Saturday 19 June 2010

ರಾಮರಾಜ್ಯದಲ್ಲಿ ’ರಾವಣ’ನ ಅಟ್ಟಹಾಸ ಮುಂದುವರಿಕೆಗೆ ಕಟ್ಟಾಜ್ಞೆ.......!


ಕಡೆಗೂ ’ರಾವಣ’ ತನ್ನ ದುರ್ಬುಧ್ಧಿಯನ್ನು ’ರಾಮರಾಜ್ಯದ’ ಮೇಲೆ ತೋರಿಸಿಯೇ ಬಿಟ್ಟಿದ್ದಾನೆ. ನಿನ್ನೆ (೧೭-೦೬-೧೦) ’ರಾವಣ’, ಕರ್ನಾಟಕ ಚಲನಚಿತ್ರ ಮಂಡಳಿ ನಿಯಮದಂತೆ ಸುಮಾರು ೨೪ ಚಿತ್ರಮಂದಿರಗಳಲ್ಲಿ ಕಾಣಿಸಿಕೊಂಡಿದ್ದಾನೆ. ಆದ್ರೆ ಈ ನಡುವೆ ’ದಿ ಕಾಂಪಿಟೇಷನ್ ಕಮೀಷನ್ ಆಫ್ ಇಂಡಿಯಾ’ (ಸಿ ಸಿ ಐ) ಎಂಬ ರಾಷ್ಟ್ರೀಯ ಆಯೋಗವು, ರಾವಣ ಚಿತ್ರ ವಿತರಕರ ಮೇಲೆ ನೇರ ಹಾಗೂ ಪರೋಕ್ಷವಾಗಿ ಯಾವುದೇ ಕ್ರಮಕೈಗೊಳ್ಳದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ(ಕೆಎಫ್ ಸಿಸಿ) ಕಟ್ಟಾಜ್ಞೆ ವಿಧಿಸಿದ ಸುದ್ದಿ ನಿನ್ನೆ ಹೊರಬಿತ್ತು. ಈ ಕಟ್ಟಾಜ್ಞೆ ಕೇವಲ ಕೆ ಎಫ್ ಸಿ ಸಿ ಅಷ್ಟೆ ಅಲ್ಲದೇ, ಇಡೀ ಕನ್ನಡ ಚಿತ್ರ ಕಲಾವಿದರಿಗೆ ಮತ್ತು ಕನ್ನಡ ಚಿತ್ರಗಳ ಅಭಿಮಾನಿಗಳಿಗೆ ಆದ ಹಿನ್ನಡೆ ಎಂದು ಭಾವಿಸಬಹುದು. ಈ ಕಟ್ಟಾಜ್ಞೆಯನ್ನ ನಾವ್ ಖಂಡಿಸಬೇಕು ಅಲ್ವಾ ಗುರು.

ಯಾಕೆ ಅಂತೀರಾ....
ಈ ’ಸಿ ಸಿ ಐ’ (ಕಾಂಪಿಟೇಷನ್ ಕಮೀಷನ್ ಆಫ್ ಇಂಡಿಯಾ) ಅನ್ನೋದು ಗ್ರಾಹಕರ ಹಿತಾಸಕ್ತಿ, ವ್ಯಾಪಾರ ಸ್ವಾತಂತ್ರ್ಯ ಮತ್ತು ಸ್ಪರ್ಧಾತ್ಮಕ ವಾತಾವರಣ ಎಂಬ ದ್ಯೇಯಗಳೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಒಂದು ರಾಷ್ಟ್ರೀಯ ಆಯೋಗ. ಗ್ರಾಹಕರ ಹಿತಾಸಕ್ತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ವ್ಯಾಪಾರದಲ್ಲಿ ಒಂದು ಸ್ಪರ್ಧಾತ್ಮಕ ವಾತಾವರಣವನ್ನು ಪ್ರೋತ್ಸಾಹಿಸುವುದು ಈ ಆಯೋಗದ ಉದ್ದೇಶ. ಆದ್ರೆ ನಿನ್ನೆ (೧೮-೦-೧೦) ಕೊಟ್ಟ ತೀರ್ಪಿನಲ್ಲಿ ಇದು ಏಕೊ ಕೆಲವು ಗ್ರಾಹಕರನ್ನು ಮರೆತಂತಿದೆ. ಗ್ರಾಹಕ ಹೇಗಿದ್ರು ಗ್ರಾಹಕನೇ. ಅದು ೮೦ ಕೋಟಿ ರೂಪಾಯಿ ವೆಚ್ಚ ಚಿತ್ರದ ಗ್ರಾಹಕನಾದ್ರು ಅಷ್ಟೆ, ೮ ಕೋಟಿ ರೂಪಾಯಿ ವೆಚ್ಚ ಚಿತ್ರದ ಗ್ರಾಹಕನಾದ್ರು ಅಷ್ಟೆ. ಅಲ್ಲಿ ಗ್ರಾಹಕನಿಗೆ ಬೆಲೆ ಕಟ್ಟೊಕಾಗತ್ತಾ..? ಆದ್ರೆ ಈ ಆಯೋಗ ಮೇಲ್ನೋಟಕ್ಕೆ ಒಬ್ಬನಿಗೆ ಬೆಣ್ಣೆ ಮತ್ತೊಬ್ಬನಿಗೆ ಸುಣ್ಣ ಪದ್ದತಿ ಅನುಸರಿಸಿರುವುದು ಗೋಚರಿಸುತ್ತದೆ. ಅಧೇಗೆ ಅಂದ್ರೆ, ರಾವಣ ಚಿತ್ರ ನಿಯಮ ಉಲ್ಲಂಘಿಸಿ ೨೪ ರ ಬದಲು ೪೮ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ್ರೆ, ಆ ಹೆಚ್ಚಿದ ೨೪ ಚಿತ್ರಮಂದಿರಗಳಲ್ಲಿ ನಡೆಯುತ್ತಿರುವ ನಮ್ಮ ಕನ್ನಡ ಚಿತ್ರಗಳಿಗೆ ಕತ್ತರಿ ಬೀಳುವುದು ಗ್ಯಾರಂಟಿ. ಹೀಗಾದಾಗ ಈ ೨೪ ಚಿತ್ರಮಂದಿರಗಳಿಗೆ ಬರುತ್ತಿದ್ದ ಕನ್ನಡ ಚಿತ್ರಗಳ ಗ್ರಾಹಕರಿಗೆ ಮತ್ತು ಅಭಿಮಾನಿಗಳಿಗೆ ಇವರ ಕಟ್ಟಾಜ್ಞೆ ಮಾರಕವಾಗುವುದಿಲ್ಲವೇ..? ಆಗ ’ಸಿ ಸಿ ಐ’ ನ ಗ್ರಾಹಕರ ಹಿತಾಸಕ್ತಿ ಎಂಬ ದ್ಯೇಯ ಇಲ್ಲಿ ಅನ್ವಯವಾಗುತ್ತದೆಯೇ..? ಕನ್ನಡ ಚಿತ್ರಗಳ ಗ್ರಾಹಕರು ಇವರಿಗೆ ಗ್ರಾಹಕರಾಗಿ ಏಕೆ ಕಾಣಲಿಲ್ಲ. ಒಬ್ಬನಿಗೆ ಒಂದು ನ್ಯಾಯ, ಇನ್ನೊಬ್ಬನಿಗೆ ಇನ್ನೊಂದು ಅಂದ್ರೆ ಹೇಗೆ ಸ್ವಾಮಿ. ನಮ್ಮ ಚಿತ್ರಗಳು ಚಿತ್ರಮಂದಿರಗಳಿಂದ ಎತ್ತಂಗಡಿ ಆದ್ರೂ ಪರ್ವಾಗಿಲ್ಲ, ಇವರ ಚಿತ್ರಗಳು ಬಿಡುಗಡೆಯಾಗ್ಬೇಕು ಅನ್ನೊ ವಾದ ಯಾವ ಕನ್ನಡಾಭಿಮಾನಿ ತಾನೆ ಒಪ್ಪಲು ಸಾದ್ಯ. ಕರ್ನಾಟಕದಲ್ಲೇ ಮಾರುಕಟ್ಟೆ ಕಂಡುಕೊಳ್ಳುವ ನಮ್ಮ ಚಿತ್ರಗಳು ಎಕ್ಕುಟ್ಟೊದ್ರು ಪರ್ವಾಗಿಲ್ಲ, ದೇಶದಾದ್ಯಂತ ಮಾರುಕಟ್ಟೆ ಇರೋ ಇವರಿಗೆ ಕರ್ನಾಟಕದಲ್ಲಿ ಚಿತ್ರ ಬಿಡುಗಡೆಗೆ ತಡೆಯೊಡ್ಡದೇ ಚಿತ್ರದ ಗೆಲುವಿಗೆ ಅವಕಾಶ ಮಾಡಿಕೊಡಬೇಕು ಅನ್ನೋ ಕಟ್ಟಪ್ಪಣೆಗೆ ತಲೆಬಾಗಲು ಸಾದ್ಯವೇ..?

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೋಡಿದ್ರೆ, ಒಂದು ಚಿತ್ರದ ಉಳಿವಿಗಾಗಿ, ಚೆನ್ನಾಗಿ ಓಡುತ್ತಿರುವ ಮತ್ತೊಂದು ಚಿತ್ರವನ್ನು ಅಳಿಸುವುದು ಯಾವ ಸ್ಪರ್ಧಾತ್ಮಕ ವಾತಾವರಣವನ್ನು ಸೃಷ್ಟಿ ಮಾಡಲು ಸಾದ್ಯ. ಪರಭಾಷಾ ಚಿತ್ರಗಳ ನಿಯಮ ಉಲ್ಲಂಘನೆಯಿಂದಾಗುವ ಕನ್ನಡ ಚಿತ್ರಗಳ ಬಿಡುಗಡೆ ವಿಳಂಬ ಯಾವ ವ್ಯಾಪಾರ ಸ್ವಾತಂತ್ರ್ಯವನ್ನು ಬಿಂಬಿಸಲು ಸಾದ್ಯ. ಒಂದು ವೇಳೆ ಮುಂಬೈನಲ್ಲಿ ಸುಮಾರು ೮೦೦ ಕೋಟಿ ರೂಪಾಯಿ ವೆಚ್ಚದ ಇಂಗ್ಲೀಷ ಚಲನಚಿತ್ರ, ಇವರ ಮುಖ್ಯ ಮಾರುಕಟ್ಟೆಯನ್ನು ಕಸಿದುಕೊಳ್ಳುವ ಪ್ರಯತ್ನ ಮಾಡಿದರೆ ಇದೇ ಅಂಬಾನಿ ಸಾಹೇಬರ ಕಂಪನಿ ಸುಮ್ಮನಿರುವುದೇ..? ಈ ಪುರಾಣದಲ್ಲಿ ಇನ್ನೂ ಒಂದು ಮಾತು ಇಲ್ಲಿ ಹೇಳಲೇಬೇಕು, ಈ ರಾವಣ ಚಿತ್ರ ಹಿಂದಿ, ತಮಿಳು, ತೆಲುಗು ಹೀಗೆ ನೂರೆಂಟು ಭಾಷೆಯಲ್ಲಿ ನೋಡೊ ಬದಲು, ನಮ್ಮ ಭಾಷೆಯಲ್ಲೇ ’ಡಬ್’ ಆಗಿದ್ದಿದ್ದರೆ ಈ ಸಮಸ್ಯೆನೇ ಇರ್ತಿರ್ಲಿಲ್ಲ. ನಮ್ಮಲ್ಲಿ ಡಬ್ಬಿಂಗಗೆ ಅವಕಾಶ ಇಲ್ಲದಿರುವ ಪರಿಣಾಮವೇ ಈ ಸಮಸ್ಯೆ.
ಅದಿರ್ಲಿ ಈಗ ಈ ಆಜ್ಞೆ ಬರೋ ಜೂನ್ ೨೨ ರವರೆಗೆ ಜಾರಿಯಿರಲಿದ್ದು, ಅಂದು ನಡೆಯವ ವಿಚಾರಣೆಯಲ್ಲಿ ಚಲನಚಿತ್ರ ಮಂಡಳಿ ತನ್ನ ವಾದವನ್ನು ಸಮರ್ಥವಾಗಿ ಮಂಡಿಸಬೇಕಿದೆ. ಪರಭಾಷಾ ಚಿತ್ರಗಳಿಗೆ ವಿಧಿಸಿರುವ ನಿಯಮಗಳ ಪಾಲನೆಯನ್ನು ಎತ್ತಿ ಹಿಡಿಯಬೇಕಿದೆ.

No comments:

Post a Comment

ನಿಮ್ಮ ಮಾತು...