Sunday 25 September 2011

ನಿಲ್ಲದ ಪರಬಾಶೆ ಮನರಂಜನೆಯ ವೈಬವೀಕರಣ.!


ಈ (ನಮ್ಮ) ಕನ್ನಡ ಸುದ್ದಿ ವಾಹಿನಿಗಳಿಗೇನಾಗಿದೆ.! ಮನರಂಜನೆ ಅಂದರೆ ಪರಬಾಶೆ ಚಿತ್ರಗಳೇ ಲಾಯಕ್ಕು ಎಂಬ ನಿಲುವೇನಾದ್ರು ಇವರು ತಾಳಿದಾರಾ? ಅಥವಾ ಪರಬಾಶೆ ಮನರಂಜನೆ ಬಗ್ಗೆ ಸುದ್ದಿ ತೋರಿಸದಿದ್ದರೆ ಅವರ ವಾಹಿನಿಯನ್ನು ಯಾರೂ ನೋಡುವುದಿಲ್ಲ ಎಂಬ ಬ್ರಮೆಯಲ್ಲಿದ್ದಾರಾ.? ಅಥವಾ ಕರ್ನಾಟಕದ ಜನ ಎಲ್ಲ ಸೇರಿ ನಾವು ಇನ್ಮೇಲೆ ಪರಬಾಶೆ ಚಿತ್ರಗಳನ್ನೇ ಜಾಸ್ತಿ ನೋಡ್ತಿವಿ ಅಂತ ಮುಚ್ಚಳಿಕೆ ಏನಾದ್ರು ಇವರಿಗೆ ಬರೆದು ಕೊಟ್ಟಿದ್ದಾರಾ.? ಎಂಬ ಪ್ರಶ್ನೆಗಳು ಇತ್ತೀಚಿನ ಕೆಲವು ದಿನಗಳಿಂದ ಗಾಡವಾಗಿ ಕಾಡ್ತಾ ಇದೆ.

ಹಿಟ್ ಬೇಕು..ಹಿಟ್.!
ಒಂದು ಪರಬಾಶೆಯ ಚಿತ್ರ ತೆರೆಗೆ ಬರಲು ಸಜ್ಜಾದರೆ ಸಾಕು, ಮಾದ್ಯಮದ ಕಚೇರಿಗಳಲ್ಲಿ ಅದರ ಅರ್ದ ತಾಸಿನ  ವಿಶೇಶ ಕಾರ್ಯಕ್ರಮದ ಸಿದ್ದತೆಗಳು ಶುರು ಆಗಿ ಬಿಡುತ್ತವೆ. ಇನ್ನು ಒಬ್ಬರು ಪ್ರಸಾರ ಮಾಡಿದರೆ ಮುಗೀತು,, ನಾವು ತೋರಿಸಲಿಲ್ಲ ಅಂದ್ರೆ ಜನ ಎಲ್ಲಿ ಬೇಜಾರ್ ಮಾಡ್ಕೊತಾರೆ ಅನ್ನೋ ಥರ ಮರುದಿನ ಮತ್ತೊಂದ್ರಲ್ಲಿ. ಬೆಳಿಗ್ಗೆ "ದುಕುಡು" ಚಿತ್ರದ ಬಗ್ಗೆ ವಿಶೇಶ ಕಾರ್ಯಕ್ರಮ,, ಸಂಜೆ ಅದೇ ವಾಹಿನಿಯಲ್ಲಿ "ಕನ್ನಡ ಚಿತ್ರಗಳು ಎಡವುತ್ತಿರುವುದೆಲ್ಲಿ" ಎಂಬ ಬಗ್ಗೆ ವಿಚಾರ ಸಂಕೀರಣ.!! ಈ ಥರ ಇದೆ ನಿಲುವು. ಕನ್ನಡ ಬದ್ದತೆ ಮಾತೆಲ್ಲಿ.! ಈಗಿಗ ಚಿತ್ರಗಳು ಬಿಡುಗಡೆ ಆಗೋದಕ್ಕೆ ಕಾಯೋದೇ ಬೇಡ ಅಂತ, ಅಲ್ಲಿನ ಪರಿಸ್ಥಿತಿಯ ಅವಲೋಕನ ಮಾಡೊದಕ್ಕೆ ಶುರು ಮಾಡಿದ್ದಾರೆ, ಅಂಥದ್ದೇ ಒಂದು ಕಾರ್ಯಕ್ರಮ ಸುವರ್ಣ ಸುದ್ದಿ ವಾಹಿನಿಯಲ್ಲಿ ಇತ್ತೀಚಿಗೆ ಕಾಣಿಸಿಕೊಳ್ತು. ಅದರ ಶಿರ್ಶಿಕೆ ಹೆಸರು "ಹಿಟ್ ಬೇಕು..ಹಿಟ್". ಇದರ ಸಾರಾಂಶ ಏನಪ್ಪಾ ಅಂದ್ರೆ, ತೆಲುಗಿನ ಮಹೇಶ್ ಬಾಬು, ಜೂ.ಎನ್.ಟಿ.ಆರ್, ನಾಗಾರ್ಜುನ ಅವರ ಇತ್ತೀಚಿನ ಚಿತ್ರಗಳು ತಕ್ಕ ಮಟ್ಟಿಗೆ ಯಶಸ್ಸನ್ನು ಕಂಡಿಲ್ಲ, ಹಾಗಾಗಿ ಜನ ಅವರಿಂದ ಒಂದು ಬ್ಲಾಕ್ ಬಸ್ಟರ್ ಹಿಟ್ ಚಿತ್ರವನ್ನು ನಿರೀಕ್ಷೆ ಮಾಡುತ್ತಿದ್ದಾರೆ ಅಂತ.! ಕರ್ನಾಟಕದ ಜನ ತೆಲುಗಿನ ಬ್ಲಾಕ್ ಬಸ್ಟರ್ ಚಿತ್ರವನ್ನು ನಿರೀಕ್ಷೆ ಮಾಡುತ್ತಿದ್ದಾರೆ ಅಂತ ನಮ್ಮ ಸುದ್ದಿವಾಹಿನಿಗೆ ಯಾವ ಗುಪ್ತಚರ ಇಲಾಖೆ ಮೂಲಕ ಮಾಹಿತಿ ಬಂತೋ ಗೊತ್ತಿಲ್ಲ.! ಆದರೆ ಪರಬಾಶೆ ಚಿತ್ರಗಳನ್ನು ಬ್ಲಾಕ್ ಬಸ್ಟರ್ ಮಾಡಲು ಕರ್ನಾಟಕದಲ್ಲಿ ಮಾರುಕಟ್ಟೆ ನಿರ್ಮಿಸಲು ನೇರ, ದಿಟ್ಟ ಮತ್ತು ನಿರಂತರ ಪ್ರಯತ್ನ ನಡೆದಿದೆ. ಇನ್ನು ಮತ್ತೊಂದು ಸುದ್ದಿ ವಾಹಿನಿ, ಟಿವಿ೯ ಅವರು ರಜನಿಕಾಂತ್ ಮತ್ತು ಅವರ ಚಿತ್ರಗಳ ಪ್ರಚಾರದ ಗುತ್ತಿಗೆಯನ್ನು ಪಡೆದುಕೊಂಡಿರೋ ಥರ ಸುದ್ದಿ ಪ್ರಸಾರ ಮಾಡ್ತಾರೆ. ಕನ್ನಡಿಗರಿಗೆ ಬೇಡವಾದ ಪ್ರಚಾರವನ್ನು ಕನ್ನಡಿಗರ ಮೇಲೆ ಹೇರಿ ಯಾವ ಉತ್ತಮ ಸಮಾಜವನ್ನು ನಿರ್ಮಿಸಲು ಹೊರಟಿದ್ದಾರೆ. ಪಕ್ಕದ ಮನೆಯಲ್ಲೂ ಹೀಗೆ ಆಗುತ್ತಾ.? ಅಣ್ಣಾವ್ರ್ದು, ಶಂಕರನಾಗ್ ಕುರಿತಾದ ಅಥವಾ ಈಗಿನ ನಟರ ಬ್ಲಾಕಬಸ್ಟರ್ ಚಿತ್ರಗಳ ಬಗ್ಗೆ ಎಶ್ಟು ಸಲ ಅಲ್ಲಿನ ವಾಹಿನಿಗಳು ವಿಶೇಶ ಕಾರ್ಯಕ್ರಮ ಏರ್ಪಡಿಸಿವೆ.? ಖಂಡಿತ ಇಲ್ಲ, ಅಲ್ಲಿನ ಜನರ ಮನರಂಜನೆ ಸ್ಥಳೀಯ ಬಾಶೆಯಲ್ಲೇ ಎಂಬ ಸಿದ್ದಾಂತಕ್ಕೆ ಅಲ್ಲಿನ ಮಾದ್ಯಮಗಳು ಕೈಜೋಡಿಸಿವೆ. ನಮ್ಮ ಮಾದ್ಯಮಗಳು ನಮ್ಮ ಜನರ ಮನರಂಜನೆ ಕನ್ನಡ ನುಡಿಯಲ್ಲೇ ಎಂಬ ಬಗ್ಗೆ ಯಾಕೆ ನಿರ್ಲಕ್ಷ್ಯ. ಪರಬಾಶೆಯಲ್ಲೂ ಒಳ್ಳೆಯ ಮನರಂಜನೆ ಇರುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವುಗಳನ್ನು ನಮ್ಮ ನುಡಿಯಲ್ಲೇ ನಮ್ಮ ಜನರಿಗೆ ತಲುಪಿಸುವತ್ತ ಗಮನ ಹರಿಸಬೇಕೆ ಹೊರತು ಅವರವರ ಬಾಶೆಯಲ್ಲೇ ಪ್ರಚಾರ ಕೊಡುವುದು ಸರಿಯಲ್ಲ. ಒಟ್ಟಿನಲ್ಲಿ ಕನ್ನಡಿಗರಿಗೆ ಬೇಕಾದ್ದನ್ನು ನಿರ್ಲಕ್ಷಿಸಿ ಬೇಡವಾದದ್ದನ್ನು ತುರುಕಲು ಪ್ರಯತ್ನಿಸುತ್ತಿರುವುದು ವಿಪರ್ಯಾಸ.

ಲವಲವಿಕೆ ಕಳೆದುಕೊಳ್ಳುತ್ತಿರುವ ಪತ್ರಿಕಾ ಮಾದ್ಯಮ.!
ಪತ್ರಿಕಾ ಮಾದ್ಯಮಗಳ ಸ್ಥಿತಿ ಇದಕ್ಕಿಂತ ಬಿನ್ನವಾಗಿಲ್ಲ. ಪರಬಾಶೆ ಚಿತ್ರಗಳ ಪ್ರಚಾರದಲ್ಲಿ ನಾವು ಏನು ಕಮ್ಮಿ ಇಲ್ಲ ಅನ್ನೋ ಥರ ಪೈಪೋಟಿಗೆ ಬಿದ್ದವರಂತೆ ನಮ್ಮ ಪತ್ರಿಕಾ ಮಾದ್ಯಮದವರು ಇದ್ದಾರೆ. ವಿಜಯ ಕರ್ನಾಟಕದಲ್ಲಿ ಬರುವ ಲವಲವಿಕೆಯನ್ನು ನೋಡಿದರೆ, ಕೆಲವು ಸಲ ಇದು ಕನ್ನಡ ಪತ್ರಿಕೆಯ ಜೊತೆಗೆ ಬಂದಿದ್ದಾ ಎಂಬ ಬಗ್ಗೆ ಸಂದೇಹ ಮೂಡುತ್ತದೆ. ಅಕ್ಷರಗಳು ಕನ್ನಡದ್ದೇ, ಮನರಂಜನೆ ವಿಶಯ ಮಾತ್ರ ಪಕ್ಕದ ಮನೆದೇ ಜಾಸ್ತಿ. ಟಿವಿ ಮಾದ್ಯಮಗಳಲ್ಲಿ ಟಿವಿ೯ ವಹಿಸುವ ಪಾತ್ರವನ್ನು ಲವಲವಿಕೆಯಿಂದ ವಿ.ಕ ದವರು ನಿರ್ವಹಿಸುತ್ತಿದ್ದಾರೆ. ಪ್ರಜಾವಾಣಿಯವರು ಬೊಂಬಾಟ್ ಬಾಲಿವುಡ್ ಮೂಲಕ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಇನ್ನು ಮನರಂಜನೆಗಾಗಿಯೇ ಮೀಸಲಿರುವ ಹೊತ್ತಿಗೆಗಳಾದ ರೂಪತಾರಾದಂತವುಗಳಲ್ಲೂ ತಮಿಳು, ತೆಲುಗು ಚಿತ್ರಗಳ ಪ್ರಚಾರ ಕಾರ್ಯ ನಡೆಯುತ್ತದೆ. ಇದೆಲ್ಲದರ ಜೊತೆಗೆ ಎಲ್ಲರೂ ತಮಿಳು, ತೆಲುಗು, ಹಿಂದಿ ಚಿತ್ರಗಳ ವಿಶ್ಲೇಶಣೆ ನಡೆಸುತ್ತಾರೆ. 

ಮನೆಗೆ ಮಾರಿ ಪಕ್ಕದ್ಮನೆಗೆ ಉಪಕಾರಿ.!
ಇಶ್ಟೆಲ್ಲ ಮಾದ್ಯಮದವರು ಯಾರಿಗಾಗಿ ಮಾಡುತ್ತಿರುವುದು, ಹೀಗೆ ಮಾಡುವುದರ ಮೂಲಕ ತಮ್ಮ ತಲೆ ಮೇಲೆ ಚಪ್ಪಡಿ ಕಲ್ಲನ್ನು ಎಳ್ಕೊತಿದ್ದಾರೆ. ಹೀಗೆ ಪರಬಾಶೆಗಳಿಗೆ ಪ್ರಚಾರ ಕೊಡುತ್ತಿದ್ದರೆ, ಆ ಮೂಲಕ ಕನ್ನಡ ಚಿತ್ರಗಳ ಗ್ರಾಹಕರನ್ನು ಪರಬಾಶೆ ಕಡೆಗೆ ವಾಲಿಸುತ್ತಿದ್ದರೆ ಮುಂದೊಂದು ದಿನ ಕನ್ನಡ ವಾಹಿನಿಗಳನ್ನು ನೋಡುವವರ, ಕನ್ನಡ ಪತ್ರಿಕೆಗಳನ್ನು ಓದುವವರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬರಬಹುದು. ಆಗ ಯಾರಿಗಾಗಿ ಇವರು ತಮ್ಮ ಕಾರ್ಯಕ್ರಮಗಳನ್ನು ಪ್ರಸಾರ ಮಾಡ್ತಾರೆ. ಹೀಗಾಗಿ ಮನರಂಜನೆ ವಿಶಯಗಳಲ್ಲಿ ಪರಬಾಶೆಗಳಿಗೆ ಮಾರುಕಟ್ಟೆ ನಿರ್ಮಿಸಿ ಕೊಡುವುದೆಂದರೆ ತಮ್ಮ ಅನ್ನಕ್ಕೆ ಕುತ್ತು ತಂದುಕೊಳ್ಳುವುದೇ ಎಂದರ್ಥ. ಇದನ್ನು ನಮ್ಮ ಮಾದ್ಯಮದವರು ಅರಿತುಕೊಳ್ಳಬೇಕಿದೆ. ಈಗಿರುವ ಮನೆಯಲ್ಲಿ ತಾವೂ ಇದ್ದೇವೆ ಎಂಬುದನ್ನು ಮರೆತು ಮನೆಗೆ ಮಾರಿ ಪಕ್ಕದ್ಮನೆಗೆ ಉಪಕಾರಿ ಎಂಬಂತೆ ನಡೆದುಕೊಳ್ಳುತ್ತಿರುವುದು ಸರಿಯಲ್ಲ.  ಮಾದ್ಯಮವೂ ಸೇರಿದಂತೆ ಕರ್ನಾಟಕದ ಪ್ರತಿಯೊಂದು ಕ್ಷೇತ್ರವೂ ನಿಂತಿರುವುದು ಕನ್ನಡ ಎಂಬ ಬಾಶಾ ತಳಹದಿ ಮೇಲೆಯೇ ಎಂಬುದನ್ನು ಮನಗಾಣಬೇಕಿದೆ. ಆದ್ದರಿಂದ ಮಾದ್ಯಮದವರು ತಮ್ಮ ಒಳಿತಿಗಾಗಿ ಮತ್ತು ಕನ್ನಡಿಗರ ಅನುಕೂಲಕ್ಕಾಗಿ, ಆ ತಳಹದಿಯನ್ನು ಅಲುಗಾಡಿಸುವ ಕಾರ್ಯ ಕೈಬಿಟ್ಟು, ಅದನ್ನು ಗಟ್ಟಿಪಡಿಸುವ ಅಂದರೆ, ಕರ್ನಾಟಕದಲ್ಲಿ ಎಲ್ಲ ಮನರಂಜನೆ ಕನ್ನಡದಲ್ಲೇ ದಕ್ಕಿಸಿಕೊಡುವ ಆ ಮೂಲಕ ಕನ್ನಡ ಗ್ರಾಹಕರ ಆಶೋತ್ತರಗಳಿಗೆ ಸ್ಪಂದಿಸುವ ಕಡೆಗೆ ಗಮನ ಹರಿಸಬೇಕಿದೆ.

2 comments:

  1. namma bengalurige IT bardene iddiddre yestoo chennagi irttittu......

    ReplyDelete
  2. ಇವರಿಗೆ ನಮ್ಮ ಮನೆ ಊಟಕ್ಕಿಂತ, ಪಕ್ಕದ ಮನೆ ಎಂದ್ಲಾನೆ ಜಾಸ್ತಿ ಇಷ್ಟ. ಅದಕ್ಕೆ ಮೆಕ್ಕಿ ಮೆಕ್ಕಿ ತಿಂತಾರೆ.

    ReplyDelete

ನಿಮ್ಮ ಮಾತು...