Thursday 24 December 2009

ಶೇಷಾದ್ರಿಪುರ ಓಕೆ, ಅದರ ಮುಂದೆ ಅಂ ಯಾಕೆ?


ಮಲ್ಲೇಶ್ವರಂ, ಶೇಷಾದ್ರಿಪುರಂ ಇವು ಬದಲಾವಣೆಯಾಗಿರುವಂತಿರುವ ಹೆಸರುಗಳು. ಓಕಳೀಪುರಂ, ಕೋರಮಂಗಲಂ, ಶ್ರೀರಾಮಪುರಂ ಇವು ಬದಲಾವಣೆಯಾಗುತ್ತಿರುವ ಹೆಸರುಗಳು. ವಿಜಯನಗರಂ, ರಾಜಾಜಿನಗರಂ ಇವು ಬದಲಾಗಬಹುದಾದ ಹೆಸರುಗಳು. ಮುಂದೆ ಊಹೆ ಮಾಡಿಕೊಂಡರೆ ಸಾಕಷ್ಟು ಹೆಸರುಗಳು ಕಾಣುತ್ತವೆ.
ಹೆಸರಲ್ಲೇನಿದೆ....? ಶೇಷಾದ್ರಿಪುರ ಅನ್ನೊ ಬದಲು ಶೇಷಾದ್ರಿಪುರಂ ಅಂದರೆ ಏನ್ ತಪ್ಪು, ಅದರಲ್ಲೇನು ಮಹಾ ತಪ್ಪಿದೆ ಅಂಥ ಕೇಳೊ ವಿಟ್ಯಾಮಿನ್ ಎನ್ ( ನಮ್ಮತನ) ಕಡಿಮೆಯಿರೋ ನಮ್ಮ ಜನರು ಸಾಕಷ್ಟಿದ್ದಾರೆ. ಆದರೆ ಇದು ನಮ್ಮತನವನ್ನು ಮಾಯ ಮಾಡುವ, ಕನ್ನಡ ಅನುಷ್ಟಾನವನ್ನು ನಿರ್ಲಕ್ಷಿಸುವ ಒಂದು ಸಣ್ಣ ಹೆಜ್ಜೆ ಎಂದು ಕನ್ನಡದ ಕಣ್ಣಿನಿಂದ ನೋಡಿದಾಗ ಮಾತ್ರ ಅವರಿಗೆ ಅರ್ಥವಾಗುತ್ತದೆ. ಇದರಲ್ಲಿ ಬರೀ ಹೆಸರನ್ನಷ್ಟೆ ನೋಡದೆ ನಮ್ಮ ಸಂಸ್ಕೃತಿ, ಒಗ್ಗಟ್ಟು, ನುಡಿಯ ಹಿರಿಮೆ, ಸ್ವಾಭಿಮಾನ ಎಲ್ಲವನ್ನು ನೋಡಬೇಕು ಅಂಥ. ಶೇಷಾದ್ರಿಪುರಂಗೆ ಹೋಗಿ ಬರ್ತಿನಿ ಎಂಬ ವಾಕ್ಯಕ್ಕಿಂತ ಶೇಷಾದ್ರಿಪುರಕ್ಕೆ ಹೋಗಿ ಬರ್ತಿನಿ ಅನ್ನೊ ವಾಕ್ಯದಲ್ಲಿ ಕನ್ನಡ ಎದ್ದು ಕಾಣುತ್ತದೆ. ನಮ್ಮ ನುಡಿಯ ದರ್ಶನವಾಗುತ್ತದೆ.
ಬ್ರಿಟಿಷರು ತಾವು ಹೋದ ಕಡೆಯಲ್ಲೆಲ್ಲ ಊರುಗಳ ಹೆಸರುಗಳನ್ನು ತಮ್ಮ ನಾಲಿಗೆಗೆ ಹೊರಳೊ ಹಾಗೆ ಮಾರ್ಪಾಡಿಸಿಕೊಂಡಿದ್ದರು. ಅವರು ನಮ್ಮ ದೇಶ ಬಿಟ್ಟು ೬೨ ವರ್ಷಗಳಾದರೂ ಎಷ್ಟೋ ಕಡೆ ಅದೇ ಹೆಸರುಗಳು ಮುಂದುವರೆದಿರುವುದನ್ನು ಕಾಣಬಹುದು. ಹೀಗಿರುವಾಗ, ಇದೇ ರೀತಿ ಯಾರೋ ಕೆಲವರ ನಾಲಿಗೆಯ ಹಿತಕ್ಕೆ ಕೋಟಿ ಕೋಟಿ ನಾಲಿಗೆಗಳು ಹೆಸರನ್ನು ತಿರುಚಿ ಹೇಳುವುದು ಎಷ್ಟು ಸೂಕ್ತ. ಈಗ ವಿಜಯನಗರ ಅಂಥ ಇರೋದನ್ನು ವಿಜಯನಗರಂ ಅಂಥ ಯಾರೋ ಕೆಲವು ಜನ "ಅಂ" ಪ್ರೀಯರು ಕರೀತಾರೆ ಅಂಥ ನಾವು ಅದನ್ನೇ ಅನ್ನೋಕೆ, ಬರಿಯೋಕೆ ಶುರು ಮಾಡಿದ್ರೆ,, ನಾಳೆ ನಮ್ ಉತ್ತರದ ಮಹಾಶಯರು ಬಂದಬಿಟ್ಟು ವಿಜಯನಗರಂ ಅಂಥ ನಮಗೆ ಅನ್ನೋಕೆ ಬರೋದಿಲ್ಲ, ನಾವು ಅದನ್ನು ಭಿಜಯನಗರಂ ಅಂಥ ಕರೀತಿವಿ ಅಂದ್ರೆ, ನಾವು ಹಂಗೆ ಅನ್ನೋಕೆ ಆಗುತ್ತಾ...? ಎಲ್ಲರೂ ಅನ್ನೋದನ್ನೇ ನಾವು ಅನ್ನೋಕೆ, ನಮ್ಮ ನಾಲಿಗೆಗೆ ನಿಯತ್ತೇ ಇಲ್ಲವೇ...? ಸುಂದರವಾಗಿದ್ದ ವಿಜಾಪುರವನ್ನು ಬಿಜಾಪುರ ಅಂಥ ಮಾಡಿದ್ದನ್ನೇ ಇನ್ನೂ ಸರಿ ಮಾಡಕ್ಕಾಗ್ತಿಲ್ಲ. ಇನ್ನೂ ಹಾಗೆ ಎರಡು ಹೆಸರುಗಳ ಮದ್ಯೆ ಗೋಳಾಡ್ತಿದೆ.
ಈಗ ಮಲ್ಲೇಶ್ವರ, ಶೇಷಾದ್ರಿಪುರ ಅಂಥ ಬರೆದಿರೋ ಫಲಕಗಳನ್ನು ನಾವು ಬೆಂಗಳೂರಿನಲ್ಲಿ ಬೆರಳೆಣಿಕೆಯಷ್ಟು ಕಡೆ ನೋಡಬಹುದು. ಬಹುತೇಕ ಕಡೆ ಮುಂದೆ "ಅಂ" ಹಚ್ಚಿ ಬರೆದಿರುವುದನ್ನು ಕಾಣುತ್ತೇವೆ. ಅದೇ ರೀತಿ ಓಕಳೀಪುರ, ಶ್ರೀ ರಾಮಪುರ ಅಂಥ ಕೆಲವು ಕಡೆ ನೋಡಬಹುದು. ಆದರೆ ಈಗಿನ ಪರಿಸ್ಥಿತಿಯಲ್ಲಿ ೫-೧೦ ವರ್ಷಗಳ ನಂತರ ಈಗಿರುವ ಹೆಸರುಗಳೂ ಬದಲಾಗುವ ವಾತಾವರಣ ಅಗೋಚರವಾಗಿ ನಿರ್ಮಾಣವಾಗುತ್ತಿದೆ. ದೇವಾಲಯದ ಪ್ರಸಾದಕ್ಕೂ ಇದು ಬಿಟ್ಟಿಲ್ಲ. ಕನ್ನಡದಲ್ಲಿ "ಪ್ರಸಾದ" ಅಂಥ ಇರುವಂಥದ್ದು ಆಂಗ್ಲ ಭಾಶೆಯಲ್ಲಿ ಪ್ರಸಾದಂ ಹೆಂಗ್ ಆಗುತ್ತೆ ಅಂಥ ಆ ದೇವಾಲಯದ ದೇವರಿಗೂ ಯಕ್ಷ ಪ್ರಶ್ನೆಯಾಗಿದೆ. ಲಾಲ್ ಬಾಗಿನ ಮುಖ್ಯ ದ್ವಾರದಲ್ಲಿ ಕಾಣುವ ಫಲಕದಲ್ಲಿ ತೋಟ ಇರುವ ಬದಲು "ತೋಟಂ" ಹೆಂಗ್ ಬಂತು ಅನ್ನೋದು ಅಲ್ಲಿಯ ಹೂಗಿಡಗಳಿಗೂ ತಿಳಿಯದಾಗಿದೆ. ಹೀಗೆ ಮುಂದುವರೆದರೆ ಈಗಿರುವ ವಿಜಯನಗರ ಮುಂದೆ ವಿಜಯನಗರಂ ಅಂಥ, ಈಗಿರುವ ಜಾಲಹಳ್ಳಿ ಮುಂದೆ ಜಾಲಪಲ್ಲಿ ಅಂಥ, ಈಗಿರುವ ಬನ್ನೇರುಘಟ್ಟ ಮುಂದೆ ಬನ್ನೇರುಗುಟ್ಟ ಅಂಥ ಆಗಲು ಬಹಳ ವರ್ಷ ಕಾಯಬೇಕಿಲ್ಲ. ಪೋಕಿರಿಯನ್ನು ಚಿತ್ರಮಂದಿರದಲ್ಲಿ ನೋಡಿ, ವಂಶಿಯನ್ನು ಟಿವಿ ಚಾನಲನಲ್ಲಿ ಹಾಕಿದಾಗ ಕೂಡ ನೋಡದೇ ಇರುವವರಿಗೆ, ನಿಯತ್ತಿಲ್ಲದ ನಾಲಿಗೆಗಳಿಗೆ ಹೇಗೆ ತಿಳಿಯೊಕ್ ಸಾದ್ಯ. ನಿಯತ್ತಿರುವ ನಾಲಿಗೆಗಳು ಈ ಸಮಸ್ಯೆಯನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಕೊನೆ ಗುಟುಕಂ: ಹೆಸರಲ್ಲೇನಿದೆ...? ಅಂಥ ಹೇಳುವವರು ಹೆಸರಲ್ಲೇ ಎಲ್ಲ ಇದೆ ಅಂಥ ಹೇಳುವವರ ಮತ್ತು ಪ್ರತಿಪಾದಿಸುವವರ ಜೊತೆ ಸಹಕರಿಸಬೇಕಲ್ಲವೇ....?

No comments:

Post a Comment

ನಿಮ್ಮ ಮಾತು...