Sunday 23 October 2011

ನಮ್ಮ(?) ಮೆಟ್ರೊ ಮತ್ತು ಹುಳುಕು ಬಾಶಾ ನೀತಿ.!

ಬಹುದಿನಗಳಿಂದ ನಿರೀಕ್ಷೆಯಲ್ಲಿದ್ದ ಬೆಂಗಳೂರು ಮೆಟ್ರೊ ಸೇವೆ ಶುರು ಆಗಿದೆ. ಮೆಟ್ರೊದಲ್ಲಿನ ಮೊದಲ ಓಡಾಟ ಹೊಸ ಅನುಭವ ನೀಡಿತು. ನಮ್ಮ ಮೆಟ್ರೊ ಸೇವೆಯನ್ನು ಅನುಭವಿಸಿದ ಮೇಲೆ ಇದೇ ಸಮಯದಲ್ಲಿ ಗಮನ ಸೆಳೆದಿದ್ದು ಎಂದರೆ ಅಲ್ಲಿ ಪಾಲಿಸಲಾದ ಬಾಶಾನೀತಿ. ಸಂವಿಧಾನದ ಮೂಲಕ ನಾವು ತಿಳಿದುಕೊಂಡಿದ್ದು ಏನು ಅಂದ್ರೆ, ಭಾರತದಲ್ಲಿ ಎಲ್ಲರೂ ಸಮಾನರು ಎಲ್ಲ ಬಾಶೆಗಳೂ ಸಮಾನ ಎಂದು. ಆದರೆ ಕರ್ನಾಟಕದಲ್ಲಿ ಅನುಶ್ಟಾನವಾಗುವ ಯೋಜನೆಗಳಲ್ಲಿ ಈ ನಮ್ಮ ತಿಳುವಳಿಕೆಯನ್ನು ಹುಸಿ ಮಾಡುವ ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ನಮ್ಮ ಮೆಟ್ರೊದಲ್ಲೂ ಇದನ್ನು ಕಂಡಿದ್ದು ಸುಳ್ಳಲ್ಲ. ಎಂದಿನಂತೆ ಕೇಂದ್ರ ಸರಕಾರ ಕರ್ನಾಟಕದ ಯೋಜನೆಗಳಿಗೆ ನಮ್ಮದೇ ತೆರಿಗೆ ಹಣವನ್ನು ಆರ್ಥಿಕ ಸಹಕಾರದ ಮೂಲಕ ನೀಡುವುದರ ಜೊತೆಗೆ ತನ್ನ ಹುಳುಕು ಬಾಶಾ ನೀತಿಯನ್ನು ನಮ್ಮ ಮೆಟ್ರೊ ಮೂಲಕ ಪ್ರದರ್ಶಿಸಿದೆ. ಬೆಂಗಳೂರಿಗರಿಗೆ ಮೀಸಲಾಗಿರುವ ಈ ಸೇವೆಯಲ್ಲಿ ವಿನಾಕಾರಣ ಎಲ್ಲೆಡೆ ಹಿಂದಿಯನ್ನು ಬಳಸಲಾಗಿದೆ. ಬೆಂಗಳೂರಿನಲ್ಲಿ ೧% ಕ್ಕಿಂತಲೂ ಕಡಿಮೆಯಿರುವ ಹಿಂದಿ ಬಲ್ಲವರಿಗೆ ತೊಂದರೆ ಆಗಬಾರದು ಎಂಬ ನಿಯಮ ಇಲ್ಲಿ ಪಾಲಿಸಲಾಗಿದೆ. ಬೆಂಗಳೂರಿನಲ್ಲಿರುವ ಹಿಂದಿ ಬಾಶಿಕರ ಸಂಖ್ಯೆಯಶ್ಟೆ ಹೆಚ್ಚು ಕಡಿಮೆ ದಿಲ್ಲಿಯಲ್ಲೂ ಕನ್ನಡ ಬಾಶಿಕರ ಸಂಖ್ಯೆಯಿದೆ. ಈ ಸಂಖ್ಯಾ ಆಧಾರದ ಮೇಲೆ ನೋಡುವುದಾದರೆ, ಬೆಂಗಳೂರಿನ ನಮ್ಮ ಮೆಟ್ರೊದಲ್ಲಿ ಹಿಂದಿಯಲ್ಲಿ ಸೇವೆ ಕೊಡುವುದಾದರೆ ದಿಲ್ಲಿಯಲ್ಲಿನ ಮೆಟ್ರೊದಲ್ಲೂ ಕನ್ನಡದಲ್ಲಿ ಸೇವೆ ಕೊಡಬೇಕು. ಆದರೆ ಭಾರತದ ಬಾಶಾ ನೀತಿ ಪ್ರಕಾರ ಇದು ಸಾದ್ಯವಿಲ್ಲ. ದಿಲ್ಲಿ ಮೆಟ್ರೊದಲ್ಲಿ ಸ್ಥಳೀಯ ಬಾಶೆ ಮತ್ತು ಆಂಗ್ಲ ಬಾಶೆಗೆ ಮಾತ್ರ ಸ್ಥಾನ ಕಲ್ಪಿಸಿದರೆ ಬೆಂಗಳೂರಿನಲ್ಲಿ ಸ್ಥಳೀಯ ಮತ್ತು ಆಂಗ್ಲ ಬಾಶೆ ಜೊತೆಗೆ ಇನ್ನೊಂದು ಬಾಶೆಯನ್ನು ಸ್ಥಳೀಯರ ಮೇಲೆ ಹೇರಲಾಗುತ್ತಿದೆ. ದಿಲ್ಲಿಗೊಂದು ನಿಯಮ ಬೆಂಗಳೂರಿಗೊಂದು ನಿಯಮ ಯಾಕೆ.? ಇಂಥ ಹುಳುಕಿನ ಬಾಶಾ ನೀತಿಯಿಂದ ಒಕ್ಕೂಟ ವ್ಯವಸ್ಥೆಗೆ ಬೆಲೆಯಿಲ್ಲದಂತಾಗಿದೆ. ಎಲ್ಲ ಬಾಶೆಗಳೂ ಸಮಾನ ಎಂಬ ಸಂದೇಶ ಸಾರಬೇಕಾದ ಸರಕಾರಗಳೇ ಇಂದು ತಮ್ಮ ಯೋಜನೆಗಳ ಮೂಲಕ ಸ್ಥಳೀಯ ಬಾಶೆಗಳಿಗಿಂತ ಹಿಂದಿಗೆ ಕೊಂಬು ಜಾಸ್ತಿ ಎಂಬ ಸಂದೇಶ ರವಾನಿಸುತ್ತಿವೆ.

ಕನ್ನಡಿಗರಾಗದ ವಲಸಿಗರು:
ಮೆಟ್ರೊದಲ್ಲಿನ ಈ ಬಾಶಾ ನೀತಿ ಒಂದು ಕಡೆ ೮ನೇ ಪರಿಚ್ಚೇಧದಲ್ಲಿ ಗುರುತಿಸಲಾದ ಎಲ್ಲ ೨೨ ಭಾಷೆಗಳು ಸಮಾನ ಎಂಬ ಸಂವಿದಾನದ ಆಶಯಕ್ಕೆ ದಕ್ಕೆ ತಂದರೆ, ಇನ್ನೊಂದು ಕಡೆ ವಲಸಿಗರು ಕನ್ನಡ ಕಲಿತು ಸ್ಥಳೀಯ ಮುಖ್ಯವಾಹಿನಿಯಲ್ಲಿ ಅವರು ಬೆರೆಯುವ ಅವಕಾಶವನ್ನು ತಪ್ಪಿಸುತ್ತದೆ. ವಲಸಿಗರು ಅಲ್ಲಿನ ಭಾಷೆಯನ್ನು ಕಲಿತು ಸ್ಥಳೀಯ ಮುಖ್ಯವಾಹಿನಿಗೆ ಬೆರೆಯಬೇಕು. ಜಗತ್ತಿನ ನಿಯಮನೂ ಇದೇ ಹೇಳುತ್ತದೆ. ವಿವಿದತೆಯಲ್ಲಿ ಏಕತೆಯೆಂಬ ಮಂತ್ರ ಪಠಿಸುವ ಒಕ್ಕೂಟ ವ್ಯವಸ್ಥೆಯಿರುವ ಭಾರತವೂ ಇದರಿಂದ ಹೊರತಾಗಿಲ್ಲ. ವಿಪರ್ಯಾಸವೆಂದರೆ ಜರ್ಮನಿ, ಫ್ರಾನ್ಸಿಗೆ ಹೋಗುವುದಕ್ಕಿಂತ ಮುಂಚೆಯೇ ಅಲ್ಲಿನ ಭಾಷೆ ಕಲಿಯುವ ಅನೇಕ ಹೆಮ್ಮೆಯ ಬಾರತೀಯರು ಕರ್ನಾಟಕಕ್ಕೆ ವಲಸೆ ಬಂದು ಇಲ್ಲಿಯೇ ತಮ್ಮ ಬದುಕು ಕಟ್ಟಿಕೊಂಡರೂ ಕನ್ನಡವನ್ನು ಕಲಿಯುವ ಗೋಜಿಗೆ ಹೋಗುವುದಿಲ್ಲ. ವಲಸಿಗರಿಗೆನೇ ವ್ಯವಸ್ಥೆಯನ್ನು ಕಟ್ಟುವಂಥ ಮೆಟ್ರೊದಂಥ ಯೋಜನೆಗಳಲ್ಲಿನ ಬಾಶಾ ನೀತಿಯೇ ಇಂಥ ಒಂದು ಕೆಟ್ಟ ವಾತಾವರಣಕ್ಕೆ ನಾಂದಿ ಹಾಡುತ್ತಿವೆ. ವಲಸಿಗರನ್ನು ಕನ್ನಡಿಗರಾಗದ ಹಾಗೆ ತಡೆಯುತ್ತಿವೆ. 


ನಮ್ಮ ಮೆಟ್ರೊ ಬಾಶಾನೀತಿ:
ನಮ್ಮ ಮೆಟ್ರೊ ಸೇವೆ ಒದಗಿಸುತ್ತಿರುವುದು ಬೆಂಗಳೂರಿಗರಿಗೆ. ಹೀಗಾಗಿ ಬೆಂಗಳೂರಿನ ನುಡಿಯಲ್ಲೇ ಎಲ್ಲ ಮಾಹಿತಿಗಳು ಸಿಗಬೇಕು. ಇನ್ನು ಬೆಂಗಳೂರಿಗರಿಗೆ ಬರುವ ವಲಸಿಗರಿಗೆ ತಾತ್ಕಾಲಿಕ ಅನುಕೂಲವಾಗುವ ಹಾಗೆ ಆಂಗ್ಲ ಬಾಶೆ ಇರಲಿ. ಒಕ್ಕೂಟ ವ್ಯವಸ್ಥೆಯಿರುವ ಯುರೋಪಿನಲ್ಲಿನ ಬಾಶಾ ನೀತಿ ಇದಕ್ಕೆ ಒಳ್ಳೆಯ ಉದಾಹರಣೆ. ಆದ್ದರಿಂದ ಮೆಟ್ರೊ ಆಡಳಿತ ವರ್ಗ ಈ ನಿಟ್ಟಿನಲ್ಲಿ ಗಮನ ಹರಿಸಿ ತನ್ನ ಸೇವೆಯಲ್ಲಿ ಹಿಂದಿ ಬಳಕೆಯನ್ನು ನಿಲ್ಲಿಸಿ, ಕಡಿಮೆ ಸಂಖ್ಯೆಯ ವಲಸಿಗರಿಗಾಗಿ ವ್ಯವಸ್ಥೆ ಕಟ್ಟುವ ಕೆಟ್ಟ ಸಂಪ್ರದಾಯವನ್ನು ಬಿಟ್ಟು ಬಹುಸಂಖ್ಯಾತ ಸ್ಥಳೀಯರಿಗೆ ಅನುಕೂಲ ಮಾಡಿಕೊಡುವ ವ್ಯವಸ್ಥೆಯನ್ನು ಕಟ್ಟಿ, ಆ ಮೂಲಕ ಕರ್ನಾಟಕದಲ್ಲಿರುವ ವಲಸಿಗರು ಮುಂದಿನ ದಿನಗಳಲ್ಲಿ ಕನ್ನಡಿಗರಾಗಿ ಪರಿವರ್ತನೆಯಾಗಲು ಅವಕಾಶ ಕಲ್ಪಿಸಿಕೊಡಬೇಕಾಗಿದೆ.