Tuesday 19 June 2012

ಕನ್ನಡ ಸಮಾಜದ ಜನರಿಗೆ ಸೇವೆ ಕಡೆಗಣಿಸುವುದು ಸಾಮಾಜಿಕ ಹೊಣೆಗಾರಿಕೆ ಹೇಗಾಗುತ್ತದೆ.?


ಇತ್ತೀಚಿಗೆ ನಮ್ಮ ಕೆ.ಎಸ್.ಆರ್.ಟಿ.ಸಿ ಮತ್ತು ಬಿ.ಎಮ್.ಟಿ.ಸಿ ಸಂಸ್ಥೆಗಳ ಬ್ಯಾಂಕ್ ಖಾತೆಯನ್ನು ೨೦೦೯-೧೦ ನೇ ಸಾಲಿಗೆ ತೆರಿಗೆ ಕಟ್ಟಿಲ್ಲ ಎಂಬ ಕಾರಣಕ್ಕೆ ಮುಟ್ಟುಗೋಲು ಹಾಕಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಸಂಸ್ಥೆಗಳು ನಮ್ಮದು ಉದಾರತೆಯ ತತ್ವದಡಿ ಕೆಲಸ ನಿರ್ವಹಿಸುವ ಸಂಸ್ಥೆಗಳಾಗಿದ್ದು, ಎರಡೂ ಸಂಸ್ಥೆಗಳು ಸಾರ್ವಜನಿಕರಿಗೆ ಸಾರಿಗೆ ಸೇವೆ ನೀಡುವುದರ ಮೂಲಕ ಸಾಮಾಜಿಕ ಹೊಣೆಗಾರಿಕೆ ಪ್ರದರ್ಶಿಸುತ್ತಿದೆ. ಅಷ್ಟೇ ಅಲ್ಲದೇ ಬಂದ ಲಾಭವನ್ನು ಹೊಸ ಬಸ್ ಸೇವೆಯನ್ನು ನೀಡುವುದಕ್ಕಾಗಿ ಬಳಸಲಾಗುತ್ತಿದೆ ಎಂದು
ಹೇಳಿಕೊಂಡಿದೆ. ಎಲ್ಲವೂ ಸರಿ. ಆದರೆ ಇಲ್ಲಿ ಪ್ರಶ್ನೆ ಏಳುವುದು, ಉದಾರತೆ ತತ್ವದಡಿ ಕೆಲಸ ನಿರ್ವಹಿಸುವ ಒಂದು ಲಾಭ ರಹಿತ ಸಂಸ್ಥೆಯಿಂದ ಒಳ್ಳೆಯ ಗುಣಮಟ್ಟದ, ಮಿತವ್ಯಯದ ಮತ್ತು ಗ್ರಾಹಕ ಸ್ನೇಹಿಯಾದ ಸೇವೆಯನ್ನೇ ಜನರು ನಿರೀಕ್ಷೀಸುತ್ತಾರೆ. ಸಂಸ್ಥೆಯ ದ್ಯೇಯೊದ್ದೇಶವು ಅದೇ ಆಗಿರಬೇಕಾಗುತ್ತದೆ.
ಹಾಗಾದರೆ ಸಮಸ್ಯೆ ಎಲ್ಲಿದೆ.?
ಬಿ.ಎಮ್.ಟಿ.ಸಿ ಯನ್ನು ಪಕ್ಕಕ್ಕಿಟ್ಟು ಕೆ.ಎಸ್.ಆರ್.ಟಿ.ಸಿ ಬಗ್ಗೆ ಮಾತ್ರ ಮಾತನಾಡುವುದಾದರೆ, ಉತ್ತಮ ಗುಣಮಟ್ಟದ ಸೇವೆಯಿಂದ ಲಾಭದಾಯಕ ಸಂಸ್ಥೆಯಾಗಿರುವ ಕೆ.ಎಸ್.ಆರ್.ಟಿ.ಸಿ. ಇಂದು ಪ್ರಯಾಣಿಕರಿಗೆ ಕೆಲವು ಹೈಟೆಕ್ ಸೇವೆ ಒದಗಿಸುತ್ತಿದ್ದು, ಸಂಸ್ಥೆಯ ಸಿಬ್ಬಂದಿ ತಮ್ಮ ಪ್ರವ್ರತ್ತಿ ಹಾಗೂ ಕೌಶಲ್ಯಗಳನ್ನು ಕಾಲಕ್ಕೆ ತಕ್ಕಂತೆ ಬದಲಿಸಿಕೊಂಡಿದೆ. ಹೈಟೆಕ್ ಸೇವೆ ಮತ್ತದರ ಗುಣಮಟ್ಟದ ಸೇವೆಗಳಲ್ಲಿ ಹೆಚ್ಚಿನವು ಅಂತರಾಜ್ಯ ಊರುಗಳಿಗೆ ಲಭ್ಯವಿದ್ದು, ಮುಂಬೈ, ಚೆನ್ನೈ, ಹೈದರಾಬಾದ್, ಎರ್ನಾಕುಲಮ್ ನಂತಹ ಹೊರ ರಾಜ್ಯಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೆ ಇದರ ಹೆಚ್ಚಿನ ಲಾಭ ದೊರೆಯುತ್ತಿದೆ ಎಂಬುದು ಒಂದು ಕಡೆಯಾದರೆ, ಹೈಟೆಕ್ ಸೇವೆ ಮೂಲಕ ಹೈಟೆಕ್ ಗ್ರಾಹಕರನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲಿ ತಮ್ಮ ಸಂಪರ್ಕ ಸಾಧನವಾಗಿ ಕೆ.ಎಸ್.ಆರ್.ಟಿ.ಸಿ ಯನ್ನೇ ನಂಬಿರುವ ಕೋಟ್ಯಂತರ ಮೂಲ ಕನ್ನಡ ಗ್ರಾಹಕರನ್ನು ಅದು ಮರೆತಿರುವುದು ಮತ್ತೊಂದು ಕಡೆ. ಸಂಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ತಂದರೂ ಮೂಲ ಗ್ರಾಹಕರ ನುಡಿಯಾದ ಕನ್ನಡವನ್ನು ತಮ್ಮ ಸೇವೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಟಾನ ಮಾಡುವಲ್ಲಿ ವಿಫಲವಾಗಿದೆ. ಕರ್ನಾಟಕದ ಊರುಗಳ ನಡುವಿನ ಸಂಪರ್ಕವನ್ನು ಗಟ್ಟಿಗೊಳಿಸಬೇಕಾದ ಸಂಸ್ಥೆ ಇತ್ತೀಚಿನ ದಿನಗಳಲ್ಲಿ ಹೊರ ರಾಜ್ಯದ ಸಂಪರ್ಕವನ್ನು ಹೆಚ್ಚು ಹೆಚ್ಚು ಸಾಧಿಸಲು ವಿಪರೀತ ಮಾರುಕಟ್ಟೆ ತಂತ್ರ ಅನುಸರಿಸುತ್ತಿದೆ. ಹೀಗಾಗಿ ಕರ್ನಾಟಕದ ಒಳಗಿನ ಸಂಪರ್ಕವನ್ನು ಗಟ್ಟಿಗೊಳಿಸುವ ಸಂಸ್ಥೆಯ ಮೂಲ ಉದ್ದೇಶವನ್ನೇ ಕಡೆಗಣಿಸಿದೆ. ಕರ್ನಾಟಕದ ಮಂದಿಗೆ ಒಳ್ಳೆಯ ಸೇವೆ ನೀಡಬೇಕು ಎಂಬ ಕಾಳಜಿಗಿಂತ ಮಾರುಕಟ್ಟೆ ವಿಸ್ತರಿಸಬೇಕು ಎಂಬ ಹಪಾಹಪಿನೇ ಇತ್ತೀಚಿಗೆ ಎದ್ದು ಕಾಣುತ್ತಿದೆ. ಇದರ ಪರಿಣಾಮವೇ, ಗುಣಮಟ್ಟದ ಬಸ್ಸುಗಳ ಸೇವೆ ರಾಜ್ಯದ ಅನೇಕ ಊರುಗಳಿಗೆ ಇಲ್ಲದಿರುವುದು, ಮೂಲಕ ರಾಜ್ಯದ ಜನರನ್ನು ಗುಣಮಟ್ಟದ ಸೇವೆಗಳಿಂದ ವಂಚಿತರನ್ನಾಗಿಸಿದೆ. ಇದು ಖಾಸಗಿಯವರಿಗೆ ದಾರಿ ಮಾಡಿಕೊಟ್ಟು, ಅವರು ಮನಬಂದಂತೆ ದರಗಳನ್ನು ವಸೂಲಿ ಮಾಡಲು ಅನುಕೂಲ ಮಾಡಿಕೊಟ್ಟಿದೆ. ಅಂತರಾಜ್ಯ ಸೇವೆ ಇರಕೂಡದು ಎಂಬುದು ವಾದವಲ್ಲ. ಕರ್ನಾಟಕದ ಒಳಗಿನ ಸೇವೆಯನ್ನು ಕಡಿತಗೊಳಿಸಿ, ಇಲ್ಲಿನ ಸೇವೆಯನ್ನು ನಿರ್ಲಕ್ಷಿಸಿ ಹೊರರಾಜ್ಯದ ಸಂಪರ್ಕವನ್ನು ವಿಸ್ತರಿಸುವುದು ಎಷ್ಟರ ಮಟ್ಟಿಗೆ ಸರಿ.? ಇನ್ನು, ಕರ್ನಾಟಕ ಸರಕಾರದ ಸಂಸ್ಥೆಯಾದರೂ ಅನೇಕ ಸೇವೆಗಳಲ್ಲಿ  ಕರ್ನಾಟಕ ಜನರ ಅನುಕೂಲದ ಬಾಶೆಯಾದ ಕನ್ನಡಕ್ಕೆ ಸ್ಥಾನ ಕಲ್ಪಿಸದೇ ಬಹುತೇಕ ಸೇವೆಗಳು ಇಂಗ್ಲೀಶಮಯವಾಗಿವೆ. ಸಂಸ್ಥೆಯ ಮಿಂಬಲೆ, ಮುಂಗಡ ಟಿಕೆಟ್ ಗಳಲ್ಲಿ (ಇತ್ತೀಚಿಗೆ ವಿಶೇಶ ಸೂಚನೆಗಳಲ್ಲಿ ಮಾತ್ರ ಕನ್ನಡವನ್ನು ಅಳವಡಿಸಲಾಗಿದೆ) ಕನ್ನಡ ಇಲ್ಲದಂತಾಗಿದೆ. ಬಸ್ಸುಗಳ ಮುಂಬಾಗದಲ್ಲಿ ಮೊದಲು ಕಾಣಿಸುತ್ತಿದ್ದ .ರಾ..ಸಾ. ಅನ್ನೋ ತಲೆಬರಹ ಕೂಡ ಇಂಗ್ಲೀಶಮಯವಾಗಿದೆ. ಹಾಗೆಯೇ ನಮ್ಮ ಊರುಗಳ ಹೆಸರುಗಳು ರಾಜ್ಯ ಸರ್ಕಾರದ ಸುತ್ತೋಲೆ ಪ್ರಕಾರ ಇಂಗ್ಲೀಶಿನಲ್ಲೂ 'Bengaluru, Mysuru, Hubballi  ಎಂದೇ ಆಗಿರಬೇಕು. ಅದು ಕೂಡ ಕಾಣಸಿಗುವುದಿಲ್ಲ. ಇನ್ನು, ಬಸ್ಸುಗಳಲ್ಲಿನ ಮನರಂಜನೆಯಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಲು ಹಿಂದೇಟು ಹಾಕುತ್ತಿರುವುದು ಕನ್ನಡೇತರ ಗ್ರಾಹಕರನ್ನು ಒಲಿಸಿಕೊಳ್ಳುವ ತಂತ್ರವಾಗಿ ಕಾಣುತ್ತಿದೆ. ಎಲ್ಲ ಸಂಗತಿಗಳು ಕೆ.ಎಸ್.ಆರ್.ಟಿ.ಸಿ ಹೇಳಿಕೊಂಡಿರುವ ಸಾರ್ವಜನಿಕರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ಸಾಮಾಜಿಕ ಹೊಣೆಗಾರಿಕೆಯ ಮಾತುಗಳ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ.


ಕರ್ನಾಟಕದ ಜನತೆಯ ನಿರೀಕ್ಷೆಗಳೇನು.? 
ಕೆ.ಎಸ್.ಆರ್.ಟಿ.ಸಿ. ಕರ್ನಾಟಕದ ಊರುಗಳ ನಡುವೆ ಉತ್ತಮ ಸಂಪರ್ಕ ಸಾಧನವಾಗಿ ಕನ್ನಡ ಜನರಿಗೆ ಗುಣಮಟ್ಟದ ಮತ್ತು ಮಿತವ್ಯಯದ ಸೇವೆ ನೀಡುವ ಉದ್ದೇಶದಿಂದಲೇ ಹುಟ್ಟಿಕೊಂಡಿರುವಂಥ ಸಂಸ್ಥೆ. ಒಂದು ಲಾಭ ರಹಿತವಾದ ಉದಾರತೆಯ ಸಂಸ್ಥೆಗೆ ಇರಬೇಕಾದ ಗುಣಲಕ್ಷಣಗಳೇ ಇವು. ಸಂಸ್ಥೆಯಲ್ಲಿ ಲಭ್ಯವಿರುವ ಗುಣಮಟ್ಟದ ಸೇವೆಗಳೇ ಇವತ್ತು ಅನೇಕ ಪ್ರಶಸ್ತಿಗಳು ಸಂಸ್ಥೆಗೆ ಅರಸಿ ಬರುವ ಹಾಗೆ ಮಾಡಿವೆ ಮತ್ತು ರಾಜ್ಯಕ್ಕೆ ಹೆಮ್ಮೆ ತಂದಿವೆ ಎಂಬುದರಲ್ಲಿ ಎರಡನೇ ಮಾತಿಲ್ಲ. ಆದರೆ ರಾಜ್ಯದ ಜನರು ಸಂಸ್ಥೆಯಿಂದ ನಿರೀಕ್ಷಿಸುವುದು ಬರೀ ಹೆಮ್ಮೆ ಅಲ್ಲ. ಸಂಸ್ಥೆಯಲ್ಲಿ ನೀಡಲಾಗುವ ಸೇವೆಗಳಿಂದ ತಮಗಾಗುವ ಅನುಕೂಲಗಳನ್ನು ಜನರು ಹೆಚ್ಚು ನಿರೀಕ್ಷಿಸುವುದು. ಸಂಸ್ಥೆಯಲ್ಲಿನ ವ್ಯವಸ್ಥೆ ಗ್ರಾಹಕರ ನುಡಿಯಾದ ಕನ್ನಡದಲ್ಲಿದ್ದಾಗ ಮಾತ್ರ ಹೆಚ್ಚೆಚ್ಚು ಜನರಿಗೆ ಅದರಿಂದ ಅನುಕೂಲವಾಗಲು ಸಾದ್ಯ. ಹೀಗಾಗಿ ಸಂಸ್ಥೆಯಲ್ಲಿನ ಎಲ್ಲ ಸೇವೆಗಳು ಕನ್ನಡದಲ್ಲಿ ದೊರೆಯುವಂತಾಗಲಿ. ಇನ್ನು, ಬಸ್ಸುಗಳಲ್ಲಿನ ಮನರಂಜನೆ (ಒಂದು ವೇಳೆ ಲಭ್ಯವಿದ್ದರೆ) ಕಡ್ಡಾಯವಾಗಿ ಕನ್ನಡದಲ್ಲಿ ಇರುವಂತಾಗಲಿ. ಕೊನೆಯದಾಗಿ, ಮಾರುಕಟ್ಟೆ ವ್ಯಾಪ್ತಿ ವಿಸ್ತರಣೆಗಿಂತ, ಲಾಭದ ಚಿಂತೆಗಿಂತ ಕನ್ನಡ ಜನರಿಗೆ ಗುಣಮಟ್ಟದ ಮತ್ತು ಗ್ರಾಹಕ ಸ್ನೇಹಿ ಸೇವೆ ನೀಡುವ ಮೂಲಕ ಕರ್ನಾಟಕದ ಊರುಗಳ ನಡುವಿನ ಸಂಪರ್ಕವನ್ನು ಪರಿಣಾಮಕಾರಿಯಾಗಿಸುವುದೇ ಸಂಸ್ಥೆಯ ಮೊದಲ ಆದ್ಯತೆ ಆಗಬೇಕು ಎಂಬುದು ಸಂಸ್ಥೆಯ ಗ್ರಾಹಕರಾದ ನಮ್ಮ ನಿರೀಕ್ಷೆಯಾಗಿದೆ.

No comments:

Post a Comment

ನಿಮ್ಮ ಮಾತು...