Tuesday 29 June 2010

ಗುಣಮಟ್ಟದ ಶಿಕ್ಷಣ ಅಂದ್ರೆ "ಸಿ. ಬಿ. ಎಸ್. ಸಿ" ಪಠ್ಯಕ್ರಮನಾ.....?


ಇದು ಮೆಟ್ರೊ ನಗರ ಬೆಂಗಳೂರಿನಲ್ಲಿ ಹರಿದಾಡುತ್ತಿರುವ ಮಾತಲ್ಲ, ರಾಜಧಾನಿಯಿಂದಾಚೆ ನೂರಾರು ಕಿ.ಮಿ. ದೂರದ ಊರುಗಳಲ್ಲಿ ಶಿಕ್ಷಣ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲ ಮಾಡುವಂಥ ಇಂಥದೊಂದು ಗಬ್ಬು ವಾತಾವರಣ ದಿನದಿಂದ ದಿನಕ್ಕೆ ಅವ್ಯಾಹತವಾಗಿ ಹಬ್ತಾ ಇದೆ ಗುರು. ಇದಕ್ಕೆ ಪುಷ್ಟಿ ನೀಡುವ ಉದಾಹರಣೆಗಳಿಗೇನು ಕಮ್ಮಿ ಇಲ್ಲ.
ಒಂದು ತಾಜಾ ನಿದರ್ಶನ. ನಮ್ಮ ವಿಜಾಪುರ ಜಿಲ್ಲೆಯ ಗಲಗಲಿ ಎಂಬ ಪುಟ್ಟ ಗ್ರಾಮದಲ್ಲಿ ೨೦೦೪ ರಲ್ಲಿ ಉಳ್ಳವರು ಶಿವಾಲಯ ಮಾಡೊ ಹಾಗೆ, ಆಂಗ್ಲ ಮಾದ್ಯಮದ ಅಂತರಾಷ್ಟೀಯ ಶಾಲೆಯೊಂದನ್ನು ಪ್ರಾರಂಭ ಮಾಡಿದ್ರು. ಗುಣಮ್ಮಟ್ಟದ ಶಿಕ್ಷಣ ಎಂಬ ಉದ್ದೇಶದಿಂದ ಇದು ಪ್ರಾರಂಭವಾಯ್ತು. ಈಗ ೨೦೧೦ ರಲ್ಲಿ ಆ ಗುಣಮಟ್ಟದ ಶಿಕ್ಷಣ ಸಾಲದೆಂಬಂತೆ ಈ ಸಂಸ್ಥೆ ಸಿ.ಬಿ.ಎಸ್.ಸಿ ಪಠ್ಯಕ್ರಮದ ಅಂತರಾಷ್ಟೀಯ ಶಾಲೆಯೊಂದನ್ನು ತೆರೆಯಲು ಮುಂದಾಗಿದೆ ಎಂಬ ವರದಿ ಮೊನ್ನೆಯ ವಿಕ ದಲ್ಲಿ ಪ್ರಕಟವಾಗಿತ್ತು. ಅಲ್ಲಿ ಅವರು ನೀಡಿರುವ ಹೇಳಿಕೆ ಗಮನ ಸೆಳೆಯಿತು. " ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ದೂರದ ಊರುಗಳಿಗೆ ಕಳುಹಿಸಬೇಕು. ನಮ್ಮಲ್ಲೇ ಉತ್ತಮ ಗುಣಮಟ್ಟದ ಶಾಲೆ ನಡೆಸಿ, ಮಕ್ಕಳು ದೂರಕ್ಕೆ ಹೋಗುವುದನ್ನು ತಪ್ಪಿಸಬೇಕೆಂಬ ಸದುದ್ದೇಶದಿಂದ ಇಲ್ಲಿಯೆ ಸಿ.ಬಿ.ಎಸ್.ಸಿ ಪಠ್ಯಕ್ರಮದ ಶಾಲೆಯೊಂದನ್ನು ತೆರೆಯಲು ನಿರ್ಧರಿಸಲಾಗಿದೆ" ಎಂದು. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಇವರು ಹೇಳೊ ರೀತಿ ನೋಡಿದ್ರೆ ಗುಣಮಟ್ಟದ ಶಿಕ್ಷಣ ಅಂದ್ರೆ ಸಿ.ಬಿ.ಎಸ್.ಸಿ ನಲ್ಲೆ ಕಲೀಬೇಕು. ನಮ್ಮ ಮಕ್ಕಳು ಉಧ್ಧಾರ ಆಗಲು ಸಿ.ಬಿ.ಎಸ್.ಸಿ ಶಾಲೆಗಳಿಗೆನೇ ಹೋಗಬೇಕು ಅಂಥ ಮುಖಕ್ಕೆ ಹೊಡೆದ ಹಾಗೆ ಹೇಳ್ತಾ ಇದ್ದಾರೆ ಅನ್ಸುತ್ತೆ. ಹಳ್ಳಿಗಳಲ್ಲಿ ಒಳ್ಳೆಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮುಖಾಂತರ ಹಳ್ಳಿಯ ಮಕ್ಕಳು ಏಳಿಗೆ ಹೊಂದಲು ಸಹಕಾರಿಯಾಗುವುದು ಎಂಬ ವಾದವನ್ನು ಒಪ್ಪಬಹುದು, ಆದರೆ ಸಿ.ಬಿ.ಎಸ್.ಸಿ ಯಿಂದ ನಮ್ಮ ಹುಡುಗರು ಕನ್ನಡದಿಂದ ಮತ್ತು ಕನ್ನಡ ನಾಡಿನಿಂದ ಬಹಳ ದೂರವಾಗುತ್ತಾರೆ ಎಂಬ ಅರಿವು ಬರಬೇಕಲ್ಲವೇ. ಇದು ಯಾವುದೋ ಒಬ್ಬ ವ್ಯಕ್ತಿಯ, ಒಂದು ಜಿಲ್ಲೆಯ ಕಥೆಯಲ್ಲ, ನಮ್ಮ ಘನ ಸರಕಾರದ ಕೃಪಾಕಟಾಕ್ಷದಿಂದ, ಹೇಳೊಕೆ ಆಚಾರ ತಿನ್ನೋಕೆ ಬದನೆಕಾಯಿ ಎಂಬಂತಿರುವ ಸರಕಾರದ ಇಂಗ್ಲೀಷ ವ್ಯಾಮೋಹದಿಂದ ದೊಡ್ಡ ದೊಡ್ಡ ನಗರಗಳಿಗೆ ಸೀಮಿತವಾಗಿದ್ದ ಈ ರೀತಿ ಅಭಿಪ್ರಾಯಗಳು ರಾಜ್ಯದ ತುಂಬೆಲ್ಲ ಹರಡುತ್ತಿದೆ. ಹಳ್ಳಿಗಳಲ್ಲೂ ಇಂಥ ಶಾಲೆಗಳು ಆರಂಭವಾಗೋದ್ರಿಂದ ಸಹಜವಾಗಿ ಸರಕಾರಿ ಕನ್ನಡ ಶಾಲೆಯಲ್ಲಿ ಓದುತ್ತಿರುವ ೮೫% ಕನ್ನಡ ಮಕ್ಕಳಿಗೆ ತಪ್ಪು ಸಂದೇಶ ರವಾನೆಯಾಗದೇ ಇರುವುದೇ..? ಅವರನ್ನ ಶಾಲೆಗೆ ಕಳುಹಿಸುತ್ತಿರುವ ಪಾಲಕರಲ್ಲಿ ಆತಂಕ ಸೃಷ್ಟಿಸದೇ ಇರುವುದೇ..? ಇಷ್ಟ ಪಟ್ಟು ಕನ್ನಡ ಮಾದ್ಯಮ ಕಲಿಯುವವರ ಸಂಖ್ಯೆ ಕ್ಷೀಣೀಸುವುದಿಲ್ಲವೇ..? ಆಂಗ್ಲ ಮಾದ್ಯಮದಲ್ಲಿ ಕಲಿಸುವ ಶಕ್ತಿ ಇಲ್ಲದವರು ಮಾತ್ರ ಕನ್ನಡ ಮಾದ್ಯಮ ಅನ್ನೋ ಥರ ವಾತಾವರಣ ಸೃಷ್ಟಿ ಆಗದೇ ಇರುತ್ತಾ..?

ಯಾಕೆ ಹೀಗೆ.?
ಗುಣಮಟ್ಟದ ಶಿಕ್ಷಣ ಎಂದ ತಕ್ಷಣ ಆಂಗ್ಲ ಮಾದ್ಯಮ ಶಾಲೆ, ಸಿ.ಬಿ.ಎಸ್.ಸಿ ಪಠ್ಯಕ್ರಮದ ಕಡೆ ತಿರುಗುವ ನಮ್ಮ ಅತೀ ಬುದ್ದಿವಂಥ ನಾಗರಿಕರು, ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಿ ಅದರಲ್ಲಿಯೆ ಇನ್ನೊಬ್ಬ ವಿಶ್ವೇಶ್ವರಯ್ಯ, ಮತ್ತೊಬ್ಬ ಡಾ: ಮೋದಿ ಯವರನ್ನು ಸೃಷ್ಟಿ ಮಾಡುವಂಥ ಹೊಣೆಯನ್ನು ಹೊತ್ತುಕೊಳ್ಳಬಾರದೇ.? ಅಂತರಾಷ್ಟೀಯ ಆಂಗ್ಲ ಮಾದ್ಯಮ ಶಾಲೆ ತೆರೆಯುವ ಬದಲು ಗುಣಮಟ್ಟದ ಅಂತರಾಷ್ಟ್ರೀಯ ಕನ್ನಡ ಮಾದ್ಯಮ ಮಾದರಿ ಶಾಲೆ ತೆರೆಯಬಾರದೇ..? ಇಂಥದ್ದೊಂದು ಯೋಚನೆ ಜನರಲ್ಲಿ ಮತ್ತು ಉಳ್ಳವರಲ್ಲಿ ಬರಬೇಕೆಂದರೆ ಗುಣಮ್ಮಟ್ಟದ ಶಿಕ್ಷಣ ಕನ್ನಡದಲ್ಲೂ ಕೊಡಬಹುದು, ಕನ್ನಡ ಮಾದ್ಯಮದಲ್ಲಿ ಕಲಿತವರು ಇಂಜಿನಿಯರ ಡಾಕ್ಟರ ಅಷ್ಟೇ ಅಲ್ಲದೇ ಆ ಹುದ್ದೆಗಳಿಗೆ ’ರೋಲ್ ಮಾಡೆಲ್’ ಎಂದೆನಿಸಿದ ನಮ್ಮ ನಾಡಿನ ಹೆಮ್ಮೆಯ ವಿಶ್ವೇಶ್ವರಯ್ಯ ಮತ್ತು ಡಾ: ಮೋದಿ ಥರನೂ ಆಗಬಹುದು ಎಂಬ ನಂಬಿಕೆ ಮೂಡಿದಾಗ. ಆದರೆ ಇಂಥದೊಂದು ನಂಬಿಕೆ ಮೂಡಲು ಬದಲಾವಣೆಗೆ ಮುನ್ನುಡಿ ಬರೆಯಬೇಕಾದ ಸರಕಾರವೇ ಮುಂದೆ ನಿಂತು ತಿಥಿ ಊಟ (ಸಿ.ಬಿ.ಎಸ್.ಸಿ ಪಠ್ಯಕ್ರಮ) ಬಡಿಸುತ್ತಿರುವಾಗ ಯಾರಿಗೆ ಏನಂದು ಏನು ಪ್ರಯೋಜನ.

ಇನ್ನು ನಮ್ಮ ಪ್ರಾಧಿಕಾರಗಳು:
ಕನ್ನಡನಾಡು ನುಡಿ ನೆಲ ಜಲಗಳ ಸಂರಕ್ಷಣೆಗೆ ನಮ್ಮ ಸರಕಾರಗಳು ಪ್ರಾಧಿಕಾರ ಅಂಥ ಮಾಡಿದ್ದಾವೆ. ಆದರೆ ಅವು ’ಅಧಿಕಾರ ಹಂಚಿಕೆ ಮಾಡ್ಕೊಳ್ಳೊಕೆ ದಾರಿಯಾಗಿದೆ ಅಷ್ಟೆ’. ಸಚಿವ ಸ್ಥಾನ ಸಿಗದ ನಾಯಕರಿಗೆ, ಸಮಾಧಾನ ಪಡಿಸ್ಲಿಕ್ಕೆ ಬೇಕಾಗಿರೊ ಕುರ್ಚಿ ಆಗೊಗಿದೆ. ಇವುಗಳು ಲೆಕ್ಕಕ್ಕುಂಟು, ಆದರೆ ಆಟಕ್ಕಿಲ್ಲ. ಅವಾಗವಾಗ ಅಲ್ಪ ಸ್ವಲ್ಪ ಆಟ ಆಡಿದ್ದು ಬಿಟ್ರೆ, ಏನು ಆಟ ಆಡ್ಬೇಕಿತ್ತೊ, ಯಾವ ಜವಾಬ್ದಾರಿಯನ್ನು ನಿರ್ವಹಿಸಬೇಕಿತ್ತೋ ಅದನ್ನು ಹೇಗೆ ನಿರ್ವಹಿಸ್ತಾ ಇವೆ ಅಂಥ ಬಿಡಿಸಿ ಹೇಳ್ಭೇಕಾ. ಗಡಿ ಜಿಲ್ಲೆಗಳಲ್ಲಿರುವ ಕನ್ನಡ ಶಾಲೆಗಳ ಅತಂತ್ರ ಸ್ಥಿತಿ ಇವರು ನಿರ್ವಹಿಸುತ್ತಿರುವ ಬೇಜವಾಬ್ದಾರಿಗೆ ನಿದರ್ಶನ.
ಆಂಗ್ಲ ಮಾದ್ಯಮದ ಕುರಿತಾದ ಒಂದು ಜೋಕು ನೆನಪಾಗ್ತಿದೆ...........
ಇಂಗ್ಲೀಷ ಶಾಲೆಗಳಲ್ಲಿ ಬರಸೇ ಬರೆಯಿಸುವರು ಹೋಮ್ ವರ್ಕ್, ಮಾಸ್ತರು
ಇಂಗ್ಲೀಷ ಶಾಲೆಗಳಲ್ಲಿ ಬರಸೇ ಬರೆಯಿಸುವರು ಹೋಮ್ ವರ್ಕ್, ಮಾಸ್ತರು
ಬರೆದು ಬರೆದು ಸುಸ್ತಾಗಿ ನಮ್ಮ ಮಕ್ಕಳಾಗುವರು ಕಡೆಗೆ ..... ಗುಮಾಸ್ತರು : )

ಗೋಡೆ ಬರಹ: ಸರ್ವರೋಗಕ್ಕೂ ಸಾರಾಯಿ ಮದ್ದು ಅಂತಾರೆ, ಹೌದೋ ಅಲ್ಲವೋ ಗೊತ್ತಿಲ್ಲ ಆದರೆ
ಕರ್ನಾಟಕದ ಸರ್ವಸಮಸ್ಯೆಗೂ ಪ್ರಾದೇಷಿಕ ಪಕ್ಷ ಮದ್ದು ಎಂಬುದು ಮಾತ್ರ ಹೈಕಮಾಂಡ್ ಇರೋರು ಕೂಡ ಅಲ್ಲಗಳೆಯಕ್ಕಾಗಲ್ಲ.

1 comment:

  1. C B S E ಅಲ್ಲ ನಾವು K B S E (karnataka Board of Secondary Education) ಮಾಡ ಬೇಕು .ಅದು ಇಂಡಿಯಾ ಧಲ್ಲೇ ರೋಲೆ ಮಾಡೆಲ್ ಆಗಬೇಕು .
    ಎಲ್ಲರು C B S E ಎ ಬೆಟ್ಟು K B S E ಎ ತಮ್ಮ ಮಕ್ಕಳನು ಸೇರೆಸಬೇಕು ಆ ರೀತೆ ಆಗಬೇಕು .
    ಸಚ್ಚಿದಾನಂದ

    ReplyDelete

ನಿಮ್ಮ ಮಾತು...