Thursday 12 April 2012

ವಿ.ಆರ್.ಎಲ್ ಸಾರಿಗೆ ಮನರಂಜನೆ ಕನ್ನಡದಲ್ಲಿರಲಿ.

ನಮ್ಮ ನಾಡಿನ ಹೆಮ್ಮೆಯ ಉದ್ಯಮಿ ವಿಜಯ ಸಂಕೇಶ್ವರ ಅವರ ಸಮೂಹ ಸಂಸ್ಥೆ ವಿ.ಆರ್.ಎಲ್. ಇಂದು ವಿ.ಆರ್.ಎಲ್ ನಾಡಿನ ಹತ್ತಾರು ಲಕ್ಷ ಜನರಿಗೆ ಸೇವೆ ನೀಡುತ್ತಿದೆ, ಹತ್ತಾರು ಸಾವಿರ ಜನರಿಗೆ ಉದ್ಯೋಗ ಸೃಷ್ಟಿಸಿದೆ ಎಂಬುದು ಎಷ್ಟು ಸತ್ಯವೋ, ಇಂಥ ಒಂದು ಸಂಸ್ಥೆ ದೈತ್ಯಾಕಾರವಾಗಿ ಬೆಳೆಯುವುದರಲ್ಲಿ ಅದನ್ನು ಸಾರಿಗೆ, ಪತ್ರಿಕೋದ್ಯಮ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಪೋಷಿಸಿದ, ಪ್ರೋತ್ಸಾಹಿಸಿದ ಕನ್ನಡಿಗರ ಪಾತ್ರ ಬಹಳ ದೊಡ್ಡದು ಎಂಬುದು ಕೂಡ ಅಷ್ಟೆ ಸತ್ಯ


ಕನ್ನಡ ಮನರಂಜನೆಗೆ ಸಿಕ್ಕಿತು ಮನ್ನಣೆ
ಇಂಥ ಹೆಮ್ಮೆಯ ಸಂಸ್ಥೆಯಲ್ಲಿ ಕನ್ನಡೇತರ ಮನರಂಜನೆಗೆ ಈ ಮೊದಲು ಹೆಚ್ಚು ಒತ್ತು ಕೊಡಲಾಗುತ್ತಿತ್ತು. ತನ್ನ ಗ್ರಾಹಕರು ಕನ್ನಡ ಮನರಂಜನೆಗೆ ಆಗ್ರಹ ಪಡಿಸಿದರೂ ಡೋಂಟ್ ಕೇರ್ ಅನ್ನೋರೀತಿ ವರ್ತಿಸಿದ್ದ ವಿ.ಆರ್.ಎಲ್, ಅದನ್ನು ನಿರ್ಲಕ್ಷಿಸಿತ್ತು ಮತ್ತು ತಮ್ಮ ಬಸ್ಸುಗಳಲ್ಲಿನ ಕನ್ನಡೇತರ ಮನರಂಜನೆಯನ್ನು ಸಮರ್ಥಿಸಿಕೊಳ್ಳಲು, ಮನರಂಜನೆ ಕಡ್ಡಾಯ ಅಲ್ಲ, ಪೂರಕ (Complimentary) ಮಾತ್ರ ಮತ್ತು ಕನ್ನಡ ಪ್ರೇಮದ ಪಾಠ ಇನ್ನೊಬ್ಬರಿಂದ ಹೇಳಿಸಿಕೊಳ್ಳಬೇಕಿಲ್ಲ, ವಿ.ಆರ್.ಎಲ್ ಸಂಸ್ಥೆ ಕನ್ನಡಕ್ಕೆ ಪ್ರಾದಾನ್ಯತೆ ನೀಡಿದೆ ಎಂದೆಲ್ಲ ಹೇಳಿದ್ದರು. ಕನ್ನಡ ಪ್ರೇಮದ ಕಾರಣಕ್ಕೆ ಕನ್ನಡ ಚಿತ್ರವನ್ನು ಗ್ರಾಹಕರು ಆಗ್ರಹಿಸುತ್ತಾರೆ ಎಂದು ಅಂದುಕೊಳ್ಳುವುದು ಎಂಥ ಮೂರ್ಖತನ. ಇದೊಂದು ಕೆಟ್ಟ ಸಂಪ್ರದಾಯ ಹುಟ್ಟಿಕೊಳ್ಳುತ್ತಿದೆ. ಗ್ರಾಹಕರು ತಮ್ಮ ಅನುಕೂಲಕ್ಕಾಗಿ ಕನ್ನಡದ ಸೇವೆ ಕೇಳಿದರೆ ಕನ್ನಡ ಪ್ರೇಮಿ, ಅಬಿಮಾನಿ ಎಂದೆಲ್ಲ ಸಂಬೋದನೆಗಳು ಶುರು ಆಗಿ ಬಿಡುತ್ತವೆ. ಕನ್ನಡ ಮನರಂಜನೆಯ ಆಗ್ರಹದಲ್ಲೂ ಅನುಕೂಲ ಅಡಗಿದೆ ಹೊರತು ಕನ್ನಡ ಪ್ರೇಮದ ಪ್ರಶ್ನೆ ಅಪ್ರಸ್ತುತ. ಇನ್ನು, ಮನರಂಜನೆ ಪೂರಕನಾದರೂ ಆಗಿರ್ಲಿ, ಕಡ್ಡಾಯವಾದ್ರೂ ಆಗಿರ್ಲಿ, ಮನರಂಜನೆ ಹಾಕುವುದಾದರೆ ಬಸ್ಸಿನ ಸೇವೆ ಬಳಸುವ ಬಹುತೇಕ ಗ್ರಾಹಕರ ನುಡಿಯಾದ ಕನ್ನಡದ ಮನರಂಜನೆನೇ ಆಗಿರಲಿ. ನಮ್ಮ ಅನುಕೂಲಕ್ಕಾಗಿ ಕನ್ನಡದಲ್ಲಿ ಮನರಂಜನೆ ಕೊಡಿ ಎಂಬ ಗ್ರಾಹಕರ ನಿರಂತರ ಒತ್ತಾಯದ ಪರಿಣಾಮವಾಗಿ ವಿ.ಆರ್.ಎಲ್ ನಲ್ಲಿ ಬದಲಾವಣೆಯ ಗಾಳಿ ಈಚೆಗೆ ಬೀಸಲಾರಂಬಿಸಿತ್ತು. ಕರ್ನಾಟಕದಲ್ಲಿ ಸಂಚರಿಸುವ ತಮ್ಮ ಎಲ್ಲ ಬಸ್ಸುಗಳಲ್ಲಿ ಕನ್ನಡ ಚಲನಚಿತ್ರ ಮಾತ್ರ ಪ್ರದರ್ಶಿಸಲು ನಿರ್ದರಿಸಿದ್ದೇವೆ ಎಂಬ ಸಕಾರಾತ್ಮಕ ಉತ್ತರ ಬಂದಿತ್ತು. ಅಷ್ಟೇ ಅಲ್ಲದೇ ಮುಂಬರುವ ದಿನಗಳಲ್ಲಿ ಯಾವುದೇ ಅನ್ಯಬಾಶೆ ಚಲನಚಿತ್ರ ಪ್ರದರ್ಶಿಸಿದಲ್ಲಿ ಗಮನಕ್ಕೆ ತರಬೇಕೆಂದು ಹೇಳಿದ್ದರು. ಬದಲಾವಣೆ ಇಲ್ಲಿಯವರೆಗೂ ಪೂರ್ಣ ಪ್ರಮಾಣದಲ್ಲಿ ಅನುಷ್ಟಾನ ಬರದಿದ್ದರೂ, ಅಲ್ಲಲ್ಲಿ ಆಗಾಗ ಕೆಲವು ಲೋಪಗಳು ಕಂಡು ಬಂದರೂ ಕರ್ನಾಟಕದಲ್ಲಿ ಸಂಚರಿಸುವ ಬಸ್ಸುಗಳಲ್ಲಿ ಕನ್ನಡ ಮನರಂಜನೆಗೆ ಒತ್ತು ಕೊಟ್ಟಿರುವುದು ಕಾಣುತ್ತಿದೆ ಎಂಬುದು ಬದಲಾವಣೆಯ ಸ್ಪಷ್ಟ ನಿದರ್ಶನ.
ಅಂತರರಾಜ್ಯ ಸಾರಿಗೆಗೂ ಬೀಸಿದ ತಂಗಾಳಿ.
ಬದಲಾವಣೆ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿತ್ತು. ಮುಂಬಯಿ, ಪುಣೆ, ಹೈದರಾಬಾದಗಳಿಗೆ ತೆರಳುವ ಬಸ್ಸುಗಳಲ್ಲಿ ಎಂದಿನಂತೆ ಕನ್ನಡೇತರ ಮನರಂಜನೆ ಜಾರಿಯಲ್ಲಿತ್ತು. ದಿನವೂ ಊರುಗಳಿಗೆ ತೆರಳುವ ಬಸ್ಸುಗಳಲ್ಲಿ ಕೂಡ ಹೆಚ್ಚಿನವರು ಕನ್ನಡ ಬಲ್ಲವರೇ ಆಗಿರುವ ಕಾರಣ, ಅಂತರರಾಜ್ಯ ಬಸ್ಸುಗಳಲ್ಲೂ ಕನ್ನಡ ಮನರಂಜನೆ ಅಳವಡಿಸುವಂತೆ, ಪುಣೆಗೆ ಹೆಚ್ಚಾಗಿ ಸಂಚರಿಸುವ ಗೆಳೆಯ ಜಯತೀರ್ಥ ಅವರು ಸೇರಿದಂತೆ ಅನೇಕ ಗ್ರಾಹಕರು ಆಗ್ರಹಿಸಿದ ಪರಿಣಾಮವಾಗಿ, ವಿಜಾಪುರ ಪುಣೆ ಮದ್ಯೆ ಸಂಚರಿಸುವ ಬಸ್ಸಿನಲ್ಲಿ ಮೊನ್ನೆ ಕನ್ನಡ ಮನರಂಜನೆ ಹಾಕುವ ಪರಿಪಾಠ ಶುರು ಆಯಿತು. ಹೀಗಾಗಿ ಅಂತರರಾಜ್ಯ ಸಾರಿಗೆ ವ್ಯವಸ್ಥೆಯಲ್ಲೂ ಕನ್ನಡ ಮನರಂಜನೆ ಸಿಗುವ ಹಾಗಾಗಿದೆ. ಗ್ರಾಹಕರ ಆಗ್ರಹಕ್ಕೆ ಮನ್ನಣೆ ನೀಡಿದ ವಿ.ಆರ್.ಎಲ್ ನಡೆ ಅಬಿನಂದನಾರ್ಹ. ಕನ್ನಡ ಮನರಂಜನೆಯನ್ನು ಕಡ್ಡಾಯಗೊಳಿಸಿ ಕನ್ನಡಿಗರ ದ್ವನಿಯಾಗಲಿ ವಿ.ಆರ್.ಎಲ್ ಎಂಬುದು ಎಲ್ಲರ ಆಶಯ.
ಖಾಸಗಿ ಸಂಸ್ಥೆಯ ಗ್ರಾಹಕ ಸ್ನೇಹಿ ನೀತಿ ಸರಕಾರದಲ್ಲೇಕಿಲ್ಲ.!
ಖಾಸಗಿ ಸಂಸ್ಥೆಯಲ್ಲಿ ತಕ್ಕ ಮಟ್ಟಿಗೆ ಮನರಂಜನೆ ಅನುಕೂಲ ಗ್ರಾಹಕನಿಗೆ ದೊರಕಿದರೂ ಸರಕಾರದ ಸಂಸ್ಥೆಯಾದ ಕೆ.ಎಸ್.ಆರ್.ಟಿ.ಸಿ ವ್ಯವಸ್ಥೆಯಲ್ಲಿ ಅದು ಇನ್ನೂ ಮರಿಚಿಕೆಯಾಗಿದೆ. ಹಾಗೇ ನೋಡಿದರೆ, ಸರಕಾರದ ಆಡಳಿತ ನುಡಿ ಕನ್ನಡ ಆಗಿರುವಾಗ ಮತ್ತು ಕೆ.ಎಸ್.ಆರ್.ಟಿ.ಸಿ ಕೂಡ ಸರಕಾರದ ಆಡಳಿತದ ಪರಿದಿಯೊಳಗೆ ಬರುವಾಗ ಗ್ರಾಹಕನಿಂದ ಆಗ್ರಹ ಬರಲಿ, ಬರದೇ ಇರಲಿ, ಬಸ್ಸು ಚೆನ್ನೈಗಾದರೂ ಹೋಗಲಿ, ಹುಬ್ಬಳ್ಳಿಗಾದರೂ ಹೋಗಲಿ, ಮನರಂಜನೆ ಅಂತ ಇದ್ದರೆ ಕಡ್ಡಾಯವಾಗಿ ಅದು ಕನ್ನಡ ಮನರಂಜನೆನೇ ಇರಬೇಕು ಎಂಬ ನಿಯಮ ಮಾಡಬೇಕಿರುವುದು ಸಂಸ್ಥೆಯ ಜವಾಬ್ದಾರಿ ಅಂತ ಅನ್ನಿಸಲ್ವೇ. ನಿಟ್ಟಿನಲ್ಲಿ ಸಾರಿಗೆ ಸೇವೆಯನ್ನು ಬಳಸುವ ಗ್ರಾಹಕರ ಸಣ್ಣ ಮಟ್ಟದ ಕನ್ನಡ ಆಗ್ರಹ ದೊಡ್ಡ ಮಟ್ಟದ ಬದಲಾವಣೆಗೆ ಕಾರಣವಾಗಬಹುದು.

2 comments:

  1. ee Belavanigege Kaaranaraada ella kannadigarige nalavarikegalu... Namma K.S.R.T.C yallu ee reethi kannada anushtaanagondare adu mattondu santasada vishaya.

    ReplyDelete
  2. Kevala kelave jana kannadetararige kannada bittu avara bashe manoranjane needuvudannu KSRTC bittu bidali.

    ReplyDelete

ನಿಮ್ಮ ಮಾತು...