Tuesday 8 June 2010

ನಾಡಪರ ಚಿಂತಕರು ಯಾವ ನಾಡ ಪರ ಅನ್ನೋದು ಯಕ್ಷ ಪ್ರಶ್ನೆ.......???




"ಕನ್ನಡದ ಮನೆಯಲ್ಲಿ ಕನ್ನಡತಿಯೇ ಯಜಮಾನತಿ; ಮಿಕ್ಕ ಹೆಂಗಸರೆಲ್ಲಾ ಒಕ್ಕಲಷ್ಟೇ ಎಂಬುದರ ನಿಜವನ್ನು ಅರಿತರೆ ಎಲ್ಲರಿಗೂ ಸುಖವಾದೀತು. ಯಜಮಾನತಿ ಮಾತ್ರ ತಾನು ಧರ್ಮಪತ್ನಿ ಎಂಬ ಜಂಭದಲ್ಲಿಯೇ ನಿದ್ರೆ ಮಾಡಿದರೆ, ಊಳಿಗಗಿತ್ತಿಯೂ ಯಜಮಾನನನ್ನು ಲೂಟಿ ಮಾಡುತ್ತಾಳೆಂಬುದನ್ನು ನಾವು ನೋಡಿಲ್ಲವೇ? ಕನ್ನಡತಿ ಯಜಮಾನತಿ ಹೌದು. ಯಜಮಾನನಾದ ಆತ್ಮನಿಗೆ ಪತ್ನಿಯಾಗಿ ಶೃಧ್ಧೆಯಿರುವಂತೆ ಕನ್ನಡಿಗರ ಲಲಿತಾಂಗವನ್ನು ಕನ್ನಡ ಸ್ವಯಂಪ್ರಭೆಯಾಗಿ ಸುತ್ತಮುತ್ತಿಕೊಳ್ಳಬೇಕು". ಇದು ತಾಯಿನುಡಿ ಕನ್ನಡವಲ್ಲದ, ವರಕವಿ ದ. ರಾ. ಬೇಂದ್ರೆ ಅವರು ಕನ್ನಡ ಭಾಷೆಯ ಕುರಿತಂತೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೇಳಿದ ಮಾತು.

ಈಗ ಯಕ್ಷ ಪ್ರಶ್ನೆ ಏನಪ್ಪಾ ಅಂದ್ರೆ, ಈ ಮೇಲಿನ ಸಾಲನ್ನು ನಮ್ಮ ಸಾಹಿತಿ ಮಹೋದಯರು, ನಾಡಪರ ಚಿಂತಕರು (ಕನ್ನಡನಾಡ ಪರ ಅಂಥ ಅನ್ಕೊಳ್ಳೋಣ), ಸಭೆ ಸಮಾರಂಭಗಳಲ್ಲೆಲ್ಲ ಕನ್ನಡ ಹಾಗಾಗಿದೆ, ಹೀಗಾಗಿದೆ, ಹಾಗಾಗಬೇಕಿದೆ, ಹೀಗಾಗಬೇಕಿದೆ ಎಂದು ಬಾಯಲ್ಲಿ ಬಡ ಬಡಿಸುವಂಥ ಹಿರಿಯರು, ಎಷ್ಟು ಜನ ಇದನ್ನು ಅರ್ಥಮಾಡಿಕೊಂಡಿದ್ದಾರೆ ಮತ್ತು ಅದನ್ನು ಅನುಷ್ಟಾನಕ್ಕೆ ತರುವತ್ತ ಪ್ರಯತ್ನಪಡುತ್ತಿದ್ದಾರೆ ಎಂಬುದು. ಸಾಹಿತಿಗಳೆಂದರೆ ಒಂದರ್ಥದಲ್ಲಿ ಕನ್ನಡವನ್ನು ಉಳಿಸುವ ಬೆಳೆಸುವ ಮುಂಚೂಣಿ ನಾಯಕರು ಎಂದರ್ಥ. ಒಬ್ಬ ವ್ಯಕ್ತಿ ಕನ್ನಡದ ಸಾಹಿತಿ ಅಂಥ ಕರೆಯಿಸಿಕೊಂಡರೆ ಅವರು ಸ್ವಾಭಾವಿಕವಾಗಿ ಕನ್ನಡ ಕರ್ನಾಟಕ ಕನ್ನಡಿಗರ ಬಗ್ಗೆ ಇತರರಿಗಿಂತ ಹೆಚ್ಚು ಕಾಳಜಿ, ಗೌರವ ಇರುವವರಾಗಿರಬೇಕಲ್ಲವೇ. ಏಕೆಂದರೆ ಕನ್ನಡದಿಂದಲೇ ಅವರು ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುವವರು. ನಮ್ಮ ನಾಡಿನಲ್ಲಿ ಸಾಹಿತ್ಯಕ್ಕೂ ಬರ ಇಲ್ಲ, ಸಾಹಿತಿಗಳಿಗೂ ಬರ ಇಲ್ಲ. ಆದರೆ ಇಲ್ಲಿ ಎದ್ದು ಕಾಣುತ್ತಿರುವುದು ಒಗ್ಗಟ್ಟಿನ ಕೊರತೆ. ರಾಜಕೀಯ ಪಕ್ಷಗಳನ್ನು ಮೀರಿಸುವಂತಹ ಬಣಗಳು ನಮ್ಮ ಕನ್ನಡ ಸಾಹಿತ್ಯದ ಮನೆಯಲ್ಲಿ. (ದಿನಪತ್ರಿಕೆಗಳಲ್ಲಿ ದಿನಾಲು ಸಾಹಿತಿಗಳ ಕಿತ್ತಾಟ ನೋಡಿ ನೋಡಿ ಬೇಸರವಾಗಿ ಬರೆದ ಲೇಖನವಿದು). ನಮ್ಮ ಸಾಹಿತಿಗಳ ದ್ವಂದ ನಿಲುವುಗಳು, ಕೆಲವರು ಸರಕಾರವನ್ನು ಮೆಚ್ಚಿಸುವ ರೀತಿಯಲ್ಲಿ ನೀಡುವ ಹೇಳಿಕೆಗಳು ಹಿಂದಿನ ಕಹಿ ಅನುಭವಗಳಿಂದ ಸಾಬೀತಾಗಿದೆ. ಕೆಲವರಂತೂ ಸರ್ಕಾರದ ಏಜೆಂಟರಂತೆ ವರ್ತಿಸುತ್ತಿರುವುದು ನಿಜಕ್ಕೂ ಘನತೆಗೆ ತಕ್ಕದ್ದಲ್ಲ. ರಾಜ್ಯದಲ್ಲಿ ಸೋನಿಯಾ ಮೇಡಮ್ ಅವರ ಸರ್ಕಾರವಿದ್ದಾಗ ಮುಂಚೂಣಿಯಲ್ಲಿದ್ದು ಬೀದಿಗಿಳಿದು ಹೋರಾಟಗಳನ್ನು ಮಾಡಿ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಕೆಲವರಿಗೆ, ಸುಷ್ಮಾ ಮೇಡಮ್ (ಗಣಿ ದಣಿಗಳ ಮಾತೆ) ಅವರ ಸರ್ಕಾರ ಬಂದ ಮೇಲೆ ಮಾತುಗಳೇ ಹೊರಡುತ್ತಿಲ್ಲ. ಇದರಿಂದ ಅವರು ನಾಡ ಪರವೋ, ಪಕ್ಷದ ಪರವೋ ಎಂಬ ಸಂಶಯಗಳು ಸ್ವಾಭಾವಿಕವಾಗಿ ಜನರ ಮನಸ್ಸಿನಲ್ಲಿ ಮೂಡಲಾರಂಭಿಸಿವೆ. ಸಾಹಿತಿಗಳು, ನಾಡಪರ ಚಿಂತಕರು ಸರ್ಕಾರದ ಜೊತೆ ಸೇರಿ ಸಲಹೆ ಸೂಚನೆಗಳನ್ನು ಕೊಡುವುದೇನು ಒಳ್ಳೆಯ ನಡೆ. ಆದರೆ ಅದು ಸರ್ಕಾರ ತಪ್ಪು ಹೆಜ್ಜೆ ಇಟ್ಟ ಸಂದರ್ಭದಲ್ಲೂ ಬೆಂಬಲಿಸುವಂಥ ಮಟ್ಟಿಗೆ ಹೋಗಬಾರದಲ್ಲವೇ. ತಿರುವಳ್ಳವರ ಪ್ರತಿಮೆ ಅನಾವರಣ ಸಂದರ್ಭದಲ್ಲಿ ಆಗಿದ್ದು ಇದೇ ತಾನೆ. “ಕನ್ನಡಿಗರು ವಿಶಾ.....ಲ ಹೃದಯದವರು” ಎಂಬ ಮಾತನ್ನು ಸಾಬೀತು ಮಾಡಲು ಪ್ರತಿಮೆ ಅನಾವರಣ ಪರ ಮಾತನಾಡಿದರು. ಇದರಿಂದ ಕನ್ನಡಿಗರ ಕಿವಿ ಮೇಲೆ ಈಗಾಗಲೇ ಇರುವ ಹೂಗಳ ಜೊತೆಗೆ ಮತ್ತೊಂದು ಹೂ (ಕ್ರೇಜಿ ಸ್ಟಾರ್ ’ಹೂ’ ಅಲ್ಲ) ಇಟ್ಟಂತಾಗುತ್ತದೆ ಎಂಬ ಪರಿಜ್ನಾನವೂ ಇಲ್ಲದ ಇವರು ಯಾವ ಸೀಮೆ ನಾಡಪರಚಿಂತಕರು. (ಹೀಗೆ ಆದರೆ ’ಕನ್ನಡಿಗರು ವಿಶಾ...ಲ ಹೃದಯದವರು’ ಎಂಬ ವಾಕ್ಯ ಕೇಳಿ ಕೇಳಿ ಮುಂದೊಂದು ದಿನ ಮೈ ಉರಿಯುವ ಹಾಗಾಗದೇ ಇರುವುದೇ..?)


ಪ್ರತಿಮೆ ಪುರಾಣನೂ ಆಯಿತು, ನಿರೀಕ್ಷಿಸಿದಂತೆ ಅವರ ಮತಗಳೂ ಬಂದವು. ಅವರು ತಮ್ಮ ಪಾಡಿಗೆ ತಾವು ಕೆಲಸನೂ ಶುರು ಮಾಡಿದರು. ನಮ್ಮ ನಾಡಪರ ಚಿಂತಕರು (ಕನ್ನಡನಾಡ ಪರ ಅಂಥ ಅನ್ಕೊಳ್ಳಿ ಇನ್ನೊಮ್ಮೆ ಪ್ಲೀಸ್) ಊಹಿಸಿದ ಯಾವ ಭಾಂಧವ್ಯ, ಯಾವ ಸಾಮರಸ್ಯ ಬೆಸೆಯಿತು ಎಂಬುದು ಈಗಾಗಲೇ ಅರ್ಥ ಆಗಿರಬೇಕು. ಭಾಂಧವ್ಯ ಬೆಸೆಯಲು ಒಬ್ಬರೇ ’ವಿಶಾ...ಲ ಹೃದಯದವರು’ ಆಗಿದ್ದರೆ ಸಾಲದು ಸ್ವಾಮಿ, ಇನ್ನೊಬ್ಬರಿಗೂ ಆ ನಿಯತ್ತು ಇರಬೇಕಲ್ಲವೇ. ಹಿಂದುಸ್ಥಾನ ಮತ್ತು ಪಾಕಿಸ್ಥಾನ ಭಾಂಧವ್ಯ ಬೆಳೆಯದಿರಲು ಕೂಡ ಇದೇ ಕಾರಣವಲ್ಲವೇ..? ಇಷ್ಟೆಲ್ಲ ಆದರೂ, ಹೊಗೆನಕ್ಕಲನಲ್ಲಿ ಕೆಲಸ ಭರದಿಂದ ಸಾಗಿದ್ದರೂ, ಅಲ್ಲಿ ಕನ್ನಡಿಗರ ಪ್ರವೇಶಕ್ಕೆ ನಿರ್ಭಂಧ ಹೇರಿದ್ದರೂ, ಮಾತನಾಡದ, ತುಟಿ ಬಿಚ್ಚದ ಇವರನ್ನು ನಮ್ಮ ನಾಡಿನ ರತ್ನಗಳು ಎಂದು ಯಾವ ಬಾಯಿಂದ ಹೇಳುವುದು. ಇತ್ತೀಚಿಗೆ ಕರ್ನಾಟಕ ಸರಕಾರ ಪಾಲಿಕೆ ವ್ಯಾಪ್ತಿಯಲ್ಲಿ ಸಿ..ಬಿ.ಎಸ್.ಸಿ ಶಾಲೆಗಳನ್ನು ತೆರೆಯುವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದ ಇವರು ಎಂತಹ ಕನ್ನಡಾಭಿಮಾನಿಗಳು ಎಂದು ಒಂದು ಸಲ ಸ್ಪಷ್ಟ ಪಡಿಸಲಿ. ಇನ್ನೂ ಕೆಲವರಿಗೆ ಜಾತಿ ಮೇಲೆ ಮೋಹ (ಪ್ರೇಮ ಅಲ್ಲ). ತಮ್ಮ ಮೋಹಕ್ಕೆ ಮತ್ತೊಬ್ಬರ ಮೇಲೆ ಎಗರಾಡಿ ಕನ್ನಡವನ್ನು ನಿರ್ಲಕ್ಷಿಸುತ್ತಿರುವುದನ್ನು ನಾವೂ ನೋಡಿಲ್ಲವೇ. ಅಲ್ಲ ಸ್ವಾಮಿ, ಈ ಥರ ಎಲ್ಲರೂ ತಮ್ಮ ತಮ್ಮ ಸ್ವಯಂಘೋಷಿತ ಒಂದೊಂದು ತತ್ವ ಸಿದ್ಧಾಂಥಗಳನ್ನೇ ಜನರಿಗೆ ವೇದ ವಾಕ್ಯಗಳೆಂದು ಹೇಳುತ್ತಿದ್ದರೆ, ಕನ್ನಡದ ತತ್ವ ಸಿದ್ಧಾಂಥ ಏಳಿಗೆ ಕಡೆಗೆ ಗಮನ ಹರಿಸುವವರ್ಯಾರು ಮಾರಾಯ್ರೇ..? ನಾವು ರಾಜ್ಯ ಬಿಟ್ಟು ಹೊರಗಡೆ ಇದ್ದಾಗ ಅಲ್ಲಿ ನಮ್ಮನ್ನು(ಕನ್ನಡಿಗರನ್ನು) ಕೂಡಿಸುವುದು ಯಾವ ಜಾತಿ..?, ಕನ್ನಡ ಜಾತಿನೇ ಅಲ್ಲವೇ. ಅಲ್ಲಿ ಯಾವ ಬೇರೆ ಜಾತಿಯ ಸುಳಿವೇ ಇರುವುದಿಲ್ಲ. ನನ್ನ ಒಂದು ಘಟನೆ ನೆನಪಾಯ್ತು. ನಾನು ಒಮ್ಮೆ ಬೇರೆ ರಾಜ್ಯದಲ್ಲಿ ಇದ್ದಾಗ, ಹೀಗೆ ಅಚಾನಕ್ಕಾಗಿ ಒಬ್ಬ ಕನ್ನಡಿಗ ಸಿಕ್ಕರು. ಖುಷಿಯಾಯ್ತು. ಅದಕ್ಕಿಂತಲೂ ಹೆಚ್ಚು ಖುಷಿ ಕೊಟ್ಟಿದ್ದು ಏನಪ್ಪಾ ಅಂದ್ರೆ ಅವರು ಹೇಳಿದ ಮಾತು. "ಹಿಂದಿ ಇಂಗ್ಲೀಷ ಮಾತನಾಡಿ ನನ್ನ ನಾಲಿಗೆ ಕೊಳೆಯಾಗಿತ್ತು, ಈಗ ನೀವು ಸಿಕ್ರಲ್ಲ, ಇನ್ ಮೇಲೆ ಸ್ವಚ್ಚ ಆಗುತ್ತೆ" ಅಂಥ. ಅವರು ಒಬ್ಬ ಮುಸ್ಲಿಮ್ ಕನ್ನಡಿಗ ಅನ್ನೋದು ಗಮನಾರ್ಹ. ಹೀಗೆ ಹೊರನಾಡ ಕನ್ನಡಿಗರಲ್ಲಿ ಇರುವಂತಹ ಆ ಅಭಿಮಾನ, ಆ ನಮ್ಮತನ ಒಳನಾಡಿನಲ್ಲಿರುವವರಿಗೂ ತುಂಬುವ ಕೆಲಸ ಮಾಡಬೇಕಾದ ನಮ್ಮ ಹಿರಿಯರೇ ಹೀಗೆ ಸ್ವಾರ್ಥಿಯಾದರೆ ಹೇಗೆ ಸ್ವಾಮಿ. ಯುವಕರಲ್ಲಿ ಸ್ಪೂರ್ತಿ ತುಂಬಬೇಕಾದ ಇವರೇ ಹೀಗೆ ಬೇಜವಾಬ್ದಾರಿಯಿಂದ ವರ್ತಿಸಿದರೆ ಮುಂದಿನ ಪೀಳಿಗೆಗೆ ಕನ್ನಡವನ್ನು ಕೊಂಡೊಯ್ಯಲು ಸಾದ್ಯವೇ. ದೇವಸ್ಥಾನದ ಗರ್ಭಗುಡಿಯಲ್ಲೇ ದೇವರು ಇಲ್ಲದ ಮೇಲೆ ಹೊರಗಡೆ ಎಷ್ಟು ಮೂರ್ತಿಗಳನ್ನಿಟ್ಟರೂ ಏನು ಪ್ರಯೋಜನ..? ಕನ್ನಡ ನಾಡಿನಲ್ಲೇ ಕನ್ನಡವಿಲ್ಲದಿದ್ದರೆ, ಹೊರನಾಡಿನಲ್ಲಿ ಎಷ್ಟು ಕನ್ನಡ ಸಂಘಗಳನ್ನು ಮಾಡಿದರೂ ಏನು ಪ್ರಯೋಜನ. ಕರ್ನಾಟಕದಲ್ಲೇ ಕನ್ನಡವಿಲ್ಲದಿದ್ದರೆ, ಮುಂದೊಂದು ದಿನ, ಹೊರನಾಡಿನಲ್ಲಿ ಕನ್ನಡ ಸಂಘಗಳನ್ನು ಸ್ಥಾಪಿಸುವುದು, ಸಭೆ ಸಮಾರಂಭಗಳನ್ನು ನಡೆಸುವುದು ನಗೆ ಚಾಟಿಕೆ ಆಗುತ್ತದೆ ಎಂಬುದನ್ನು ಯಾರಾದರೂ ಅಲ್ಲಗಳೆಯಲು ಸಾದ್ಯವೇ..?


ಏಕೀಕರಣದ ಸಂದರ್ಭದಲ್ಲಿ ಎಲ್ಲ ಮಹೋದಯರು ತಮ್ಮ ಸ್ವಹಿತ, ಪ್ರತಿಷ್ಟೆಯನ್ನು ಬದಿಗಿಟ್ಟ ಪರಿಣಾಮವಾಗಿಯೇ ಈ ನಾಡಿನ ಉದಯವಾಯಿತು. ಈಗ ಅದನ್ನು ಬೆಳೆಸಲು ಎಲ್ಲರೂ ತಮ್ಮ ಸ್ವಹಿತವನ್ನು ಬದಿಗಲ್ಲ, ಊರಾಚೆಯಿಡಬೇಕಲ್ಲವೇ...?

No comments:

Post a Comment

ನಿಮ್ಮ ಮಾತು...