Sunday 16 December 2012

ಕೊನೆಯಾಗಬೇಕಿದೆ ಡಬ್ಬಿಂಗ್ ವಿರೋಧಿಗಳ ಪಾಳೆಗಾರಿಕೆ.!


ಕರ್ನಾಟಕದಲ್ಲಿ ಡಬ್ಬಿಂಗ್ ಏಕೆ ನಿಷೇಧಿಸಲಾಗಿದೆ ಎಂಬುದರ ಕುರಿತು ಸ್ಪಷ್ಟನೆ ಕೋರಿ ಸಿಸಿಐ ಅಂದರೆ ಕಾಂಪಿಟಿಷನ್ ಕಮಿಷನ್ ಆಫ್ ಇಂಡಿಯಾದವರು ಚಿತ್ರೋದ್ಯಮಕ್ಕೆ ಸಂಭಂದಿಸಿದ ಸಂಸ್ಥೆಗಳಿಗೆ ನೋಟಿಸ್ ಕಳುಹಿಸಿದೆ. ನೋಟಿಸ್ ಬರುತ್ತಿದ್ದಂತೆ ಚಿತ್ರರಂಗದಲ್ಲಿ ಒಂದು ರೀತಿಯ ಆತಂಕದ ವಾತಾವರಣ ಹುಟ್ಟಿಕೊಂಡಿತು. ಯಾಕೆ ಇದಕ್ಕೆ ಚಿತ್ರರಂಗದವರು ಇಷ್ಟು ಆತಂಕ ಪಡಬೇಕು.? ಚಿತ್ರರಂಗದವರ ವಾದವೇನು.? ಕನ್ನಡ ಪ್ರೇಕ್ಷಕನ ಪರಿಸ್ಥಿತಿ ಏನು.? ಕನ್ನಡ ಪ್ರೇಕ್ಷಕನ ಪಾತ್ರ ಏನು.? ಸಂವಿಧಾನ ಏನು ಹೇಳುತ್ತೆ.? ಎಲ್ಲವನ್ನೂ ತುಸು ನೋಡೋಣ ಬನ್ನಿ.

ಮೊದಲಿಗೆ, ಕನ್ನಡ ಚಿತ್ರರಂಗ ಬರೀ ಕಲೆ, ಸಂಸ್ಕೃತಿ, ಸೃಜನಶೀಲತೆಗಳನ್ನು ಪಸರಿಸಲು ಮಾತ್ರ ಸೀಮಿತ ಅಲ್ಲ. ಅಲ್ಲಿ ಕೊಡು ಕೊಳ್ಳುವಿಕೆಯ ವ್ಯವಹಾರ ಇರುತ್ತೆ, ಲಾಭ ನಷ್ಟಗಳ ಚಿಂತನೆ ಇರುತ್ತೆ, ಪ್ರೇಕ್ಷಕನ ಎದುರು ತಮ್ಮ ಉತ್ಪನ್ನ ಗೆಲ್ಲಬೇಕು ಎಂಬ ಹಂಬಲ ಇರುತ್ತೆ, ಉತ್ಪನ್ನವನ್ನು ತಯಾರು ಮಾಡುವಾಗ ಗ್ರಾಹಕನ ಅಭಿರುಚಿ ಬಗ್ಗೆ ವಿಶ್ಲೇಷಣೆಗಳು ನಡೆಯುತ್ತೆ. ತಮ್ಮ ಉತ್ಪನ್ನವನ್ನು ತಯಾರು ಮಾಡುವಾಗ ಕಲೆ, ಸಂಸ್ಕೃತಿ, ಸೃಜನಶೀಲತೆಗಳನ್ನು ಕಚ್ಚಾ ವಸ್ತುಗಳನ್ನಾಗಿ ಬಳಸಿಕೊಳ್ಳಲಾಗುತ್ತೆ. ಹೀಗೆ ಒಂದು ಉದ್ಯಮದಲ್ಲಿ ನಡೆಯುವ ಎಲ್ಲ ಬಗೆಯ ವಿಚಾರ ವಿನಿಮಯಗಳು ಇಲ್ಲಿ ನಡೆಯುತ್ತವೆ. ಆದ್ದರಿಂದ ಯಾವ ಅರ್ಥದಲ್ಲೂ ಚಿತ್ರರಂಗವನ್ನು ಒಂದು ಉದ್ಯಮದ ಹೊರತಾಗಿ ನೋಡಲು ಸಾದ್ಯವಿಲ್ಲ. ಚಿತ್ರರಂಗ ಕೂಡ ಒಂದು ಉದ್ಯಮವೆಂದಾದರೆ, ಇತರ ಉದ್ಯಮಗಳಿಗೆ ಇರುವ ಹಾಗೆ ಅದಕ್ಕೂ ಗ್ರಾಹಕರು ಇರಲೇಬೇಕಲ್ಲವೇ.? ಹಾಗಾದರೆ ಗ್ರಾಹಕ ಯಾರು ಎಂಬ ಪ್ರಶ್ನೆಗೆ ಚಿತ್ರರಂಗ ಎಂಬ ಉದ್ಯಮದಲ್ಲಿ ತಯಾರಾಗುವ ಚಲನಚಿತ್ರ ಎಂಬ ಉತ್ಪನ್ನಗಳನ್ನು ಒಪ್ಪಿಕೊಳ್ಳುವ ಅಥವಾ ಒಪ್ಪಿಕೊಳ್ಳದಿರುವ ಸಾಮರ್ಥ್ಯ ಇರುವ ಪ್ರೇಕ್ಷಕನೇ ಇದರ ಗ್ರಾಹಕ. ಹೇಗೆ ಎಲ್ಲ ಉದ್ಯಮಗಳು ಗ್ರಾಹಕನ ಮೇಲೆ ಅವಲಂಬಿತವಾಗಿರುತ್ತವೆಯೋ ಚಿತ್ರರಂಗವೂ ಕೂಡ ನಿಂತಿರುವುದು ಪ್ರೇಕ್ಷಕನ ಮೇಲೆಯೇ. ಕನ್ನಡದಲ್ಲೇ ಮನರಂಜನೆ ಲಭ್ಯವಾಗಬೇಕೆಂಬುದು ಪ್ರೇಕ್ಷಕನ ನಿರೀಕ್ಷೆ. ಸದ್ಯದ ಪರಿಸ್ಥಿತಿಯಲ್ಲಿ ಕನ್ನಡ  ಚಿತ್ರರಂಗದಲ್ಲಿ ತಯಾರಾಗುವ ಅಂದರೆ ಸ್ವಮೇಕ್ ಮತ್ತು ರಿಮೇಕ್ ಚಿತ್ರಗಳನ್ನು ಮಾತ್ರ ಕನ್ನಡ ಪ್ರೇಕ್ಷಕ ನೋಡಬಹುದಾಗಿದೆ. ಇತರ ಭಾಷೆಗಳಲ್ಲಿ ತಯಾರಾಗುವ ಉತ್ತಮ ಚಿತ್ರಗಳನ್ನು ಕನ್ನಡದಲ್ಲೇ ನೋಡಲು ಕನ್ನಡ ಪ್ರೇಕ್ಷಕನಿಗೆ ಸಾದ್ಯವಿಲ್ಲ. ಇದಕ್ಕೆ ಕರ್ನಾಟಕದಲ್ಲಿ ಅಘೋಷಿತವಾಗಿ ಜಾರಿಯಲ್ಲಿರುವ ಡಬ್ಬಿಂಗ್ ನಿಷೇಧವೇ ಕಾರಣ. ಹೀಗಾಗಿ ಪರಭಾಷೆಯ ಉತ್ತಮ ಚಿತ್ರಗಳನ್ನು ನೋಡಲು ಬಯಸುವ ಪ್ರೇಕ್ಷಕರಿಗೆ ಆಯ್ಕೆ ಸ್ವಾತಂತ್ರ್ಯವೇ ಇಲ್ಲ. ಸಂವಿಧಾನದಲ್ಲೂ ಡಬ್ಬಿಂಗ್ ನಿಷೇಧಕ್ಕೆ ಯಾವುದೇ ಮಾನ್ಯತೆ ಇಲ್ಲದಿದ್ದರೂ ಆಗಿನ ಸಂಧರ್ಭಕ್ಕೆ ತಕ್ಕಂತೆ ವಿಧಿಸಿದ್ದ ಡಬ್ಬಿಂಗ್ ನಿಷೇಧವನ್ನು ನಮ್ಮ ಚಿತ್ರರಂಗದವರು ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬೀಳುವ ಹಾಗೆ ಈಗಲೂ ಮುಂದುವರೆಸಿಕೊಂಡು ಬಂದಿದ್ದಾರೆ. ಕಳೆದ ಒಂದು ದಶಕದಲ್ಲಿ ಅಸಂವಿಧಾನಿಕ ನಿಯಮದ ವಿರುದ್ದ ಅನೇಕ ಬಾರಿ ಚರ್ಚೆಗಳು ನಡೆದಿವೆ. ಆಗೆಲ್ಲ ಸಂಧರ್ಭಗಳಲ್ಲಿ ಡಬ್ಬಿಂಗ್ ನಿಷೇಧವನ್ನು ಜೀವಂತವಾಗಿರಿಸಿಕೊಳ್ಳಲು ಹಲವರು ಅದನ್ನು ಕನ್ನಡ ಪರ ಎಂದು ಬಿಂಬಿಸುವ ಪ್ರಯತ್ನವನ್ನು ನಡೆಸಿದರು ಮತ್ತು ಈಗಲೂ ನಡೆಯುತ್ತಲಿವೆ.

ಡಬ್ಬಿಂಗ್ ನಿಷೇಧ ಯಾವ ದೃಷ್ಟಿಕೋನದಲ್ಲಿ ಕನ್ನಡ ಪರ ಎಂಬುದೇ ಅರ್ಥವಾಗದ ಸಂಗತಿಯಾಗಿದೆ. ಯಾಕೆಂದರೆ ಡಬ್ಬಿಂಗ್ ನಿಷೇಧದಿಂದ ರಾಜ್ಯದಲ್ಲಿ ಬಿಡುಗಡೆಯಾಗುವ ಇತರ ಪರಭಾಷಾ ಚಿತ್ರಗಳನ್ನು, ಟಿವಿ ಚಾನಲ್ ಕಾರ್ಯಕ್ರಮಗಳನ್ನು ನಾವು ಆಯಾ ಭಾಷೆಯಲ್ಲೇ ನೋಡಬೇಕೆ ಹೊರತು ಕನ್ನಡದಲ್ಲಿ ನೋಡಲು ಸಾದ್ಯವಿಲ್ಲ. ಇತ್ತೀಚಿಗೆ ಬಂದ ದಾರಾವಾಹಿ ಸತ್ಯ ಮೇವ ಜಯತೇಯನ್ನು ದೇಶದ ಎಲ್ಲ ಜನರು ತಮ್ಮದೇ ಭಾಷೆಯಲ್ಲಿ ನೋಡಿದರೂ ಕನ್ನಡಿಗರು ಮಾತ್ರ ಬೇರೆ ಭಾಷೆಯಲ್ಲಿ ನೋಡಬೇಕಾದ ದುಸ್ಥಿತಿ ಬಂದಿದ್ದು ಡಬ್ಬಿಂಗ್ ನಿಷೇಧದ ಕಾರಣದಿಂದಲೇ. ವಿಭಿನ್ನ ತಂತ್ರಜ್ನಾನ ಆಧಾರವಾಗಿಟ್ಟುಕೊಂಡು ಇತ್ತೀಚಿಗೆ ಬಿಡುಗಡೆಯಾದ ಅವತಾರ್ ಥರದ ಅನೇಕ ಬಹುಕೋಟಿ ವೆಚ್ಚದ ಇಂಗ್ಲೀಷ್ ಚಲನಚಿತ್ರಗಳನ್ನು ದೇಶದ ಇತರ ಭಾಷಾ ಜನಾಂಗದ ಜನರು ಅವರವರ ಭಾಷೆಯಲ್ಲಿ ನೋಡಿ ಆನಂದಿಸಿದರೆ ನಾವು ಕನ್ನಡಿಗರು ಕನ್ನಡದಲ್ಲಿ ನೋಡಲು ಸಾದ್ಯವಾಗದೇ ಇದ್ದಿದ್ದು ಕೂಡ ಇದೇ ಡಬ್ಬಿಂಗ್ ನಿಷೇಧದ ಕಾರಣದಿಂದಲೇ. ಇನ್ನು, ಡಿಸ್ಕವರಿ, ನ್ಯಾಷನಲ್ ಜಿಯೋಗ್ರಾಫಿಕ್ಸ್, ಅನಿಮಲ್ ಪ್ಲಾನೇಟ್ ನಂತಹ ಜ್ನಾನ ವಿಜ್ನಾನ ಹೆಚ್ಚಿಸುವ ಕಾರ್ಯಕ್ರಮಗಳನ್ನು ದೇಶದ ಇತರ ಭಾಗದ ಮಕ್ಕಳು ತಮ್ಮ ತಾಯ್ನುಡಿಯಲ್ಲಿ ನೋಡಿ ತಿಳಿಯಬೇಕಾದರೆ ನಮ್ಮ ಕನ್ನಡದ ಮಕ್ಕಳು ಮಾತ್ರ ಇಂಗ್ಲೀಷನ್ನೋ, ಹಿಂದಿಯನ್ನೋ ಅವಲಂಬಿಸಬೇಕಾಗಿ ಬಂದಿರುವುದಕ್ಕೂ ಕಾರಣ ಇದೇ ಡಬ್ಬಿಂಗ್ ನಿಷೇಧವೆಂಬ ಅಸಂವಿಧಾನಿಕ ಕಟ್ಟುಪಾಡು. ಡಬ್ಬಿಂಗ್ ನಿಷೇಧದಿಂದ ಇವತ್ತು ಕನ್ನಡದಲ್ಲಿ ಇಲ್ಲಗಳ ದೊಡ್ಡ ಸರಮಾಲೆಯೇ ಎದ್ದು ಕಾಣುತ್ತದೆ. ಕನ್ನಡದಲ್ಲಿ ಮನರಂಜನೆಗೆ ಅವಕಾಶ ನೀಡದಿರುವುದು ಹೇಗೆ ಕನ್ನಡ ಪರವಾಗುತ್ತದೆ.? ಇನ್ನೂ, ಆಶ್ಚರ್ಯದ ಸಂಗತಿಯೆಂದರೆ ಕರ್ನಾಟಕದಲ್ಲಿ ಕನ್ನಡದ ಡಬ್ಬಿಂಗಿಗೆ ಮಾತ್ರ ನಿಷೇಧ ಎಂಬ ಕಟ್ಟುಪಾಡು ಇದೆಯೇ ಹೊರತು ಇತರ ಭಾಷೆಗಳ ಡಬ್ಬಿಂಗಿಗೆ ಇಲ್ಲ. ಅಂದರೆ, ಒಂದು ಇಂಗ್ಲೀಷ್ ಚಿತ್ರ ಕರ್ನಾಟಕದಲ್ಲಿ ತಮಿಳಿನಲ್ಲಿ, ತೆಲುಗಿನಲ್ಲಿ ಡಬ್ ಆಗಿ ಬಿಡುಗಡೆ ಆಗುತ್ತದೆ ಆದರೆ ಸ್ಥಳೀಯ ಜನರ ನುಡಿ ಕನ್ನಡದಲ್ಲಿ ಡಬ್ಬಿಂಗ್ ಆಗುವುದಿಲ್ಲ. ಒಂದು ಕಡೆ ಡಬ್ಬಿಂಗ್ ವಿಷಯದಲ್ಲಿ ಕನ್ನಡತನವನ್ನು ಮುಂದೆ ಮಾಡುವ ಡಬ್ಬಿಂಗ್ ವಿರೋದಿಗಳು ಕನ್ನಡ ಸಮಾರಂಭಗಳಲ್ಲಿ ಪರಭಾಷೆಗಳ ಹಾಡಿಗೆ ಕುಣಿಯುವುದು, ಪರಭಾಷೆ ಚಿತ್ರಗಳಿಗೆ ಪ್ರಚಾರ ಕೊಡುವುದು, ಕನ್ನಡ ಪ್ರೇಕ್ಷಕರನ್ನು ಬೈಯ್ಯುವುದು ಮಾಡುತ್ತಾರೆ. ಇವರ ಕನ್ನಡಪರ ನಿಲುವು ತುಂಬಾ ಗೊಂದಲಮಯವಾಗಿದೆ.

ಪ್ರಜಾಪ್ರಭುತ್ವದಲ್ಲಿ ಡಬ್ಬಿಂಗ್ ನಿಷೇಧಕ್ಕೆ ಯಾವ ಮಾನ್ಯತೆಯೂ ಇಲ್ಲ. ಅದು ಸಂವಿಧಾನ ಬಾಹಿರ ಕ್ರಮವಾಗಿದೆ. ಡಬ್ಬಿಂಗ್ ನಿಷೇಧ ಎಂಬ ಕಟ್ಟುಪಾಡು ಪ್ರೇಕ್ಷಕನಿಗಿರುವ ಆಯ್ಕೆ ಸ್ವಾತಂತ್ರ್ಯವನ್ನೇ ಕಸಿದುಕೊಳ್ಳುತ್ತದೆ. ಡಬ್ಬಿಂಗ್ ಅವಕಾಶದಿಂದ ತಕ್ಷಣಕ್ಕೆ ಕೆಲವರಿಗೆ ಹಿನ್ನೆಡೆಯಾಗಬಹುದು, ಆದರೆ ಸಮರ್ಥರು ಕಾಲಕ್ಕೆ ತಕ್ಕಂತೆ ಹೊಂದಿಕೊಂಡು ಅದನ್ನು ಖಂಡಿತ ಎದುರಿಸಿ ಮೇಲೆಳುತ್ತಾರೆ. ಕಂಪ್ಯೂಟರ್ ಬರುವಾಗಲೂ ನೌಕರರು ಬೀದಿಗೆ ಬೀಳುವ ಮಾತು ಬಂದಿರಲಿಲ್ಲವೇ.! ಈಗ ಅದೇ ನೌಕರರು ಕಂಪ್ಯೂಟರ್ ಕಲಿತು ಇನ್ನೂ ಹೆಚ್ಚಿನ ರೀತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಡಬ್ಬಿಂಗಿನಿಂದ ಸ್ಪರ್ಧೆ ಏರ್ಪಾಡಾಗುತ್ತದೆ. ಸ್ಪರ್ಧೆ ಗುಣಮಟ್ಟವನ್ನು ಸುಧಾರಿಸುತ್ತದೆ. ಕಾಳುಗಳನ್ನು ಜೊಳ್ಳಿನಿಂದ ಬೇರ್ಪಡಿಸುತ್ತದೆ. ಮೇಲಾಗಿ ಡಬ್ಬಿಂಗಿನಿಂದ ಕನ್ನಡದ ಮನರಂಜನೆಯ ವ್ಯಾಪ್ತಿ ಹೆಚ್ಚಾಗುತ್ತದೆ. ಮನರಂಜನೆಗೂ ಕನ್ನಡಕ್ಕೂ ಇರುವ ನಂಟು ಇನ್ನಷ್ಟು ಗಟ್ಟಿಗೊಳ್ಳುತ್ತದೆ. ವಿವಿಧ ರೀತಿಯ ಹೊಸ ಹೊಸ ಪ್ರಯೋಗಗಳಿಗೆ ನಾಂದಿ ಹಾಡುತ್ತದೆ. ಎಲ್ಲ ರೀತಿಯ ಮನರಂಜನೆಗೆ ಕನ್ನಡ ತೆರೆದುಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಕನ್ನಡಿಗರಲ್ಲಿರುವ ಕನ್ನಡತನ ಇನ್ನಷ್ಟು ಗಟ್ಟಿಯಾಗುತ್ತದೆ. ಕನ್ನಡ ಗೊತ್ತಿಲ್ಲದವರು ಕೂಡ ಮನರಂಜನೆಯ ಮೂಲಕ ಕನ್ನಡ ಕಲಿಯುವಂತಾಗುತ್ತದೆ. ಡಬ್ಬಿಂಗ್ ಅವಕಾಶದಿಂದ ಕನ್ನಡ ಮನರಂಜನೆಯ ಕ್ಷೇತ್ರವೇ ಕುಸಿದುಬಿಡುತ್ತದೆ ಅಥವಾ ಡಬ್ ಮಾಡಿದ ಕಾರ್ಯಕ್ರಮಗಳೆಲ್ಲವೂ ಯಶಸ್ವಿಯಾಗಿಬಿಡುತ್ತವೆ ಎನ್ನುವುದು ಊಹೆಗೂ ನಿಲುಕದ ಮಾತಾಗಿದೆ. ಕೊನೆಗೆ ಪ್ರೇಕ್ಷಕ ತನಗೇ ಇಷ್ಟವಾಗುವುದನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಸಧಬಿರುಚಿಯುಳ್ಳ, ಜನರಿಗೆ ತಲುಪುವ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ. ಒಟ್ಟಿನಲ್ಲಿ ಡಬ್ಬಿಂಗ್ ನಿಷೇಧದ ಸುತ್ತ ಮುತ್ತ ಕೆಲವರು ಕಟ್ಟಿಕೊಂಡಿರುವ ಪಾಳೆಗಾರಿಕೆ ಕೊನೆಗೊಳ್ಳಲಿ. ಡಬ್ಬಿಂಗಿಗೆ ಅವಕಾಶವಿರಲಿ. ಎಲ್ಲ ಬಗೆಯ ಮಾಹಿತಿ, ಮನರಂಜನೆ ಕನ್ನಡಿಗರಿಗೆ ಕನ್ನಡದಲ್ಲೇ ಸಿಗುವಂತಾಗಲಿ.
(ಕನ್ನಡಪ್ರಭ, ಹೊಸದಿಗಂತ ಮತ್ತು ಪ್ರಜಾವಾಣಿಯಲ್ಲಿ ಪ್ರಕಟವಾದ ಅಂಕಣ)

No comments:

Post a Comment

ನಿಮ್ಮ ಮಾತು...