Wednesday 18 July 2012

ಬೆಂಗಳೂರು ಟ್ರಾಫಿಕ್ ವ್ಯವಸ್ಥೆ ಮತ್ತು ಆಡಳಿತದಲ್ಲಿ ಕನ್ನಡ

ಕಳೆದ ಶನಿವಾರ ಜಾಯ್ ಸಂಸ್ಥೆಯವರು ಬೆಂಗಳೂರು ಟ್ರಾಫಿಕ್ ಸಂಬಂದಿಸಿದಂತೆ ಏರ್ಪಡಿಸಿದ ಚರ್ಚಾಕೂಟದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯಿತು. ಇದೇ ಸಮಯದಲ್ಲಿ ಬೆಂಗಳೂರು ಟ್ರಾಫಿಕ್ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕೂಡ ಪ್ರತ್ಯಕ್ಶವಾಗಿ ಕಾಣಲು ಸಹಕಾರಿಯಾಯಿತುಬೆಂಗಳೂರಿನ ಟ್ರಾಫಿಕ್ ವ್ಯವಸ್ಥೆಯನ್ನು ನಿಯಂತ್ರಿಸಲು ಮತ್ತು ಅದರ ಕಾರ್ಯ ನಿರ್ವಹಣೆಯನ್ನು ಪಾರದರ್ಶಕ ಹಾಗೂ ಪರಿಣಾಮಕಾರಿಯಾಗಿ ಮಾಡಲು ಕಾಲಕ್ಕೆ ತಕ್ಕಂತೆ ತಂತ್ರಜ್ನಾನವನ್ನು ಸದ್ಬಳಕೆ ಮಾಡಿಕೊಳ್ಳಲಾಗಿದೆ. ವಾಹನ ದಟ್ಟಣೆ ಇರುವ ಸಿಗ್ನಲ್ ಜಂಕ್ಶನ್ ಗಳಲ್ಲಿ ಕ್ಯಾಮೆರಾ ಅಳವಡಿಸುವುದಾಗಿರಬಹುದು, ಪೋಲಿಸರ ಕೆಲಸವನ್ನು ಇನ್ನಶ್ಟು ಕಾರ್ಯಶೀಲವಾಗಿಸಲು ಬ್ಲ್ಯಾಕಬೆರ್ರಿ ಸಾದನನ್ನು ಕೊಡುವುದಾಗಿರಬಹುದು ಒಟ್ಟಿನಲ್ಲಿ ಬೆಂಗಳೂರು ಟ್ರಾಫಿಕ್ ಪೋಲಿಸ್ ಒಳ್ಳೆ ಹೆಜ್ಜೆ ಇಟ್ಟಿದೆ.

ಜನಸ್ನೇಹಿ ಸೇವೆ ಒದಗಿಸಲಿ:
ಕ್ರುಪೆ: ಜಾಯ್
ಬೆಂಗಳೂರು ಟ್ರಾಫಿಕ್ ನಿರ್ವಹಣೆಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯೇ ಮಹತ್ವದ ಪಾತ್ರ ವಹಿಸುತ್ತದೆ. ಸಂಸ್ಥೆಯ ವತಿಯಿಂದ ಏನೇ ನಿಯಮಗಳನ್ನು ರೂಪಿಸಿದರೂ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಅಥವಾ ಹೊಣೆಗಾರಿಕೆ ಇಲ್ಲದಿದ್ದರೆ ಆ ವ್ಯವಸ್ಥೆ ಸುದಾರಿಸಲು ಸಾದ್ಯವಿಲ್ಲ. ಹೀಗಾಗಿ ಟ್ರಾಫಿಕನ್ನು ಅಚ್ಚುಕಟ್ಟಾಗಿ ನಿಯಂತ್ರಿಸುವ ವ್ಯವಸ್ಥೆಯ ಬಗ್ಗೆ ಮತ್ತು ಅದರಲ್ಲಿ ಸಾರ್ವಜನಿಕರ ಹೊಣೆಗಾರಿಕೆ ತಿಳುವಳಿಕೆ ಕೆಲಸ ಆಗಬೇಕಾಗುತ್ತದೆ. ಹೀಗೆ ನಡೆಯುವ ತಿಳುವಳಿಕೆ ಮೂಡಿಸುವ ಪ್ರಯತ್ನಗಳು ಟ್ರಾಫಿಕ್ ಬಳಕೆದಾರರೂ ಆಗಿರುವ ಸ್ಥಳೀಯರ ಬಾಶೆಯಲ್ಲಿ ಇರಬೇಕಾಗುತ್ತದೆ. ಹೀಗಾಗಿ ಬಿ.ಟಿ.ಪಿ ಆಡಳಿತದಲ್ಲಿ ಕನ್ನಡ ಅನುಶ್ಟಾನಗೊಂಡಶ್ಟೂ ಸಾರ್ವಜನಿಕರಲ್ಲಿ ವ್ಯವಸ್ಥೆಯ ಬಗ್ಗೆ ಅರಿವು ಮೂಡುತ್ತದೆ. ಸಾರ್ವಜನಿಕರಲ್ಲಿ ಅರಿವು ಮೂಡಿದಶ್ಟು ಅವರ ಪಾಲ್ಗೊಳ್ಳುವಿಕೆ ಹೆಚ್ಚಾಗುತ್ತದೆ. ಸಾರ್ವಜನಿಕರ ಪಾಲ್ಗೊಳ್ಳುವಿಕೆ ಹೆಚ್ಚಾದರೆ ಟ್ರಾಫಿಕ್ ವ್ಯವಸ್ಥೆ ಸುದಾರಣೆ ಕಾಣುತ್ತದೆ. ಅಚ್ಚುಕಟ್ಟಾಗಿ ಟ್ರಾಫಿಕ್ ವ್ಯವಸ್ಥೆ ಇರುವ ಪ್ರದೇಶಗಳಲ್ಲಿ ಅಲ್ಲಿನ ಸ್ಥಳೀಯ ಬಾಶೆಯ ಮೂಲಕವೇ ಸಾರ್ವಜನಿಕರನ್ನು ತಲುಪುವ ಮತ್ತು ಅವರಲ್ಲಿ ಅರಿವು ಮೂಡಿಸುವ ಕೆಲಸಗಳು ನಡೆಯುತ್ತವೆ ಎಂಬುದನ್ನು ಅನೇಕ ಹೊರದೇಶಗಳಲ್ಲಿನ ಉದಾಹರಣೆ ಸಮೇತ ವಿವರಿಸಬಹುದಾಗಿದೆ.

ಆಡಳಿತದಲ್ಲಿ ಕನ್ನಡವೇ ಸರಿಯಾದ ಮಾರ್ಗ:
ಕ್ರುಪೆ:ಬೆಂಗಳೂರು ಟ್ರಾಫಿಕ್ ಪೋಲಿಸ್
ತಂತ್ರಜ್ನಾನ ಸ್ಥಳೀಯ ಬಾಶೆಯಲ್ಲಿ ಸೇವೆ ಪಡೆದುಕೊಳ್ಳಲು ಸಹಕಾರಿಯಾಗಬೇಕೇ ಹೊರತು ಅಡ್ಡಗೋಡೆ ಆಗಬಾರದು. ನಮ್ಮ ಸರಕಾರದ ಸಂಸ್ಥೆಗಳ ಕಾರ್ಯವೈಖರಿ ನೋಡಿದರೆ ತಂತ್ರಜ್ನಾನವನ್ನು ಕನ್ನಡದಲ್ಲಿ ಸೇವೆ ನೀಡಲು ಇರುವ ಅಡ್ಡಗೋಡೆ ಎಂದು ತಿಳಿದಿದ್ದಾರೆಯೇ ಎಂಬ ಅನುಮಾನ ಮೂಡುತ್ತದೆ. ಯಾಕಂದ್ರೆ, ಸಾಂಪ್ರದಾಯಿಕ ಸೇವೆಗಳು ಮಾತ್ರ ಕನ್ನಡದಲ್ಲಿ ಲಭ್ಯವಿದ್ದು, ಇತ್ತೀಚಿಗೆ ಅಳವಡಿಸಲಾದ ಹೊಸ ಬಗೆಯ ಅನೇಕ ತಂತ್ರಜ್ನಾನ ಆದಾರಿತ ಸೇವೆಗಳಲ್ಲಿ ಕನ್ನಡವನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗಿಲ್ಲ. ತಂತ್ರಜ್ನಾನ ಅಳವಡಿಸಿಕೊಂಡರೆ ಇಂಗ್ಲೀಶ್ ಮೂಲಕವೇ ಸೇವೆ ನೀಡಬೇಕು ಎಂಬ ಬ್ರಮೆಯಲ್ಲಿ ಇದ್ದಂಗಿದೆ. ಬೆಂಗಳೂರು ಟ್ರಾಫಿಕ್ ವ್ಯವಸ್ಥೆಯಲ್ಲಿ ಹೆಚ್ಚು ಬಳಸಲಾಗುವ ಬ್ಲ್ಯಾಕ್ ಬೆರ್ರಿ ಸಾದನದಲ್ಲಿ ಕನ್ನಡ ಇಲ್ಲ ಅನ್ನೋದಕ್ಕಿಂತ ಬ್ಲ್ಯಾಕ್ ಬೆರ್ರಿಯಲ್ಲಿ ಕನ್ನಡ ಯಾಕಿಲ್ಲ ಎಂದು ಸರಕಾರ ಕೇಳಿ ಪಡೆಯುವ ಪ್ರಯತ್ನವೇ ಮಾಡಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗುತ್ತದೆ. ತನ್ನ ಗ್ರಾಹಕರಿಗೆ ಕನ್ನಡದಲ್ಲಿ ಸೇವೆ ನೀಡಬೇಕು, ಪಾರದರ್ಶಕತೆಯನ್ನು ಇನ್ನಶ್ಟು ಹೆಚ್ಚಿಸಬೇಕು ಎಂಬ ಇಚ್ಚಾಶಕ್ತಿ ಇದ್ದರೆ ಎಂತಹುದೇ ತಂತ್ರಜ್ನಾನದಲ್ಲಾದರೂ ಕನ್ನಡವನ್ನು ತರುವ ಕೆಲ್ಸವನ್ನು ಮಾಡಬಹುದು. ಬೆಂಗಳೂರು ಜನರ ಬಾಶೆ ಕನ್ನಡ ಆಗಿರುವುದರಿಂದ ಕನ್ನಡದಲ್ಲಿ ಆಡಳಿತ ನೀಡುವುದು ಸೂಕ್ತ ಎಂಬ ಅಬಿಪ್ರಾಯವನ್ನು ಬೆಂಗಳೂರು ಟ್ರಾಫಿಕ್ ಪೋಲಿಸ್ ಆದಶ್ಟು ಬೇಗ ಅರಿಯುವಂತಾಗಲಿ. ಕನ್ನಡದಲ್ಲಿ ಆಡಳಿತ ಎಂಬ ಇಚ್ಚೆಯೇ ಆಡಳಿತದ ಎಲ್ಲ ಹಂತದಲ್ಲೂ ಕನ್ನಡ ಕಾಣಿಸಲು ಕಾರಣವಾಗುತ್ತದೆ. ಆಡಳಿತದಲ್ಲಿ ಕನ್ನಡವನ್ನು ಅಳವಡಿಸುವುದರಿಂದ ಅದನ್ನು ಬಳಸುವ ಪೋಲಿಸರಿಗೂ ಅನುಕೂಲವಾಗುತ್ತದೆ ಮತ್ತು ಜನಸಾಮಾನ್ಯರಿಗೂ ತಮ್ಮ ನುಡಿಯಲ್ಲಿ ಸೇವೆ ದೊರೆತಂತಾಗುತ್ತದೆ. ಸರಕಾರದ ಇಲಾಕೆ ಎಂಬ ಕಾರಣಕ್ಕಿಂತ ಜನಸಾಮಾನ್ಯರ ಅನುಕೂಲದ ಕಾರಣವೇ ಆಡಳಿತದಲ್ಲಿ ಕನ್ನಡ ಅಳವಡಿಸಲು ಹೆಚ್ಚು ಪ್ರಸ್ತುತವಾಗುತ್ತದೆ. ಕೊನೆಯದಾಗಿ, ಬೆಂಗಳೂರು ಟ್ರಾಫಿಕ್ ವ್ಯವಸ್ಥೆ ಸುದಾರಿಸಲು ಬಾಳ ಮುತುವರ್ಜಿ ವಹಿಸಿ ಶ್ರಮಿಸುತ್ತಿರುವ ಜಾಯ್ ಸಂಸ್ಥೆಗೂ ಮತ್ತು ಬೆಂಗಳೂರು ಟ್ರಾಫಿಕ್ ಪೋಲಿಸ್ ಗೂ ಇಂಥ ಒಂದು ಅವಕಾಶ ಕಲ್ಪಿಸಿದ್ದಕ್ಕೆ ದನ್ಯವಾದಗಳು.





No comments:

Post a Comment

ನಿಮ್ಮ ಮಾತು...