Sunday 21 October 2012

ಹೆಮ್ಮೆ ಹೆಮ್ಮರವಾಯಿತು. ಆದರೆ ಪರಬಾಶೆ ಸುದ್ದಿ ಸಾರವೇ ವಾಣಿಜ್ಯೋದ್ದೇಶವಾಯಿತು.!

ಒಂದು ಪತ್ರಿಕೆ ಜನರ ಮನಸ್ಸನ್ನು ಗಳಿಸಿ ಹೆಮ್ಮರವಾಗಿ ಬೆಳೆದು ಸಮಸ್ತ ಕನ್ನಡಿಗರ ಹೆಮ್ಮೆಯ ಪತ್ರಿಕೆ ಎಂಬ ಹೆಗ್ಗಳಿಕೆ ಅಂಟಿಸಿಕೊಂಡು ಈಗ ಅದೆಲ್ಲವನ್ನೂ ಮರೆತು ತನ್ನ ಮೂಲ ಗ್ರಾಹಕರ ಪರಿವೆ ಇಲ್ಲದೇ ಅವರ ಅವಶ್ಯಕತೆಗಳ ಪರಿಜ್ನಾನವಿಲ್ಲದೇ ಹೇಗೆ ಹಿಂದಿ ಚಿತ್ರದ ಪ್ರಚಾರ ಕೆಲಸದಲ್ಲಿ ತೊಡಗಿದೆ ಎಂಬುದರ ಬಗ್ಗೆ ಹಿಂದಿನ ಅಂಕಣದಲ್ಲಿ ಬರೆದಿದ್ದೆ. ಕುರಿತು ಅನೇಕ ಓದುಗರೂ ಸಹ ಪತ್ರಿಕೆಗೆ ಪತ್ರ ಬರೆಯುವ ಮೂಲಕ ತಮ್ಮ ಅಬಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಓದುಗರಿಂದ ಬಂದ ದೂರುಗಳಿಗೆ ವಿಜಯ ಕರ್ನಾಟಕ ತನ್ನ ಮುಕಪುಟದಲ್ಲಿ ಮತ್ತೊಬ್ಬ ಓದುಗರ ? ಮೂಲಕ ಸ್ಪಶ್ಟನೆ ಕೊಟ್ಟಿತು. ಸ್ಪಶ್ಟನೆ ಕೆಲವು ಗೊಂದಲಮಯ ಅಬಿಪ್ರಾಯಗಳಿವೆ. ಅದಕ್ಕೆ ಪ್ರತಿಕ್ರಿಯೆಯಾಗಿ ಅಂಕಣ.

ಯಾವುದು ವೈಯಕ್ತಿಕ.?
ಪರಬಾಶೆ ಚಿತ್ರಗಳ ವಿಮರ್ಶೆ ಪ್ರಕಟಿಸುವುದು ಆಯಾ ಪತ್ರಿಕೆಗಳ ವೈಯಕ್ತಿಕ ಎಂಬ ಸ್ಪಶ್ಟನೆ ನೀಡಲಾಗಿದೆ. ಹೌದು, ಅದು ವೈಯಕ್ತಿಕನೇ ಆದರೂ ಅಲ್ಲಿ ಗ್ರಾಹಕನ ಅವಶ್ಯಕತೆಗಳ, ಬೇಕು ಬೇಡಗಳ ಪರಾಮರ್ಶೆ ಇರುತ್ತದೆ. ವೈಯಕ್ತಿಕ ಎಂದ ಮಾತ್ರಕ್ಕೆ ವಿಜಯ ಕರ್ನಾಟಕ ತನ್ನ ಪುರವಣಿಗಳಲ್ಲಿ ಕನ್ನಡ ಮನರಂಜನೆಯನ್ನು ಪೂರ್ತಿಯಾಗಿ ನಿರ್ಲಕ್ಶಿಸಿ ಬಿಡಬಹುದೇ.? ತಮಿಳು, ತೆಲುಗು, ಹಿಂದಿ ಚಿತ್ರಗಳನ್ನೇ ಪ್ರಚಾರ ಮಾಡಬಹುದೇ.? ಸಾಮಾಜಿಕ ಹೊಣೆಗಾರಿಕೆ ಅನ್ನೋದು ಮನರಂಜನೆ ವಿಶಯದಲ್ಲಿ ಮಾದ್ಯಮಗಳಿಗೆ ಇಲ್ಲವಾಯಿತೇ.? ಹಾಗೆಂದ ಮಾತ್ರಕ್ಕೆ ಪರಬಾಶೆ ಚಿತ್ರಗಳ ಸುದ್ದಿಗಳನ್ನು ನಿಲ್ಲಿಸಲಾಗುವುದೇ ಎಂಬ ಪ್ರಶ್ನೆಗೆ ಇಲ್ಲ ಎನ್ನುವುದೇ ಉತ್ತರ. ಯಾವುದೇ ಒಂದು ಪತ್ರಿಕೆ ತೆಗೆದುಕೊಂಡರೂ ನಮಗೆ ಕಾಣುವುದು ಏನೆಂದರೆ ಹೊರರಾಜ್ಯದ, ಹೊರದೇಶದ ಸುದ್ದಿಗಳಿಗಾಗಿ ೧೦-೧೨ ಪುಟದ ಪತ್ರಿಕೆಯಲ್ಲಿ ಒಂದೋ ಎರಡೋ ಪುಟಗಳನ್ನು ಮಾತ್ರ ಮೀಸಲಿರಿಸಿರುತ್ತಾರೆ. ಅದೇ ರೀತಿ ಮನರಂಜನೆಯಲ್ಲೂ ಊಟದಲ್ಲಿನ ಉಪ್ಪಿನಕಾಯಿಯ ಹಾಗೇ ಪರಬಾಶೆ ಚಿತ್ರಗಳ ಸುದ್ದಿಗಳು ಇರಬೇಕೇ ಹೊರತು, ಅವುಗಳಿಗೆ ಪ್ರಚಾರ ಕೊಟ್ಟು, ಅವುಗಳ ಮಾರುಕಟ್ಟೆ ಬೆಳೆಸಿ, ಓದುಗರ ಮನಸ್ಸಿನಲ್ಲಿ ಪರಬಾಶೆ ಚಿತ್ರಗಳಿಗೆ, ನಟರಿಗೆ ಮೇಲ್ಪಂಕ್ತಿ ಒದಗಿಸಿಕೊಟ್ಟು ಕನ್ನಡ ಮನರಂಜನೆ ಮಾರುಕಟ್ಟೆಯನ್ನು ಹದಗೆಡಿಸುವಂತಿರಬಾರದು.


ಪರಬಾಶೆ ಚಿತ್ರಗಳೇ ವಾಣಿಜ್ಯದ ಉದ್ದೇಶವೇ.?
ಪರಬಾಶೆ ಚಿತ್ರ ಸುದ್ದಿ ಸಾರಗಳನ್ನು ನಿಲ್ಲಿಸಲಾಗುವುದಿಲ್ಲ, ಅವುಗಳೇ ಪತ್ರಿಕೆಯ ಜೀವಾಳ, ವಾಣಿಜ್ಯದ ಉದ್ದೇಶ ಎಂಬ ಓದುಗರ ಮಾತೇ ಹಾಸ್ಯಾಸ್ಪದವಾಗಿದೆ. ಪತ್ರಿಕೆಯ ಓದುಗನು ಯಾರು.? ಯಾವ ಓದುಗನಿಂದ ವಿಜಯ ಕರ್ನಾಟಕ ಸಮಸ್ತ ಕನ್ನಡಿಗರ ಹೆಮ್ಮೆಯಾಗಿ ಹೆಮ್ಮರವಾಗಿ ಬೆಳೆದಿದೆ. ಹೋಗಲಿ, ಮುಂದೆ ಸಾಗಬೇಕಾಗಿರುವುದಾದರೂ ಯಾರಿಂದ.? ಪರಬಾಶೆ ಚಿತ್ರ ಸುದ್ದಿ ಸಾರವನ್ನು ಓದುವ ಗ್ರಾಹಕನಿಂದಲೇ.? ಹಾಗೇನಾದರೂ, ವಿಜಯ ಕರ್ನಾಟಕ ತಿಳಿದುಕೊಂಡಿದ್ದರೆ, ಅದಕ್ಕಿಂತ ದಡ್ಡತನ ಇನ್ನೊಂದಿಲ್ಲ. ಪರಬಾಶೆಯ ಸುದ್ದಿಗಳೇ ಪತ್ರಿಕೆಯ ಜೀವಾಳವಾಗಿರುವುದು ಎಲ್ಲಾದರೂ ಕಂಡಿರಾ.? ಕನಿಶ್ಟ ಪಕ್ಶ ವಿಜಯ ಕರ್ನಾಟಕದ ಪರಿಸ್ಥಿತಿಯಾದರೂ ಹಾಗಿದೆಯೇ.? ಎಂಥ ತಿಳಿಗೇಡಿತನದ ಸಮರ್ಥನೆ. ಅಶ್ಟೊಂದು, ಬುದ್ದಿಹೀನತೆ ಇದ್ದರೆ, ಒಂದು ಸಮೀಕ್ಶೆ ನಡೆಸಲಿ. ಪತ್ರಿಕೆಯಲ್ಲಿ ಬರುವ ಪರಬಾಶೆ ಸುದ್ದಿ ಸಾರಗಳನ್ನು ಎಶ್ಟು ಜನ ಓದುತ್ತಾರೆ ಎಂಬುದು ಅರಿವಿಗೆ ಬರುತ್ತದೆ.

ಏಣಿಯನ್ನು ಒದೆಯುವ ಪ್ರವ್ರುತ್ತಿ ಸರಿಯೇ.?
ಸಮಸ್ತ ಕನ್ನಡಿಗರ ಹೆಮ್ಮೆ ಎಂಬ ಗೋಶವಾಕ್ಯದೊಂದಿಗೆ ಶುರುವಾದ ವಿಜಯ ಕರ್ನಾಟಕ ಇಂದು ಹೆಮ್ಮೆರವಾಗಿ ಬೆಳೆದ ನಂತರ ಪರಬಾಶೆ ಸುದ್ದಿ ಸಾರವೇ ಪತ್ರಿಕೆಯ ಜೀವಾಳ ಎಂಬ ನಿಲುವಿಗೆ ಬಂದಿದ್ದು ನಿಜಕ್ಕೂ ಆತಂಕಕಾರಿಯಾಗಿದೆ. ವಾಣಿಜ್ಯದ ಉದ್ದೇಶವನ್ನು ಮುಂದೆ ಮಾಡಿ ಪರಬಾಶೆ ಮನರಂಜನೆ ಮಾರುಕಟ್ಟೆ ಕಟ್ಟಿಕೊಟ್ಟು ತನ್ನ ವಾಣಿಜ್ಯದ ಏಳಿಗೆಗೆ ಕುತ್ತು ತಂದುಕೊಳ್ಳುತ್ತಿದೆ. ನಂ ಸ್ಥಾನಕ್ಕೆ ಬರಲು ಏಣಿಯಂತಿದ್ದ ಕನ್ನಡ ಮನರಂಜನೆ ಈಗ ವಾಣಿಜ್ಯದ ಉದ್ದೇಶಕ್ಕೆ ಬಾರದ ವಸ್ತುವಾಯಿತೇ.?

ಡಬ್ಬಿಂಗ್ ಇಲ್ಲ, ಪರಬಾಶೆ ಪ್ರಚಾರಕ್ಕೆ ಕೊನೆಯಿಲ್ಲ.! 
ಕರ್ನಾಟಕದಲ್ಲಿ ಡಬ್ಬಿಂಗ್ ತಡೆಹಿಡಿದು ಪರಬಾಶೆ ಮನರಂಜನೆಯನ್ನು ಕನ್ನಡದಲ್ಲಿ ನೋಡಬಯಸುವ ಜನರ ಹಕ್ಕನ್ನು ಅಸಂವಿದಾನಿಕವಾಗಿ ಕಸಿದುಕೊಳ್ಳುತ್ತಿರುವ ಕೆಲವು ಚಿತ್ರರಂಗದ ಮಂದಿಗಳು ಒಂದು ಕಡೆಯಾದರೆ, ವೈಯಕ್ತಿಕ, ವಾಣಿಜ್ಯದ ಉದ್ದೇಶದ ಕಾರಣ ನೀಡಿ ಪರಬಾಶೆ ಮನರಂಜನೆಯನ್ನು ಜನರ ಮೇಲೆ ಹೇರುತ್ತಿರುವ ಮಾದ್ಯಮಗಳು ಮತ್ತೊಂದು ಕಡೆ. ಒಟ್ಟಾರೆ, ಮನರಂಜನೆಗಾಗಿ ಕನ್ನಡವನ್ನೇ ನೆಚ್ಚಿಕೊಂಡ ಕೋಟ್ಯಂತರ ಜನರ ಬಾವನೆಗಳ ಮೇಲೆ, ಅವಕಾಶಗಳ ಮೇಲೆ ಸವಾರಿ ಮಾಡುವಂಥ ಕೆಲಸ ಅವ್ಯಾಹತವಾಗಿ ನಡೆಯುತ್ತಿದೆ. ಓದುಗರಲ್ಲಿನ ಜಾಗ್ರುತಿಯೇ ಇಂತಹ ಅವೈಗ್ನಾನಿಕ, ಅಹಿತಕರ ನಡೆಗಳನ್ನು ನಿಯಂತ್ರಿಸಬಹುದಾಗಿದೆ. ಗ್ರಾಹಕನ ಗಟ್ಟಿ ದ್ವನಿಯೇ ವ್ಯವಸ್ಥೆಯನ್ನು ಸರಿಪಡಿಸುವತ್ತ ನೆರವಾಗಲಿದೆ. ಒಬ್ಬ ಓದುಗನಾಗಿ ನೀವೂ ಪತ್ರ ಬರೆಯಿರಿ. ಪರಬಾಶೆ ಮನರಂಜನೆ ಬಗ್ಗೆ ದೂರನ್ನು ಸಲ್ಲಿಸಿ. ಅವರ ಮಿಂಚೆ ವಿಳಾಸ.
editor@vijaykarnataka.com, lvk@vijaykarnataka.com, bangalore@vijaykarnataka.com, feedback@vijaykarnataka.com

No comments:

Post a Comment

ನಿಮ್ಮ ಮಾತು...