Thursday 23 February 2012

ಚಿತ್ರಲೋಕ ಕನ್ನಡ ಮೆಗಾ ಪೋರ್ಟಲ್ ಪರಬಾಶೆ ಚಿತ್ರಪ್ರಚಾರದ ವೇದಿಕೆ ಆಗದಿರಲಿ.


ತಂತ್ರಜ್ನಾನ ಬೆಳೆದಂತೆ ಎಲ್ಲ ಮಾಹಿತಿಗಳು ಕ್ಷಣಮಾತ್ರದಲ್ಲಿ ಕೈಗೆಟುಕುತ್ತಿವೆ. ಮನರಂಜನಾ ಮಾಹಿತಿಗಳು ಇದರಿಂದ ಹೊರತಾಗಿಲ್ಲ. ಮೊದಲು ಹಾಳೆ, ಪತ್ರಿಕೆಗಳ ಮೂಲಕ ಚಲನಚಿತ್ರಗಳ ಮಾಹಿತಿಯನ್ನು ಹೆಚ್ಚಾಗಿ ಕಾಣುತ್ತಿದ್ದದ್ದು ಇಂದು ಪ್ರಕ್ರಿಯೆ ಮಿಂಬಲೆ ಮೂಲಕ, ಸಾಮಾಜಿಕ ತಾಣಗಳ ಮೂಲಕ ಜೋರಾಗಿ ಮತ್ತು ತ್ವರಿತಗತಿಯಲ್ಲಿ ನಡೆಯುತ್ತಿದೆ. ಸಾಲಿಗೆ ಚಿತ್ರಲೋಕ ಕನ್ನಡ ಮೆಗಾ ಪೋರ್ಟಲ್ ಎಂಬ ವೇದಿಕೆ ಕೂಡ ಒಂದು ಮತ್ತು ಪ್ರಮುಖವಾದದ್ದು.
ಕನ್ನಡ ಪೋರ್ಟಲ್ ಎನ್ನುವುದು ನಿಜವೇ.?
ಚಿತ್ರಲೋಕ ಒಂದು ದಕ್ಷಿಣ ಬಾರತ ಚಿತ್ರರಂಗದ ಪೋರ್ಟಲ್ ಆಗಿದ್ದರೆ ಆಗ ಪ್ರಶ್ನೆಯೇ ಉದ್ಬವಿಸುತ್ತಿರಲಿಲ್ಲ. ಹೆಸರೇ ಸ್ಪಷ್ಟವಾಗಿ ಹೇಳುವ ಹಾಗೆ ಇದು ಕನ್ನಡ ಚಿತ್ರರಂಗದಲ್ಲಿನ ಮಾಹಿತಿಯನ್ನು ಜನರಿಗೆ ತಲುಪಿಸಬೇಕಾದಂಥ ಒಂದು ವೇದಿಕೆ. ಇಂತಹ ಒಂದು ವೇದಿಕೆಯಲ್ಲಿ ಇತ್ತೀಚಿನ ದಿನಗಳಲ್ಲಿ ಪರಬಾಶೆ ಮನರಂಜನೆಯೂ ಸ್ಥಾನ ಪಡೆದುಕೊಳ್ಳುತ್ತಿರುವುದು ಇದು ನಿಜವಾಗಿಯೂ ಕನ್ನಡ ಪೋರ್ಟಲ್ ಎನ್ನುವ ಪ್ರಶ್ನೆ ಹುಟ್ಟು ಹಾಕುತ್ತಿದೆ. ತಾಣದಲ್ಲಿ ಪ್ರಕಟಿಸಲಾಗಿರುವ ಕೆಲವು ಸುದ್ದಿಗಳನ್ನು ಗಮನಿಸೋಣ. ದರ್ಶನ್ ಅಬಿನಯದ ವಿರಾಟ ಎಂಬ ಕನ್ನಡ ಚಿತ್ರದ ಮಾಹಿತಿ ಇದಾಗಿದ್ದು, ದರ್ಶನ್ ಜೊತೆ ಒಂದು ಚಿತ್ರದಲ್ಲಿ ನಟಿಸಲಿರುವ ಒಬ್ಬ ನಾಯಕಿ ತೆಲುಗು ಚಿತ್ರರಂಗದಲ್ಲಿ ಮೊದಲು ನಟಿಸಿದ್ದಳು ಎಂದಿದ್ದರೆ ಬಹುಶ ಸಮರ್ಪಕವಾಗಿರುತ್ತಿತ್ತು. ಆದರೆ ಇದರ ಜೊತೆಗೆ ಅವರು ನಟಿಸಿದ ಚಿತ್ರಗಳ ಸಂಪೂರ್ಣ ಹಿನ್ನೆಲೆ, ಅವುಗಳ ಯಶಸ್ಸು ಮತ್ತು ನಾಯಕಿಯ ಮುಂದಿನ ಚಿತ್ರ ಹೀಗೆ ಪ್ರಚಾರ ಸಾಗುತ್ತದೆ. ಮತ್ತೊಂದು, ಪ್ರಕಟಣೆಯಲ್ಲಿ ತೆಲುಗಿನ ನಿರ್ದೇಶಕ ರಾಜಮೌಳಿ ತಯಾರಿಸುತ್ತಿರುವ (ತೆಲುಗು ತಮಿಳು ಒಟ್ಟಿಗೆ) ಚಿತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ ಎಂಬ ಕಾರಣಕ್ಕೆ ಅದರ ಪ್ರಚಾರಕ್ಕೂ ಕನ್ನಡ ಪೋರ್ಟಲನ್ನು ಬಳಸಿಕೊಳ್ಳಲಾಗಿದೆ. ಇನ್ನೊಂದು, ಪ್ರಕಟಣೆಯಲ್ಲಿ ತಮಿಳಿನ ರಾಣಾ ಚಿತ್ರದ ಬಗ್ಗೆ ಹೇಳಲಾಗಿದೆ. ರಾಣಾ ಚಿತ್ರದಲ್ಲಿ ನಟಿಸುವವರು ಕರ್ನಾಟಕದವರು ಎಂಬುದಾಗಿ ಲೇಖನದಲ್ಲಿ ಹೇಳಲಾಗಿದೆ, ಆದರೆ ನಿಜಕ್ಕೂ ಅಂಶ ಪೋರ್ಟಲ್ಲಿಗೆ ಅಪ್ರಸ್ತುತ. ಏಕೆಂದರೆ, ಕನ್ನಡ ಚಿತ್ರರಂಗಕ್ಕೂ ಚಿತ್ರಕ್ಕೂ ಸಂಬಂದವಿಲ್ಲ ಮತ್ತು ಪೋರ್ಟಲ್ಲಿನ ಸಂಬಂದ ಇರುವುದು ಕನ್ನಡ ಚಿತ್ರಗಳ ಜೊತೆಗೆ ಹೊರತು ಕನ್ನಡ ಮೂಲದವರ ಜೊತೆಗೆ ಅಲ್ಲ. ಕನ್ನಡಿಗರು ಎಂಬ ಅಂಶದ ಜಾಡು ಹಿಡಿದು ಪೋರ್ಟಲ್ಲಿನಲ್ಲಿ ಸುದ್ದಿ ಪ್ರಕಟಿಸಲು ಶುರು ಮಾಡಿದರೆ, ಪೋರ್ಟಲ್ ತುಂಬಾ ಹಿಂದಿ, ತೆಲುಗು, ತಮಿಳು ಚಿತ್ರಗಳೇ ತುಂಬಿ ಹೋಗುತ್ತವೆ. ಕನ್ನಡ ಪೋರ್ಟಲ್ ಎಂಬ ವೇದಿಕೆಯಲ್ಲಿ ಅದನ್ನು ಯಾರೂ ನಿರೀಕ್ಷಿಸಲ್ಲ.
ಪೋರ್ಟಲ್ ಯಾರಿಗಾಗಿ.?
ಕನ್ನಡ ಪೋರ್ಟಲ್ ಎನ್ನುವುದು ಕನ್ನಡ ಚಿತ್ರರಂಗದ ಮಾಹಿತಿಯುಳ್ಳ ಪೋರ್ಟಲ್ ಆಗಬೇಕೆ ಹೊರತು ಕನ್ನಡ, ಕನ್ನಡಿಗರ ಹೆಸರಿನಲ್ಲಿ ಪರಬಾಶೆ ಚಿತ್ರಗಳಿಗೆ ಪ್ರಚಾರ ಕೊಡುವುದು ಸೂಕ್ತವಲ್ಲ. ಕನ್ನಡ ಪೋರ್ಟಲ್ ಎಂದು ಬಿಂಬಿಸಿ ಅದರಿಂದ ಮಿಂಬಲೆಯನ್ನು ಜನಪ್ರೀಯಗೊಳಿಸಿ, ಒಳ್ಳೆ ಪುಟವೀಕ್ಷಣೆಗಳನ್ನು (ಹಿಟ್ಸ್) ಪಡೆದುಕೊಂಡು ಈಗ ಕನ್ನಡೇತರ ಚಿತ್ರಗಳಿಗೆ ಮಣೆ ಹಾಕುವುದು ಸರಿಯೇ.? ಕನ್ನಡ ನಟ-ನಟಿಯರು ಅಥವಾ ಕರ್ನಾಟಕ ಮೂಲದವರು ಯಾವುದೋ ತೆಲುಗು ತಮಿಳು ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದ ಮಾತ್ರಕ್ಕೆ ಚಿತ್ರವನ್ನು ವೇದಿಕೆಯಲ್ಲಿ ಪ್ರಚಾರ ಕೊಡುವುದು ಒಪ್ಪತಕ್ಕದ್ದಲ್ಲ. ಚಿತ್ರಲೋಕ ಕನ್ನಡ ಮೆಗಾ ಪೋರ್ಟಲ್ ಹೆಸರಿನಲ್ಲಿರುವ ಹಾಗೆ ತನ್ನ ಕೆಲಸದಲ್ಲೂ ಕನ್ನಡಕ್ಕೆ ಮಾತ್ರ ಮೀಸಲಿರಬೇಕಾದ್ದು ಸರಿಯಾದ ನಡೆಯಾಗಿದೆ.

No comments:

Post a Comment

ನಿಮ್ಮ ಮಾತು...