಪುಂಡಾಟಗಳಿಗೆ ಸಾಥ್ ನೀಡಿದ್ದ ಮಹಾರಾಷ್ಟ್ರ ಸರಕಾರಕ್ಕೆ ಮುಖಭಂಗವಾದರೆ, ಅಲ್ಲಿನ ಕೆಲವು ರಾಜಕೀಯ ಪಕ್ಷಗಳಿಗೆ ತಿಳಿಯಾಗಿದ್ದ ಕೆಸರಿನಲ್ಲಿ ಕಲ್ಲೆಸೆದು ಸಿಡಿಸಿಕೊಂಡ ಅನುಭವವಾದರೆ, ಎಮ್.ಇ.ಎಸ್ ಗೆ ಒಂದಲ್ಲ ಎರಡೂ ಕಡೆಗೆ ಕಪಾಳಮೋಕ್ಷವಾಗಿದೆ. ಇಲ್ಲಿ ಒಂದು ಅಂಶ ಸ್ಪಷ್ಟ, ನಿಜವಾಗಿಯೂ ಹೇಳಬೇಕೆಂದರೆ ಕರ್ನಾಟಕದ ಮರಾಠಿ ಭಾಷಿಕರಿಗೆ (ಬೆರಳೆಣಿಕೆಯಷ್ಟು ಪುಂಡರು ಬಿಟ್ಟರೆ) ಇದ್ಯಾವದೂ ಬೇಕಾಗಿಯೇ ಇಲ್ಲ. ಅವರು ಸಂತೃಪ್ತಿಯಿಂದ ಇದ್ದಾರೆ. ಆದರೂ ಎಮ್.ಇ.ಎಸ್ ನವರು ಅವರನ್ನು ಅನಗತ್ಯವಾಗಿ ಎಳೆದು ತಂದು ವಿವಾದ ಸೃಷ್ಟಿಸಿದಕ್ಕಾಗಿ ಅವರಿಂದಲೂ ಕಪಾಳಮೋಕ್ಷವಾಗಿದೆ.

ಉಪ್ಪು ತಿಂದವನು ನೀರು ಕುಡಿಲೇಬೇಕೊ ಇಲ್ವೊ ಗೊತ್ತಿಲ್ಲ, ಆದರೆ ವಿಷ ಬೀಜ ಬಿತ್ತಿದವನು ಕಹಿ ಹಣ್ಣನ್ನು ತಿನ್ನಲೇಬೇಕು ಅಲ್ವ.
ಒಟ್ಟಾರೆ ರಾಜ್ಯಕ್ಕೆ ಬಂಪರ್ ನ್ಯಾಯ ಸಿಗುವ ಲಕ್ಷಣ ಗೋಚರಿಸುತ್ತಿದೆ, ಅದಕ್ಕಿಂತ ಇನ್ನೇನ್ ಬೇಕ್ರಿ.
ಇದೇ ಖುಷಿಲಿ ಮಸ್ತ್ ಮಜಾ ಮಾಡಿ, ಚಮ್ಕಾಯ್ಸಿ ಚಿಂದಿ ಉಡಾಯ್ಸಿ............!!!