Thursday 9 August 2012

ಮಾನ್ಯರೇ, ಡಬ್ಬಿಂಗ್ ನಿಶೇದ ಕನ್ನಡ ವಿರೋದಿ ಎಂಬುದು ನಿಮಗೆ ತಿಳಿದಿಲ್ಲವೇ.?




ನಮ್ಮನ್ನು ಸುಮಾರು ವರುಶಗಳಿಂದ ತಮ್ಮ ನಟನೆಯ ಮೂಲಕ ರಂಜಿಸುತ್ತಿರುವ ಕನ್ನಡದ ನಟ ಶಿವರಾಜಕುಮಾರ ಇತ್ತೀಚಿಗೆ ೫೦ ವರ್ಶದ ಹುಟ್ಟು ಹಬ್ಬ ಆಚರಿಸಿಕೊಂಡರು. ಇದಕ್ಕಾಗಿ ಅವರ ಅಬಿಮಾನಿಗಳು ಒಂದು ಅಬಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸಂದರ್ಬದಲ್ಲಿ ಬಾಗವಹಿಸಿದ್ದ ನಮ್ಮ ರಾಜ್ಯದ ಉಪಮುಖ್ಯಮಂತ್ರಿಗಳಾದ ಆರ್. ಅಶೋಕ್ ಅವರು ಡಬ್ಬಿಂಗ್ ನಿಶೇದದ ಪರವಾಗಿ ಒಂದು ಹೇಳಿಕೆ ಕೊಟ್ಟಿದ್ದಾರೆ ಎಂಬುದು ಇಂದಿನ ಪತ್ರಿಕೆಗಳಲ್ಲಿ ವರದಿಯಾಗಿದೆ. ಅವರು ಏನ್ ಹೇಳಿದ್ರು ಅಂದ್ರೆ, "ಡಬ್ಬಿಂಗ್ ವಿಚಾರದಲ್ಲಿ ರಾಜಕುಮಾರ್ ತಾಳಿದ್ದ ಕಠಿಣ ನಿಲುವನ್ನೇ ಶಿವರಾಜಕುಮಾರ ಪ್ರತಿಪಾದಿಸಿದ್ದಾರೆ. ಹಿಂದಿನಿಂದಲೂ ಕನ್ನಡ ಪರ ವಿಚಾರಗಳ ಬಗ್ಗೆ ಅವರು ತಾಳುತ್ತಾ ಬಂದಿರುವ ನಿಲುವು ಮಾದರಿಯಾಗಿದೆ" ಎಂದಿದ್ದಾರೆ.

ಇಲ್ಲಿ ಮೂಲವಾಗಿ ಅಶೋಕ್ ಅವರ ಮಾತಿನಲ್ಲಿ ವಿಶೇಶತೆ ಏನೂ ಇಲ್ಲ ಎಂಬಂತೆ ಅನ್ನಿಸಿದರೂ ಅವರ ಹೇಳಿಕೆಯನ್ನು ಎರಡು ಮಗ್ಗಲುಗಳಲ್ಲಿ ನೋಡಬಹುದಾಗಿದೆ. ಮೊದಲನೆಯದು, ಡಬ್ಬಿಂಗ್ ವಿಚಾರದ ಆಳ-ಅಗಲದ ಪರಿಚಯ ಇಲ್ಲದೇ ಪೂರ್ವಾಗ್ರಹಪೀಡಿತವಾಗಿ ಅಪ್ಪ ಹಾಕಿದ ಆಲದ ಮರಕ್ಕೆ ಜೈ ಎನ್ನುತ್ತಿರಬಹುದು, ಇಲ್ಲಾ ಎಲ್ಲ ಗೊತ್ತಿದ್ರೂ ಯಾರನ್ನೋ ಮೆಚ್ಚಿಸುವ ಮಾನಸಿಕ ಒತ್ತಡ ಅವರ ಮೇಲಿದ್ದಿರಬಹುದು. ಯಾವುದೇ ಮಗ್ಗುಲದಲ್ಲಿ ನೋಡಿದರೂ ಅಶೋಕ್ ಅವರು ಆಡಿರುವ ಮಾತಿಗೂ ಅವರ ಜವಾಬ್ದಾರಿಯುತ ಸ್ಥಾನಕ್ಕೂ ಹೊಂದಾಣಿಕೆ ಇಲ್ಲ. ಡಾ: ರಾಜಕುಮಾರ್ ಡಬ್ಬಿಂಗ್ ಬೇಡ ಎಂದಿದ್ದಾಗಿನ ಕನ್ನಡ ಚಿತ್ರರಂಗದ ಸಂದರ್ಬ ಹೇಗಿತ್ತು ಮತ್ತು ಶಿವರಾಜಕುಮಾರ್ ಡಬ್ಬಿಂಗ್ ಬೇಡ ಎನ್ನುತ್ತಿರುವ ಈಗಿನ ಕನ್ನಡ ಚಿತ್ರರಂಗದ ಸಂದರ್ಬ ಹೇಗಿದೆ ಎಂಬುದನ್ನು ಅವರು ಬಲ್ಲರೇ.? ಆಗ ಮನರಂಜನೆ ಕ್ಶೇತ್ರ ಹೇಗಿತ್ತು, ತಂತ್ರಜ್ನಾನ ಬಳಕೆ ಹೇಗಿತ್ತು, ಅದರ ಮಾರುಕಟ್ಟೆ ಹೇಗಿತ್ತು, ವಿತರಣೆ ಹೇಗಿತ್ತು ಮತ್ತು ಈಗ ಅವೆಲ್ಲ ಹೇಗಿವೆ ಎಂಬುದನ್ನು ಅಶೋಕ್ ಅವರು ತಿಳಿಯುವ ಪ್ರಯತ್ನ ಮಾಡಿದ್ದಾರೆಯೇ.? ಡಬ್ಬಿಂಗ್ ನಿಶೇದವನ್ನು ಬೆಂಬಲಿಸುವ ಮೂಲಕ ಶಿವರಾಜಕುಮಾರ ಅವರ ಕನ್ನಡ ಪರ ನಿಲುವು ಮಾದರಿಯಾಗಿದೆ ಎಂದಿದ್ದಾರೆ. ಡಬ್ಬಿಂಗ್ ನಿಶೇದಿಸುವುದು ಹೇಗೆ ಕನ್ನಡ ಪರ ಎಂಬುದಾದರೂ ಮಾನ್ಯ ಉಪಮುಖ್ಯಮಂತ್ರಿಗಳು ಯೋಚಿಸಿದ್ದಾರೆಯೇ.? ಡಬ್ಬಿಂಗ್ ನಿಶೇದಕ್ಕೆ ಕಾನೂನಿನಲ್ಲಿ ಯಾವ ವ್ಯಾಖ್ಯಾನ ಇದೆ ಎಂಬುದನ್ನು ಅಶೋಕ್ ಅವರು ಮನಗಂಡಿದ್ದಾರೆಯೇ.? ಡಬ್ಬಿಂಗ್ ನಿಶೇದ ಎಂಬುದು ಸಂವಿದಾನ ಬಾಹಿರ. ಸಂವಿದಾನದಲ್ಲಿ ಡಬ್ಬಿಂಗ್ ನಿಶೇದಕ್ಕೆ ಯಾವುದೇ ಮಾನ್ಯತೆ ಇಲ್ಲ. ಅಂಥ ಯಾವುದೇ ಕಾನೂನು ಜಗತ್ತಿನ ಯಾವುದೇ ಮೂಲೆಯಲ್ಲಿ ಚಾಲ್ತಿಯಲ್ಲಿಲ್ಲ. ಹೀಗಿದ್ದರೂ ಕರ್ನಾಟಕದಲ್ಲಿ ಅಘೋಶಿತ ಡಬ್ಬಿಂಗ್ ನಿಶೇದ ಚಾಲ್ತಿಯಲ್ಲಿದೆ. ಇದಕ್ಕೆ ಸಾಮಾಜಿಕ ಕಟ್ಟುಪಾಡು ಎಂಬ ಚೆಂದದ, ಅಸಂವಿದಾನಿಕ ಕ್ರಮವನ್ನು ಮರೆಮಾಚುವ ಹೆಸರನ್ನು ಇತ್ತೀಚಿಗೆ ಇಡಲಾಗಿದೆ. ಡಬ್ಬಿಂಗ್ ನಿಶೇದದ ಪರಿಣಾಮವಾಗಿ ಇಂದು ಕರ್ನಾಟಕದ ಮಂದಿ ಪರಬಾಶೆಯ ಮನರಂಜನೆಯನ್ನು ಕನ್ನಡದಲ್ಲಿ ನೋಡಲಾಗದ ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿದ್ದಾರೆ. ನಮ್ಮದೇ ಮಾಲ್ಗುಡಿ ಡೇಸ್ ದಾರಾವಾಹಿಯನ್ನು ನಮ್ಮ ಬಾಶೆಯಲ್ಲಿ ನೋಡಲಿಕ್ಕಾಗಲ್ಲ. ನಮ್ಮ ನಟನೇ ನಟಿಸಿದ ಒಂದು ಚಿತ್ರ ದೇಶದ ಎಲ್ಲ ಜನರು ತಮ್ಮ ತಮ್ಮ ಬಾಶೆಯಲ್ಲಿ ನೋಡಿದರೆ ನಾವು ಇನ್ಯಾವುದೊ ಬಾಶೆಯಲ್ಲಿ ನೋಡಬೇಕಾದ ದುಸ್ಥಿತಿ. ಒಂದು ಇಂಗ್ಲೀಶ್ ಸಿನಿಮಾ ಕರ್ನಾಟಕದಲ್ಲಿ  ಹಿಂದಿ, ತಮಿಳು, ತೆಲುಗು, ಮರಾಠಿ ಸೇರಿದಂತೆ ಬೇರೆಲ್ಲ ಬಾಶೆಗಳಲ್ಲಿ ಡಬ್ಬಿಂಗ್ ಆಗಿ ಬಿಡುಗಡೆ ಆಗುತ್ತೆ, ಆದರೆ ಕನ್ನಡದಲ್ಲಿ ಇಲ್ಲ. ಒಂದು ರಾಶ್ಟ್ರೀಯ ಕಾರ್ಯಕ್ರಮ ಸತ್ಯ ಮೇವ ಜಯತೇ, ಕನ್ನಡದ ವಾಹಿನಿಯಲ್ಲಿ ಬೇರೊಂದು ಬಾಶೆಯಲ್ಲಿ ತೋರಿಸಲಾಗುತ್ತೆ, ಆದರೆ ಕನ್ನಡದಲ್ಲಿ ಇಲ್ಲ. ಇನ್ನು, ಶಿವರಾಜಕುಮಾರ ಅವರು ಇತ್ತೀಚಿನ ದಿನಗಳಲ್ಲಿ ಕನ್ನಡ ಪರತೆಗೆ ಹೊಸ ಆಯಾಮವನ್ನೇ ನಮಗೆ ಪರಿಚಯಿಸಿದ್ದಾರೆ. ಮೇಲಿನ ಸಂದರ್ಬಗಳಲ್ಲಿ ಯಾವುದು ಕನ್ನಡ ಪರ, ಯಾವುದು ಕನ್ನಡ ಜನತೆಯ ಪರ, ಯಾವುದು ಸಂವಿದಾನದ ಪರ ಎಂಬುದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಅಶೋಕ್ ಅವರು ಕನ್ನಡ ಸಾಹಿತ್ಯದಲ್ಲಿ ಪಿ.ಎಚ್.ಡಿ ಏನು ಮಾಡಬೇಕಿಲ್ಲ.!

ಇದು ಒಂದು ಬದಿಯ ವಾದವಾದರೆ, ಕರ್ನಾಟಕದ ಜನರು ಏನು ನೋಡಬೇಕು, ಏನು ನೋಡಬಾರದು, ಕನ್ನಡ ಚಿತ್ರರಂಗಕ್ಕೆ ಯಾವುದು ಪರ, ಯಾವುದು ಮಾರಕ ಎಂಬುದನ್ನು ಶಿವರಾಜಕುಮಾರ ಒಬ್ಬರೇ ನಿರ್ದರಿಸಬಹುದೇ.? ಚಿತ್ರರಂಗದಲ್ಲಿ ಅವರು ಹೇಳಿದ್ದೆ ಫೈನಲ್ ಎಂಬುದಾದರೆ ಚಲನಚಿತ್ರ ವಾಣಿಜ್ಯ ಮಂಡಳಿಯ ಪಾತ್ರವೇನು.? ಡಬ್ಬಿಂಗ್ ಬೇಕು ಎನ್ನುವ ಕೆಲವು ಚಿತ್ರರಂಗದ ಮಂದಿಯ ವಾದವನ್ನು ಆಲಿಸುವ ಪ್ರಯತ್ನ ನಡೆದಿದೆಯೇ.? ನಮ್ಮ ಆಯ್ಕೆಯನ್ನು ನಿರ್ದರಿಸುವ ಹಕ್ಕು ನಮಗೆ ಇಲ್ಲವೇ.? ಚಿತ್ರರಂಗದ ಬೆನ್ನೆಲುಬಾಗಿರುವ ಪ್ರೇಕ್ಶಕನನ್ನು ಹೀಗೆ ನಿಯಂತ್ರಿಸುತ್ತಿರುವುದು ಸರಿಯೇ.? ಡಬ್ಬಿಂಗ್ ಕುರಿತ ಎಲ್ಲ ಬೆಳವಣಿಗೆಗಳು ಕರ್ನಾಟಕದಲ್ಲಿ ಪ್ರಜಾಪ್ರಬುತ್ವ ಎಂಬುದು ಇದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಡಬ್ಬಿಂಗ್ ನಿಶೇದ ಕರ್ನಾಟಕದಲ್ಲೇ ಕನ್ನಡಿಗರಿಗೆ ಕನ್ನಡದಲ್ಲಿ ಮನರಂಜನೆ ದೊರೆಯದಂತ ಸಮಾಜ ವಿರೋದಿ ಮತ್ತು ಕನ್ನಡ ವಿರೋದಿ ನಡೆಗೆ ಕಾರಣವಾಗಿದೆ. ಪ್ರತಿಯೊಂದನ್ನು ಕಾನೂನಿನ ಚೌಕಟ್ಟಿನಲ್ಲಿ ವಿಚಾರ ಮಾಡಿ, ಸಮಾಜಕ್ಕೆ ಒಳಿತನ್ನು ಬಯಸಬೇಕಾದ ಸರಕಾರದ ಪ್ರಮುಖ ಪ್ರತಿನಿದಿಯೇ ಹೀಗೆ ಕಾನೂನು ಬಾಹಿರವಾದಂತ ಒಂದು ಸಮಾಜ ವಿರೋದಿ ನಿಲುವನ್ನು ಬೆಂಬಲಿಸುವುದು ಕರ್ನಾಟಕದ ಸಮಾಜಕ್ಕೆ ಬಗೆಯುವಂಥ ದ್ರೋಹ ಎನ್ನದೇ ವಿದಿಯಿಲ್ಲ. ಜನರಿಗೆ ಒಳಿತಾಗುವಂತ ಕಾನೂನನ್ನು ಮಾಡುವವರೇ ಕಾನೂನನ್ನು ಗಾಳಿಗೆ ತೂರುವ ನಿಲುವಿನ ಪರ ನಿಂತಾಗ ಜನಸಾಮಾನ್ಯ ಯಾರ ಬಳಿಗೆ ಹೋಗುವುದು. ಒಟ್ಟಿನಲ್ಲಿ ಕನ್ನಡ ಪರ ಎಂಬ ವ್ಯಾಖ್ಯಾನವನ್ನು ತಮಗೆ ಬೇಕಾದ ಹಾಗೇ ತಿರುಚಿ, ಕನ್ನಡ ವಿರೋದಿ ನಡೆಯನ್ನೇ ಕನ್ನಡ ಪರ ಎಂಬುದಾಗಿ ಬಿಂಬಿಸಿದ್ದು, ಡಬ್ಬಿಂಗ್ ವಿಚಾರದಲ್ಲಿ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಸಮಾಜ ವಿರೋದಿ ಕಟ್ಟುಪಾಡು ಕೊನೆಗೊಳ್ಳಲಿ ಎಂಬುದೇ ಕನ್ನಡ ಪ್ರೇಕ್ಶಕರ ಆಶಯವಾಗಿದೆ. ಅಂದಹಾಗೆ, ಶಿವಣ್ಣಂಗೆ ನಮ್ ಕಡೆಯಿಂದ್ಲೂ ಹುಟ್ಟು ಹಬ್ಬಕ್ಕೆ ಸಿಹಿ ಹಾರೈಕೆಗಳು.


3 comments:

  1. still nobody dares to talk against raj familiy

    ReplyDelete
  2. ಇದು ಯಾರ againstu ಅಲ್ಲ, ಕನ್ನಡ ಪರ ಅಶ್ಟೇ!

    ReplyDelete
  3. ಶಿವರಾಜ್ ಹೇಳಿದ್ದು ಸರಿಯಾಗಿದೆ. ಹಿಂದಿ, ತಮಿಳು, ತೆಲುಗು ಚಿತ್ರಗಳು ಕನ್ನಡಕ್ಕೆ ಡಬ್ ಆಗಲಿ, ಮೂಲ ಭಾಷೆಯಲ್ಲಿ ಯಾಕೆ ಬಿಡುಗಡೆಯಾಗ ಬೇಕು? ಕೇವಲ ಕನ್ನಡ ಅವತರಿಣಿಕೆಯನ್ನು ಬಿಡುಗಡೆ ಮಾಡಲು ಬಿಡಬೇಕು. ಆದರೆ ಬೆಂಗಳೂರಿನ ಅನ್ಯರು ಅದನ್ನ Noduvare ? ಬಹುಶ: ಸಾಧ್ಯವೇ ಇಲ್ಲ. ಅಂದ ಮೇಲೆ ಪ್ರಿಂಟ್ ಕಂಟ್ರೋಲ್ ಮಾಡಬೇಕು? ಅದು ಸಾಧ್ಯವೇ? ಕನ್ನಡಿಗರೇ ಇವತ್ತು ಹಿಂದಿ, ತಮಿಳು, ತೆಲುಗು ಚಿತ್ರಗಳ ವಿತರಕರು, ಅವರು ಬಿಡುತ್ತಾರೆ?

    ReplyDelete

ನಿಮ್ಮ ಮಾತು...