Sunday 8 April 2012

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಕನ್ನಡತನ

ದೇವನಹಳ್ಳಿಯಲ್ಲಿರುವ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (BIAL) 'ಕೆಂಪೇಗೌಡರ ಹೆಸರಿಡಲು ವಿಮಾನಯಾನ ಸಚಿವರು ಒಪ್ಪಿಗೆ ಸೂಚಿಸಿದ್ದು, ಕುರಿತ ಪ್ರಸ್ತಾವನೆಯನ್ನು ಶೀಘ್ರವೇ ಕೇಂದ್ರ ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು ಎಂದು ಹೇಳಿ ಕೆಂಪೇಗೌಡರ ಜನ್ಮ ದಿನಾಚರಣೆ ಸಂದರ್ಭದಲ್ಲಿ ಕೇಂದ್ರ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು ಕನ್ನಡಿಗರಿಗೆ ಮುಖ್ಯವಾಗಿ ಬೆಂಗಳೂರಿಗರಿಗೆ ಹುಗ್ಗಿ ಊಟ ಉಣಬಡಿಸಿದ್ದಾರೆ. ಸುಮಾರು ಒಂದು ವರುಶದ ಹಿಂದೆ ಈ ಕುರಿತ ಪ್ರಸ್ತಾವನೆಯನ್ನು ರಾಜ್ಯ ಸರಕಾರ ಕೇಂದ್ರಕ್ಕೆ ಕಳುಹಿಸಿತ್ತು. ಈ ಮೂಲಕ ಹೆಸರಿನ ಬಗ್ಗೆ ಜನರಲ್ಲಿದ್ದ ಗೊಂದಲಗಳಿಗೆ, ರಾಜಕೀಯ ಲೆಕ್ಕಾಚಾರಗಳಿಗೆ ತೆರೆ ಎಳೆದಿದ್ದಾರೆ.

ಬೆಂಗಳೂರು ನಿರ್ಮಾತೃಗೆ ಸಂದ ಗೌರವ:
೧೬ ನೇ ಶತಮಾನದಲ್ಲಿ ಬೆಂಗಳೂರು ಎಂಬ ನಗರದ ಪರಿಕಲ್ಪನೆಯನ್ನು ಸಾಕಾರಗೊಳಿಸಿದ ಕೀರ್ತಿ ನಾಡಪ್ರಭು ಕೆಂಪೇಗೌಡರದ್ದು. ಅಂದಿನಿಂದ ಇಂದಿನವರೆಗೆ ಆರ್ಥಿಕವಾಗಿ ಮತ್ತು ಸಾಂಸ್ಕ್ರುತಿಕವಾಗಿ ಸಾಕಷ್ಟು ಬೆಳೆದ ಬೆಂಗಳೂರು ಇಂದು ಸಾಫ್ಟವೇರ್ ತಂತ್ರಜ್ನಾನದ ಬೆಳವಣಿಗೆ ಮೂಲಕ ಚಿರಪರಿಚಿತವಾದ ನಗರವಾಗಿ ಜಗತ್ತಿನ ಗಮನ ಸೆಳೆದಿದೆ. ಇಂಥ ಒಂದು ನಗರದ ಉದಯಕ್ಕೆ, ಅದರ ಏಳಿಗೆಯ ದೂರದೃಷ್ಟಿಗೆ ಮುನ್ನುಡಿ ಬರೆದ ಇತಿಹಾಸಕಾರನ ಹೆಸರನ್ನು ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಡುವ ಮೂಲಕ ಅವರನ್ನು ಜಗತ್ತಿಗೆ ಪರಿಚಯಿಸುವ ಪ್ರಯತ್ನ ನಿಜಕ್ಕೂ ಮೆಚ್ಚುವಂಥದ್ದು. ವಿಮಾನ ನಿಲ್ದಾಣಗಳಿಗೆ ಸ್ಥಳೀಯ ಇತಿಹಾಸಗಾರರ ಹೆಸರನ್ನು ಇಡುತ್ತಿರುವುದಕ್ಕೆ ಅನೇಕ ಉದಾಹರಣೆಗಳೂ ಇವೆ. ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಜಯಪ್ರಕಾಶ ನಾರಾಯಣ ವಿಮಾನ ನಿಲ್ದಾಣ, ನೇತಾಜಿ ಸುಭಾಶಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹೀಗೆ ಹೇಳಬಹುದು.

ನಮ್ಮ ಸ್ವತ್ತುಗಳು ನಮ್ಮವರನ್ನು ಬಿಂಬಿಸುವ ವೇದಿಕೆಗಳಾಗಲಿ:
ಯಾವುದೋ ಒಂದು ಯೋಜನೆ, ಸ್ಥಳ, ಸಂಸ್ಥೆಯನ್ನು ಹೆಸರಿಸುವ ಸಮಯದಲ್ಲಿ ನಮ್ಮನ್ನಾಳುತ್ತಿದ್ದವರಿಂದ ಮೊದಲು, ಇಂದಿರಾ ಗಾಂದಿ, ರಾಜೀವ ಗಾಂದಿ, ನೆಹರುವಾಜಪೇಯಿ ಹೆಸರುಗಳೇ ಕೇಳಿ ಬರುತ್ತಿದ್ದವು. (ಉದಾ: ರಾಜೀವ ಗಾಂದಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಹೈದರಾಬಾದ) ಎಲ್ಲರೂ ತಮ್ಮ ತಮ್ಮ ಪಕ್ಷದ ಬ್ರಾಂಡ್ ಅಂಬಾಸಿಡರಗಳನ್ನು ಇಲ್ಲಿ ತಂದು ಕೂರಿಸಲು ಹಾತೊರಿಯುತ್ತಿದ್ದರು. ಆದರೆ ಬಾರಿ ಕೇಳಿ ಬಂದದ್ದು ಕರ್ನಾಟಕದ ಇತಿಹಾಸಕಾರರ ಹೆಸರುಗಳೇ. ವಿಮಾನ ನಿಲ್ದಾಣದ ಕಾಮಗಾರಿ ಶುರುವಾದಾಗಿನಿಂದ ಕರವೇ,, ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರನ್ನು ಒತ್ತಾಯಿಸುತ್ತ ಬಂದ ಪರಿಣಾಮವಾಗಿ, ಮುಂದಿನ ದಿನಗಳಲ್ಲಿ ಹೆಸರಿನ ಬಗ್ಗೆ ಚರ್ಚೆಗಳಾದಾಗ ಕೇಳಿಬಂದ ಹೆಸರುಗಳೆಲ್ಲವೂ ಕರ್ನಾಟಕದ ಇತಿಹಾಸಕಾರರದ್ದೇ (ಬಸವಣ್ಣ, ವಿಶ್ವೇಶ್ವರಯ್ಯ, ಟಿಪ್ಪು ಸುಲ್ತಾನ್) ಆಗಿದ್ದವು. ಕರ್ನಾಟಕದಲ್ಲಿ ದಶಕದಿಂದಿಚಿಗೆ ನಡೆದು ಬಂದ ಕನ್ನಡ ಪರ ಸಂಘಟನೆಗಳ ಹೋರಾಟಗಳು, ಕನ್ನಡ ಪರವಾದ ಮಾತುಗಳು ಇಂದು ಇಂಥ ಒಂದು ಬೆಳವಣಿಗೆಗೆ ನಾಂದಿ ಹಾಡಿದೆಕರ್ನಾಟಕದಲ್ಲಿ ಜಾರಿಯಾಗುವ ಯೋಜನೆಗಳು, ಕಟ್ಟಲಾಗುವ ಸಂಸ್ಥೆಗಳು, ನಿರ್ಮಾಣವಾಗುವ ಸ್ಥಳಗಳು ಕರ್ನಾಟಕದ ಇತಿಹಾಸಗಾರರನ್ನು ಬಿಂಬಿಸುವ ವೇದಿಕೆಗಳಾಗಬೇಕೇ ಹೊರತು, ದೇಶದ ಐಕ್ಯತೆ, ರಾಷ್ಟ್ರೀಯತೆ ಹೆಸರಿನಲ್ಲಿ ನಾಡಿಗಾಗಿ ದುಡಿದ ಸ್ಥಳೀಯರನ್ನು ಕಡೆಗಣಿಸುವ ರಾಜಕೀಯದ ಪೊಳ್ಳು ನಂಬಿಕೆಗಳಾಗುವುದು ಸರಿಯಲ್ಲ.

ಕನ್ನಡತನ ಬೆಳೆಯಲಿ:
ಇಂದು ನಮ್ಮಲ್ಲಿ ಆಗಬೇಕಾದ ಬಹುಮುಖ್ಯ ಕೆಲಸ ಕನ್ನಡತನದ ಜಾಗ್ರುತಿಯೇ ಆಗಿದೆ. ಕನ್ನಡತನವನ್ನು ರಾಷ್ಟ್ರೀಯತೆಗೆ ಪರ್ಯಾಯವಾಗಿಯೋ ಅಥವಾ ಮಾರಕವಾಗಿಯೋ ನೋಡುವ ಮನಸ್ಥಿತಿ ದೂರಾಗಬೇಕಿದೆ. ಕನ್ನಡತನ ಎಂಬುದು ಕೂಡ ಭಾರತೀಯತೆಯೇ ಆಗಿದೆ ಎಂಬುದು ಮನವರಿಕೆಯಾಗಬೇಕಿದೆ. ನಿಟ್ಟಿನಲ್ಲಿ, ಕರ್ನಾಟಕದ ಇತಿಹಾಸವನ್ನು ಬಿಂಬಿಸುವ ಪ್ರಯತ್ನವೂ ಕೂಡ ಸಹಕಾರಿಯಾಗಲಿದೆ. ಅದೇ ರೀತಿ ಕನ್ನಡತನ ಬೆಳೆಸುವ ಕೆಲಸ ಬೆಂಗಳೂರಿನ ಎಲ್ಲ ಕಡೆ ಆಗಬೇಕಿದೆ. ಬೆಂಗಳೂರಿಗರಿಗೆ ಹೆಚ್ಚು ತಲುಪುವ ಬಿ.ಎಮ್.ಟಿ.ಸಿ ಆಗಿರಬಹುದು ಅಥವಾ ಟ್ರಾಫಿಕ್ ಪೊಲೀಸ್ ಇಲಾಖೆ ಆಗಿರಬಹುದು ಅಥವಾ ಖಾಸಗಿ ವ್ಯವಸ್ಥೆಯೇ ಆಗಿರಬಹುದು ಎಲ್ಲ ಕಡೆಯೂ ಕನ್ನಡತನವನ್ನು ಎತ್ತಿ ಹಿಡಿಯುವ ಕೆಲಸವಾಗಬೇಕಿದೆ. ಕನ್ನಡತನವಿಲ್ಲದ ಬೆಂಗಳೂರನ್ನು ನಮ್ಮ ಬೆಂಗಳೂರು ಎನ್ನಲು ಸಾದ್ಯವೇ.?

No comments:

Post a Comment

ನಿಮ್ಮ ಮಾತು...